ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಅಮ್ಮ-ಮಗನ ಹೃದಯವಂತಿಕೆಯ ಕಥೆ.

ಸುಮಾರು ಎರಡು ವರ್ಷಗಳ ಹಿಂದೆಯಷ್ಟೇ ತೆರೆ ಕಂಡಿದ್ದ ತಮಿಳಿನ “’ಪಿಚೈಕ್ಕಾರನ್’ ಸಿನಿಮಾದ ರೀಮೇಕ್ ಆದರೂ,’ಅಮ್ಮ ಐ ಲವ್ ಯು’ ಚಿತ್ರವನ್ನ ಕನ್ನಡ ಮಣ್ಣಿನ ಸೊಗಡಿಗೆ ತಕ್ಕ ಹಾಗೆ ತಯಾರು ಮಾಡಿದ್ದಾರೆ ನಿರ್ದೇಶಕರಾದ ಕೆ.ಎಂ ಚೈತನ್ಯ. ಚಿತ್ರದ ಮೂಲ ಕಥೆಗೂ, ಚಿತ್ರದ ಶೀರ್ಷಿಕೆಗೂ ಅಷ್ಟೇನೂ ಹೊಂದಾಣಿಕೆಯಾಗದಿದ್ದರೂ , ಕನ್ನಡದ ಈ ಚಿತ್ರ ಅಮ್ಮ-ಮಗನ ಅನುಭಂದದ ಚೌಕಟ್ಟಿಗೆ ಚಿತ್ರವನ್ನು ಸೀಮಿತಗೊಳಿಸಲಾಗಿದೆ.

ಸಿದ್ದಾರ್ಥ್ ಶಿವಕುಮಾರ್ (ಚಿರಂಜೀವಿ ಸರ್ಜಾ), ಅನ್ನಪೂರ್ಣ ಗ್ರೂಪ್ ಆಫ್ ಕಂಪನೀಸ್ ನ ಮ್ಯಾನೇಜಿಂಗ್ ಡೈರೆಕ್ಟರ್. ವಿದೇಶದಲ್ಲಿ ಓದು ಮುಗಿಸಿ ಸ್ವದೇಶಕ್ಕೆ ವಾಪಸ್ ಆಗುವ ಕೋಟ್ಯಾಧಿಪತಿ ಸಿದ್ಧಾರ್ಥ್ ಗೆ ದೊಡ್ಡ ಆಘಾತ ಎದುರಾಗುತ್ತದೆ. ಪರಿಣಾಮ, ಭಿಕ್ಷೆ ಬೇಡುವ ಅನಿವಾರ್ಯತೆ ಸಿದ್ದಾರ್ಥ್ ಗೆ ಉಂಟಾಗುತ್ತದೆ.

ಅಕ್ಷರಶಃ ಕುಬೇರನಾಗಿರುವ ಸಿದ್ಧಾರ್ಥ್ ಭಿಕ್ಷೆ ಬೇಡುವುದೇಕೆ.? ಎಂಬುದೇ ಚಿತ್ರದ ಬಹುದೊಡ್ಡ ಸಸ್ಪೆನ್ಸ್. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ತಾಯಿಯ ಪ್ರಾಣ ಉಳಿಸಲು ಮಗ ಪಡುವ ಕಷ್ಟಗಳೇ ‘ಅಮ್ಮ ಐ ಲವ್ ಯು’ ಚಿತ್ರದ ಕಥಾನಕ. ಶ್ರೀಮಂತನಾಗಿದ್ದರೂ , ಭಿಕ್ಷೆ ಬೇಡಲು ಮುಂದಾಗುವ ಸಿದ್ದಾರ್ಥ್ ಪಾತ್ರಕ್ಕೆ ನಟ ಚಿರಂಜೀವಿ ಸರ್ಜಾ ಜೀವ ತುಂಬಿದ್ದು, ಹೆಂಗಳೆಯರ ಮನಮಿಡಿಯುವಲ್ಲಿ ಯಶಸ್ವಿಯಾಗುತ್ತಾರೆ.

