ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಕುತೂಹಲ ಮೂಡಿಸುವ ಚಾರಣದ ಕಥೆ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮತ್ತು ಆರ್ ಜೆ ನೇತ್ರಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ “6 ನೇ ಮೈಲಿ” ಚಿತ್ರವು ಚಾರಣದ ಕಥೆಯನ್ನು ಒಳಗೊಂಡಿದೆ. ಪಶ್ಚಿಮಘಟ್ಟದ ಉಜಿರೆ ವ್ಯಾಪ್ತಿಯ ಅರಣ್ಯವಲಯ, ಆ ಕಾಡಿನಲ್ಲಿ ಕಳೆದ ಒಂದೂವರೆ ದಶಕದಿಂದ ಜೀವಂತವಾಗಿರುವ ನಕ್ಸಲ್ ಚಟುವಟಿಕೆ, ನಗರ ಪ್ರದೇಶಗಳಿಂದ ಅಲ್ಲಿನ ಕಾಡುಮೇಡು ಅಲೆದಾಡಲು ಹೋಗುವ ಚಾರಣ ಪ್ರಿಯರು, ಅಂಥವರನ್ನೇ ಟಾರ್ಗೆಟ್ ಮಾಡಿಕೊಂಡ ದರೋಡೆಕೋರರು, ರೇಪಿಸ್ಟುಗಳಂಥಾ ಕ್ರಿಮಿನಲ್ ಎಲಿಮೆಂಟುಗಳು. ಮತ್ತು ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ… ಈ ಎಲ್ಲಾ ಅಂಶಗಳು ಹದವಾಗಿ ಬೆರೆತಿರುವ ಸಿನಿಮಾ 6 ನೇ ಮೈಲಿ.

ಉಪ್ಪಿನಂಗಡಿ ಬಳಿಯ ದವಳಗಿರಿಯ ಕಾಡು ಟ್ರಕ್ಕಿಂಗ್ ಗೆ ಅದ್ಬುತವಾದ ಜಾಗ ಅಂತ ಕಥಾ ಪಾತ್ರಗಳು ಟ್ರಕ್ಕಿಂಗ್ ಹೊರಡುತ್ತವೆ. ಬೆಂಗಳೂರಿನಿಂದ ಉಜಿರೆ ತಲುಪುವ ಹೊತ್ತಿಗೆ ರಾತ್ರಿ 10 ಘಂಟೆ ಆಗಿರುತ್ತದೆ. ‘ಉಜಿರೆ’ಯಿಂದ ‘ಉಪ್ಪಿನಂಗಡಿ’ಗೆ ಹೋಗುವ ದಾರಿ ಮಧ್ಯೆ ಸಿಗುವ ‘6ನೇ ಮೈಲಿ’ಯ ದಟ್ಟಾರಣ್ಯದಲ್ಲಿ ರಾತ್ರಿ ಹೊತ್ತು ಬೆಂಗಳೂರಿನಿಂದ ಬರುವ ಚಾರಣಿಗರು ನಿಗೂಢವಾಗಿ ಕಾಣೆಯಾಗುತ್ತಿರುತ್ತಾರೆ. ಇದೇ ಪ್ರದೇಶ ಸರಣಿ ಕೊಲೆಗಳಿಗೂ ಸಾಕ್ಷಿ ಆಗಿರುತ್ತೆ.

ಉಪ್ಪಿನಂಗಡಿ ಬಳಿ ಇರುವ ಧವಳಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗುವುದು ಆರ್.ಜೆ ರಾಘವ್ (ಸುಧೇಶ್ ಭಟ್) ಪ್ಲಾನ್. ಜೊತೆಯಲ್ಲಿ ಇಬ್ಬರು ಹುಡುಗಿಯರು ಬೇರೆ. ಉಪ್ಪಿನಂಗಡಿಗೆ ಹೋಗುವಾಗ ‘6ನೇ ಮೈಲಿ’ಯಲ್ಲಿ ಇವರೆಲ್ಲ ಹತ್ಯೆ ಆಗುತ್ತಾರೆ. ಇದಕ್ಕೆ ಕಾರಣ ಏನು ಎಂಬುದೇ ಚಿತ್ರದ ಸಸ್ಪೆನ್ಸ್.

ಚಿತ್ರದ ಮೊದಲರ್ಧಕ್ಕಿಂತ ಸೆಕೆಂಡ್ ಹಾಫ್ ಚುರುಕಾಗಿದೆ. ಪೋಲಿಸರು ಈ ಕೊಲೆಯ ಪ್ರಕರಣಗಳನ್ನು ಹೇಗೆ ಬೇಧಿಸುತ್ತಾರೆ ಮತ್ತು ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು. ಹಾಗಂತಾ ಇಲ್ಲಿ ದೆವ್ವದ ಕವಾಡ ಇರಬೇಕು ಎಂದುಕೊಂಡದರೆ ಅದು ತಪ್ಪಾಗುತ್ತದೆ. ಇದೊಂದು ಫಕ್ಕಾ ಥ್ರಿಲ್ಲರ್ ಸ್ಟೋರಿ. ಚಾರಣಕ್ಕೆಂದು ಹೋದವರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಏನೆಲ್ಲಾ ಆಗುತ್ತದೆಂಬ ವಿಷಯಗಳನ್ನಿಟ್ಟುಕೊಂಡು ನಿರ್ದೇಶಕ ಸೀನಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ನಾಯಕ ಸಂಚಾರಿ ವಿಜಯ್ ಅವರು ಪಾತ್ರವನ್ನು ಪರಕಾಯ ಪ್ರವೇಶ ಮಾಡಿದ್ದಾರೆ. ಉಳಿದಂತೆ ಆರ್.ಜೆ.ನೇತ್ರ ಆರ್.ಜೆ ಸುಧೇಶ್ ಭಟ್, ಜಾನ್ವಿ ಜ್ಯೋತಿ, ಆದಿತ್ಯ ಭಾರದ್ವಾಜ್, ಕೃಷ್ಣ ಹೆಬ್ಬಾಲೆ, ನಿಶ್ಚಲ್ ಆತ್ರೇಯ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.6 ನೇ ಮೈಲಿ ಮೂಲಕ ನಿರ್ದೇಶಕ ಸೀನಿ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ.ಮತ್ತು ಡಾ. ಶೈಲೇಶ್ ಕುಮಾರ್ ಇಂಥದ್ದೊಂದು ಪ್ರಯೋಗಾತ್ಮಕ ಸಿನಿಮಾಕ್ಕೆ ಬಂಡವಾಳ ಹೂಡಿರೋದು ನಿಜಕ್ಕೂ ಮೆಚ್ಚಬೇಕು. ಮತ್ತು ಒಂದು ಥ್ರಿಲ್ಲಿಂಗ್ ಅನುಭವಕ್ಕಾದರೂ ಈ ಚಿತ್ರವನ್ನು ನೋಡಬಹುದು.

Tags