ಬಾಲ್ಕನಿಯಿಂದಸಂದರ್ಶನ

ನಂದಿನಿಯ ಅವತಾರದಲ್ಲಿ ನಿತ್ಯ ರಾಮ್

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿ ಎಲ್ಲರಿಗೂ ಗೊತ್ತೇ ಇರುವ ವಿಷಯ. ನಂದಿನಿ ಧಾರಾವಾಹಿಯಲ್ಲಿ ಗಂಗಾ ಪಾತ್ರದಲ್ಲಿ ಮಿಂಚುತ್ತಿರುವ ನಿತ್ಯಾ ರಾಮ್ ತಮ್ಮ ಬ್ಯುಸಿ ಶೆಡ್ಯೂಲ್ನಲ್ಲೂ ನಮ್ಮೊಂದಿಗೆ ಮಾತಿಗೆ ಸಿಕ್ಕಾಗ..

 • ಅಭಿನಯಕ್ಕೆ ಕಾಲಿಟ್ಟಿದ್ದು ಹೇಗೆ?

ತಂದೆ ಭರತನಾಟ್ಯ ಕಲಾವಿದನಾದ್ದರಿಂದ ನಾನು ಬಾಲ್ಯದಿಂದಲೂ ಆಸಕ್ತಿಯಿಂದ ಭರತನಾಟ್ಯ ಮಾಡುತ್ತಿದ್ದೆ ಹಾಗೂ ಕಲಿತಿದ್ದೇನೆ. ಜೀ ಕನ್ನಡ ವಾಹಿನಿಯಲ್ಲಿ ಕನಸಿನ ಕಣ್ಮಣಿ ಎಂಬ ರಿಯಾಲಿಟಿ ಶೋನಲ್ಲಿ ನಾನು ರನ್ನರ್ ಅಪ್ ಆಗಿದ್ದೆ. ನಂತರ ಅದೇ ಚಾನೆಲ್ ನಲ್ಲಿ ನನಗೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಒದಗಿ ಬಂತು. ಹಾಗಾಗಿ ನಾನು ಅಂತಿಮ ವರ್ಷ ಪದವಿ ಓದುತ್ತಿರಬೇಕಾದರೆ ಸಿನಿಮಾ ಹಾಗೂ ಧಾರಾವಾಹಿ ಅವಕಾಶಗಳು ಬಂದವು.  ಆದರೆ ಮನೆಯಲ್ಲಿ ಸಿನಿಮಾಕ್ಕೆ ಬಣ‍್ಣ ಹಚ್ಚಲು ಅನುಮತಿಯಿಲ್ಲದ್ದರಿಂದ ನಾನು ಧಾರಾವಾಹಿ ಕಡೆ ಮುಖ ಮಾಡಿದೆ. ಕನ್ನಡದಲ್ಲಿ ಮುಂದೆ ಒಳ‍್ಳೆಯ ಸಿನಿಮಾ ಮಾಡಬೇಕೆಂಬ ಕನಸಿದೆ.

 • ನಿಮ್ಮ ಕನಸಿನ ಪಾತ್ರ?

ಕನಸಿನ ಪಾತ್ರ ಎಂದು ನಾನು ಯೋಚನೆ ಮಾಡಿಲ್ಲ. ಒದಗಿ ಬಂದ ಪಾತ್ರಗಳಿಗೆ ಶ್ರಮ ವಹಿಸಿ ಕೆಲಸ ಮಾಡುತ್ತೇನೆ.

 • ನೀವು ನಟಿಸಿದಂತಹ ಧಾರಾವಾಹಿಗಳು?

ಬೆಂಕಿಯಲ್ಲಿ ಅರಳಿದ ಹೂವು, ರಾಜಕುಮಾರಿ, ಎರಡು ಕನಸು, ಮನೆ ದೇವ್ರು, ಕರ್ಪೂರದ ಗೊಂಬೆ ಹಾಗೂ ಈಗ ಸದ್ಯ ನಂದಿನಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಈ ನಾಲ್ಕು ಭಾಷೆಗಳಲ್ಲಿ ಪ್ರಸಾರಗೊಳ‍್ಳುತ್ತಿದೆ. ಅದಲ್ಲದೆ ತೆಲುಗಿನಲ್ಲಿ 2 ಧಾರಾವಾಹಿಯಲ್ಲಿ ಅಭಿನಯಿಸಿದ್ದೇನೆ.

