ಚಿತ್ರ ವಿಮರ್ಶೆಗಳು

ಲವ್ ಲೆಸ್: ಅನಿಷ್ಟದಂತೆ ಹುಟ್ಟುವ ಪುಟ್ಟ ಮಗುವಿನ ಮಾನಸಿಕ ತೊಳಲಾಟ!

‘ಲವ್ ಲೆಸ್’ ರಷ್ಯಾದ ಸಿನಿಮಾದಲ್ಲಿ ನಾಯಕಿ ಮರಿಯಾನಾ ಸ್ಪೈವಾಕ್ ಪ್ರೀತಿ ಎಂದುಕೊಂಡು ಮೊದಲೇ ಗರ್ಭಿಣಿಯಾಗಿ ನಂತರ ಅನಿವಾರ್ಯವಾಗಿ ಮದುವೆಯಾಗುತ್ತಾಳೆ. ಎಂದೂ ಇಷ್ಟವಿಲ್ಲದ ಆ ಮಗು ತನಗೆ ಸ್ವಾತಂತ್ರ್ಯವಿಲ್ಲದಂತೆ ಮಾಡಿ ಬೇಡದ ಸಂಬಂಧ ನಿಭಾಯಿಸುವಂತೆ ಮಾಡಿದೆ ಎಂಬ ಸಿಟ್ಟನ್ನು ಆ ಮಗುವಿನ ಮೇಲೆ ಆಕೆ ತೋರಿಸುವ ಪರಿ ಮತ್ತು ಮಗುವಿನ ಅಸಾಮಾನ್ಯ ಹೋರಾಟ ನೋಡಿದರೇ ಕಣ್ಣೀರು ಕಪಾಳದ ಮೇಲೆ ಝರಿಯಂತೆ ಜಾರುತ್ತವೆ.

ಮಗುವಿನ ತಂದೆಯೂ ಬೇಸತ್ತು ಬೇರೊಬ್ಬಳ ಪ್ರೀತಿಯಲ್ಲಿ. ಆಕೆಯೂ ಈಗ ಇವನಿಂದಲೇ ಗರ್ಭಿಣಿಯಾಗಿ ಬೇಗ ನಾಯಕನ ಜೊತೆ ಬಾಳಲು ಹಾತೊರೆಯುತ್ತಿದ್ದಾಳೆ. ಈಕೆಯೂ ಅಷ್ಟೆ ಮಗುವಿಗಾಗಿ ಅಲ್ಲ, ಕೇವಲ ತನ್ನನ್ನೇ ಪ್ರೀತಿಸುವ, ಬೆಳೆದ ಮಗಳನ್ನು ದೂರದೂರಿಗೆ ಕಳಿಸಿ ಈಗ ಒಂಟಿಯಾಗಿ ಇರುವ ಸಿರಿವಂತ ಮಧ್ಯವಯಸ್ಕನನ್ನು ಆರಿಸಿಕೊಂಡಿದ್ದಾಳೆ. ಮಗ ಅಲ್ಯೋಷಾ ಬಗ್ಗೆ ಇಬ್ಬರಿಗೂ ಯೋಚನೆಯಿಲ್ಲ. ಇಬ್ಬರೂ ತಮ್ಮ ತಮ್ಮ ಹೊಸ ಸಂಗಾತಿಯೊಂದಿಗೆ ಇಡೀ ರಾತ್ರಿಯನ್ನೇ ರಸಮಯವಾಗಿ ಕಳೆಯುತ್ತ ಮನೆ ಕಡೆ ಸಂಪೂರ್ಣ ಅಲಕ್ಷ್ಯ ತೋರುತ್ತಾರೆ. ಪರಸ್ಪರ ವಿಚ್ಛೇದನ ನೀಡಿ ತಮ್ಮ ತಮ್ಮ ಸಂಗಾತಿಗಳೊಡನೆ ನೆಲೆಗೊಳ್ಳುವ ಕನಸು ಕಾಣುತ್ತಿರುವವರು, ಮುಂದಿನ ಸುಂದರ ಬದುಕಿಗೆ ಕಾಯುತ್ತಿರುವವರು. ಇದ್ದ ಅಪಾರ್ಟ್ಮೆಂಟ್ ಮಾರಿ ಬೇರೆಯಾಗುವ ಯೋಜನೆ ಮಾತ್ರ ಸಿನಿಮಾದಲ್ಲಿ ಭರದಿಂದ ಸಾಗುತ್ತದೆ. ಆದರೆ ಮಗನ ಹೊಣೆ ಇಬ್ಬರಿಗೂ ಹೊರೆ. ತಾನು ಯಾರಿಗೂ ಬೇಡದ ಮಗು ಎಂಬ ಅರಿವಾಗಿ ಇದ್ದಕ್ಕಿದ್ದಂತೆ ಮಗ ಕಾಣೆಯಾಗುತ್ತಾನೆ. ಹುಡುಕಲು ಮಾಡಿದ ಪ್ರಯತ್ನಗಳೆಲ್ಲ ವಿಫಲ. ಇಬ್ಬರೂ ಕುಸಿಯುತ್ತಾರೆ. ಭಾವನಾತ್ಮಕವಾಗಿ ಸೋತು ಕಡೆಗೂ ಸಮಾಧಾನದ ಆಸರೆ ಬಯಸಿ ತಮ್ಮ ತಮ್ಮ ಸಂಗಾತಿಯ ತೆಕ್ಕೆಗೇ ಮರಳುತ್ತಾರೆ.

