ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

“ಶ್ವೇತ” ಸುಂದರಿ…

ಬೆಂಗಳೂರು, ಏ.11:

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ರಾಧಾ ರಮಣ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಧಾರಾವಾಹಿಯ ನಾಯಕಿ ರಾಧಾ ಅಲಿಯಾಸ್ ಆರಾಧನಾ ಪಾತ್ರಧಾರಿಯಾಗಿ ಮನೆ ಮಾತಾಗಿರುವ ಚೆಂದುಳ್ಳಿ ಚೆಲುವೆಯ ಹೆಸರು ಶ್ವೇತಾ ಪ್ರಸಾದ್. ಶ್ರೀ ರಸ್ತು ಶುಭಮಸ್ತು ಧಾರಾವಾಹಿಯ ಜಾಹ್ನವಿಯಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಶ್ವೇತಾ ಗೆ ರಾಧಾ ರಮಣ ಎರಡನೇಯ ಧಾರಾವಾಹಿ. ಜಾಹ್ನವಿ ಆಲಿಯಾಸ್ ಜಾನು ಆಗಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಶ್ವೇತಾ ಸದ್ಯ ರಾಧಾ ಪಾತ್ರದಲ್ಲಿ ಬ್ಯುಸಿಯಾಗಿದ್ದಾರೆ.

ನಟಿಯಾಗಬೇಕು, ನಟನೆಯ ಮೂಲಕ ಮನೆ ಮನ ಮುಟ್ಟಬೇಕು ಎಂಬ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲದ ಶ್ವೇತಾ ಇದೀಗ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಅವರೊಂದಿಗಿನ ಮತ್ತಷ್ಟು ಮಾತುಕತೆ ನಿಮಗಾಗಿ…

ಕಿರುತೆರೆ ಜರ್ನಿ ಬಗ್ಗೆ ಹೇಳಿ?

ವಾಸ್ತುಶಿಲ್ಪಿ ಆಗಬೇಕು ಎಂಬುದು ನನ್ನ ಮಹಾದಾಸೆಯಾಗಿತ್ತು. ಅದರಂತೆ ಇಂಜಿನಿಯರಿಂಗ್ ಪದವಿಯನ್ನು ಪಡೆದೆ. ಫೇಸ್ ಬುಕ್ ನಲ್ಲಿ ನಾನು ಅಪ್ ಲೋಡ್ ಮಾಡಿದ ಫೋಟೋ ನೋಡಿದ ನಿರ್ಮಾಪಕಿ, ನಿರ್ದೇಶಕಿ ಶ್ರುತಿ ನಾಯ್ಡು  ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದರು. ನಟನೆಯ ಬಗ್ಗೆ ಗೊತ್ತಿಲ್ಲದ ಕಾರಣ ನಾನು ಮೊದಲಿಗೆ ಇಲ್ಲ ಎಂದು ಹೇಳಿದೆ. ಅಷ್ಟಾದರೂ ಬಿಡದ ಶ್ರುತಿ ನಾಯ್ಡು ಅಡಿಶನ್ ಕರೆದರು. ಒಲ್ಲೆ ಎನ್ನಲು ಮನಸಾಗದೇ ಅಡಿಶನ್ ಗೆ ಹೋದೆ. ಆದರೆ ಅಲ್ಲಿ ಆದದ್ದೇ ಬೇರೆ. ಫೋಟೋ ಶೂಟ್ ಆಯಿತು. ನಂತರ ಧಾರಾವಾಹಿ ಶೂಟಿಂಗ್ ಶುರುವಾಯಿತು. ಹೀಗೆ ನನ್ನ ಕಿರುತೆರೆ ಜರ್ನಿ ಆರಂಭವಾಯಿತು.

ಪ್ರಸ್ತುತ ರಾಧಾಳಾಗಿ ನಟಿಸುತ್ತಿದ್ದರೂ ಜನ ಇಂದಿಗೂ ಜಾನು ಎಂದೇ ಗುರುತಿಸುತ್ತಾರೆ. ಅದರ ಬಗ್ಗೆ ಏನು ಹೇಳ್ತೀರಿ?

ಶ್ರೀರಸ್ತು ಶುಭಮಸ್ತುವಿನ ಜಾಹ್ನವಿ ಅಲಿಯಾಸ್ ಜಾನು ಪಾತ್ರಧಾರಿಯಾಗಿ ಮೊಟ್ಟಮೊದಲ ಬಾರಿ ಕಿರುತೆರೆಯಲ್ಲಿ ಕಾಣಿಸಿಕೊಂಡೆ. ಅದೇ ಕಾರಣದಿಂದ ಜನ ಇಂದು ನನ್ನನ್ನು ಜಾನು ಎಂದೇ ಗುರುತಿಸುತ್ತಾರೆ. ನಟಿಸಿದ ಮೊದಲನೇ ಧಾರಾವಾಹಿಯಲ್ಲೇ ಜನರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಸಂತೋಷದಿಂದ ಹೇಳುತ್ತಾರೆ ಶ್ವೇತಾ.

