ಮಹಿಳೆಲುಕ್ಸ್ಸುದ್ದಿಗಳು

ನಗು ಮುಖದ ಸುಂದರ ಚೆಲುವೆ ತನುಜಾ ಮೋಹನ್

ಎತ್ತಣ ಮಾಮರ, ಎತ್ತಣ ಕೋಗಿಲೆ ಏನಿದೇನು ಸಂಬಂಧ? ಎಂಬ ಸುಮಧುರ ಹಾಡು ಅದೆಷ್ಟೋ ಸಲ ಬದುಕಿಗೆ ಹತ್ತಿರವೇನೋ ಎಂದೆನಿಸಿ ಬಿಡುತ್ತದೆ. ಖಾಸಗಿ ವಾಹಿನಿಯೊಂದರ ರಿಸೆಪ್ಷನಿಷ್ಟ್ ಕೆಲಸಕ್ಕೆ ಅರ್ಜಿ ಹಾಕಿ ಅದ್ಯಾವಾಗ ಸಂದರ್ಶನಕ್ಕೆ ಕರೆಯುತ್ತಾರೆ ಎಂದು ಕಾಯುತ್ತಿದ್ದ ತನುಜಾ ಮೋಹನ್ ಗೆ ಸಂದರ್ಶನಕ್ಕೆ ಕರೆ ಬಂತು. ಆದರೆ ಅದು ವಾಹಿನಿಯಿಂದಲ್ಲ. ಬದಲಿಗೆ ನಿರ್ದೇಶಕ ಫಣಿ ರಾಮಚಂದ್ರ ಅವರಿಂದ..!

ಮುಂದಿನ ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಅವರು ಕೇಳಿದ್ದೇ ತಡ, ಒಪ್ಪಿಕೊಂಡು ಬಿಟ್ಟ ತನುಜಾ ಅಂದಿನಿಂದ ಇಂದಿನವರೆಗೂ ಬಣ್ಣದ ಪ್ರಪಂಚದಲ್ಲಿ ಮಿನುಗುತ್ತಿದ್ದಾರೆ. ದಂಡಪಿಂಡಗಳು ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ತನುಜಾ ಮೋಹನ್ ಮುಂದೆ ನಾಯಕಿ, ಪೋಷಕ ಪ್ರಧಾನ ಪಾತ್ರ, ಗಯ್ಯಾಳಿ, ಹಳ್ಳಿ ಹುಡುಗಿ, ಭಕ್ತಿ ಪ್ರಧಾನ ಪಾತ್ರದಲ್ಲಿ ಮಿಂಚಿದ್ದಾರೆ.

ದಂಡಪಿಂಡ, ದುರ್ಗಾ, ಅಂಬಿಕಾ, ಜಗಳಗಂಟಿಯರು, ಅಭಿಮಾನ, ಕಲ್ಯಾಣಿ, ಮಹಾಪರ್ವ, ಮನೆ ದೇವ್ರು ಧಾರಾವಾಹಿಯಲ್ಲಿ ನಟಿಸಿರುವ ಅವರು ಸದ್ಯ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಲಕ್ಷ್ಮಿ ಧಾರಾವಾಹಿಯಲ್ಲಿ ಲಕ್ಷ್ಮಿಯ ಚಿಕ್ಕಮ್ಮನ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಕಿರುತೆರೆಯ ಜೊತೆಗೆ ಹಿರಿತೆರೆಗೂ ಎಂಟ್ರಿ ಕೊಟ್ಟಿರುವ ತನುಜಾ ಮನೆಮಗಳು, ಧೀರ, ಓ ನನ್ನ ನಲ್ಲೆ, ವಿಜಯದಶಮಿ, ಪರೋಡಿ, ಐಶ್ವರ್ಯಾ, ತವರಿಗೆ ಬಾ ತಂಗಿ, ಕೃಷ್ಣಲೀಲಾ, ವಜ್ರಕಾಯ, ಜೈ ಮಾರುತಿ 800, ಸೀತಾ ನದಿ ಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿರುವ ಅವರು ಇತ್ತೀಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ತಿಥಿ ಚಿತ್ರದಲ್ಲೂ ನಟಿಸಿದ್ದಾರೆ.

