ಬಾಲ್ಕನಿಯಿಂದಸಂದರ್ಶನಸುದ್ದಿಗಳು

ವೇಣು ವಾಣಿ

“ಐತಿಹಾಸಿಕ ಬರಹಗಾರ”ನ “ಬಿಚ್ಚು” ಮಾತು

ಹರಿ ಪರಾಕ್

 

ಕನ್ನಡ ಸಿನಿಮಾ ಬರವಣಿಗೆಯಲ್ಲಿ ತೊಡಗಿಕೊಂಡಿರುವ ಕೆಲವೇ ಸಾಹಿತಿಗಳಲ್ಲಿ ಡಾ. ಬಿ ಎಲ್ ವೇಣು ಪ್ರಮುಖರು. ಕಮರ್ಷಿಯಲ್ ಚಿತ್ರಗಳಿಂದ ಹಿಡಿದು ಐತಿಹಾಸಿಕ ಚಿತ್ರಗಳವರೆಗೂ ವೇಣು ಅವರು ತಮ್ಮದೇ ಆದ ವಿಶಿಷ್ಠ ಬರವಣಿಗೆಯ ರುಚಿಯನ್ನು ಕನ್ನಡ ಪ್ರೇಕ್ಷಕರಿಗೆ ತೋರಿಸಿ ಅವರ ಅಭಿರುಚಿಯನ್ನು ಹೆಚ್ಚಿಸಿದ್ದಾರೆ. ವೇಣು ಅವರ ಬರವಣಿಗೆಯಲ್ಲಿ “ಕಲ್ಲರಳಿ ಹೂವಾ”ಗುತ್ತದೆ. ತಂದೆಗೇ ಮೋಸ ಮಾಡುವ ಮಗನ ಕಥೆ ಇರುವ “ವೀರಪ್ಪನಾಯಕ” ಆಗಲಿ “ತಂದೆಗೆ ತಕ್ಕ ಮಗ”ನ ಕಥೆಯೇ ಆಗಲಿ ವೇಣು ಅವರ ಬರವಣಿಗೆ ಸರಾಗ. “ತಿಪ್ಪಜ್ಜಿ ಸರ್ಕಲ್” ನಲ್ಲಿ ಮಾತ್ರವಲ್ಲ ಸಿನಿ ಸರ್ಕಲ್ ನಲ್ಲೂ ಅವರು ಫೇಮಸ್. ಈ ಡಾಕ್ಟರ್ ಬಿ ಎಲ್ ವೇಣು  “ಡಾಕ್ಟರ್ ಕೃಷ್ಣ”ನಿಗೂ ಪ್ರಿಸ್ಕ್ರಿಪ್ಶನ್ ಬರೆದು ಕೊಡುತ್ತಾರೆ. ಅಂಬರೀಶ್ ಅವರಿಗೆ “ಒಲವಿನ ಉಡುಗೊರೆ”ಯನ್ನು ರಕುತದಿ ಬರೆಯುವ ಕಲೆಯನ್ನು ಹೇಳಿಕೊಟ್ಟಿದ್ದೂ ಇವರೇ. ಸಣ್ಣ ಪ್ರಾಯದಲ್ಲಿ, “ಪ್ರಾಯ ಪ್ರಾಯ ಪ್ರಾಯ” ಚಿತ್ರಕ್ಕೆ ಸಂಭಾಷಣೆ ಬರೆದ ವೇಣು ಇನ್ನು “ಮೂರು ಜನ್ಮ”ಕ್ಕಾಗುವಷ್ಟು ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ಬಿಡುಗಡೆ ಆಗಲು ಸಿದ್ಧವಾಗಿರುವ “ಬಿಚ್ಚುಗತ್ತಿ” ಚಿತ್ರದ ಪ್ರಮುಖ ಹೈಲೈಟ್ ಅಂದ್ರೆ ವೇಣು ಅವರ ಬರವಣಿಗೆ ಅಂದ್ರೆ ತಪ್ಪಿಲ್ಲ. ಬಿಚ್ಚು ಗತ್ತಿ ದೊಡ್ಡ ಜೋಷ್ ನೊಂದಿಗೆ ಹೊರಬರಲು ಕಾರಣವಾಗಿರುವ ಬಿ ಎಲ್ ವೇಣು ಅವರ ಜೊತೆ ಬಾಲ್ಕನಿಯಲ್ಲೊಂದು ಪುಟ್ಟ ಮಾತುಕತೆ.

