ಬಾಲ್ಕನಿಯಿಂದಸಂಬಂಧಗಳುಸುದ್ದಿಗಳು

 “…ಅಂಗೈ ಅಗಲ ಜಾಗಾ ಸಾಕು…ಹಾಯಾಗಿರೋಕೆ…!!”

 ಅಂಬಿ ಸಾವೆದುರಾದಾಗ ವಿಷ್ಣು ಸ್ಮಾರಕದ  ಪ್ರಸ್ತಾಪ  ಸಲ್ಲ..!!

                                                                                                                                ಬಾಲ್ಕನೀ ಸಂಪಾದಕೀಯ

ಅಂಬಿ ಇಲ್ಲದ  ಚಂದನವನದಲ್ಲಿ ಅರಾಜಕತೆ ತಾಂಡವವಾಡುತ್ತಿದೆ..!!

 ಅಂಬಿ ಸಾವೇ ಎದುರಾದಾಗ ವಿಷ್ಣು ಸ್ಮಾರಕದ  ಪ್ರಸ್ತಾಪ  ಸಲ್ಲ..!!

ಒಂದು ಕಣ್ಣಿಗೆ … ಬೆಣ್ಣೆ …,  …ಇನ್ನೊಂದಕ್ಕೆ ಸುಣ್ಣ!!

ಜೀವಿತ ಕಾಲದಲ್ಲಿ ನೆಮ್ಮದಿಯಿಂದ ತಮ್ಮ ಜೀವನ ಬದುಕಲೂ ಆಸ್ಪದ ಕೊಡದವರೂ ಇದೀಗ ಮರಣಾನಂತರ ವರ್ಷ 9 ಆದರೂ ನೆಮ್ಮದಿ ನೀಡಲಿಲ್ಲವೋ…: ಡಾ|| ಭಾರತೀ ವಿಷ್ಣುವರ್ಧನ

ರಾಜಕಾರಣಿಗಳ  ಕಪಿಮುಷ್ಠಿಯಲ್ಲಿ  ಕಲಾವಿದರು  ಬಂಧೀ..!!!!!!!!!!!??????????

ಅಂಬಿಯ ಅಂತ್ಯಕ್ರಿಯೆ, ಬೆಂಗ್ಳೂರ್ ಟು ಮಂಡ್ಯ, ಬ್ಯಾಕ್ ಟು ಕಂಠೀರವ ಸ್ಟೇಡಿಯಂ, ಕಂಠೀರವ ಸ್ಟುಡಿಯೊಗೆ ಮೆರವಣಿಗೆ, ಅಂತ್ಯ ಸಂಸ್ಕಾರ…ಸಕಲವೂ ರಾಜಕೀಯ ಪ್ರೇರಿತ

