ಬಾಲ್ಕನಿಯಿಂದಸಂದರ್ಶನ

ನಟನೆಗೂ ಸೈ, ಕಂಠದಾನಕ್ಕೂ ಜೈ ಎನ್ನುವ ಚೆಲುವೆ

ಬೆಂಗಳೂರು, ಮಾ.25:

ಬಾಲ ನಟಿ, ಸಿನಿಮಾ ನಟಿ, ಕಿರುತೆರೆ ನಟಿ, ಕಂಠದಾನ ಕಲಾವಿದೆ ಇದು ದೀಪಾ ಭಾಸ್ಕರ್ ಅವರ ಸಂಕ್ಷಿಪ್ತ ಪರಿಚಯ. ಮಹೇಂದ್ರ ವರ್ಮ ಚಿತ್ರದಲ್ಲಿ ಬಣ್ಣ ಹಚ್ಚುವುದರ ಮೂಲಕ ಬಾಲ ನಟಿಯಾಗಿ ಪರಿಚಯವಾಗಿರುವ ದೀಪಾ ಸದ್ಯ ವೀಕ್ಷಕರ ಪ್ರೀತಿಯ ಸುಬ್ಬುಲಕ್ಷ್ಮಿಯಾಗಿದ್ದಾರೆ. ಮುಂದೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸುಬ್ಬುಲಕ್ಷ್ಮಿ ಸಂಸಾರದಲ್ಲಿ ಸುಬ್ಬುಲಕ್ಷ್ಮಿಯಾಗಿ ಮಿಂಚುತ್ತಿರುವ ದೀಪಾ ಭಾಸ್ಕರ್ ಹಳ್ಳಿ ಹುಡುಗಿಯಾಗಿ ಮನ ಸೆಳೆದಿದ್ದಾರೆ.

ಹೋಗ್ಲಿ ಬಿಡಿ ಸರ್, ಸಿಲ್ಲಿ ಲಲ್ಲಿ, ಪಾ.ಪ ಪಾಂಡು, ಮಳೆಬಿಲ್ಲು, ತಕಧಿಮಿತಾ, ಪ್ರೀತಿ ಇಲ್ಲದ ಮೇಲೆ, ಕಲ್ಯಾಣರೇಖೆ, ದಿಬ್ಬಣ, ಪಾರಿಜಾತ, ನಮ್ಮಮ್ಮ ಶಾರದೆ, ಅನಾವರಣ, ಚಕ್ರವಾಕ, ಮದರಂಗಿ, ಸಾಕ್ಷಿ ಧಾರಾವಾಹಿಗಳಲ್ಲಿ ಮನೋಜ್ಞಾವಾಗಿ ನಟಿಸಿರುವ ದೀಪಾ ಭಾಸ್ಕರ್ ಗೆ ಹೆಸರು ತಂದು ಕೊಟ್ಟದ್ದು ಪ್ರೀತಿ ಇಲ್ಲದ ಮೇಲೆಯ ನಿಮ್ಮಿ ಪಾತ್ರ. ಸಾಕ್ಷಿ ಧಾರಾವಾಹಿಯ ನಂತರ ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡಿದ್ದ ದೀಪಾ ಭಾಸ್ಕರ್ ಇದೀಗ ಸುಬ್ಬುಲಕ್ಷ್ಮಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡುಸುತ್ತಿದ್ದಾರೆ. ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯ ನಿಮ್ಮಿ ಎಂದೇ ಚಿರಪರಿಚಿತರಾಗಿದ್ದ ದೀಪಾ ಸದ್ಯ ಸುಬ್ಬುಲಕ್ಷ್ಮಿಯಾಗಿ ವೀಕ್ಷಕರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

‘’ ನಾನು ಯಾವತ್ತಿಗೂ ಇಂತಹದ್ದೇ ಪಾತ್ರ ಬೇಕು ಎಂದು ಹಂಬಲಿಸಿದವಳಲ್ಲ. ನಿರ್ದೇಶಕಿ ಸ್ವಪ್ನಾ ಕೃಷ್ಣ ಧಾರಾವಾಹಿ ಮತ್ತು ಪಾತ್ರದ ಬಗ್ಗೆ ವಿವರಿಸಿದರು. ಪಾತ್ರ ನನಗೆ ತುಂಬಾ ಇಷ್ಟವಾಯಿತು. ಪಾತ್ರ ನೈಜತೆಗೆ ತುಂಬಾ ಹತ್ತಿರವಾಗಿದೆ ಎಂದೆನಿಸಿ ಒಪ್ಪಿಕೊಂಡೆ’’ ಎನ್ನುತ್ತಾರೆ.

‘’ಸುಬ್ಬುಲಕ್ಷ್ಮಿ ಪೆದ್ದಿ ಅಲ್ಲವೇ ಅಲ್ಲ. ಆಕೆ ಸೀರೆ ಉಡುತ್ತಾಳೆ, ಹಳ್ಳಿ ಭಾಷೆ ಮಾತನಾಡುತ್ತಾಳೆ, ಇಂಗ್ಲೀಷ್ ಬರುವುದಿಲ್ಲ ಎಂಬ ಮಾತ್ರಕ್ಕೆ ಅವಳು ಪೆದ್ದಿ ಅಲ್ಲ. ತನ್ನ ಕೆಲಸವನ್ನು ತಾನೇ ನಿರ್ವಹಿಸಿವ ಆಕೆಯನ್ನು ವ್ಯವಹಾರದಲ್ಲಿ ಯಾರು ಯಾಮಾರಿಸಲು ಸಾಧ್ಯವಿಲ್ಲ’’ ಎಂದು ಸುಬ್ಬುಲಕ್ಷ್ಮಿ ಪಾತ್ರವನ್ನು ವಿವರಿಸುತ್ತಾರೆ ದೀಪಾ.

