ಬಾಲ್ಕನಿಯಿಂದಸಂದರ್ಶನ

ಕಿರುತೆರೆಯ ಶ್ವೇತ ಸುಂದರಿ ‘ಆಶಿತಾ’

ಮೊದಲ ಬಾರಿಗೆ ನೆಗೆಟಿವ್ ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡಿದ್ದ ಅಶಿತ ಫ್ಯಾಷನ್ ಸ್ಟೈಲಿಶ್ಟ್ ಸಹ ಹೌದು..

ಬೆಂಗಳೂರು,ಸ. 08: ಮುದ್ದು ಮುಖದ ಈ ಶ್ವೇತ ಸುಂದರಿಯ ಹೆಸರು ಆಶಿತಾ ಚಂದ್ರಪ್ಪ. ಇವರ ಹೆಸರು ಕಿರುತೆರೆ ವೀಕ್ಷಕರಿಗೆ ಅಷ್ಟೊಂದು ಪರಿಚಯವಿರಲಿಕ್ಕಿಲ್ಲ. ಯಾಕೆಂದರೆ ಇಂದು ಆಕೆ ಶಾಲಿನಿ ಎಂದೇ ಚಿರಪರಿಚಿತ. ನೀವು ಜೊತೆಜೊತೆಯಲಿ ಧಾರಾವಾಹಿಯ ಶಾಲಿನಿ ಅಲ್ವಾ ಎಂದೇ ಜನ ಗುರುತಿಸುವುದು ಹೆಚ್ಚು. ಪ್ರಬುದ್ದ ಮಾತ್ರವಲ್ಲ ಜವಾಬ್ದಾರಿಯುತ ಟೀಚರ್ ಶಾಲಿನಿ ಪಾತ್ರಕ್ಕೆ ಜೀವ ತುಂಬಿದ್ದ ಆಶಿತಾ ಮೊದಲ ಧಾರಾವಾಹಿಯಲ್ಲೇ ಮನೆ ಮಾತಾದವರು.

ಜೊತೆಜೊತೆಯಲಿ ಧಾರಾವಾಹಿಯ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಆಶಿತಾ ಮುಂದೆ ಉದಯವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸುಂದರಿ ಧಾರಾವಾಹಿಯಲ್ಲಿ ಐಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದರು. ಮುಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀಲಿ’ ಧಾರಾವಾಹಿಯಲ್ಲಿ ರೇಖಾ ಪಾತ್ರಧಾರಿಯಾಗಿ ನಟಿಸಿ ಮನೆ ಮಾತಾಗಿದ್ದರು. ಅದು ನೆಗೆಟಿವ್ ಪಾತ್ರದಲ್ಲಿ!!

ಅವನಿ ಧಾರಾವಾಹಿ

ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರಾವಾಹಿಯಲ್ಲಿ ಅಶಿತ ನಟಿಸುತ್ತಿದ್ದಾರೆ. ರಾಣಿ ಪಾತ್ರಧಾರಿಯಾದ ಈಕೆ ರಮಣ್ ಸೋದರ ಅತ್ತೆ ಸಿತಾರಾ ದೇವಿಯ ಕುತಂತ್ರದಿಂದಾಗಿ ಇದೀಗ ‘ಅವನಿ’ಯಾಗಿ ಬದಲಾಗಿದ್ದಾಳೆ. ಮಾತ್ರವಲ್ಲ ಅವನಿಯಾಗಿ ಮನೆಗೆ ಕಾಲಿಟ್ಡದ್ದೂ ಆಗಿದೆ. ರಮಣ್ ನ ಪ್ರೀತಿಯ ತಂಗಿ, ಅಮ್ಮನ ಮುದ್ದಿನ ಮಗಳಾಗಿರುವ ಅವನಿ ಆಲಿಯಾಸ್ ರಾಣಿ ಯ ನಿಜ ರೂಪ ಸಿತಾರಾ ಮಗಳು ದೀಪಿಕಾಗೂ ತಿಳಿದಿದೆ.. ಇನ್ನು ರಾಧಾ ರಮಣ್ ಸೇರಿದಂತೆ ಮನೆಯ ಇತರ ಸದಸ್ಯರಿಗೆ ಆಕೆ ಅವನಿಯಲ್ಲ, ರಾಣಿ ಎಂದು ತಿಳಿಯುವುದೊಂದೇ ಬಾಕಿ.. ಇದು ಅವನಿ ಆಲಿಯಾಸ್ ರಾಣಿ ಪಾತ್ರದ ಸಂಕ್ಷಿಪ್ತ ಮಾಹಿತಿ ಎನ್ನಬಹುದೇನೋ..