ಅರೆಬರೆ ಕಲಾವಿದರ, ಅರ್ಧಂಬರ್ಧ ಬೆಂದ ಬೇಳೆಗಳ ಪೂಟ್ ಲಾಯಿರಿಗೆ ಬಲಿಯಾದ ಕನ್ನಡ ಸಾಂಸ್ಕೃತಿಕ ಲೋಕ

‘ಕಾಲಾಯ ತಸ್ಮೈ ನಮಃ..’ ಅಂತಾರಲ್ಲ ಹಾಗೆ.  ಮೊನ್ನೆ ತಾನೆ  ‘ಮಂಡ್ಯದ ಗಂಡು’ ಅಂಬರೀಶ್ ಇಹಲೋಕ ತ್ಯಜಿಸಿದರು. ಹಠಾತ್ತನೆ ಬಂದ  ಆ ಸುದ್ದಿ ಮೈಸೂರು-ಚಾಮರಾಜನಗರ-ಮಂಡ್ಯ-ಹಾಸನ-ಬೆಂಗಳೂರು –ರಾಮನಗರ-ತುಮಕೂರು ..ಹೀಗೆ ಏಳೆಂಟು ಜಿಲ್ಲೆಗಳ ಲಕ್ಷಾಂತರ ಸಿನಿಮಾಸಕ್ತರಿಗೆ, ಅಂಬಿ ಅಭಿಮಾನಿಗಳಿಗೆ  ಉಳಿದಂತೆ,  ಕುತೂಹಲೀ ಜನಸಾಮಾನ್ಯರಿಗೂ ಕಳೆದ ಶನಿವಾರ ರಾತ್ರಿಯಿಂದ ಮಂಗಳವಾರದವರೆಗೂ ಮನಸ್ಸು-ಬುದ್ಧಿಯೊಳಗೆಲ್ಲಾ ಅಂಬಿಯೇ ತುಂಬಿಕೊಂಡಿದ್ದರು. ಕಳೆದ ವಾರಪೂರ್ತಿ ಅಂಬಿ ಕುರಿತಾದ ಸುದ್ದಿಗಳೇ ಸಕಲ ಮಾಧ್ಯಮಗಳನ್ನು ತುಂಬಿಕೊಂಡಿತ್ತು.  ಟಿಆರ್ಪಿ ಲಿಸ್ಟ್ನಲ್ಲಿ ಕಟ್ಟಕಡೆಯ ವಾಹಿನಿಗೂ ಅಂಬಿಯಿಂದಾಗಿ ಸಖತ್ ಕಮಾಯಿ! !

ಮೊನ್ನೆ, ಮೊನ್ನೆಯವರೆಗೂ  ರಾಜಧಾನಿಯ ಮಾಧ್ಯಮದವರಿಗೆ  ವಾರಕ್ಕೊಮ್ಮೆ ಯಾ ಎರಡು ಬಾರಿಯಾದರೂ  ಒಂದಲ್ಲ ಒಂದು ಸಮಾರಂಭದಲ್ಲಿ ಅಂಬಿ ಪ್ರತ್ಯಕ್ಷವಾಗುತ್ತಿದ್ದರು.  ಕೊಂಚ ನಡೆಯಲು ಕಷ್ಟಪಡುತ್ತಿದ್ದರೇನೋ ಹೌದು..!  ಹತ್ತಾರು ಗನ್ ಮೈಕ್ ಗಳು ಒಮ್ಮೆಲೇ ಎದುರಿಟ್ಟಾಗ ಎಡ-ಬಲದಲ್ಲಿ ಹೆಗಲುನೀಡಿದ  ಹರಯದ ನಟ-ನಟಿಯರ ಭುಜಬಲದಾಸರೆಯಿಂದ ನಿಂತುಕೊಂಡೇ ತಮ್ಮ ಎಂದಿನ  ಗತ್ತು ಗೈರತ್ತುಗಳ ಮಾತಿನ ವರಸೆಯಲ್ಲೇ  ಉತ್ತರಿಸಿ, ರೇಗಿಸಿ, ಕಿಛಾಯಿಸಿದರೇ ಅಂಬಿಗೂ, ನಮಗೂ ಸಮಾಧಾನ.

ಅದೇ ರೀತಿ  ಕಳೆದ 16ರ ರಂದು ‘ತಾಯಿಗೆ ತಕ್ಕ ಮಗ’ ಸಿನೆಮಾದ ಮೊದಲ ಶೋ…ರಾಜಾಜಿನಗರದ  ಒರಾಯಿನ್ ಮಾಲ್ ನಲ್ಲಿ…!  ಪಕ್ಕದ ತೆರೆಯಲ್ಲಿ “ಜೀರ್ಝಿಂಬೆ”!  ಶಶಾಂಕ್  ಹಾಗೂ  ಅಜೇಯ್ ಕೃಷ್ಣ ರಾವ್ ಗೆ  ಶುಭಾಶಯ ಕೋರಲು ಧರ್ಮಪತ್ನಿ ಸುಮಲತಾ ರ ಪ್ರತಿನಿಧಿಯಾಗಿ ಅಂಬಿ ಹಾಜರ್! ರಾತ್ರಿ ಹತ್ತಾದರೂ ಲವಲವಿಕೆಯಿಂದ ಮಾಧ್ಯಮ ಮಿತ್ರರ ಪ್ರಶ್ನೆಗೆ  ಸ್ಪಂದಿಸಿದ್ದರು ಅಂಬಿ.

ಸಾರ್! ಹೇಗಿದ್ದೀರಿ ಈಗ…?! ಹೇಗಿದೆ ನಿಮ್ಮ ಆರೋಗ್ಯ…??! 

