ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಅಮೆರಿಕಾ ಪಾಲಾದರೂ ನಗೆಯ ಅಮಲೇರಿಸುವ ಅಧ್ಯಕ್ಷ!

Rating: 3.5/5

Star Cast: ಶರಣ್, ರಾಗಿಣಿ ದ್ವಿವೇದಿ, ದಿಶಾ ಪಾಂಡೆ, ಸಾಧು ಕೋಕಿಲಾ, ಪ್ರಕಾಶ್ ಬೆಳವಾಡಿ, ಅವಿನಾಶ್, ರಂಗಾಯಣ ರಘು ಮತ್ತು ಇತರರು

Director: ಯೋಗಾನಂದ್ ಮುದ್ದಾನ್

ಶರಣ್ ಅಭಿನಯದ ಯಾವುದೇ ಚಿತ್ರವಾದರೂ ಅಬ್ಬರದೊಂದಿಗೆ ಬಿಡುಗಡೆಯ ಹೊಸ್ತಿಲು ದಾಟಿಕೊಳ್ಳುವುದು ಮಾಮೂಲು. ಆದರೆ ‘ಅಧ್ಯಕ್ಷ ಇನ್ ಅಮೆರಿಕಾ’ ಚಿತ್ರದ ಹವಾ ಮಾತ್ರ ಈ ವರೆಗಿನದ್ದಕ್ಕಿಂತ ತುಸು ಹೆಚ್ಚೇ ಇದ್ದದ್ದು ಸುಳ್ಳಲ್ಲ. ಈ ಕಾರಣದಿಂದಲೇ ನಿರೀಕ್ಷೆಗಳು ಕೂಡಾ ಹೆಚ್ಚಾಗಿದ್ದವು.

ಅದ್ದೂರಿ ನಿರ್ಮಾಣದ ಚಹರೆಗಳೊಂದಿಗೆ ಟ್ರೇಲರ್ ಮತ್ತು ಹಾಡುಗಳು ಹಿಟ್ ಆಗಿದ್ದರಿಂದಾಗಿ ಅಂಥಾ ನಿರೀಕ್ಷೆಗಳು ಮತ್ತಷ್ಟು ಹೊಳಪು ಪಡೆದುಕೊಂಡಿದ್ದವು. ಇಂಥಾ ಸಕಾರಾತ್ಮಕ ವಾತಾವರಣದ ನಡುವೆಯೇ ಇಂದು ಈ ಚಿತ್ರ ಬಿಡುಗಡೆಯಾಗಿದೆ. ಗಟ್ಟಿ ಕಥೆಯೊಂದಿಗೆ ಮನಸಾರೆ ನಗಿಸುತ್ತಲೇ ದೊಡ್ಡ ಗೆಲುವಿನ ಸ್ಪಷ್ಟ ಲಕ್ಷಣಗಳೊಂದಿಗೆ ಪ್ರದರ್ಶನ ಕಾಣುತ್ತಿದೆ.

Image result for adhyaksha in americaಇದು ಯೋಗಾನಂದ್ ಮುದ್ದಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ. ಆದರೆ ಸಿನಿಮಾದುದ್ದಕ್ಕೂ ಮೊದಲ ಹೆಜ್ಜೆಯ ಹುರುಪು ದೃಶ್ಯಗಳನ್ನು ಕಳೆಗಟ್ಟಿಸಿದೆಯೇ ಹೊರತು, ಬೊಟ್ಟು ಮಾಡಿ ತೋರಿಸುವಂಥಾ ಯಾವ ಕೊರತೆಗಳೂ ಕಾಣಿಸುವುದಿಲ್ಲ.

ಇದು ‘ಅಧ್ಯಕ್ಷ ಇನ್ ಅಮೆರಿಕಾ’ ಸಿನಿಮಾದ ಪ್ರಧಾನ ಪ್ಲಸ್ ಪಾಯಿಂಟ್. ಯಾರನ್ನೇ ಆದರೂ ಮಾತುಗಾರಿಕೆಯಿಂದಲೇ ಮರುಳು ಮಾಡಿ ಯಾಮಾರಿಸಿ ಬಿಡುವಂಥಾ ಪ್ರಳಯಾಂತಕ ನಾಯಕ. ಇಂಥವನಿಗೊಂದು ಲವ್ವು. ಆ ಹುಡುಗಿ ಈತನೊಂದಿಗೆ ಬದುಕಲು ತಯಾರಿರುವಾಗಲೇ ಅಧ್ಯಕ್ಷನ ಮೋಹ ಅಮೆರಿಕಾ ಹುಡುಗಿಯತ್ತ ಹೊರಳಿಕೊಳ್ಳುತ್ತದೆ. ಅದು ಪ್ರೀತಿಸಿದ ಹುಡುಗಿಯನ್ನೇ ಧಿಕ್ಕರಿಸಿ ಅಮೆರಿಕದವಳ ತೆಕ್ಕೆಗೆ ಬೀಳುವಷು ತೀವ್ರವಾಗುತ್ತದೆ.