ನೆಗೆಟಿವ್ ಪಾತ್ರ

ಮೊದಲ ಬಾರಿಗೆ ನೆಗೆಟಿವ್ ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡಿದ್ದ ಅಶಿತ ಚಂದ್ರಪ್ಪ ಫ್ಯಾಷನ್ ಸ್ಟೈಲಿಶ್ಟ್ ಹೌದು. ಇವರು ಚಿತ್ರರಂಗದ ಸಾಂಗತ್ಯದಲ್ಲೇ ಬೆಳೆದವರು. ಅವರ ತಂದೆ ಚಂದ್ರಪ್ಪ ಸಿನಿಮಾ ವಿತರಕರು. ಹಾಗಿದ್ದರೂ ಅವರಿಗೆ ತಾನೊಬ್ಬಳು ನಟಿಯಾಗಬೇಕು ಎಂಬ ಆಸೆ ಇರಲಿಲ್ಲ ಅಲ್ಲದೇ ತಾನು ಕೂಡಾ ಉಳಿದ ಕಲಾವಿದರಂತೆ ಕಿರುತೆರೆಯ ಮೂಲಕ ಮನೆ ಮಾತಾಗುತ್ತೇನೆ ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲವಂತೆ.

“ ಇಂದಿಗೂ ನಾನು ಒಬ್ಬಳು ಕಲಾವಿದೆ ಎನ್ನುವ ವಿಚಾರವನ್ನು ನಾನೇ ಅದೆಷ್ಟೋ ಸಲ ಮರೆತಿದ್ದೇನೆ. ಸಿನಿಮಾ ಇಂಡಸ್ಟ್ರಿ ನೋಡುತ್ತಾ ಬೆಳೆದವಳು ನಾನು. ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಕಲಾವಿದರನ್ನು ನೋಡಿದ್ದೇನೆ. ಅವರ ಮುಂದೆ ನಾನು ಏನೇನೂ ಅಲ್ಲ. ಇನ್ನು ಮನೆಯವರೂ ಅಷ್ಟೇ. ನನ್ನನ್ನು ಮುದ್ದಿನ ಮಗಳಾಗಿ ನೋಡುತ್ತಾರೆಯೇ ಹೊರತು ಕಲಾವಿದೆ ಎಂದು ಯಾವತ್ತೂ ಅಂದುಕೊಂಡವರಲ್ಲ. ಎಷ್ಟೇ ಹೆಸರು, ಕೀರ್ತಿ ಬಂದರೂ ನಾವು ನಾವಾಗಿದ್ದರೆ ಚೆಂದ’’ ಎಂದು ಶ್ವೇತಾ ಸುಂದರಿ ನಗುತ್ತಾ ಹೇಳುತ್ತಾರೆ.

ಮೂರು ಧಾರಾವಾಹಿಯ ನಟನೆ

ಅಭಿನಯಿಸಿದ ಮೂರು ಧಾರಾವಾಹಿಗಳಲ್ಲೂ ಪ್ರಬುದ್ಧ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅಶಿತಾಗೆ ಬಬ್ಲಿ ಹುಡುಗಿಯ ಪಾತ್ರದಲ್ಲಿ ನಟಿಸುವ ಬಯಕೆ. ‘ಬೊಮ್ಮರಿಲು’ ಚಿತ್ರದಲ್ಲಿ ನಟಿ ಜೆಲಿನಿಯಾ ಡಿಸೋಜಾ ನಟಿಸಿದ ಹಾಸಿನಿಯಂಥ ಪಾತ್ರಗಳಲ್ಲಿ ನಟಿಸಬೇಕು ಎಂಬುದು ನನ್ನ ಮಹದಾಸೆ ಎನ್ನುವ ಅವರಿಗೆ, ನಿರ್ದೇಶಕಿ ಶ್ರುತಿ ನಾಯ್ಡು ಅವರು ಸ್ಫೂರ್ತಿ.

