ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಕಾಡಿನ ಉಳಿವಿಗಾಗಿ ಕಿಚ್ಚು ಹಚ್ಚಿಸಿಕೊಂಡವರು.

ಕಾಡು, ಕಾಡಂಚಿನ ಜನರು ಅಂದಾಕ್ಷಣ ಕಣ್ಮುಂದೆ ಬರುವುದು ಕಾಡು ಬೆಳೆಸಿ, ನಾಡು ಉಳಿಸಿ ಎಂಬ ಅಭಿಮಾನ ಹಾಗೂ ನಕ್ಸಲಿಸಂ. ಈ ವಾರ ತೆರೆ ಕಂಡಿರುವ ಕಿಚ್ಚು ಚಿತ್ರದಲ್ಲಿ ಈ ಎರಡು ಅಂಶಗಳ ಸುತ್ತ ಸುತ್ತುವ ಚಿತ್ರದಲ್ಲಿ ನಿರ್ದೇಶಕ ಪ್ರದೀಪ್ ರಾಜ್ ಅವರು ಹಣದ ಆಸೆಗಾಗಿ ಕಾಡಿನಲ್ಲಿ ರೆಸಾರ್ಟ್ ನಿರ್ಮಾಣ ಮಾಡುವ ಎಸ್ಟೇಟ್ ಮಾಲೀಕರು ಹಾಗೂ ಅವರ ವಿರುದ್ದ ಹೋರಾಡುವ ಹೋರಾಟಗಾರರ ಕತೆಯನ್ನು ಹೇಳಿದ್ದಾರೆ. ಇವುಗಳೊಂದಿಗೆ ಪುಟ್ಟದೊಂದು ಲವ್ ಸ್ಟೋರಿಯನ್ನು ಹೇಳಿದ್ದಾರೆ.

ಚಿಕ್ಕ ವಯಸ್ಸಿನಿಂದ ತನ್ನ ತಂದೆಯಂತೆ ಪರಿಸರ ಹೋರಾಟವನ್ನು ರೂಢಿಸಿಕೊಂಡ ಮಾತು ಬಾರದ, ಕಿವಿ ಕೇಳದ ಹುಡುಗ ಸೂರಿ (ಧೃವ ಶರ್ಮಾ) ಕಾಡಿನ ಹಳ್ಳಿಯ ಜನರ ಮನಸ್ಸನ್ನು ಗೆದ್ದು ಅವರ ಪರವಾಗಿ ಹೋರಾಟ ಮಾಡುತ್ತಾನೆ. ಇವನಿಗೆ ಮಾತು ಬಾರದ , ಕಿವಿಯೂ ಕೇಳದ ನಂದಿನಿ (ಅಭಿನಯ) ಯಾವಾಗಲೂ ಜೊತೆಯಾಗಿರುತ್ತಾಳೆ. ಇವರು ಮದುವೆಯಾದ ನಂತರ ಕಾಡು ಉಳಿಸುವುದಿಕ್ಕೆ ಇಬ್ಬರೂ ನಕ್ಸಲೈಟ್ ಗುಂಪು ಸೇರಿಕೊಳ್ಳುತ್ತಾರೆ. ಅನ್ಯಾಯದ ವಿರುದ್ದ ಪ್ರತಿಭಟಿಸುತ್ತಾರೆ. ಮನೆಯವರ ವಿರೋಧ, ಟಿಂಬರ್ ಮಾಫಿಯಾ, ಹೀಗೆ ಎಲ್ಲವನ್ನೂ ವಿರೋಧಿಸುವ ಇವರ ಹೋರಾಟಕ್ಕೆ ಜಯ ಸಿಗುವುದೇ ಎಂಬುದನ್ನು ತೆರೆಯ ಮೇಲೆ ನೋಡಿ.

