ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಚಿತ್ರಮಂದಿರಗಳಲ್ಲಿ ರೆಕ್ಕೆ ಬಿಚ್ಚಿ ಹಾರಾಡುತ್ತಿರುವ ಹಾರರ್ “ಚಿಟ್ಟೆ”

ಚಿಟ್ಟೆ ಚಿತ್ರವು ಸಾಮಾನ್ಯ ಪ್ರೇಮ ಕಥೆ ಎಂದುಕೊಂಡು ನೋಡಿದರೆ ಎದುರಾಗುವುದು ಚಿಟ್ಟೆಯ ರೂಪದಲ್ಲಿ ಬರುವ ದೇವ್ರಂಥ ದೆವ್ವ. ಹೌದು, ಇಲ್ಲಿ ನವ ದಂಪತಿಗಳ ತುಂಟಾಟದ ಜೊತೆಗೆ ಸಡನ್ನಾಗಿ ದೆವ್ವವೊಂದು ಎಂಟ್ರಿ ಕೊಟ್ಟು ನವ ದಂಪತಿಗಳ ಪ್ರೇಮದ ಪ್ರಣಯದಾಟಕ್ಕೆ ಚಿಟ್ಟೆಯೊಂದು ದೆವ್ವವಾಗಿ ಬಂದು ಕಾಟ ಕೊಡಲು ಶುರು ಹಚ್ಚಿಕೊಳ‍್ಳುತ್ತದೆ. ಇದಕ್ಕೆ ಅಸಲಿ ಕಾರಣವು ಚಿತ್ರದ ಮಧ್ಯಂತರದ ನಂತರ ಬಿತ್ತರಗೊಳ್ಳುತ್ತದೆ.

ಆಗಷ್ಟೇ ಮದುವೆ ಆಗಿರುವ ಮನು (ಯಶಸ್ ಸೂರ್ಯ) ಹಾಗೂ ಸೋನು (ಹರ್ಷಿಕಾ ಪೂಣಚ್ಚ) ಬಾಡಿಗೆ ಮನೆಯೊಂದರಲ್ಲಿ ಸಂಸಾರ ಶುರು ಮಾಡುತ್ತಾರೆ. ದಾಂಪತ್ಯ ಜೀವನ ಸುಖವಾಗಿ ಸಾಗುತ್ತಿದೆ ಎನ್ನುವಾಗಲೇ ವಿಚಿತ್ರ ಘಟನೆಗಳು ನಡೆಯಲಾರಂಭಿಸುತ್ತೆ. ಆ ವಿಚಿತ್ರ ಘಟನೆಗಳಿಗೆಲ್ಲ ‘ಚಿಟ್ಟೆ’ ಕಾರಣ.!ಮುಂದೆ ಅದೊಂದು ದಿನ ಬಿಳೀ ಚೂಡಿದಾರ ತೊಟ್ಟ ಮುದ್ದಾದ ದೆವ್ವವಾಗಿ ಯುವ ಜೋಡಿಯ ಮುಂದೆ ಪ್ರತ್ಯಕ್ಷವಾಗಿ ಮಾತು ಶುರುವಿಟ್ಟುಕೊಳ್ಳುತ್ತದೆ. ಮಾತಿನ ಜೊತೆಗೆ ಕೊಲ್ಲುವ ಟಾಸ್ಕು ಕೊಡುತ್ತದೆ. ಅಸಲಿಗೆ ಆ ಬ್ಯೂಟಿಫುಲ್ ದೆವ್ವ ಈ ಹುಡುಗ ಹುಡುಗಿಯರನ್ನೇಕೆ ಟಾರ್ಗೆಟ್ ಮಾಡುತ್ತದೆ, ಯಾರನ್ನು ಕೊಲ್ಲುವಂತೆ ತಾಕೀತು ಮಾಡುತ್ತದೆ ಮತ್ತು ಯಾತಕ್ಕಾಗಿ? ಅನ್ನೋ ಕುತೂಹಲವನ್ನು ತಣಿಸಿಕೊಳ್ಳಲು `ಚಿಟ್ಟೆಯನ್ನೊಮ್ಮೆ ನೋಡಬಹುದು.

