ಬಾಲ್ಕನಿಯಿಂದಸಂದರ್ಶನ

ಕುಂದಾಪುರದ ಕುವರಿ ಇದೀಗ “ಕಿನ್ನರಿ” ಯ ಮಣಿ

ಬೆಂಗಳೂರು, ಮಾ.22:

ಕಲರ್ಸ್‍ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕಿನ್ನರಿ’ ಧಾರಾವಾಹಿಯ ಮಣಿಯಾಗಿ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ಭೂಮಿಕಾ ಮೂಲತಃ ಕುಂದಾಪುರದವರು.

ಎಳವೆಯಿಂದ ಭರತನಾಟ್ಯ ಹಾಗೂ ಯಕ್ಷಗಾನದಲ್ಲಿ ಅತೀವ ಆಸಕ್ತಿ ಹೊಂದಿದ್ದ ಭೂಮಿಕಾ ಬೆಂಗಳೂರಿಗೆ ಬಂದಿದ್ದು ನಟಿಯಾಗುವುದಕ್ಕಲ್ಲ. ಬದಲಿಗೆ ಎಂಜಿನಿಯರ್ ಆಗಲು. ಹೌದು ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ಮಹಾನಗರಿಗೆ ಬಂದ ಈಕೆ ಈಗಲೂ ವಿದ್ಯಾರ್ಥಿಯೇ.

ಇಂದು ಕಿನ್ನರಿಯ ಮಣಿಯಾಗಿ ಕಿರುತೆರೆ ಮೂಲಕ ಮನೆಮನೆಗೆ ಪರಿಚಿತರಾಗುವಂತೆ ಆಗಲು ಆರಂಭದಲ್ಲಿ ಸ್ನೇಹಿತರು ಮಾಡಿದ ಒತ್ತಾಯವೇ ಕಾರಣವಂತೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಜೀವನ ಚೈತ್ರ ಧಾರಾವಾಹಿಗಾಗಿ ಆಡಿಶನ್‍ ಏರ್ಪಡಿಸಿದ್ದರು. ಸ್ನೇಹಿತರು ಒತ್ತಾಯ ಮಾಡದಿರುತ್ತಿದ್ದರೆ ಅದಕ್ಕೆ ಹೋಗುತ್ತಲೇ ಇರಲಿಲ್ಲ ಎನ್ನುವ ಭೂಮಿಕಾ ಆಡಿಶನ್ ಹೋದ ಕಾರಣ ಆ ಧಾರಾವಾಹಿಯಲ್ಲಿ ಚಿಕ್ಕದೊಂದು ಮಾತ್ರ ಮಾಡುವ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು.ಕಿರುತೆರೆಗೆ ಬಂದ ಧಾರಾವಾಹಿ ಕಿನ್ನರಿಯಲ್ಲಿ ಈ ಮೊದಲು ಪಾತ್ರ ಮಾಡುತ್ತಿದ್ದ ದಿಶಾಳಿಗೂ ನಿನಗೂ ಹೋಲಿಕೆಯಿದೆ, ಹಾಗಾಗಿ ಮುಂದೆ ಆ ಹುಡುಗಿಯ ದೊಡ್ಡವಳಾದ ನಂತರದ ಪಾತ್ರವನ್ನು ನೀನು ಮಾಡಬಹುದು ಎಂದು ಕೆಲ ಪರಿಚಿತರು ಹೇಳಿದರು.  ಅದುವರೆಗೆ ಗಮನಿಸದಿದ್ದ ನಾನು ಯೂಟ್ಯೂಬ್‍ ನಲ್ಲಿ ನೋಡಿದಾಗ ಅವರು ಹೇಳುತ್ತಿರುವುದು ಸರಿ ಎನಿಸಿತು. ಮುಂದೆ ಅದೇ ಕಾರಣಕ್ಕಾಗಿ ಕಿನ್ನರಿಯ ಆಡಿಶನ್‍ ಗೆ ಹೋದೆ, ಆಯ್ಕೆಯಾದೆ. ಪ್ರೋಮೋ ನೋಡಿದವರೆಲ್ಲ ಆ ಪುಟ್ಟ ಹುಡುಗಿಯೇ ಬೆಳೆದು ದೊಡ್ಡವಳಾದದ್ದೇ ಎಂದು ಧಾರಾವಾಹಿಯ ತಂಡದವರನ್ನು ಪ್ರಶ್ನಿಸುತ್ತಿದ್ದರು ಎನ್ನುತ್ತಾರೆ ಭೂಮಿಕಾ.