ಇಷ್ಟಾದರೂ  ಅವರ ಕನ್ನಡಕದೊಳಗಿಂದ  ಕಣ್ಣುಗಳೆರಡೂ  ಕೆಂಡದುಂಡೆಗಳಂತೆ ಕಂಡೆವೆನಗೆ..! ನಾನೂ-ಅಂಬಿ ಮೈಸೂರಿನವರಾದ್ದರಿಂದ , ಅಭಿಮಾನ ಕೊಂಚ ಹೆಚ್ಚಾದ್ದರಿಂದ   ಕಾಳಜಿ ಹೆ್ಚ್ಚಿತ್ತು ನೋಡಿ…ಸಾರ್! ಹೇಗಿದ್ದೀರಿ ಈಗ…?! ಹೇಗಿದೆ ನಿಮ್ಮ ಆರೋಗ್ಯ…??!  ಓ ನೀವಾ..! ನನಗೇನ್ರೀ …ನೋಡಿ! ಜೋರಾಗೇ ಇದ್ದೀನಿ..ನನ್ನ ಪಿಚ್ಚರ್ ನೋಡಿರ್ಬೇಕಲ್ಲಾ..!?!…ಹೇಗಿತ್ತು…??!  …ಮರುಸವಾಲು ಹಾಕಿದ್ದರು.. ನಮ್ಮ ‘ಗಂಡು-ಸಿಡಿಗುಂಡು’.

ಅದಾದ ನಂತರ  ನಾಯಕ ನಟ ಯಶ್ ಅರ್ಧಾಂಗಿಯ ಸೀಮಂತದಲ್ಲಿ ಅಂಬಿ ಕಾಣಿಸಿಕೊಂಡಿದ್ದರು. ಅದೇ ಲವಲವಿಕೆ. ಅದೇ ಕುಶಾಲು ತುಂಬಿದ ನೋಟ-ನುಡಿ-ಗತ್ತು! ಒಳ್ಳೆ ರಾಜನ ಬದುಕಿನ ಠೀವಿ-ಠಾಕು-ಠೀಕು! ಯಾರೂ ಕನಸಿನಲ್ಲೂ ಎಣಿಸಿರಲಿಲ್ಲ…, ಮುಂದಿನ ಐದೇ ದಿನದಲ್ಲಿ ಈ ಭಾರೀ ಘಟ ಅಸುನೀಗಬಹುದೆಂದು !! ಪುರಂದರದಾಸರು ಅದನ್ನೇ ತಾನೆ ಹಾಡಿದ್ದು…”ಅಂತಕನ ದೂತರಿಗೆ ಕಿಂಚಿತ್ತು  ದಯವಿಲ್ಲ…ಚಿಂತೆಯನು ಬಿಟ್ಟು  ಶ್ರೀಹರಿಯ ನೆನೆ ಮನವೆ..” ಎಂದು. . ….”ಇಂದು ಮನೆಯ ಗೃಹಪ್ರವೇಶ, ನಾಳೆ ಮಗನ ಮದುವೆ, ನಾಳಿದ್ದು ಮಗಳ ಮಗಳು, ಮೊಮ್ಮಗಳ ನಾಮಕರಣ …ಬರಲಾರೆ ಈ ದೇಹ ಬಿಟ್ಟು ಓ ಜೀವಾ.. ಅಯ್ಯಾ  ಯಮರಾಜ ಕೊಂಚ ಸಮಯಾವಕಾಶ ನೀಡು..” ಎಂದರೆ ತಾಳುವರೇನು ಯಮದೂತರು..!!

ಅಂಬಿ ಇಲ್ಲದಾ ಮೇಲೆ…

                                   ….ಚಂದನವನದಲ್ಲಿ ತಾಂಡವವಾಡುತ್ತಿರುವ  ಅರಾಜಕತೆ …..!!