ಗ್ಲಾಮರ್ ಗೊಂಬೆ ರಾಗಿಣಿ ಮೊದಲ ಬಾರಿಗೆ ಡೀ-ಗ್ಲಾಮರಸ್ ಪಾತ್ರ ನಿರ್ವಹಿಸಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮಾಡುವ ಹುಡುಗಿಯಾಗಿ, ಊರಿಗೆ ಬುದ್ಧಿ ಹೇಳುವ ವಿದ್ಯಾವಂತೆಯಾಗಿ, ದಿಟ್ಟ ಹೆಣ್ಮಗಳ ಪಾತ್ರದಲ್ಲಿ ರಾಗಿಣಿ ಅಭಿನಯ ಚೆನ್ನಾಗಿದ್ದು ಪ್ರೇಕ್ಷಕರ ಮನ ಗೆಲ್ಲುತ್ತದೆ.

ಕಿಚ್ಚ ಸುದೀಪ್ ಎರಡು ದೃಶ್ಯದಲ್ಲಿ ಕಾಣಿಸಿಕೊಂಡರೂ ಸಹ ಆ ಪಾತ್ರ ಪರಿಣಾಮಕಾರಿಯಾಗಿದೆ. ಪಾತ್ರ ಮತ್ತು ಅವಧಿ ಕಡಿಮೆಯಿದ್ದರೂ ಸುದೀಪ್ ಅವರ ಡೈಲಾಗ್ಸ್ ಮತ್ತು ಮ್ಯಾನರಿಸಂ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತದೆ. ಅವರಂತೆ ನಿಷ್ಟಾವಂತ ಪೋಲೀಸ್ ಅಧಿಕಾರಿಯಾಗಿ ಸಾಯಿಕುಮಾರ್ ಗಮನ ಸೆಳೆಯುತ್ತಾರೆ. ಹಾಗೂ ನಕ್ಸಲ್ ನಾಯಕನಾಗಿ ಸುಚೇಂದ್ರ ಪ್ರಸಾದ್ ಅಭಿನಯದಲ್ಲಿ ಕಿಚ್ಚು ಹುಟ್ಟಿಕೊಳ್ಳುತ್ತದೆ.

ಭದ್ರ ಅರಣ್ಯ ಪ್ರದೇಶದ ಹಸಿರ ಸಿರಿ ‘ಕಿಚ್ಚು’ ಚಿತ್ರದಲ್ಲಿ ಪ್ರೇಕ್ಷಕರ ಕಣ್ಣು ಕುಕ್ಕುತ್ತದೆ. ಕ್ಯಾಮರಾ ವರ್ಕ್ ಹಾಗೂ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಹಾಡುಗಳು ಅರ್ಥಪೂರ್ಣವಾಗಿವೆ.

ಗಂಭೀರ ವಿಷಯವನ್ನು ಸಿನಿಮಾವಾಗಿ ತೆರೆ ಮೇಲೆ ತಂದ ನಿರ್ದೇಶಕ ಪ್ರದೀಪ್ ರಾಜ್ ಅವರ ಪ್ರಯತ್ನ ಮೆಚ್ಚಲೇ ಬೇಕು. ದುಡ್ಡಿಗಾಗಿ ಕಾಡಿನ ನಾಶ, ಕೆಲಸಗಾರರ ಮೇಲೆ ಕಾಫಿ ಎಸ್ಟೇಟ್ ಮಾಲೀಕರ ದೌರ್ಜನ್ಯ, ಸಾಲದ ಬಾಧೆ ತಾಳದ ರೈತರ ಗೋಳು, ಪೊಲೀಸ್ ಇಲಾಖೆಯಲ್ಲಿನ ಒಳ ರಾಜಕೀಯ, ನಕ್ಸಲೀಯರ ಹೋರಾಟ, ಅಮಾಯಕರ ದುರ್ಮರಣ… ಈ ಎಲ್ಲ ಅಂಶಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ‘ಕಿಚ್ಚು ಚಿತ್ರವನ್ನು ನೋಡಿ ಬರಲು ಅಡ್ಡಿಯಿಲ್ಲ.

Tags

Related Articles

Leave a Reply

Your email address will not be published. Required fields are marked *