ಬಾಲ್ಕನಿಯಿಂದಸುದ್ದಿಗಳು

‘ಗಹನ’ ಸಿನೆಮಾ ಮಾತಿನ ಮನೆಗೆ

ಶಿರಡಿ ಸಾಯಿ ಬಾಬಾ ಭಕುತರ ಹಿಂಡೇ ಸೇರಿರುವ ಈ ‘ಗಹನ’ ತಂಡ

 

ಬೆಂಗಳೂರು, ಸೆ-11:  ಅಪ್ಪಟ ಹೊಸ ಪ್ರತಿಭೆಗಳನ್ನೇ  ಆರಿಸಿ  ಉತ್ಕೃಷ್ಟ ಕೌಶಲ್ಯ ತೋರಿಸಿ ಕೊಡಗಿನ ತಡಿಯಂಡಮೋಳ್ ಗಿರಿಸಾಲುಗಳಲ್ಲಿ ಸತತ  ಐದು ಷೆಡ್ಯೂಲ್ ಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡ ‘ಗಹನ’  ಸಿನೆಮಾ ಈ ವಾರ ಮಾತಿನ ಮನೆಯತ್ತ ಸಾಗಿದೆ.  ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಲ್ಲಿ ಆರ್. ಶ್ರೀನಿವಾಸ್ “ಸೀನು”  ನಿರ್ಮಾಣದ ‘ಗಹನ’ ಚಿತ್ರದ ಚಿತ್ರೀಕರಣ  ಕಳೆದ ಗುರುವಾರ ಸಂಪನ್ನ ಗೊಂಡಿದ್ದು ‘ಕುಂಬಳಕಾಯಿ’ ಒಡೆದದ್ದಾಗಿದೆ. ‘ಗಹನ’ದ ಕಥೆ-ಚಿತ್ರಕಥೆ-ಸಂಭಾಷಣೆ ರಚಿಸಿ ನಿರ್ದೇಶನದ ಹೊಣೆ ಹೊತ್ತವರು ಯುವನಿರ್ದೇಶಕ ಪ್ರೀತ್ ಹಾಸನ್.

ಈಗ್ಗೆ ನಾಲ್ಕೈದು ವಾರಗಳಿಗೂ ಮುನ್ನ ಸಮಗ್ರ ಕೊಡಗು ಜಿಲ್ಲೆ ವರುಣನ  ಆರ್ಭಟಕ್ಕೆ ನಲುಗಿಹೋಗುವುದಕ್ಕೂ ಎರಡೇ ದಿನ ಮುನ್ನವೇ ತಮ್ಮ ಸಮಸ್ತ ಶೂಟಿಂಗ್ ಷೆಡ್ಯೂಲ್ ಗಳನ್ನು ಸಂಪೂರ್ಣವಾಗಿಸಿಕೊಂಡಿತ್ತು ‘ಗಹನ’ ತಂಡ.  ಶಿರಡಿ ಸಾಯಿ ಬಾಬಾ ಭಕುತರ ಹಿಂಡೇ ಈ ‘ಗಹನ’ ತಂಡದಲ್ಲಿ ಸೇರಿರುವ ಕಾರಣ  ಅವರ  ಎಂದಿನ ಶ್ರದ್ಧಾ –ನಂಬಿಕೆಗಳೇ ಅವರ ಸಕಲ ಶೂಟಿಂಗ್ ಷೆಡ್ಯೂಲ್ ಗಳನ್ನು ನಿಯೋಜಿತ ವೇಳಾಚೌಕಟ್ಟಿನೊಳಗೇ  ಯಾವ ಚ್ಯುತಿಯೂ ಬಾರದಂತೆ  ಮುಕ್ತಾಯಗೊಳಿಸಿಕೊಂಡೆವು. ಇಷ್ಟೆಲ್ಲಾ ನಡೆದದ್ದೂ ಬಾಬಾನ ದಯೆಯಿಂದಲೇ ಎಂದವರು,  ಬಾಲ್ಕನಿಯೊಡನೆ ತಮ್ಮ ಅನುಭವಗಳ ಹಂಚಿಕೊಂಡ  ‘ಗಹನ’ ನಿರ್ಮಾಪಕ ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದ ಆರ್. ಶ್ರೀನಿವಾಸ್ “ಸೀನು” !