ಅಂದು ಶನಿವಾರ. ಮುಂಜಾನೆಯಿಂದ ಅಂಬಿಯನ್ನು ಟಿವಿ ವಾಹಿನಿಗಳು ‘ತಮ್ಮದೇ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ  ಕನಗನಮರಡಿಯ ಬಳಿ 30 ಮಂದಿ ಬಸ್ಸು ಪ್ರಯಾಣಿಕರು ವಿಶ್ವೇಶ್ವರಯ್ಯ ನಾಲೆಯ ನೀರುಪಾಲಾದ ಸುದ್ದಿಯ ಕುರಿತು ಹತ್ತಾರು ಬಾರಿ ಪ್ರತಿಕ್ರಿಯೆ ಕೇಳಿದಾಗ  ತುಸು ಹೆಚ್ಚಾಗಿಯೇ ಬಾವುಕತೆಗೊಳಗಾಗಿದ್ದರು ನಮ್ಮ ‘ಹೃದಯವಂತ’ನ  ಈ  ಕುಚ್ಚಿಕೂ ಗೆಳೆಯ…! ಪ್ರಾಯಶ‍ಃ…, ಅದೇ  ಭಾವಪರವಶತೆಗಳೇ ಅಂಬಿಯ ಮಾನವತಾ ಹೃದಯಕ್ಕೆ ಆಘಾತ ತಂದೊಡ್ಡಿರಬೇಕು. ಶನಿವಾರ ಸಂಜೆ 5ರ ಸುಮಾರಿಗೆ  66 ವರ್ಷದ ಅಂಬಿ ಎದೆನೋವಿಂದ ಕುಸಿದುಬೀಳುವಂತೆ ಮಾಡಿರಬೇಕು..!?!  ನಾಯಕ ನಟ ಜಗ್ಗೇಶ್ ಹೇಳಿಕೊಂಡ  ಆಯುಷ್ಯ ಹೋಮ ವನ್ನು ಒಂದೊಮ್ಮೆ ಆ ಮೊದಲೇ ಮಾಡಿರುತ್ತಿದ್ದರೆ ನಮ್ಮ ಅಂಬಿ ಇನ್ನೂ ಬದುಕಿರುತ್ತದ್ದರೇನೋ..?! ಮುಂಬರುವ ದಿನಗಳಲ್ಲಿ, ಸುಪುತ್ರ ಅಭಿಷೇಕ್ ಪ್ರಪ್ರಥಮ ಚಿತ್ರ ‘ಅಮರ್’ ತೆರೆಕಾಣುವುದ ಕಂಡು ತಮ್ಮ ವಾರಸುದಾರನ ಬಗ್ಗೆ ಹಿಗ್ಗುತ್ತಿದ್ದರೇನೋ.?

‘ಸಾವಿ’ನಲ್ಲೂ ರಾಜಕೀಯದ ಛಾಯೆ!

ಅದಾಗಿ ಐದೇ ತಾಸಿನೊಳಗೆ ರಾಜಧಾನಿಯ ವಿಕ್ರಂ  ಆಸ್ಪತ್ರೆಯಲ್ಲಿ ಅಂಬಿ ಕೊನೆಯುಸಿರೆಳೆದಿದ್ದರು.  ಅಲ್ಲಿಂದ ಶುರುವಾಗಿತ್ತು ರಾಜಕೀಯ  ವ್ಯಕ್ತಿಗಳ ‘ ದುಂಬಾಲು ದಾಳ’! ರಾತ್ರಿ ಅಂಬಿಯ ಪಾರ್ಥಿವ ಶರೀರವನ್ನು ಜೆ.ಪಿ. ನಗರದ ಮನೆಗೆ ಕರೆತಂದು ರಾತ್ರೋರಾತ್ರಿ ಪ್ರಮುಖ ನಟ-ನಟಿಯರೆಲ್ಲ ದರ್ಶನ ಮಾಡಿದ್ದರು.  ಅಲ್ಲಿಂದ ಮಾರಣೆಯ ಬೆಳಿಗ್ಗೆ, ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರವನ್ನು ಕೊಂಡುಹೋಗಲಾಯ್ತು. ಅಲ್ಲಿ ಆರಂಭವಾಯ್ತು ನೋಡಿ,   ಅಂಬಿಯ ಸಾವನ್ನೂತಮ್ಮ ರಾಜಕೀಯ ಲಾಭಕ್ಕೆ ಪರಿವರ್ತನೆ ಮಾಡಿಕೊಳ್ಳುವ ಈ ರಾಜಕೀಯ ಮಂದಿಯ ಜಾಣ ಪರಿ! ಯಾವ ವಿಧಾನ ಸಭೆಯಲ್ಲೂ ಓರ್ವ ವಸತಿ ಸಚಿವನಾಗಿ ಪ್ರಶ್ನೋತ್ತರ ವೇಳೆಯಲ್ಲಿ “ಇದುವರೆಗಿನ ಜೀವನದಲ್ಲಿ, ನನಗೆ ಪ್ರಶ್ನೆ ಕೇಳಿ ಗೊತ್ತೇ ವಿನಃ ಉತ್ತರ ಕೊಟ್ಟು ಗೊತ್ತಿಲ್ಲ..!” ಎಂದಿದ್ದರೋ…, ಅವರದೇ ಮರಣಾನಂತರ  ರಾಜ್ಯದ ನಾಯಕರೆನಿಸಿದವರು,  ಮೈತ್ರೀ ಪಕ್ಷದವರೂ  ಎಷ್ಟೆಷ್ಟು ಸಾಧ್ಯವೋ ಅಷ್ಟಷ್ಟು ಅಂಬಿಯ ಸಾವಿನ ಮೈಲೇಜ್ ಪಡೆದೇ ಪಡೆದರು…!!!!??!!