 • ನೀವು ಅಭಿನಯಿಸಿದಂತಹ ಧಾರಾವಾಹಿಗೆ ಪ್ರಶಸ್ತಿ ಲಭಿಸಿದೆಯಾ?

ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲಿ ಅಭಿನಯಿಸುತ್ತಿರಬೇಕಾದರೆ ಪ್ರತಿ ಪರ್ಷ ಬೆಸ್ಟ್ ಪರ್ಫಾಮರ್ ಆಫ್ ದಿ ಈಯರ್, ಹಾಗೂ ಮನೆ ಮಗಳು ಪ್ರಶಸ್ತಿ ಲಭಿಸಿದೆ.

 • ನಿಮ್ಮ ಈ ಸಾಧನೆಗೆ ಸ್ಪೂರ್ತಿ ಯಾರು?

ನನ್ನ ತಂದೆ ತಾಯಿ ನನಗೆ ಸ್ಪೂರ್ತಿ.

 • ನಟನೆಯಿಂದ ಏನು ಕಲಿತಿರಿ?

ತುಂಬಾ ತಾಳ್ಮೆ, ಹಾಗೂ ಕೋಪ ಕಡಿಮೆ ಮಾಡಿಕೊಳ‍್ಳಬೇಕು, ಮುಖ್ಯವಾಗಿ ಶ್ರದ್ದೆ ಇರಬೇಕು.

 • ಮರೆಯಲಾಗದಂತಹ ನೆನಪು?

ನಂದಿನಿ ಧಾರಾವಾಹಿ ತುಂಬಾ ಚೆನ್ನಾಗಿ ಸಾಗುತ್ತಿದೆ. ಹಾಗಾಗಿ ನನಗೆ ಹೆಚ್ಚು ಹೆಣ‍್ಣು ಮಕ್ಕಳಗಿಂತ, ಗಂಡುಮಕ್ಕಳೇ ಅಭಿಮಾನಿಗಳು ಹೊರಗೆ ಸಿಕ್ಕಾಗ ನನ್ನನ್ನು ಗುರುತಿಸಿ ನಾವು ಕೂಡ ಧಾರಾವಾಹಿ ನೋಡುತ್ತೇವೆ ಎಂದು ಅಭಿಮಾನಿಗಳು ಹೇಳಿದಾಗ ಖುಷಿಯಾಗುತ್ತದೆ.

 • ಹೊರಗೆ ಅಭಿಮಾನಿಗಳು ಹೇಗೆ ಗುರುತಿಸುತ್ತಾರೆ?

ಗಂಗಾ ಎಂದೆ ಕರೆಯುತ್ತಾರೆ. ಆದರೆ ಇತ್ತೀಚೆಗೆ ನಾನು ನನ್ನ ಗೆಳೆಯರೊಂದಿಗೆ ಹೊರಗಡೆ ಹೋಗಿದ್ದೆ .ಅಲ್ಲಿ ರೋಡಿನಲ್ಲಿ ಒಬ್ಬ ಪುಟ್ಟ ಹುಡುಗ ಹೂವು ಮಾರುತ್ತಾ ಬರುತ್ತಿದ್ದ ನನ್ನನ್ನು ಕಂಡ ಕೂಡಲೇ ಕಿರುಚಲು ಶುರು ಮಾಡಿ ಅಳುತ್ತಿದ್ದ ನಾನು ಹತ್ತಿರ ಹೋದಾಗ ನೀವು ಹಾವು ಅಂತ ಅಳುತ್ತಿದ್ದ.  ಆಮೇಲೆ ನಾನು ಸಮಾಧಾನ ಮಾಡಿ ನಾನು ಹಾವಲ್ಲ ಎಂದಾಗ ಸುಮ್ಮನಾದ. ಜನರು ಎಷ್ಟು ಧಾರಾವಾಹಿಯ ಒಳ ಹೊಕ್ಕಿದ್ದಾರೆಯೆಂದು ಇದರಲ್ಲೇ ಗೊತ್ತಾಗುತ್ತೆ.

