ಚಿತ್ರ ವಿಮರ್ಶೆಗಳು

ಮುಗ್ಧತೆಗೆ ಮಂಕುಬೂದಿ ಎರಚುವ ವಂಚನೆಯ ಪರಮಾವಧಿ!

.…ಮನುಷ್ಯ ಸ್ವಭಾವಗಳನ್ನು ಪ್ರಕೃತಿಯ ಎದುರಲ್ಲಿಟ್ಟು ತೂಗುವ ‘ಪೊಮೊಗ್ರನೆಟ್‌ ಆರ್ಚೆರ್ಡ್’….

ಬೆಂಗಳೂರು, ಆ.11: ಅದೊಂದು ಕುಗ್ರಾಮ. ಸಮೃದ್ಧವಾದ ದಾಳಿಂಬೆ ತೋಟದಲ್ಲೊಂದು ಮನೆ. ಅಲ್ಲಿ ಒಬ್ಬ ವೃದ್ಧ, ಅವನ ಸೊಸೆ ಮತ್ತು ಮೊಮ್ಮಗ ವಾಸವಾಗಿದ್ದಾರೆ. ಮೊಮ್ಮಗನಿಗೆ ದೃಷ್ಟಿದೋಷ ಇದೆ. ಹನ್ನೆರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಹಿರಿಯ ಮಗ ತೀರಿಕೊಂಡಿದ್ದಾನೆ. ಆ ಸಮಯದಲ್ಲಿಯೇ ಕಿರಿಮಗ ಮನೆಬಿಟ್ಟು ಹೋದವನು ಇನ್ನೂ ಬಂದಿಲ್ಲ…. ,   …ಎಂದು… ಶುರುವಾಗುವ  ಅಝರ್ಬೈಜಾನಿ ಭಾಷೆಯ ‘ಪೊಮೊಗ್ರನೆಟ್‌ ಆರ್ಚೆರ್ಡ್’ ಚಿತ್ರ 2017ರ ಜುಲೈ 01ರಂದು ತೆರೆ ಕಂಡು ಭಾರೀ ಪ್ರಶಂಶೆಗಳನ್ನು ಗಿಟ್ಟಿಸಿಕೊಂಡಿತ್ತು.

ಎದೆಯೊಳಗಿನ ಬೆಂಕಿ

ಈ ಚಿತ್ರದಲ್ಲಿ ದಾಳಿಂಬೆ ತೋಟವನ್ನು ಕೊಳ್ಳಲು ಹಲವರು ಹೊಂಚು ಹಾಕುತ್ತಾ…. ಮುದುಕನಲ್ಲಿ ಪೀಡಿಸುತ್ತಿರುತ್ತಾರೆ. ಆದರೆ ಅವನು ಮಾತ್ರ ಅದನ್ನು ಮಾರಲೊಲ್ಲ. ಒಳಗೊಳಗೆ ಸೊರಗುತ್ತ, ಹೊರಗೆ ರಸಭರಿತ ದಾಳಿಂಬೆಗಳನ್ನು ಆಯ್ದುಕೊಳ್ಳುತ್ತಾ, ಬದುಕುತ್ತಿರುವಾಗ ಒಂದು ಮಳೆರಾತ್ರಿ ಹನ್ನೆರಡು ವರ್ಷದ ಹಿಂದೆ ಮನೆಬಿಟ್ಟು ಹೋಗಿದ್ದ ಕಿರಿಯ ಮಗ ಇದ್ದಕ್ಕಿದ್ದಂತೆಯೇ ಮನೆಗೆ ಬರುತ್ತಾನೆ. ಅವನ ಬರುವಿಕೆ, ಅವರ ಬದುಕಿನ ಸರೋವರದಲ್ಲಿ ಎದ್ದ ಸುನಾಮಿಯ ಮೊದಲ ಅಲೆ ಅದು!