ವಿಷ್ಣು ಸ್ಮಾರಕ : ಒಂದು ಕಣ್ಣಿಗೆ ಸುಣ್ಣ…ಇನ್ನೊಂದಕ್ಕೆ ಬೆಣ್ಣೆ!!

ಅಲ್ರೀ, ಇನ್ನೂ ‘ಮಂಡ್ಯದ ಗಂಡಿ’ನ  ಅಂತ್ಯಕ್ರಿಯೆಯೇ ಶುರುವಾಗಿರಲಿಲ್ಲ. ಮಂಡ್ಯದ ವಿಶ್ವೇಶ‍್ವರಯ್ಯ ಸ್ಟೇಡಿಯಂನಲ್ಲೇ ಅಂಬಿಯ ಪಾರ್ಥಿವ ಶರೀರದ ದರ್ಶನ  ಲಕ್ಷೋಪಲಕ್ಷ ಮಂದಿ ಮಾಡುತ್ತಿರುವಲ್ಲಿ ಬೆಂಗಳೂರ ಕಂಠೀರವ ಸ್ಟುಡಿಯೋದಲ್ಲೇ ಅಂಬಿಗೆ ಸ್ಮಾರಕವನ್ನೂ ಕಟ್ಟುತ್ತೇವೆ ಎಂಬ ನಿರ್ಣಯವನ್ನೂ ಮಂಡ್ಯದ ಮೈದಾನದಲ್ಲೇ ಘೋಷಿಸುತ್ತಲೇ ಸನ್ಮಾನ್ಯ ಮುಂಖ್ಯಮಂತ್ರಿಗಳು ವಿವಾದಕ್ಕೆಡೆಮಾಡಿ ಕೊಟ್ಟರು….??!! 

ಅತ್ತ ಮಹಾನಾಯಕನ ಚಿತೆ ಅಣಿಯಾಗುತ್ತಿದೆ…., …..ದುಃಖಸಾಗರದಲ್ಲಿ ಅಭಿಮಾನೀ ಜನ ಮುಳುಗಿರುವಲ್ಲಿ ಓರ್ವ ಮುಖ್ಯಮಂತ್ರಿಯ ಇಂಥಾ ಹೇಳಿಕೆ ಸುಮಾರು 9 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬಿಯ ಜೀವದ ಗೆಳೆಯ ವಿಷ್ಣುದಾದಾ ಅಭಿಮಾನಿಗಳಿಗೆ  ಬರೆ ಎಳೆದಂತಾಗಿತ್ತು. ಅಂಬೀ-ಸುಮಲತಾರ ಫ್ಯಾಮಿಲೀ ಮಿತ್ರರಾದ ಭಾರತೀ ವಿಷ್ಣುವರ್ಧನರಿಗೆ, ಅವರ ಪರಿವಾರದವರ ಕಣ್ಣಿಗೂ ಹಚ್ಚಿದ ಸುಣ್ಣ ಇದಾಗಿತ್ತು.