ಕಥಕ್ ಕಲಾವಿದೆಯಾಗಿರುವ ದೀಪಾ ರಾಜೇಂದ್ರ ಮತ್ತು ನಿರುಪಮಾ ರಾಜೇಂದ್ರ ಅವರ ನೃತ್ಯ ಗರಡಿಯಲ್ಲಿ ಹತ್ತು ವರುಷಗಳ ಕಾಲ ಶಾಸ್ತ್ರೀಯ ನೃತ್ಯ ಕಥಕ್ ಅಭ್ಯಾಸ ಮಾಡಿರುತ್ತಾರೆ. ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿರುವ ಇವರು ಕಥಕ್ ಕಲಾವಿದೆಯಾಗಿ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.

ಯಾರೇ ನೀ ಅಭಿಮಾನಿ, ಶ್ರೀರಸ್ತು ಶುಭಮಸ್ತು, ಮಹೇಂದ್ರ ವರ್ಮ, ದೀಪಾವಳಿ ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿರುವ ಇವರಿಗೆ ಪುಟ್ಟಿ ಚಿತ್ರಕ್ಕೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಮುಂದೆ ನಂ 73 ಶಾಂತಿನಿವಾಸ ಮತ್ತು ಮೈ ಆಟೋಗ್ರಾಫ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ದೀಪಾ ಭಾಸ್ಕರ್ ಅಭಿ ಚಿತ್ರದಲ್ಲಿ ರಮ್ಯಾ ಗೆ ಧ್ವನಿ ನೀಡುವ ಮೂಲಕ ಕಂಠದಾನ ಕಲಾವಿದೆಯಾಗಿ ಪರಿಚಿತರಾದರು. ಮುಂದೆ ರಮ್ಯಾ ಅಭಿನಯದ ಎಕ್ಸ್ ಕ್ಯೂಸ್ ಮಿ, ಕಂಠಿ, ರಂಗ ಎಸ್ ಎಸ್ ಎಲ್ ಸಿ ಹೀಗೆ ಅವರ ಹೆಚ್ಚಿನ ಪಾತ್ರಕ್ಕೆ ಧ್ವನಿ ನೀಡಿರುವ ಮುದ್ದು ಮುಖದ ಬೆಡಗಿ ಮೀರಾ ಜಾಸ್ಮಿನ್, ರಾಗಿಣಿ ದ್ವಿವೇದಿ, ಪೂಜಾ ಗಾಂಧಿ, ದುನಿಯಾ ರಶ್ಮಿ, ಜೆನ್ನಿಫರ್, ರಾಧಿಕಾ ಪಂಡಿತ್, ಪಾರುಲ್ ಯಾದವ್, ಒಗ್ಗರಣೆ ಸ್ನೇಹಾ, ತ್ರಿಷಾ ಸೇರಿದಂತೆ ಸುಮಾರು ನಾನೂರಕ್ಕೂ ಅಧಿಕ ಪಾತ್ರಗಳಿಗೆ ಕಂಠದಾನ ಮಾಡಿರುವ ದೀಪಾರಿಗೆ ಗಂಗಾ ಸಿನಿಮಾದಲ್ಲಿ ಮಾಲಾಶ್ರೀಗೆ ಧ್ವನಿ ನೀಡಿರುವುದು ಮರೆಯಲಾರದ ಕ್ಷಣ ಎನ್ನುತ್ತಾರೆ.

ಅತ್ತೆ ಮತ್ತು ಗಂಡ ನನಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ನನ್ನ ಬಗ್ಗೆ ಹೆಮ್ಮೆಯೂ ಇದೆ. ಬೆಳಗ್ಗೆ ಶೂಟಿಂಗ್ ಇರುವ ಕಾರಣ ನಾನು ಬೇಗ ಹೋಗಬೇಕಾಗುತ್ತದೆ. ಅತ್ತೆ ದಿನ ಬೆಳಗ್ಗೆ ಐದು ಗಂಟೆಗೆ ಎದ್ದು ನನಗೆ ಬೇಕಾದ ಟಿಫಿನ್ ರೆಡಿ ಮಾಡುತ್ತಾರೆ. ಅದು ನನ್ನ ಮೇಲೆ ಅವರಿಗಿರುವ ಪ್ರೀತಿ, ಕಾಳಜಿಗೆ ಒಂದು ಉದಾಹರಣೆ ಅಷ್ಟೇ. ಎಂದು ಮನೆಯವರ ಬೆಂಬಲವನ್ನು ವಿವರಿಸುತ್ತಾರೆ ಸುಬ್ಬುಲಕ್ಷ್ಮಿ ಆಲಿಯಾಸ್ ದೀಪ ಭಾಸ್ಕರ್.

ಅನಿತಾ ಬನಾರಿ

ಚಂದನವನದ ಚೆಂದುಳ್ಳಿ ಚೆಲುವೆ ಕಾರುಣ್ಯಾ ರಾಮ್!!!

#balkaninews #interview #deepabhaskar #deepabhaskarmovies #dubbingartistdeepabhskar

Tags