ಕಿನ್ನರಿಯ ಮಣಿ ತುಂಬಾ ಮೃದು, ಎಲ್ಲರಿಗೂ ಬೇಕಾದವಳು, ಬುದ್ಧಿವಂತೆ. ಅಲ್ಲದೆ ಬಹಳಷ್ಟು ಜನಪ್ರಿಯವಾಗಿ ಮನೆಮಾತಾಗಿರುವ ಧಾರಾವಾಹಿಯಲ್ಲಿ ಲೀಡ್‍ ರೋಲ್ ಮಾಡುತ್ತಿರುವುದು ಭೂಮಿಕಾ ಸಂತೋಷವನ್ನು ಇಮ್ಮಡಿಗೊಳಿಸಿದೆ. ಆದರೆ ಮಣಿ ಬದುಕಿನಲ್ಲಿ ತುಂಬಾ ಕಷ್ಟಗಳನ್ನು ಕಂಡವಳು. ನಿಜಜೀವನದಲ್ಲಿ ಅಂತಹ ಕಷ್ಟಗಳನ್ನು ಅನುಭವಿಸದ ತನಗೆ ಈ ಪಾತ್ರದ ಆಯಾಮವೂ ಹೊಸತು ಎಂಬುದು ಭೂಮಿಕಾ ಮನದ ಮಾತು.

ಹಳ್ಳಿ ಹುಡುಗಿ, ಸೆನ್ಸಿಟಿವ್ ಪಾತ್ರದಲ್ಲಿ ಅದರಲ್ಲೂ ಅಭಿನಯಕ್ಕೆ ಅವಕಾಶ ಹೆಚ್ಚಿರುವ ಪಾತ್ರಗಳು ಬಂದರೆ ನಾನು ಖಂಡಿತಾ ಒಪ್ಪಿಕೊಳ್ಳಲು ತಯಾರಿದ್ದೇನೆ. ಆದರೆ ಸದ್ಯಕ್ಕಲ್ಲ. ಈಗೇನಿದ್ದರೂ ಕಿನ್ನರಿಯ ಕಡೆಗೆ ನನ್ನ ಗಮನ. ಇದು ತುಂಬಾ ಚಾಲೆಂಜಿಗ್ ಪಾತ್ರವಾಗಿರುವುದರಿಂದ ಸಾಕಷ್ಟು ಶ್ರಮವಹಿಸಬೇಕಾಗಿದೆ.

ನಟನೆಯ ಹೊರತಾಗಿ ಭೂಮಿಕಾ ಶೆಟ್ಟಿ ಅದ್ಭುತ ಚಿತ್ರಕಲಾವಿದೆಯೂ ಹೌದು. ಬಿಡುವಿನ ಸಮಯದಲ್ಲಿ ತನ್ನ ಕಲಾಕುಂಚದಿಂದ ನಿರ್ಜೀವ ವಸ್ತುಗಳಿಗೆ ಜೀವ ತುಂಬುವ ಭೂಮಿಕಾ ಡ್ರಾಯಿಂಗ್ ಮತ್ತು ಸ್ಕೆಚಿಂಗ್ ನಲ್ಲಿ ಪಳಗಿದ್ದಾರೆ. ಅದಕ್ಕೆಂದೇ ಅನಿಮೇಶನ್ ಕೋರ್ಸ್ ಕೂಡಾ ಮಾಡಿರುತ್ತಾರೆ. ಸ್ವಲ್ಪ ಸಮಯ ಸಿಕ್ಕರೂ ಸಾಕು, ಸ್ಕೆಚ್ ಮಾಡುತ್ತೇನೆ “ ಎನ್ನುತ್ತಾರೆ ಭೂಮಿಕಾ. ಇಂತಿಪ್ಪ ಮುದ್ದು ಕಲಾವಿದೆಗೆ ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

 ಅನಿತಾ ಬನಾರಿ

ನಟನಾ ಲೋಕದ ತ್ರಿಪುರ ಸುಂದರಿ ಅರ್ಚನಾ ಜೋಯಿಸ್

#balkaninews #bhoomishetty #bhoomishettyserials #bhoomishettyfacebook #colorskannada #kinnarikannadamovie

Tags