ಇದ್ದಕ್ಕಿಂದ್ದಂತೆಯೇ ಆ ಮೂವರ ಬದುಕಿನ ಲಯವೂ ತಪ್ಪಿ ಹೊಯ್ದಾಡಲಾರಂಭಿಸುತ್ತದೆ. ಮೊಮ್ಮಗನಿಗೆ ಮನೆಗೆ ಬಂದ ಅಪರಿಚಿತನನ್ನು ಅಪ್ಪ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ಮಗ ಮನೆಬಿಟ್ಟು ಹೋಗಿದ್ದಕ್ಕೆ ಮುದುಕನಿಗೆ ಸಿಟ್ಟೂ. ಅಷ್ಟು ವರ್ಷ ಎದೆಯೊಳಗೆ ಬೆಂಕಿಯಿಟ್ಟು ಬದುಕಿದ್ದಕ್ಕೆ ಹೆಂಡತಿಗೆ ಹತಾಶೆಯೂ ಇದೆ. ಆದರೆ ಅವುಗಳನ್ನು ಮನಸ್ಸೊಳಗೇ ಮುಚ್ಚಿಟ್ಟುಕೊಂಡು ಅವರು ಅವನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರೆ.

ಇಂತಹದ್ದೊಂದು ವಿಶಿಷ್ಟ ವಸ್ತುವನ್ನಿಟ್ಟುಕೊಂಡು ಮನುಷ್ಯ ಸ್ವಭಾವಗಳನ್ನು ಪ್ರಕೃತಿಯ ಎದುರಲ್ಲಿಟ್ಟು ತೂಗುವ ಚಿತ್ರ ‘ಪೊಮೊಗ್ರನೆಟ್‌ ಆರ್ಚೆರ್ಡ್’. ಮನುಷ್ಯನ ಮನಸ್ಸಿಗಿರುವ ವಂಚನೆಯ ಸಾಧ್ಯತೆಯನ್ನು ಶೋಧಿಸುವ ಜೊತೆಗೆ, ಸರಣಿ ಅಪಘಾತಗಳಿಂದ ಪರಿಣಮಿಸುವ ಸತತ ಆಘಾತಗಳಿಗೆ ಎದುರಾಗಿಯೂ ಬದುಕುವ ಅವನ ಚೈತನ್ಯವನ್ನೂ ಈ ಚಿತ್ರದಲ್ಲಿ ಅದ್ಬುತವಾಗಿ ಚಿತ್ರಿಸಲಾಗಿದೆ.

 ಮುಗ್ಧತೆಗೆ ಮಂಕುಬೂದಿ ಎರಚುವ ವಂಚನೆ!

ಎಷ್ಟೋ ವರ್ಷಗಳ ನಂತರ ಮಗ ಬಂದಿರುವುದು ಹಣ ತೆಗೆದುಕೊಂಡು ಹೋಗಲಿಕ್ಕಾಗಿ ಎಂಬ ವಿಷಯ ಅಪ್ಪನಿಗಾಗಲಿ ಸೊಸೆಗಾಗಲಿ ಗೊತ್ತಿಲ್ಲ. ಅವರ ಮುಗ್ಧತೆಗೆ ಮಂಕುಬೂದಿ ಎರಚುವ ಮಗನ ವಂಚನೆಗೆ ಕೊನೆಯವರೆಗೂ  ದಾಳಿಂಬೆ ಹಣ್ಣಿನ ತೋಟ ಸಾಕ್ಷಿಯಾಗಿ ನಿಲ್ಲುತ್ತದೆ! ಹೀಗೆ ಮಾನವೀಯ ಸಂಬಂಧಗಳ ಸುಳಿಯಲ್ಲಿ ದಾಳಿಂಬೆ ತೋಟ ಮಾತ್ರ ರಸಭರಿತ ಹಣ್ಣು ಕೊಡುವುದರೊಂದಿಗೆ ಎಲ್ಲಾ ನೋವುಗಳಿಗೆ ಹೆಗಲು ಕೊಟ್ಟು ನಿಲ್ಲುವುದನ್ನು ಈ ಚಿತ್ರದಲ್ಲಿ ನೀವೂಗಮನಿಸಬಹುದು.

ಈ ಚಿತ್ರದ ನಿರ್ದೇಶಕ ಇಲ್ಗಾರ್‌ ನಝಾಪ್‌. ಚೆಕೋವ್‌ ನ ‘ದಿ ಚೆರಿ ಆರ್ಚೆರ್ಡ್’ ನಾಟಕವನ್ನು ಆಧರಿಸಿದ ಈ ಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿದೆ.

Tags

Related Articles