ಹಠಾತ್ತನೆ ಬಂದೆರಗಿದ ಅಂಬಿಯ ಸಾವೇ ಎದುರಿರುವಾಗ.., ವಿಷ್ಣು ಸ್ಮಾರಕದ  ಪ್ರಸ್ತಾಪ  ಸಲ್ಲ..!! ಭಾರತೀ ಅಮ್ಮ ನೊಂದು ನುಡಿದ ಮಾತಿದು.., “ಸದ್ಯ, ನಮ್ಮ ಯಜಮಾನರ ಜೀವದ ಗೆಳೆಯನ  ಅಂತ್ಯ  ಸಂಸ್ಕಾರ  ಆಗುತ್ತಿರಬೇಕಾದರೆ ಅವರ  ಸ್ಮಾರಕದ  ಅಥವಾ ವಿಷ್ಣು ಸ್ಮಾರಕದ ವಿಚಾರ ಪ್ರಸ್ತಾಪಿಸಿದ್ದೇ ಅವೇಳೆ….! ನಮ್ಮೆಜಮಾನರನ್ನು ಜೀವಿತ ಕಾಲದಲ್ಲೇ ನೆಮ್ಮದಿಯಿಂದ ಬದುಕಲು ಬಿಡಲಿಲ್ಲ..ಮರಣದಾನಂತರವೂ ಈ ಜನ ಕಾಡುತ್ತಿದ್ದಾರೆಂದರೆ …??!!”  ಹೌದು ಇಂಥವರು…!?, …ಇವರೆಲ್ಲ ನಿಜಕ್ಕೂ ಕನ್ನಡಿಗರೇ…?

ಒಂದೆಡೆ ಇದು ಜಾತಿ ರಾಜಕೀಯವನ್ನು ಎತ್ತಿಹಿಡಿದರೆ, ಇನ್ನೊಂದೆಡೆ ನಮ್ಮ ಇಂದಿನ ನೇತಾರರ ದೂರದೃಷ್ಟಿತ್ವಕ್ಕೂ ಸಾಕ್ಷಿಯಾಗಿತ್ತು.  ಭಲೆ! ಭಲೆ!! ಏಳುಕೋಟಿ ಕನ್ನಡಿಗರಿಗೆ ಇಂಥಾ ರಾಜಕೀಯ ಲೆಕ್ಕಾಚಾರದ ಹಿಂದಿರುವ ತಲೆಯಾದರೂ ಯಾರದ್ದು ಎಂಬ ಸತ್ಯದ  ಅರಿವಾಗದೇಯಿರದು..! ಸದ್ಯ ಅಂಬಿಯ –ವಿಷ್ಣು ದಾದಾರ ಸಾವಿನೊಂದಿಗೆ ಚಂದನವನದೊಳಗಣ ಅಪ್ಪಟ ಪ್ರೀತಿ-ಸ್ನೇಹ-ಭಾಂಧವ್ಯಗಳಿಗೆ ತೆರೆಬಿದ್ದಿದೆ. ಇನ್ನೆಲ್ಲಿ ಈ ಬಗೆಯ ಮಿತ್ರರು?? ಎಲ್ಲೆಡೆಯೂ ಎರಡು ಬಗೆಯುವವರೇ!!! ಮುಂದೆ ಬೆಳ್ಳಿತೆರೆಯ ಮೇಲೆ ಚಂದನವನದ ರಾಜಕೀಯ ನೋಡೋಣ. 

ಅಲ್ಲಿಯ ತನಕ  ಬಾಲ್ಕನಿಯಲ್ಲೇ ಕುಳಿತಿರಿ..ನಮ್ಮ ಮನರಂಜನೆಯನ್ನು ಆಸ್ವಾದಿಸಿ..!

ಇಂತೀ ನಿಮ್ಮವ,

-ಡಾ|| ಪಿ.ವಿ. ಸುದರ್ಶನ ಭಾರತೀಯ, editor@balkaninews.com

Tags