ತಮಿಳಿನ ಇಎಂಐ, ಪ್ರಿಯಮಾನವಲ್ ಧಾರಾವಾಹಿಯಲ್ಲಿ ಅಭಿನಯಿಸುವುದರ ಮೂಲಕ ಪರಭಾಷೆಯಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಹೆಗ್ಗಳಿಕೆ ಇವರದು. “ಬಣ್ಣದ ಲೋಕ ಮರೀಚಿಕೆ. ಯಾವುದೇ ಪಾತ್ರ ಮಾಡಲಿ ಅದರಿಂದ ತೃಪ್ತಿ ಸಿಗುವುದರ ಬದಲು ಮುಂದೆ ಇದಕ್ಕಿಂತ ಉತ್ತಮ ಪಾತ್ರ ಮಾಡಬೇಕು ಎಂಬ ಆಲೋಚನೆ ಮಾತ್ರ ಮನಸ್ಸಿನಲ್ಲಿರುತ್ತದೆ.

ರಿಯಲಿಸ್ಟಿಕ್ ಆಗಿದ್ದರೆ ಮಾತ್ರ ಎಲ್ಲಿ ಹೋದರೂ ಮಿಂಚಬಹುದು ಎನ್ನುವ ತನುಜಾ ನಟನೆಯ ಬಗ್ಗೆ, ಅದರ ರೀತಿ ನೀತಿಗಳ ಬಗ್ಗೆ ನಿರ್ದೇಶಕರುಗಳ ಬಳಿಯಿಂದ ಕಲಿತರು. “ ನಾನು ಇಂದು ನಟಿಯಾಗಿ ಗುರುತಿಸಿಕೊಳ್ಳುತ್ತಿದ್ದೇನೆ ಎಂದರೆ ಅದಕ್ಕೆ ನಿರ್ದೇಶಕರುಗಳೇ ಕಾರಣ. ಎಲ್ಲಾ ನಿರ್ದೇಶಕರು ನನಗೆ ಹೊಸತನ್ನು ಕಲಿಯುವಂತೆ ಪ್ರೇರೇಪಿಸಿದ್ದಾರೆ. ಅದುವೇ ನನ್ನ ಬಣ್ಣದ ಬದುಕಿಗೆ ಮುನ್ನುಡಿಯಾಯಿತು ಎಂದು ಸಂತಸದಿಂದ ಹೇಳುವ ತನುಜಾ ನಾಗಭರಣ, ನಾಗತಿಹಳ್ಳಿ, ಸಾಯಿ ಪ್ರಕಾಶ್, ಎಸ್. ನಾರಾಯಣ್, ರವಿಚಂದ್ರನ್ ಜೊತೆಗೆ ಹೆಸರಾಂತ ನಿರ್ದೇಶಕರುಗಳೊಂದಿಗೆ ಕೆಲಸ ಮಾಡಿದ್ದಾರೆ. ಕೆಲಸದ ಜೊತೆಗೆ ಅಭಿನಯದ ಪಾಠಗಳನ್ನೂ ಕಲಿತಿದ್ದಾರೆ.

Image may contain: 1 person

ಸಿನಿಮಾ, ಕಿರುತೆರೆಯ ಮೂಲಕ ಮನೆ ಮಾತಾಗಿರುವ  ಅವರು ಎಲ್ಲರೊಂದಿಗೂ ಸ್ನೇಹ, ವಿಶ್ವಾಸದಿಂದ ಮಾತನಾಡುತ್ತಾರೆ. ಅಗಾಧ ಸಿನಿಮಾ ಹುಚ್ಚು ಹೊಂದಿರುವ ಇವರು ಬಿಡುವಿನ ಸಮಯದಲ್ಲಿ ಸಿನಿಮಾ ನೋಡುವುದು ಮರೆಯುವುದಿಲ್ಲ. ಪತಿ ಕ್ಯಾಮರಾಮನ್ ಮೋಹನ್ ಮತ್ತು ಮಗಳು ಅಕ್ಷಯ ಇವರ ಬಣ್ಣದ ಬದುಕಿಗೆ ಬೆಂಬಲ ನೀಡುತ್ತಿದ್ದಾರೆ.

ಅನಿತಾ ಬನಾರಿ

ರಾಜಕೀಯದಿಂದ ದೂರ ಉಳಿದ ಕನ್ನಡ ಫಿಲ್ಮ್ ಛೇಂಬರ್

#tanijamohan, #filmnews, #balkaninews #kannadasuddigalu,

Tags

Related Articles