ಬಾಲ್ಕನಿಯಿಂದಸಂದರ್ಶನ

ನಟನಾ ಲೋಕದ ತ್ರಿಪುರ ಸುಂದರಿ ಅರ್ಚನಾ ಜೋಯಿಸ್

ಬೆಂಗಳೂರು, ಮಾ.07:

ಝೀ ಕನ್ನಡ ವಾಹಿನಿಯ ‘ಮಹಾದೇವಿ’ ಧಾರಾವಾಹಿಯ  ತ್ರಿಪುರ ಸುಂದರಿ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಮುದ್ದು ಮುಖದ ಈ ಬೆಡಗಿಯ ಹೆಸರು ಅರ್ಚನಾ ಜೋಯಿಸ್. ಮಹಾದೇವಿಯ ನಂತರ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದುರ್ಗಾ ಧಾರಾವಾಹಿಯ ದುರ್ಗಾ ಪಾತ್ರಕ್ಕೆ ಜೀವ ತುಂಬಿದ ಅರ್ಚನಾ ಎಂದಿಗೂ ತಾನೊಬ್ಬಳು ನಟಿಯಾಗಬೇಕು ಎಂದು ಅಂದುಕೊಂಡವರೇ ಅಲ್ಲ! ಅದು ಅವರಿಗೆ ಬಯಸದೇ ಬಂದ ಭಾಗ್ಯ!

ನೃತ್ಯದಲ್ಲಿ ಪದವಿಯನ್ನು ಪಡೆದಿರುವ ಅರ್ಚನಾ ಸ್ನೇಹಿತೆಯೊಬ್ಬರ ಮೂಲಕ ಧಾರಾವಾಹಿಯ ಆಡಿಶನ್ ಬಗ್ಗೆ ತಿಳಿದು ಭಾಗವಹಿಸಿದರು. ಮುಂದೆ ಆಯ್ಕೆಯೂ ಆದರು.

ಭರತನಾಟ್ಯದಲ್ಲಿ ನವರಸಗಳನ್ನು ವ್ಯಕ್ತಪಡಿಸುವ ಕಾರಣ ನಟಿಸಲು ಕಷ್ಟವಾಗಲಿಲ್ಲ ಎನ್ನುವ ಅರ್ಚನಾ ಅವರಿಗೆ ನೃತ್ಯ ಎಂದರೆ ಪ್ರಾಣ. ಮಾಯಾರಾವ್ ನಾಟ್ಯ ಇನ್ ಸ್ಟಿಟ್ಯೂಟ್ ಆಫ್ ಕಥಕ್ ಆಂಡ್ ಕೋರಿಯೋಗ್ರಫಿ ಯಲ್ಲಿ ಪದವಿ ಪಡೆದಿರುವ ಅವರು ತಮ್ಮ ಹನ್ನೊಂದನೇ ವಯಸ್ಸಿನಲ್ಲೇ ನೃತ್ಯಭ್ಯಾಸ ಆರಂಭಿಸಿದ್ದರು. ಭರತನಾಟ್ಯದ ಜೊತೆಗೆ  ಡ್ಯಾನ್ಸ್ ಪ್ರಕಾರಗಳಾದ ಕಥಕ್, ಇಂಡಿಯನ್ ಮಾರ್ಷಿಯಲ್ ಆರ್ಟ್ಸ್ ಮತ್ತು ಇಂಡಿಯನ್ ಕಾಂಟೆಪರರಿಯನ್ನು ಕಲಿತಿರುವ ಅರ್ಚನಾ ದೃಷ್ಟಿ ಆರ್ಟ್ ಸೆಂಟರ್ ಮತ್ತು ನಾಟ್ಯ ಗ್ರೂಪಿನ ಮೂಲಕ ಮುನ್ನೂರಕ್ಕೂ ಅಧಿಕ ನೃತ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುತ್ತಾರೆ. ರಾಜ್ಯ ಮಾತ್ರವಲ್ಲದೇ  ಹೊರದೇಶಗಳಲ್ಲೂ ನೃತ್ಯ ಪ್ರದರ್ಶನ ನೀಡಿರುವ ಅರ್ಚನಾ ಗೆ ಶಾಸ್ತ್ರೀಯ ಸಂಗೀತದತ್ತ ವಿಶೇಷ ಆಸಕ್ತಿ.