ಐತಿಹಾಸಿಕ ಚಿತ್ರಗಳ ಬರವಣಿಗೆಯಲ್ಲಿ ಸ್ಪೆಶಲಿಸ್ಟ್ ನೀವು, ಆದ್ರೆ ನಿಮ್ಮ ಪುಸ್ತಕದ ಕಂಟೆಂಟ್ ಅನ್ನು ಸಿನಿಮಾ ಬರಹದ ರೂಪಕ್ಕೆ ಇಳಿಸೋದು ಹೇಗನ್ನಿಸಿತು?

ಅವಕಾಶ ಸಿಕ್ಕಾಗ ಅದಕ್ಕೆ ಹೊಂದಿಕೊಳ್ಳಬೇಕು. ಕಾದಂಬರಿಗಳಲ್ಲೂ ನಾನು ಡೈಲಾಗ್ ಗಳನ್ನ ಬರೆದಿರುತ್ತೇನೆ. ಆದರೆ ಕಾದಂಬರಿಯಲ್ಲಿ ಬರೆದಿರುವಂತಹ ಡೈಲಾಗ್ ಗಳನ್ನ ಸಿನಿಮಾಗಳನ್ನ ಅಳವಡಿಸೋದು ಕಷ್ಟ. ಯಾಕಂದ್ರೆ ಕಾದಂಬರಿ ಶೈಲಿನೇ ಬೇರೆ ಸಿನಿಮಾ ಸಂಭಾಷಣೆನೆ ಬೇರೆ. ಕಾದಂಬರಿ ನಮ್ಮ ಸಂಪೂರ್ಣ ಸ್ವಾತಂತ್ರ್ಯ.  ಸಿನಿಮಾ ಸಾಹಿತ್ಯವನ್ನ ಅನಕ್ಷರಸ್ಥರಿಗೂ ಅರ್ಥವಾಗೋ ಹಾಗೆ ಬರೆಯಬೇಕು. . ಗ್ರಾಂಥಿಕವಾಗಿ ಮಾಡೋಕ್ಕಾಗಲ್ಲ. ಈ ವಿಷ್ಯದಲ್ಲಿ ನನಗೆ ಉದಶಂಕರ್ ರವರ ಸ್ಪೂರ್ತಿ . ಮಯೂರ ಸಿನಿಮಾವನ್ನ ಎಷ್ಟು ಸೊಗಸಾಗಿ ಹೇಳಿದ್ದಾರೆ . ಹುಣಸೂರು ಕೃಷ್ಣಮೂರ್ತಿಯವರು ಕೂಡ ಚೆನ್ನಾಗಿ ಹೇಳೋರು. ಈಗ ಕತೆ ಕಾದಂಬರಿ ಬರ್ಯೋವಾಗ ಹೇಗೆ ಕುವೆಂಪು ಕಾರಂತರು ಹೇಗೆ ಸ್ಪೂರ್ತಿಯಾಗ್ತಾರೋ ಹಾಗೆ ಹುಣಸೂರು, ಆರ್ ಎನ್ ಜಯಗೋಪಾಲ್, ಚಿ ಉದಯಶಂಕರ್ ಅವ್ರೆಲ್ಲ ಸಿನಿಮಾ ಸಾಹಿತ್ಯ ಜಗತ್ತಿಗೆ ಬಹುದೊಡ್ಡ ಕೊಡುಗೆಯನ್ನ ಕೊಟ್ಟಿದ್ದಾರೆ .

ನೀವು ಎಲ್ಲಾ ರೀತಿಯ ಚಿತ್ರಗಳಿಗೂ ಸಂಭಾಷಣೆ ಬರೆದವರು. ಸಾಮಾಜಿಕ ಚಿತ್ರಗಳ ಬರಹಕ್ಕೂ ಇಂಥ ಚಿತ್ರಗಳ ಬರಹಕ್ಕೂ ಏನು ವ್ಯತ್ಯಾಸ ಕಾಣುತ್ತೆ?