 • ವೀಕ್ಷಕರಿಗೆ ಏನು ಸಂದೇಶ ನೀಡುತ್ತೀರಿ?

ಇಲ್ಲಿಯವರೆಗೂ ನನ್ನನ್ನು ಹರಸಿ, ಬೆಳೆಸಿ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಹೀಗೆ ಮುಂದೆಯೂ ಸಪೋರ್ಟ್ ಮಾಡುತ್ತಾ ಇರಿ.

 • ನಂದಿನಿ ಧಾರಾವಾಹಿಯಲ್ಲಿ ನಿಮಗೆ ಚಾಲೆಂಜಿಂಗ್ ಅನ್ನಿಸೋದು ಏನು?

ಇಲ್ಲಿ ತುಂಬಾ ಜನ ಹಿರಿಯ ಕಲಾವಿದರು ಇದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಬರುತ್ತಾರೆ. ಅವರುಗಳ ಮುಂದೆ ಅಭಿನಯಿಸುವುದೇ ದೊಡ್ಡದು ಹಾಗೂ ಒಂದು ಸೀನ್ ನನ್ನು ಎರಡೆರಡು ಬಾರಿ ಮಾಡಬೇಕು ಕನ್ನಡ ಹಾಗೂ ತಮಿಳಿಗೆ. ಪ್ರತಿ ದಿನ ಚಾಲೆಂಜಿಂಗ್ ಆಗಿ ಇದೆ.

 • ನಿಮ್ಮ ಮುಂದಿನ ಯೋಜನೆಗಳೇನು?

ಈಗ ಹಲವಾರು ಸಿನಿಮಾ ಆಫರ್ ಗಳು ಬರೋಕೆ ಶರುವಾಗಿದೆ. ನಂದಿನ ಧಾರಾವಾಹಿಯಲ್ಲಿ ಬ್ಯುಸಿಯಾಗಿರುವುದರಿಂದ ಸದ್ಯಕ್ಕೆ ಯಾವುದೇ ಸಿನಿಮಾಕ್ಕೆ ಸಹಿ ಹಾಕಿಲ್ಲ. ಮುಂದೆ ಒಳ‍್ಳೆಯ ಆಫರ್ ಗಳು ಬಂದರೆ ಅಭಿನಯಿಸುವೆ.

 • ನಂದಿನಿ ಧಾರಾವಾಹಿ ಶೂಟಿಂಗ್ ಹೇಗೆ ನಡಿತಿದೆ?

ನಂದಿನಿ ಧಾರಾವಾಹಿ ಶೂಟಿಂಗ್ ಚೆನ್ನೈನಲ್ಲಿ ನಡೆಯೋದು. ತುಂಬಾ ಅದ್ಬುತವಾಗಿ ನಡಿತಿದೆ.

 • ನಿಮಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್?

ಇತ್ತೀಚೆಗೆ ಜಾಹಿರಾತಿನ ಶೂಟಿಂಗ್ ಇತ್ತು. ಅದರಲ್ಲಿ ನಾನು ವಿಭಿನ್ನ ರೀತೀಯಾಗಿ ಕಾಣುತ್ತಿದ್ದೆ ಅದು ನನ್ನ ತಂಗಿ ರಚಿತ ರಾಮ್ ಗೆ ತುಂಬಾ ಇಷ್ಟವಾಗಿ, ಇಷ್ಟು ದಿನದಲ್ಲಿ ನನಗಿಷ್ಟವಾದ ಫೋಟೋ ಇದು ಎಂದು ನನ್ನನ್ನು ಹೊಗಳಿದ್ದಳು. ಅವಳ ಬಾಯಲ್ಲಿ ಏನಾದರೂ ಪಾಸಿಟಿವ್ ಮಾತು ಬಂದರೆ ನನಗೆ ತುಂಬಾ ಖುಷಿಯಾಗುತ್ತೆ ಅದೇ ನನಗೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್.