‘’ ನೃತ್ಯದ ಮೂಲಕ ಗುರುತಿಸಿಕೊಳ್ಳಬೇಕು ಎಂಬ ಮಹದಾಸೆ ಹೊಂದಿದ್ದ ನನ್ನನ್ನು ಧಾರಾವಾಹಿ ಕ್ಷೇತ್ರ ಕೈ ಬೀಸಿ ಕರೆಯಿತು. ಅರ್ಚನಾ ಜೋಯಿಸ್ ಅಂದಾಗ ಜನರಿಗೆ ನೆನಪಾಗೋದು ಮಹಾದೇವಿಯ ತ್ರಿಪುರ ಸುಂದರಿಯೇ! ಮಹಾದೇವಿಯಲ್ಲಿ ನಾನು ಕೇವಲ ನೂರು ಎಪಿಸೋಡ್ ಗಳಲ್ಲಿ ನಾನು ನಟಿಸಿದ್ದರೂ ಅದು ನನಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ’’ ಎನ್ನುತ್ತಾರೆ ಅರ್ಚನಾ.

ರಮೇಶ್ ಇಂದಿರಾ ಮತ್ತು ಶ್ರುತಿ ನಾಯ್ಡು ಅವರ ಪ್ರೋತ್ಸಾಹದಿಂದ ನಾನಿಂದು ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ನನ್ನನ್ನು ನಂಬಿ ಅವಕಾಶ ಕೊಟ್ಟ ಶ್ರುತಿ ನಾಯ್ಡು ಮತ್ತು ನಟನೆಯ ರೀತಿ ನೀತಿಗಳನ್ನು ಕಲಿಸಿಕೊಟ್ಟ ರಮೇಶ್ ಇಂದಿರಾ ಅವರಿಗೆ ನಾನು ತುಂಬಾ ಕೃತಜ್ಞಳು ಎಂದು ಸಂತೋಷದಿಂದ ಹೇಳುವ ಅರ್ಚನಾಗೆ ಅಪ್ಪ ಅಮ್ಮನೇ ಸ್ಪೂರ್ತಿ. ಅವರ ತಂದೆ ಯೋಗ, ಜಿಮ್ನಾಸ್ಟಿಕ್ ನಲ್ಲಿ ಪಳಗಿದ್ದು ಅವರನ್ನೇ ಅರ್ಚನಾ ಅನುಸರಿಸುತ್ತಾರೆ. ಪಿಟ್ನೆಸ್ ವಿಷಯ ಬಂದಾಗ ತಂದೆಯೇ ನನ್ನ ಗುರು ಎನ್ನುವ ಮುದ್ದು ಮುಖದ ಸುಂದರಿ ‘’ ನೃತ್ಯದಿಂದ ಬರೀ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ವ್ಯಾಯಾಮವಾಗುತ್ತದೆ. ದಿನ ನೃತ್ಯ ಮಾಡುವುದರಿಂದ ಬೇರೆ ಡಯಟ್ ಬೇಕಾಗಿಲ್ಲ’’ ಎಂದು ಹೇಳುತ್ತಾರೆ.

ನೃತ್ಯದತ್ತ ವಿಶೇಷ ಒಲವು ಹೊಂದಿರುವ ಅರ್ಚನಾ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತಿ ದೊಡ್ಡ ಡ್ಯಾನ್ಸ್ ರಿಯಾಲಿಟಿ ಶೋ ‘ತಕಧಿಮಿತ’ ದಲ್ಲಿ ಸ್ಫರ್ಧಿಯಾಗಿ ಮಿಂಚುತ್ತಿದ್ದಾರೆ. ತಮ್ಮ ನೃತ್ಯದ ಮೂಲಕ ತೀರ್ಪುಗಾರರ ಜೊತೆಗೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.

ಇದರ ಜೊತೆಗೆ ಇತ್ತೀಚೆಗೆ ತೆರೆ ಕಂಡ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ನಲ್ಲಿ ರಾಕಿ ಭಾಯ್ ತಾಯಿಯ ಪಾತ್ರಕ್ಕೆ ಜೀವ ತುಂಬುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ ಅರ್ಚನಾ. ನನ್ನದು ಕೆಲವು ನಿಮಿಷಗಳ ಪಾತ್ರವಾದರೂ ನನ್ನನ್ನು ವೀಕ್ಷಕರು ಗುರುತಿಸುತ್ತಾರೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ದೊಡ್ಡ ಬಿರುದು ಏನು ಬೇಕು ಎನ್ನುವ ಅರ್ಚನಾ “ಅಪ್ಪ ಅಮ್ಮನ ಜೊತೆಗೆ ಪತಿಯ ಬೆಂಬಲದಿಂದಲೇ ಇದೆಲ್ಲಾ ಸಾಧಿಸಲು ಸಾಧ್ಯವಾಯಿತು” ಎನ್ನುತ್ತಾರೆ.

ಅನಿತಾ ಬನಾರಿ

ದಚ್ಚು ಮತ್ತು ಕಿಚ್ಚನ ಸ್ನೇಹ ಭಾಂದವ್ಯದ ಬಿರುಕಿಗೆ ಇದೀಗ ಎರಡು ವರ್ಷ…!!!

#balkaninews #archanajois #interview #kgfmother

Tags

Related Articles