ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ನಗುವಿನ ಅಲೆಯಲ್ಲಿ ಮುಳುಗಿಸುವ ಭೂತಯ್ಯನ ಮೊಮ್ಮಗ

ಪದೆ ಪದೆ ಹಾಗೂ ನಮಕ್ ಹರಾಮ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನಾಗರಾಜ್ ಪಿಣ್ಯ ಅವರು ತಮ್ಮ ಮೂರನೇ ಚಿತ್ರದಲ್ಲಿ ನಗುವಿನ ಅಲೆಯನ್ನು ಎಬ್ಬಿಸಿದ್ದಾರೆ. ಇಲ್ಲಿ ಕತೆಯೇ ನಾಯಕರಾಗಿದ್ದು, ಹಾಗೂ ಹಾಸ್ಯ ನಟರನ್ನೇ ಪ್ರಧಾನ ನಟರನ್ನಾಗಿಸಿ ಚಿತ್ರ ಕಟ್ಟಿಕೊಟ್ಟಿರುವ ರೀತಿಯನ್ನುಮೆಚ್ಚಲೇಬೇಕು.

ಹಾಗಂತ ಇಲ್ಲಿ ವಿಷ್ಣುವರ್ಧನ್ ಅಭಿನಯದ ’ಭೂತಯ್ಯನ ಮಗ ಅಯ್ಯು’ಗೂ ಇದಕ್ಕೂ ಏನಾದರೂ ಸಂಬಂಧ ಇದೆ ಎಂದು ತಿಳಿದುಕೊಳ್ಳಬೇಕಿಲ್ಲ. ಹಾಗೆಯೇ ಹೆಸರಿಗೂ ಚಿತ್ರದ ಕಥೆಗೂ ಸಂಬಂಧವಿಲ್ಲ. ಚಿತ್ರದಲ್ಲೊಬ್ಬ ಭೂತಯ್ಯನಿಗೆ ಮೊಮ್ಮಗ ಇರುತ್ತಾನೆ, ಅವನ ಹೆಸರು ಅಯ್ಯು. ಹಳ್ಳಿಯಲ್ಲಿ ಸಾವನ್ನು ಜನ ಹೇಗೆ ನೋಡುತ್ತಾರೆ ಎನ್ನುವುದನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಅಂದಹಾಗೆ, ಇದೊಂದು ಅಪ್ಪಟ ಗ್ರಾಮೀಣ ಚಿತ್ರ. ಅಲ್ಲಿನ ಮಾತು, ಪರಿಸರ, ಪರಿಸ್ಥಿತಿ ಎಲ್ಲವನ್ನೂ ಒಂದೇ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ ತಕ್ಕಮಟ್ಟಿಗೆ ಸಾರ್ಥಕವೆನಿಸಿದೆ.

ಚಿಕ್ಕಣ್ಣ ಹಾಗೂ ತಬಲಾ ನಾಣಿ ಇಲ್ಲಿ ಕಮಾಲ್ ಮಾಡಿದ್ದು, ಪಾತ್ರದ ಅವಧಿ ಕಡಿಮೆಯಿದ್ದರೂ ನಾಯಕಿಯಾಗಿ ಶೃತಿ ಜೀವ ತುಂಬಿ ಅಭಿನಯಿಸಿದ್ದಾರೆ. ಭೂತಯ್ಯ ಆ ಊರಿನ ಜಿಪುಣ. ಅವನು ಬದುಕಿನುದ್ದಕ್ಕೂ ಖರ್ಚು ಮಾಡಿದ್ದು ಕೇವಲ 9 ರುಪಾಯಿ 25 ಪೈಸೆ ಮಾತ್ರ. ಅವನ ಮೊಮ್ಮಗ ಅಯ್ಯು 99 ಹೆಣ್ಣು ನೋಡಿದ್ದರೂ, ಅವನಿಗೆ ಒಂದು ಹೆಣ್ಣೂ ಒಪ್ಪಿರಲ್ಲ. ಕಾರಣ, ಅವನ ಅಂದ-ಚೆಂದ. ಆದರೆ, 100ನೇ ಹುಡುಗಿಯನ್ನು ನೋಡಲು ಹೊರಡುವ ಅವನಿಗೆ ಆ ಹುಡುಗಿ ಸಿಗುತ್ತಾಳ್ಳೋ, ಇಲ್ಲವೋ ಎಂಬುದೇ ಕಥೆ.