 • ಇಷ್ಟವಾದ ನಟ?

ಡಾ|| ರಾಜ್ ಕುಮಾರ್ ಹಾಗೂ ಸುದೀಪ್.

 • ನಟಿ?

ಇಷ್ಟವಾದ ನಟಿ ತುಂಬಾ ಜನ ಇದ್ದಾರೆ ಲಕ್ಷ್ಮೀ, ಅನುಷ್ಕ ಶೆಟ್ಟಿ, ರಮ್ಯ, ರಚಿತ ರಾಮ್, ಮಾಧುರಿ ದೀಕ್ಷಿತ್, ಶ್ರೀದೇವಿ.

 • ನಿಮ್ಮ ಹವ್ಯಾಸ?

ಡ್ಯಾನ್ಸ್, ಹಾಡು ಹೇಳುವುದು, ಪುಸ್ತಕ ಓದುವುದು.

 • ನಿಮ್ಮ ಫಿಟ್ನೆಸ್ ಹೇಗೆ ಕಾಪಾಡಿಕೊಳ‍್ಳುತ್ತೀರ?

ನಂದಿನಿ ಧಾರಾವಾಹಿಗೆ 6 ರಿಂದ 7 ಕೆಜಿ ಕಡಿಮಯಾಗಿದ್ದೇನೆ. ಯಾರೂ ಕೂಡ ತೂಕ ಇಳಿಸಿ ಎಂದು ಹೇಳಲಿಲ್ಲ. ಆದರೆ ನನಗೆ ಅನ್ನಿಸಿತು ಹಾಗೆ ತೂಕ ಇಳಿಸಿದೆ.

 • ಖುಷ್ಬೂ ಅವರ ಜೊತೆ ಅಭಿನಯಿಸಿದ ಅನುಭವ ಹೇಗೆ ಇತ್ತು?

ಖುಷ್ಬೂ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ‍್ಳುವ ಅವಕಾಶ ಇನ್ನೂ ಬಂದಿಲ್ಲ. ಆದರೆ ಅವರೇ ನನ್ನ ಎಲ್ಲಾ ಕಾಸ್ಟ್ಯೂಮ್ ಡಿಸೈನ್ ಮಾಡ್ತಿರೋದು. ಅವರೊಂದಿಗೆ ಮಾತನಾಡಿದ್ದೇನೆ. ತುಂಬಾ ಸ್ನೇಹದಿಂದ ಇರುತ್ತಾರೆ.

 • ನಂದಿನಿ ಧಾರಾವಾಹಿಯಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ?

ನಾನು ಗಂಗಾ ದೊಡ್ಡ ಅರಮನೆಯಲ್ಲಿ ಕೆಲಸದವನ ಮಗಳು. ಚಿಕ್ಕವಯಸ್ಸಿನಿಂದ ಅಲ್ಲೇ ಬೆಳೆದುಕೊಂಡು ಬಂದಿದ್ದೇನೆ. ಆದರೆ ಎಲ್ಲರೂ ಮನೆಮಗಳಂತೆ ನೋಡಿಕೊಳ‍್ಳುತ್ತಾರೆ. ಈಗ ಆ ಮನೆಯ ಸೊಸೆ. ನಂದಿನಿ ಎನ್ನುವ ಹಾವು ನನ್ನ ಮೈ ಮೇಲೆ ಸೇರಿಕೊಂಡ ಇರುತ್ತದೆ ಮನೆಯವರ ಮೇಲೆ ಸೇಡು ತೀರಿಸಿಕೊಳ‍್ಳಲು ಪ್ರಯತ್ನಿಸುತ್ತದೆ ಹಾಗಾಗಿ ನಾನು ದ್ವಿಪಾತ್ರದಲ್ಲಿ ಕಾಣಸಿಗುತ್ತೇನೆ. ಹೀಗೆ ಕಥೆ ಸಾಗುತ್ತದೆ.

—ಸುಹಾನಿ.ಬಡೆಕ್ಕಿಲ

 

Tags