ಇಲ್ಲಿ ಇಬ್ಬರು ಪ್ರೇಮಿಗಳು. ಆದರೂ ಇದೊಂದು ಪ್ರೇಮಕಥೆ. ಪ್ರೇಮಕ್ಕಾಗಿ ಒಬ್ಬಳನ್ನು ಸಾಯಿಸಿದವನಿಗೆ ಮತ್ತೊಬ್ಬಳು ದಕ್ಕುವುದಿಲ್ಲ. ಅವಳು ಏನಾಗುತ್ತಾಳೆ ಎಂಬುದನ್ನು ಕುತೂಹಲ ಹಾಗೂ ಪರಿಣಾಮಕಾರಿಯಾಗಿ ನೋಡುವಂತೆ ಮಾಡುತ್ತಾರೆ ನಿರ್ದೇಶಕರಾದ ಎಮ್.ಎಲ್ ಪ್ರಸನ್ನ.

ಚಿತ್ರದ ನಿರ್ದೇಶಕರೇ ಇಲ್ಲಿ ಒನ್ ಮ್ಯಾನ್ ಆರ್ಮಿ ಅಂತ ಧಾರಾಳವಾಗಿ ಹೇಳಬಹುದು. ಏಕೆಂದರೆ ಅವರು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ಬರೆದು ತಾವೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ಸಹ ವಹಿಸಿಕೊಂಡಿದ್ದಾರೆ.

ದ್ವಿತೀಯಾರ್ಧದಿಂದ ಸುಂದರ ಭೂತವಾಗಿ ಕಾಡುವ ದೀಪಿಕಾ ಇಷ್ಟವಾದರೆ, ಬೀಜ ಮಂತ್ರ ಸಿದ್ದಿಸಿಕೊಳ್ಳಲು ಹೊರಟ ಪಾತ್ರದಲ್ಲಿ ಬಿ.ಎಂ ಗಿರಿರಾಜ್ ಅವರು ನಗೆಯುಕ್ಕಿಸುತ್ತಾರೆ. ಹರ್ಷಿಕಾ ಮತ್ತು ಯಶಸ್ ಸೂರ್ಯ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದ್ವಿತೀಯಾರ್ಧದಿಂದ ಭೂತವಾಗಿ ಕಾಡುವ ಕುಲವಧು ಧಾರಾವಾಹಿಯ ದೀಪಿಕಾ ಕೊನೆವರೆಗೂ ಕಾಡುತ್ತಾರೆ. ಇನ್ನು ನೆಗೆಟಿವ್ ಪಾತ್ರದಲ್ಲಿ ಕಂಡು ಬರುವ ನಾಗೇಶ್ ಕಾರ್ತಿಕ್ ಅಭಿನಯ ಇಷ್ಟವಾಗುತ್ತದೆ. ಮತ್ತು ಚಿತ್ರವು ವಿಶ್ವಜೀತ್ ರಾವ್ ಅವರ ಛಾಯಾಗ್ರಹಣದಲ್ಲಿ ದೃಶ್ಯಗಳ ರೋಚಕತೆಯನ್ನು ಹೆಚ್ಚಿಸುತ್ತವೆ.

ಬರೀ ಬೆಚ್ಚಿ ಬೀಳಿಸುವ ದೆವ್ವಗಳ ಚಿತ್ರಗಳ ನಡುವೆ ಈ ಚಿತ್ರದಲ್ಲಿ ದೆವ್ವದ ಹಾವಳಿಯಿದ್ದರೂ ಸಹ , ಇಲ್ಲಿರುವ ದೆವ್ವಕ್ಕೆ ಒಳ್ಳೆತನದ ಛಾಯೆ ತುಂಬಿರೋದನ್ನು ನೋಡಬಹುದು. ಹೀಗಾಗಿ ಇದು ಮನೆ-ಮಂದಿ ಹಾಗೂ ಮಕ್ಕಳ ಸಮೇತ ಒಟ್ಟಿಗೆ ಕುಳಿತು ನೋಡಬಹುದಾದ ಚಿತ್ರವಾಗಿದೆ.

 

@ಸುನೀಲ ಜವಳಿ

Tags