ಹುಡುಗಿಯ ಊರಲ್ಲಿ ಇನ್ನೂ ಒಂದು ಕಥೆ ಇದೆ. ಅಲ್ಲೊಂದು ಸಾವಿನ ಪ್ರಸಂಗವೂ ನಡೆದು ಹೋಗುತ್ತೆ. ಊರಿಗೇ ಬಡ್ಡಿ ಸಾಲ ಕೊಟ್ಟ ವ್ಯಕ್ತಿಯೊಬ್ಬ ಸತ್ತನೆಂದು, ಆ ಊರ ಕೆಲ ಜನ ಹಿಗ್ಗುತ್ತಾರೆ. ಆದರೆ, ಅಲ್ಲಿ ಇನ್ನೊಂದು ಪ್ರಸಂಗವೂ ನಡೆಯುತ್ತದೆ. ಅದೇ ಚಿತ್ರದ ತಿರುವು. ಚಿಕ್ಕಣ್ಣ. ತಬಲಾ ನಾಣಿ ಎಂದಿನಂತೆ ಪಂಚಿಂಗ್ ಮಾತುಗಳನ್ನು ಹರಿಬಿಟ್ಟು, ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರದಲ್ಲಿ ಹಾಸ್ಯ ಕಲಾವಿದರ ದಂಡೇ ಇದ್ದು ಎಲ್ಲರೂ ಅವರವರ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ ಚಿತ್ರದ ಉದ್ದಕ್ಕೂ ಕೆಲ ಪಾತ್ರಗಳು ನಗಿಸಿವ ಸಾಹಸ ಮಾಡುತ್ತವಷ್ಟೇ. ಮತ್ತು ಆ ರೀತಿಯ ಪಾತ್ರಧಾರಿಗಳಿಗೆ ತಕ್ಕಂತೆ ಯಾವುದೇ ರೀತಿಯ ರಿಸ್ಕ್ ಇಲ್ಲದೇ ಕತೆಯನ್ನು ಹೇಳುವುದಕ್ಕೆ ಹೊರಟಿರುವುದು ಪ್ಲಸ್ ಪಾಯಿಂಟ್.

ಉಳಿದಂತೆ ಹೊನ್ನವಳ್ಳಿ ಕೃಷ್ಣ, ರಾಕ್ಲೈನ್ ಸುಧಾಕರ್ ಆ ಹಳ್ಳಿಯ ಹಿರಿಯ ಜೀವಗಳಾಗಿ ಇಷ್ಟವಾಗುತ್ತಾರೆ. ವರ್ಧನ್, ಉಮೇಶ್, ಮನ್ ದೀಪ್ ರಾಯ್, ಬುಲೆಟ್ ಪ್ರಕಾಶ್, ಪ್ರಶಾಂತ್ ಸಿದ್ಧಿ ಇರುವಷ್ಟು ಕಾಲ ಗಮನಸೆಳೆಯುತ್ತಾರೆ. ರವಿ ಬಸ್ರೂರ್ ಸಂಗೀತ ಗಮನ ಸೆಳೆಯುತ್ತದೆ. ನಂದಕುಮಾರ್ ಛಾಯಾಗ್ರಹಣದಲ್ಲಿ “ಅಯ್ಯು’ ಪಸಂದವಾಗಿ ಕಾಣಿಸುತ್ತಾನೆ. ಆದರೆ ಲಾಜಿಕ್ ಅನ್ನು ಪಕ್ಕಕ್ಕಿಟ್ಟು ನೋಡುವುದಾದರೇ ಚಿತ್ರ ಮತ್ತಷ್ಟು ಇಷ್ಟವಾಗುತ್ತದೆ.

Tags

Related Articles

Leave a Reply

Your email address will not be published. Required fields are marked *