Image result for adhyaksha in americaಕಡೆಗೂ ಬಣ್ಣ ಬಣ್ಣದ ಕನಸುಗಳೊಂದಿಗೆ ಅಮೆರಿಕ ಹುಡುಗಿಯನ್ನು ಮದುವೆಯಾಗುವ ಅಧ್ಯಕ್ಷ ಅಮೆರಿಕಾ ಪಾಲಾಗಿ ಬಿಡುತ್ತಾನೆ. ಅಸಲೀ ಕಥೆ ತೆರೆದುಕೊಳ್ಳುವುದೇ ಅಲ್ಲಿಂದ. ಅಲ್ಲಿಂದಾಚೆಗೆ ನಾನಾ ಭಾವಗಳು, ತಿರುವುಗಳು ಬಂದು ಹೋದರೂ ನಗುವಿನ ಅಲೆಯೇರಿ ತೊಯ್ದಾಡುವಂತೆ ನಿರ್ದೇಶಕರ ಇಡೀ ಕಥೆಯನ್ನು ಕಟ್ಟಿ ಕೊಟ್ಟಿದ್ದಾರೆ.

ಹಳ್ಳಿಗಾಡಿನ ಅಧ್ಯಕ್ಷನಿಗೂ ಅಮೆರಿಕಾ ಹುಡುಗಿಗೂ ಯಾವ ಥರದ ಕನೆಕ್ಷನ್ನು, ಅಸಲೀ ಕಥೆಯೇನೆಂಬ ಕುತೂಹಲ ನಿಮಗಿದ್ದರೆ ಹೊಟ್ಟೆ ಹಿಡಿದು ನಗುವಂಥಾ ಭರ್ಜರಿ ಮನೋರಂಜನೆಗೆ ತಯಾರಾಗಿ ಥಿಯೇಟರಿನತ್ತ ಹೋಗಿರಿ.ಹಾಗೆ ಚಿತ್ರಮಂದಿರಕ್ಕೆ ತೆರಳಿದವರನ್ನು ಅಮೆರಿಕಾ ಅಧ್ಯಕ್ಷ ಯಾವ ಥರದಲ್ಲಿಯೂ ನಿರಾಸೆ ಮಾಡಿಸುವುದಿಲ್ಲ. ಶರಣ್ ಎಂದಿನಂತೆ ಪಾತ್ರವನ್ನು ನುಂಗಿಕೊಂಡು ನಟಿಸಿದ್ದಾರೆ. ರಾಗಿಣಿ ಈವರೆಗೆ ಎಂದೂ ನಟಿಸದಿದ್ದಂಥಾ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಉಳಿದ ಕಲಾವಿದರೂ ಕೂಡಾ ತಕ್ಕುದಾಗಿಯೇ ಸಾಥ್ ಕೊಟ್ಟಿದ್ದಾರೆ. ಅದ್ದೂರಿ ನಿರ್ಮಾಣ, ಅದ್ಭುತ ಅನ್ನಿಸುವಂಥಾ ದೃಶ್ಯ ವೈಭವದೊಂದಿಗೆ ಮೊದಲ ಪ್ರಯತ್ನದಲ್ಲಿಯೇ ಯೋಗಾನಂದ್ ಮುದ್ದಾನ್ ನಿರ್ದೇಶಕರಾಗಿ ಗೆದ್ದಿದ್ದಾರೆ. ಒಂದು ಸಲ ಥಿಯೇಟರ್ ನತ್ತ ಹೋದರೆ ಅಪರೂಪದ ಚಿತ್ರ ನೋಡಿದ ಅನುಭವ, ಮನಸಾರೆ ನಕ್ಕು ಹಗುರಾದ ಖುಷಿ ಖಂಡಿತಾ ನಿಮ್ಮದಾಗುತ್ತದೆ.

ಕನ್ನಡ ಚಿತ್ರಗಳನ್ನು ಗೆಲ್ಲಿಸಿ, ಪೈರಸಿಯನ್ನು ಕೊಲ್ಲಿ: ನಟ ಶರಣ್

Tags