ರಾಧಾ ಪಾತ್ರಕ್ಕೂ ಶ್ವೇತಾ ಪಾತ್ರಕ್ಕೂ ಇರುವ ಸಾಮ್ಯತೆ?

ನಾನು ನಿಜ ಜೀವನದಲ್ಲೂ ಕೂಡ ರಾಧಾಳಷ್ಟೇ ಸರಳ. ನನ್ನ ಸ್ವಭಾವಕ್ಕೆ ತಕ್ಕ ಪಾತ್ರಗಳು ಬರುತ್ತಿದೆ. ಆದರೆ ನಾನು ರಾಧಾಳಷ್ಟು ಪೆದ್ದಿ ಅಲ್ಲ. ನಿಜ ಜೀವನದಲ್ಲಿ ಸ್ವಲ್ಪ ಜೋರಾಗಿದ್ದೇನೆ.

ಪ್ರದೀಪ್ ಬಗ್ಗೆ ಹೇಳೋದಾದ್ರೆ?

ಪತಿ ಪ್ರದೀಪ್ ರೇಡಿಯೊದಲ್ಲಿ ಸಿಕ್ಕಾಪಟ್ಟೆ ಮಾತಾಡ್ತಾರೆ. ಆದರೆ, ಮನೆಯಲ್ಲಿ ಮಾತ್ರ ಅವರು ಮೌನಿ. ಆಗ ನಾನು ಆರ್.ಜೆ. ಆಗಿರ್ತೀನಿ. ಅವರಿಗೆ ಸಖತ್ ಕೀಟಲೆ ಮಾಡ್ತೀನಿ.

ಮನೆಯವರ ಬೆಂಬಲ ಹೇಗಿದೆ?

ಇಂದು ನಾನು ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಪತಿ ಪ್ರದೀಪ್ ಅವರೇ ಕಾರಣ. ಧಾರಾವಾಹಿಯಲ್ಲಿ ನಟಿಸಲು ಅವಕಾಶ ಬಂದಾಗ ಪ್ರದೀಪ್ ಅವರೇ ನನ್ನನ್ನು ಪ್ರೋತ್ಸಾಹಿಸಿದರು. ಇಲ್ಲ ಅಂದಿದ್ದರೆ ನಾನು ಈ ಕ್ಷೇತ್ರಕ್ಕೆ ಬರುತ್ತಿರಲಿಲ್ಲ.

ನಟನೆಯ ಹೊರತು?

ಬಿಡುವಿನ ವೇಳೆಯಲ್ಲಿ ಇಬ್ಬರೂ ಚೆನ್ನಾಗಿ ಊರು ಸುತ್ತುತ್ತೀವಿ. ನನಗೆ ಸ್ಕ್ಯೂಬಾ ಡೈವಿಂಗ್, ಪ್ಯಾರಾ ಗ್ಲೈಡಿಂಗ್ ಅಂದರೆ ಸಖತ್ ಇಷ್ಟ. ಅಲ್ಪಸ್ವಲ್ಪ ಓದುವ ಹವ್ಯಾಸವಿದೆ. ಇನ್ನೂ ಸೀರೆ ತುಂಬಾ ಇಷ್ಟ. ಅದೇ ಕಾರಣದಿಂದ ಧಾರಾವಾಹಿಯಲ್ಲಿ ಸೀರೆಯನ್ನೇ ಉಡ್ತೀನಿ. ನಿಜಜೀವನದಲ್ಲಿ ಹೆಚ್ಚು ಮೇಕಪ್ ಮಾಡಿಕೊಳ್ಳಲ್ಲ.

ಸಿನಿಮಾದಲ್ಲಿನ ಆಸಕ್ತಿ..?

ಹೌದು, ದೀಪಕ್ ಮಧುವನಹಳ್ಳಿ ನಿರ್ದೇಶನದ ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದಲ್ಲಿ ನಾಯಕಿ ಕಮಲಿಯಾಗಿ ನಟಿಸಿದ್ದೇನೆ. ಮುಂದಿನ ದಿನಗಳಲ್ಲಿ ಚಿತ್ರರಂಗದಿಂದ ಅವಕಾಶಗಳು ಹುಡುಕಿಕೊಂಡು ಬಂದರೆ ಖಂಡಿತ ನಟಿಸುತ್ತೇನೆ ಎಂದಿದ್ದಾರೆ.

ಇಂತಹ ಮುದ್ದು ಬೆಡಗಿಯ ಮುಂದಿನ ಜೀವನ ಸುಖಕರವಾಗಿರಲೆಂದು ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

ಅನಿತಾ ಬನಾರಿ

ಬಣ್ಣದ ಲೋಕದಲ್ಲಿ ‘ಶೋಭಾ’ಯಮಾನ

#balkaninews #sandalwood #kannadamovies #actressshwetharprasad #shwetharprasadmovies #shwetharprasadfacebook

Tags