ಕಾದಂಬರಿಗೆ ಬರೆದಷ್ಟು ಸುಲಭವಲ್ಲ ಐತಿಹಾಸಿಕ ಸಿನಿಮಾಗೆ ಬರೆಯೋದು ಅಂದ್ರೆ. ಈಗ ಸೀರಿಯಲ್ ನಲ್ಲಿ 30ನಿಮಿಷ ಡೈಲಾಗ್ ಗಳನ್ನ ಬರೆಯೋದು ಸುಲಭ. ಐತಿಹಾಸಿಕ ಪಾತ್ರಗಳಿಗೆ ಚ್ಯುತಿಯಾಗದಂತೆ ಎಲ್ಲರಿಗೂ ಅರ್ಥವಾಗೋ ಹಾಗೆ ಬರೆಯುವಂತಹದ್ದು ಕಷ್ಟ. ಮಾತುಗಳು ಚುರುಕಾಗಿರ್ಬೇಕು, ಅನಗತ್ಯವಾಗಿ ಉದ್ದ ಇರಬಾರದು. ಗತ್ತು ಗತ್ತು ಗೈರತ್ತು ಎಲ್ಲ ಇರಬೇಕು, ಅದು ಸದ್ಬಳಕೆ ಆಗಬೇಕು. ಆಗಿನ ಕಾಲದಲ್ಲಿ ಇಂಥ ಸಂಭಾಷಣೆಗಳನ್ನು ಸಮರ್ಥವಾಗಿ ಬಳಸಿಕೊಳ್ಳೋರಿದ್ರು, ಡಾ ರಾಜ್ಕುಮಾರ್ ರಂತಹರವರು. ಈಗ ಅದನ್ನ ಬಳಕೆ ಮಾಡ್ಕೊಳ್ಳೋಕ್ಕೆ ಬರಲ್ಲ. ಶೂಟಿಂಗ್ ಸ್ಪಾಟ್ ನಲ್ಲಿ ನಾವಿರೋಲ್ಲ. ಆದ್ದರಿಂದ ಹೇಗೆ ಬಳಸಿಕೊಳ್ತಾರೋ ಗೊತ್ತಿಲ್ಲ. ಯಾವುದನ್ನ ಇಟ್ಕೊಳ್ತಾರೋ ತೆಗೆದು ಹಾಕ್ತಾರೋ ಗೊತ್ತಿಲ್ಲ. ನಾನು ಅದರಬಗ್ಗೆ ತಲೆ ಕೆಡಿಸ್ಕೊಳ್ಳೋಲ್ಲ

ಸಂತು ಇನ್ನೂ ಎಳೆ ಹುಡುಗ. ಅವರು ಈ ಹೆವಿ ವೆಯ್ಟ್ ಸಿನಿಮಾ ಮಾಡ್ತಾರೆ ಅಂದಾಗ ನಿಮಗೆ ಏನನ್ನಿಸಿತು?

ಈ ಥರದ ಚಿತ್ರಗಳಲ್ಲಿ ನಿರ್ದೇಶಕರು ಕಾರ್ಯ ನಿರ್ವಹಿಸೋದು ಬಹಳ ಕಷ್ಟ. ಈ ಸಿನಿಮಾ ಮಾಡುವಾಗ ಹರಿ ಸಂತೋಷ್ ಕೂಡ ಬಹಳ ಸೈಕಲ್ ಹೊಡೆದಿರಬಹುದು. ಕಾರಣ ಅವರಿಗೆ ಐತಿಹಾಸಿಕ ಸಿನಿಮಾ ಹೊಸದು. ಆದರೂ ಒಳ್ಳೆಯ ಕೆಲಸ ತೆಗೆದಿರ್ತಾರೆ ಅನ್ನೋ ನಂಬಿಕೆ ಇದೆ.

Image result for hamsalekha

ನಾದಬ್ರಹ್ಮ ಹಂಸಲೇಖ ಅವರ ಸಂಗೀತದ ಜೊತೆ ನಿಮ್ಮ ಬ್ರಹ್ಮಲಿಪಿ ಕೂಡ ಸೇರಿಕೊಂಡಿದೆ. ಪ್ರೇಕ್ಷಕ ಏನನ್ನ ನಿರೀಕ್ಷೆ ಮಾಡಬಹುದು?

