ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಗಮನ ಸೆಳೆದು, ಮನರಂಜನೆ ನೀಡುವವನು ಈ ‘ರಾಮ’

ಬಹುತೇಕ ಹೊಸ ಕಲಾವಿದರೇ ಸೇರಿಕೊಂಡು ಮಾಡಿರುವ ಅಯ್ಯೊರಾಮ ಚಿತ್ರವು ಮನರಂಜಿಸುತ್ತದೆ. ಸಾಕಷ್ಟು ಸಂಕಷ್ಟಗಳು ಮತ್ತು ಸವಾಲುಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೆ ಏರಿದ ವ್ಯಕ್ತಿ ಹೇಗೆ ಮೋಸದ ಬಲೆಗೆ ಬೀಳುತ್ತಾನೆ , ಅದನ್ನು ಆತ ಹೇಗೆ ಎದುರಿಸುತ್ತಾನೆ ಎಂಬ ಕಥೆಯನ್ನು ಇಲ್ಲಿ ವಿವರಿಸಲಾಗಿದೆ.

ಇಲ್ಲಿ ಅನೇಕ ಕಲಾವಿದರಿದ್ದರೂ ಇಲ್ಲಿ ಯಾರೂ ನಾಯಕರು ಅಂತಿಲ್ಲ. ವಿಲನ್ ಗಳು ಇಲ್ಲ, ಒಂದರ್ಥದಲ್ಲಿ ಇಲ್ಲಿ ಪರಿಸ್ಥಿತಿಯೇ ವಿಲನ್ ಎನ್ನಬಹುದು. ನಟರಾದ ಶೇಷನ್, ಪ್ರದೀಪ್ ಪೂಜಾರಿ, ಸೂರ್ಯ, ಪ್ರಿಯಾಂಕ ಸುರೇಶ್ , ಪ್ರಣವ ಮೂರ್ತಿ, ರಾಕ್ಲೈನ್ ಸುಧಾಕರ್, ಬಸು ಕುಮಾರ್ ಸೇರಿದಂತೆ ಮುಂತಾದವರ ಅಭಿನಯ ಅಚ್ಚುಕಟ್ಟಾಗಿದ್ದು ಗಮನ ಸೆಳೆಯುತ್ತದೆ.

ಯಾರೂ ಓಡಾಡದ ರಸ್ತೆ, ಆ ರಸ್ತೆಯಲ್ಲೊಂದು ಮಾರುತಿ ವ್ಯಾನ್, ಜೊತೆಗೆ ರಗಡ್ ಎನಿಸುವ ನಾಲ್ಕು ಪಾತ್ರಗಳು, ಜೊತೆಗೆ ಎದುರಾಗುವ ವಿವಿಧ ಭಾವನೆಗಳ ಪಾತ್ರಗಳು.. ಹೀಗೆ ಕಥೆ ಸಾಗುತ್ತದೆ. ಇಲ್ಲಿ ಚಿತ್ರದ ನಿರೂಪಣೆಯಲ್ಲಿ ಹೊಸತನವಿದ್ದು, ನಿರ್ದೇಶಕರ ಶ್ರಮ ಮೆಚ್ಚುಗೆಗೆ ಅರ್ಹವಾಗಿದೆ. ಜೊತೆಗೆ ಚಿತ್ರದುದ್ದಕ್ಕೂ ಬರುವ ಎರಡು ಗೊಂಬೆಗಳ ರೂಪಕ , ತರಲೆ ಸಂಭಾಷಣೆ, ದುಡ್ಡಿನ ಹಿಂದೆ ಓಡುವ ಓಟ, ಹೀಗೆ ಒಂದೊಂದೇ ಹಂತಗಳಲ್ಲಿ ಶುರುವಾಗುವ ಸಿನಿಮಾದ ಕಥೆಯಲ್ಲಿನ ಪಾತ್ರಗಳು ಮನರಂಜಿಸುತ್ತವೆ.

ಇಲ್ಲಿ ನಾಯಕಿ ಪ್ರಿಯಾಂಕಾಗೆ ಹೆಚ್ಚಿನ ಕೆಲಸವಿಲ್ಲ. ಅವಳಿಗೆ ಮುಂಬೈ ಗೆ ಹೋಗಿ ಬ್ಯೂಟಿ ಪಾರ್ಲರ್ ಮಾಡುವ ಆಸೆ, ಆದರೆ ಅದಕ್ಕೆ ದುಡ್ಡು ಬೇಕು. ನಿಷ್ಟಾವಂತ ಪೋಲಿಸ್ ಆಫೀಸರ್ ಜಹಾಂಗಿರ್, ಅಧಿಕ ದುಡ್ಡಿಗೆ ಬಡ್ಡಿ ವ್ಯವಹಾರ ಮಾಡುವ ರಾಕ್ಲೈನ್ ಸುಧಾಕರ್ ಪಾತ್ರಗಳು ಮತ್ತು ದುಡ್ಡಿಗಾಗಿ ಮಾಡುವ ಸರ್ಕಸ್ ಗಳು ಚಿತ್ರವನ್ನು ನೋಡುವಂತೆ ಮಾಡುತ್ತವೆ.

ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ವಿನೋದ್ ಕುಮಾರ್ ಅವರ ಪ್ರಯತ್ನ ಗಮನ ಸೆಳೆಯುತ್ತದೆ. ನಿರ್ದೇಶಕರೇ ಎಲ್ಲಾ ಹಾಡುಗಳನ್ನು ಬರೆದಿದ್ದು, ವಿವೇಕ್ ಚಕ್ರವರ್ತಿ ಸಂಗೀತ, ಗಮನ ಸೆಳೆಯುತ್ತವೆ.

ಜೀವನದಲ್ಲಿ ದುಡ್ಡು ಎಷ್ಟು ಮುಖ್ಯ ಮತ್ತು ಯಾವುದಕ್ಕೆ ಮುಖ್ಯ ಎಂಬುದನ್ನು ತಿಳಿಸುವ ‘ಅಯ್ಯೊ ರಾಮ’ ವನ್ನು ಮನೆ ಮಂದಿಯೆಲ್ಲಾ ಅರಾಮಾಗಿ ಕುಳಿತು ಎಂಜಾಯ್ ಮಾಡಬಹುದು.

Tags