“ಯಾವುದೇ ಹಿನ್ನಲೆಯಿಲ್ಲದೆ ಈ ಕ್ಷೇತ್ರಕ್ಕೆ ಬಂದ ಶ್ರುತಿ ನಾಯ್ಡು ಇಂದು ತಮ್ಮ ಪರಿಶ್ರಮ ಮತ್ತು ಸಾಧನೆಯಿಂದಾಗಿ ಗುರುತಿಸಿಕೊಂಡವರು. ಹಾಗಾಗಿ ನನಗೂ ಅವರೇ ಇನ್ಸ್ಪಿರೇಶನ್” ಎನ್ನುತ್ತಾರೆ ಅಶಿತಾ.

ಧಾರಾವಾಹಿ ಪಯಣ

“ನಟನೆಯಲ್ಲಿ ಮೊದಲು ನಾವು ಪಾತ್ರವನ್ನು ಒಪ್ಪಿಕೊಂಡುಬಿಡಬೇಕು. ಒಪ್ಪಿಕೊಂಡ ನಂತರ ನಾವೇ ಆ ಪಾತ್ರ ಎಂದು ಕಲ್ಪಿಸಿಕೊಂಡರೆ ಮಾತ್ರ ನ್ಯಾಚುರಲ್ ಆಗಿ ನಟಿಸಲು ಆಗುತ್ತದೆ. ಅದರ ಹೊರತು ಅದು ಕೇವಲ ನಟನೆ ಎಂದು ಭ್ರಮಿಸಿ ನಟಿಸಿದರೆ ಬರೀ ನಾಟಕವಾಗುತ್ತದೆ ಎಂಬುದು ನನ್ನ ಅನುಭವ” ಎಂದು ತಮ್ಮ ಕಲಾ ಲೋಕದ ಸುಂದರ ಪಯಣಯನ್ನು ಬಣ್ಣಿಸುತ್ತಾರೆ.

ಕಿರುತೆರೆಯೇ ಖುಷಿ ಕೊಟ್ಟಿದೆ

ಕಿರುತೆರೆಯೇ ಅತ್ಯಂತ ಖುಷಿ ನೀಡಿದೆ ಎಂದು ಸಂತಸದಿಂದ ಹೇಳುವ ಅಶಿತ ‘ಧಾರಾವಾಹಿಗಳಲ್ಲಿ ನಟಿಸಿದರೆ ಸಾಕು, ಮತ್ತೆ ಸಿನಿಮಾದಲ್ಲಿ ನಟಿಸಬಹುದು ಮಾತ್ರವಲ್ಲ ಸಿನಿಮಾಗಳಲ್ಲಿ ಬಹುಬೇಗನೇ ಅವಕಾಶಗಳು ಸಿಗುತ್ತವೆ ಎಂಬುದು ಹೆಚ್ಚಿನ ಕಿರುತೆರೆ ಕಲಾವಿದರ ಅಭಿಪ್ರಾಯ. ಆದರೆ ಅದು ತಪ್ಪು” ಎನ್ನುತ್ತಾರೆ.

ಕಿರುತೆರೆಯ ಮೂಲಕ ಬಣ್ಣದ ಲೋಕದಲ್ಲಿ ಅಂಬೆಗಾಲಿಡುತ್ತಿರುವ ಅಶಿತಾಗೆ ಸಿನಿಮಾದಲ್ಲಿ ನಟಿಸಲು ಇಷ್ಟವಿದೆ. ಆದರೆ ಒಳ್ಳೆಯ ಅವಕಾಶ, ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದಾರೆ. ಕಿರುತೆರೆಯಂತೆ ಬೆಳ್ಳಿತೆರೆಯಲ್ಲೂ ಈ ಶ್ವೇತ ಸುಂದರಿ ಮಿಂಚಲಿ ಎಂಬುದು ಬಾಲ್ಕನಿ ನ್ಯೂಸ್ ಡಾಟ್ ಕಾಮ್ ನ ಹಾರೈಕೆ.

 

ಅನಿತಾ ಬನಾರಿ

Tags