ಅದು ನಿರ್ಮಾಪಕರ ಆಯ್ಕೆ , ವಿಷ್ಯ ಏನು ಅಂದ್ರೆ ಹಂಸಲೇಖ ಅವರು ಸಂಗೀತ ಮಾಡ್ತಾರೆ ಅಂದಾಗ ನನಗೆ ಗಾಬರಿ ಆಯಿತು. ಯಾಕಂದ್ರೆ ಅವರು ಮ್ಯೂಸಿಕ್ ನಲ್ಲಿ ಲೆಜೆಂಡ್. ಈ ಮುಂಚೆ ಅನೇಕ ಸಲ ಅವರ ಜೊತೆ ಕೆಲಸ ಮಾಡೋ ಅವಕಾಶ ಕಾರಣಾಂತರಗಳಿಂದ ತಪ್ಪಿ ಹೋಗಿತ್ತು. ಈಗ ಕಾಲ ಕೂಡಿ ಬಂದಿದೆ. ಇಬ್ಬರ ಕಾಂಬಿನೇಶನ್ ನಲ್ಲಿ ಒಳ್ಳೆ ಸಿನಿಮಾ ಬಂದಿದೆ ಅಂದ್ಕೊತಿನಿ.

 ಸಿನಿಮಾ ಶೂಟಿಂಗ್ ಸಮಯದಲ್ಲಿ ಸ್ಪಾಟ್ ಗೆ ಹೋಗಿದ್ರಾ? ಹೊಸ ನಾಯಕ ನಟ ರಾಜವರ್ಧನ್ ಅವರ ಬಗ್ಗೆ ಏನನ್ನಿಸಿತು?

ನಾನು ಮುಹೂರ್ತಕ್ಕೆ ಬಿಟ್ರೆ ಶೂಟಿಂಗ್ ಸ್ಪಾಟ್ ಗೆ ಹೋಗಿಲ್ಲ . ಆದರೆ ಟ್ರೈಲರ್ ನೋಡಿದೆ. ರಾಜವರ್ಧನ್ ಅವರಿಗೆ ಒಳ್ಳೆ ರಾಜ ಗಾಭೀರ್ಯ ಇದೆ. ಕಲೆ ಇದೆ. ಒಳ್ಳೆ ಮೈಕಟ್ಟು. ನಿರ್ದೇಶಕರು ಸರ್ಯಾಗಿ ಬಳಸಿಕೊಳ್ಳಬೇಕು ಇಂತಹ ನವಪ್ರತಿಭೆಗಳನ್ನ. ಚಿತ್ರದಲ್ಲಿ ಮುದ್ದಣ್ಣನ ಪಾತ್ರ ಬಹಳ ಹೈಲೈಟ್ ಆಗುತ್ತೆ. ಅದನ್ನ ಮೀರಿದ ಪಾತ್ರ ಭರಮಣ್ಣ. ರಾಜವರ್ಧನ್ ಅವರಿಗೆ ಈ ಚಿತ್ರದ ಪಾತ್ರ ಹೇಳಿ ಮಾಡಿಸಿದ ಹಾಗೆ ಇದೆ.  ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಇಂಥ ಪಾತ್ರಗಳಿಗೆ ಸೂಟ್ ಆಗುವಂತಹದ್ದು ದರ್ಶನ್.  ಅದೇ ರೀತಿ ಇವರೂ ಕೂಡ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಂಡಿದ್ದಾರೆ.

ಇಷ್ಟು ವರ್ಷಗಳ ಸಿನಿಮಾ ಯಾನ ಹೇಗಿದೆ? ಇಲ್ಲಿಯವರೆಗೂ ಎಷ್ಟು ಸಿನಿಮಾಗಳಿಗೆ ಬರವಣಿಗೆ ಮಾಡಿದ್ದೀರ?