‘ಗಹನ’ ದ ತಾರಾಗಣದಲ್ಲಿ ಬಹುತೇಕ ಹೊಚ್ಚ ಹೊಸ ಕಲಾವಿದರ ಬೀಡಾಗಿರುವ  ಈ ತಂಡದಲ್ಲಿ ಆದಿತ್ಯ ಶೆಟ್ಟಿ, ಶರಣ್ಯ ಗೌಡ, ರಂಜಿನಿ, ಶಿವು, ಇಂಚರ ಭೂಮಯ್ಯ ಸೇರಿದಂತೆ  ಕೆಲವರು ಉತ್ತಮ  ತಾದಾತ್ಮ್ಯತೆ ಮೆರೆದಿದ್ದಾರಂತೆ.  ಇನ್ನೇನು ಈ ವಾರ ಮಾತಿನ ಮನೆಯಲ್ಲಿ ‘ಗಹನ’ ತನ್ನ ಕಾರ್ಯಾಚರಣೆ ಆರಂಭಿಸಿಕೊಳ್ಳುತ್ತಿದೆ.

ಒಂದು ಸೈಕಲಾಜಿಕಲ್  ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ಸ್ ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇನ್ನು  ಕೊಡಗಿನ ಬೆಟ್ಟ, ಕಾಡುಗಳಲ್ಲಿ, ಸುಮಾರು 300 ಅಡಿ ಆಳದಲ್ಲಿ ಇಳಿದು ಸುಂದರ ಜಲಪಾತದ  ಭೋರ್ಗರೆಗಳ ನಡುವೆ  ಹಾಡಿನ ಚಿತ್ರೀಕರಣಗಳ ಮಾಡಿರುವುದು ಈ  ಚಿತ್ರದ ಹೆಗ್ಗಳಿಕೆ!  

ಚಿತ್ರಕ್ಕೆ-ಸಾಯಿ ಶ್ರೀನಿವಾಸ್ ಅವರ ಛಾಯಾಗ್ರಹಣ, ರಘು, ಧನವಂ ಅವರ ಸಂಗೀತ, ರಾಜೀವ ಅವರ ಸಂಕಲನವಿದ್ದು, ವಿಜಯ್ ವಿಶ್ವಮಣಿ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ರೀರೆಕಾರ್ಡಿಂಗ್ ಕೂಡಾ ಹೊಸ ಪ್ರತಿಭೆಯ ಸಂಗೀತ  ನಿರ್ದೇಶಕರಿಂದ ಹೊಸ ಅಲೆ ಬೀಸುತ್ತಿರುವ ‘ಗಹನ’ ಸೆನ್ಸಾರ್ ಸಮಿತಿಯೆದುರು ಈ ತಿಂಗಳ ಅಖೈರಿಗೆ  ಪ್ರಸ್ತುತಿಗೊಳ್ಳಲಿದೆ. ಉಳಿದ ನಿರ್ಮಾಣದ ಹಂತಗಳೂ ಅಂದುಕೋಮಡಂತೆ ನಡೆದಲ್ಲಿ ‘ಗಹನ’ ಈ ಬಾರಿಯ ದಸರೆಯ ನವರಾತ್ರಿ ಹಬ್ಬಗಳ ಸಮಯಕ್ಕೆ ಬಿಡುಗಡೆಯಾಗುವ ಸಕಲ ಲಕ್ಷಣಗಳೂ ಕಂಡು ಬರುತ್ತಿವೆ.

-ಡಾ. ಸುದರ್ಶನ ಭಾರತೀಯ, 7022274686

Tags