ಈ ಮೂಲಕ ಬದುಕಿನ ಫಿಲಾಸಫಿಯನ್ನು ಚಿತ್ರದಲ್ಲಿ ಕಾಣಬಹುದು. ಭಾವನಾತ್ಮಕ ಕಥೆಯನ್ನು, ಕಾಮಿಡಿ ಸ್ಪರ್ಶದೊಂದಿಗೆ ಫಿಲಾಸಫಿಕಲಾಗಿ ತೆರೆಯ ಮೇಲೆ ತರಲಾಗಿದೆ. ಚಿತ್ರ ಸಮಾಜದ ಹಲವು ಸಂಬಂಧಗಳನ್ನು ಪ್ರಜ್ಞೆಗೆ ತರುತ್ತದೆ. ನಿರ್ದೇಶಕ ಕೆ.ಎಂ. ಚೈತನ್ಯ ಸಮರ್ಥವಾಗಿ ತೆರೆಗೆ ತಂದಿದ್ದಾರೆ. ಇಲ್ಲಿಯವರೆಗಿನ ಚಿತ್ರಗಳಿಗೆ ಹೋಲಿಸಿದರೆ ಚಿರು ನಟನೆ ಅತ್ಯುತ್ತಮವಾಗಿದೆ. ಇನ್ನು ಹೊಸ ನಟಿ ನಿಶ್ವಿಕಾ ಸೌಂದರ್ಯ, ನಟನೆ ಎರಡರಲ್ಲೂ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ.
ಇಲ್ಲಿ ಬರೀ, ಭಾವನಾತ್ಮಕ ಸಂಬಂಧ, ಭಾವುಕತೆಯ ಆಳವಷ್ಟೇ ಇಲ್ಲ, ಮಾನವೀಯತೆ ಮೌಲ್ಯದ ಸಾರವಿದೆ. ಅಂಗೈ ಅಗಲದಷ್ಟು ಪ್ರೀತಿಯ ಬೆಸುಗೆ ತುಂಬಿದೆ, ಸ್ವಾರ್ಥ ಮನೋಭಾವವುಳ್ಳ ಮನಸ್ಸುಗಳ ವಿಲಕ್ಷಣ ನೋಟವಿದೆ, ಎಲ್ಲವನ್ನೂ ಬದಿಗೊತ್ತಿ, ನಿರೀಕ್ಷೆ ಮೀರಿ ಮಾಡುವ ಒಂದು ಕೆಲಸದಲ್ಲಿ ಬದುಕಿನ ಸಾರವಿದೆ, ಸತ್ಯದ ರುಚಿ ಇದೆ.

ಗುರುಕಿರಣ್ ಸಂಗೀತ ನೀಡುರುವ ಎಲ್ಲಾ ಹಾಡುಗಳು ಗಮನ ಸೆಳೆಯುತ್ತವೆ. ಇನ್ನು ನಟರಾದ ಚಿಕ್ಕಣ್ಣ , ಬಿರಾದಾರ ಸೇರಿದಂತೆ ಅನೇಕ ಹಿರಿಯ ನಟರು ಭಿಕ್ಷುಕ ಪಾತ್ರದಲ್ಲಿ ನಟಿಸಿದ್ದು, ಪ್ರೇಕ್ಷಕರನ್ನು ನಗಿಸಿಯೂ ಯಶಸ್ವಿಯಾಗುತ್ತಾರೆ.
ಎರಡು ಪಾತ್ರಗಳ ಮೂಲಕ ಚಿರು, ಹಾಗೂ ಪಿಜ್ಜಾ ಶಾಪ್ ನಲ್ಲಿ ಕೆಲಸ ಮಾಡುವ ನಿಶ್ವಿಕಾ, ಇವರುಗಳ ಲವ್ ಸ್ಟೋರಿಯನ್ನು ಕಾಮಿಡಿ ಮೂಲಕ ಕಾಣಬಹುದು. ಇನ್ನು ನಟ ತರಂಗ ವಿಶ್ವ ನಗಿಸಿದರೆ, ಪ್ರಕಾಶ್ ಬೆಳವಾಡಿಯವರು ಜಿಪುಣ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.

ಕರಿಸುಬ್ಬು, ಸಿತಾರಾ, ಗಿರಿ ದ್ವಾರಕೀಶ್, ಸೇರಿದಂತೆ ಅನೇಕರು ಚಿತ್ರದಲ್ಲಿ ಗಮನ ಸೆಳೆಯುತ್ತಾರೆ. ಒಮ್ಮೆ ಇಡೀ ಕುಟುಂಬ ಒಟ್ಟಿಗೆ ಕುಳಿತು, ಯಾವುದೇ ಮುಜುಗರವಿಲ್ಲದೇ ನೋಡಬಹುದಾದ ಚಿತ್ರ ‘ಅಮ್ಮಾ ಐ ಲವ್ ಯೂ’

Tags