ಬದುಕು ನಿಲ್ಲುವುದಿಲ್ಲ. ತಾವು ಬಯಸಿದಂತೆಯೇ ಸುಂದರ ಬದುಕನ್ನು ಕಟ್ಟಿಕೊಳ್ಳಲು ಹವಣಿಸುತ್ತಾರೆ. ಆದರೆ ಅತ್ಯಂತ ಸ್ವಾವಲಂಬಿ ಸ್ವತಂತ್ರ ಮನದ ಆಕೆ ಅಲ್ಲಿಯೂ ಅದೇ ಪ್ರತ್ಯೇಕ ಸ್ವತಂತ್ರ ಸ್ವಯಂಕೇಂದ್ರಿತ ಬದುಕನ್ನೇ ಅಪ್ಪಿರುತ್ತಾಳೆ. ಅವನೂ ಅಷ್ಟೇ, ತನ್ನ ಇಷ್ಟಾನಿಷ್ಟಗಳ ಆದ್ಯತೆ ಬದಲಿಸಿಕೊಳ್ಳದೇ ಆ ಸಂಗಾತಿಯ ಕಡೆಯಿಂದಲೂ ಮೊದಲ ಪತ್ನಿಯ ತರಹದ್ದೇ ಸ್ಪಂದನೆ ಪಡೆಯತೊಡಗಿರುತ್ತಾನೆ. ಕೊನೆಗೂ ತಮಗೆ ಹುಟ್ಟಿದ ಮಗುವಿಗೆ ತಂದೆ ತಾಯಿ ಎನಿಸಿಕೊಳ್ಳದ ಮಾನವೀಯತೆಯನ್ನು ಈ ದೂರವಾಗುವುದರ ಮೂಲಕ ತನ್ನ ತಂದೆ ತಾಯಿಯನ್ನು ಒಂದು ಮಾಡುವ ಮಗುವಿನ ಮೌಲ್ಯಯುತ ಪ್ರೀತಿ ನಿಜಕ್ಕೂ ನೋಡುವ ಹೃದಯಗಳನ್ನು ಖಂಡಿತವಾಗಿಯೂ ಕಿವುಚುತ್ತದೆ.

ಸುಮನ್@ಬಾಲ್ಕಾನಿ ನ್ಯೂಸ್

Tags