ದೊಡ್ಡ ದೊಡ್ಡ ಬರಹಗಾರರೆಲ್ಲ ಹೇಗೆ ನನ್ನಲ್ಲಿ ಸೇರಿಕೊಂಡ್ರೋ ಗೊತ್ತಿಲ್ಲ. ನನ್ನ ಕಾದಂಬರಿಗಳಲ್ಲಿ ಡೈಲಾಗ್ ಗಳು ಚೆನ್ನಾಗಿ ಇದ್ದಿದ್ದರಿಂದ, ನೋಡೋಣ ನೀವೇ ಬರೀರಿ ಎಂದು ಅವಕಾಶ ನೀಡಿದವರು ಸಿದ್ಧಲಿಂಗಯ್ಯನವರು.  ನನಗೆ ನನ್ನ ಕಾದಂಬರಿ ಆಧಾರಿತ ಸಿನಿಮಾಗೆ ಚಿ ಉದಯಶಂಕರ್ ಅಂಥವರು ಬರೀಬೇಕು, ಹಂಸಲೇಖಾರವರು ಸಂಗೀತ ನಿರ್ದೇಶನ ಮಾಡ್ಬೇಕು ಅಂತ ಆಸೆ. ಆದ್ದರಿಂದ ನಾನು ಸಿದ್ದಲಿಂಗಯ್ಯ ಅವರಿಗೆ ಹೇಳ್ತಿದ್ದೆ,  ಸಾರ್ ಉದಯಶಂಕರ್ ರವರ ಕೈಯ್ಯಲ್ಲಿ ಬರೆಸಿ ಸಾರ್ ಅಂತ. ಅದಕ್ಕೆ ಅವರು, ನಾವು ಅವರ ಹತ್ರಾನೇ ಬರೆಸೊದು. ಆದ್ರೆ, ಈಗ ನೀವ್ ಬರ್ಕೊಂಡು ಬನ್ನಿ, ನಿಮ್ಮದು ಭಿನ್ನವಾಗಿದೆ ಅಂದಿದ್ರು.

ವೃತ್ತಿ ಬದುಕು ಹೇಗಿದೆ? ಇಲ್ಲಿಯವರೆಗಿನ ಪಯಣ ತೃಪ್ತಿ ತಂದಿದೆಯಾ?

ನಾನು ರಾಜ್ ಕುಮಾರ್ ಅವರ ಕಟ್ಟಾ ಅಭಿಮಾನಿ, ಆದರೆ ಅವರೊಂದಿಗೆ ಕೆಲಸಮಾಡುವ ಭಾಗ್ಯ ಒದಗಿಬರಲಿಲ್ಲ, ಪುಟ್ಟಣ್ಣನವರ ಸಿನಿಮಾದಲ್ಲಿ ಕೆಲಸಮಾಡಿದ್ದೇನೆ. ಆಗಿನ ಕಾಲದಲ್ಲಿ ಎರಡು ವಿಶ್ವವಿದ್ಯಾಲಯಗಳಿದ್ದವು, ಒಂದು ಪುಟ್ಟಣ್ಣ ಕಣಗಾಲ್ ಹಾಗು ಡಾ ರಾಜ್ ಕುಮಾರ್. ನನಗೆ ಯಾರಮೇಲೂ ನಂಜಿಲ್ಲ, ನಟರೊಂದಿಗೆ, ನಿರ್ದೇಶಕರೊಂದಿಗೆ ಹಾಗು ಸಾಹಿತ್ಯಲೋಕದ ಎಲ್ಲಾ ಅನುಭವಗಳನ್ನು ನನ್ನ ಆತ್ಮಕಥೆಯಲ್ಲಿ ಬರೆದು ದಾಖಲಿಸಿದ್ದೇನೆ. ಸಿನಿಮಾ ರಂಗಲ್ಲಿ ಕೆಲಸ ಮಾಡುವುದು ಸುಲಭದಮಾತಲ್ಲ, ಪ್ರತಿಭೆ ಜೊತೆಗೆ ಅದೃಷ್ಟವು ಇರಬೇಕು, ಇಲ್ಲಿ “ನಾನು” ಎಂದರೆ ಏನೂ ಸಾಧ್ಯವಿಲ್ಲ. ಆಗಿನ ಕಾಲದಲ್ಲಿ ಬರೆಯುವವರು ಬಹಳಷ್ಟು ಮಂದಿ ಇದ್ದರು. ಆದರೂ ನನ್ನ ಕೋಪನ್ನು ತಡೆದುಕೊಂಡು, ನನ್ನ ಕೆಲಸವನ್ನು ಮೆಚ್ಚಿ, ಚಿತ್ರರಂಗ ಇಂದಿಗೂ ಜೊತೆಯಲ್ಲಿರಿಸಿಕೊಂಡಿದೆ.  67 ಕಿಂತ ಹೆಚ್ಚು ಸಿನಿಮಾಗಳನ್ನು ಮಾಡಿದ್ದೇನೆ. ಸರ್ಕಾರಿ ಕೆಲಸದಲ್ಲಿ ಇದ್ದದ್ದರಿಂದ ಪಿಂಚಣಿ ಬರುತ್ತೆ. ಅದರಲ್ಲಿ ಜೀವನ ನಡೆಯುತ್ತೆ . ಸಿನಿಮಾಗಳಲ್ಲಿ ಅವರಾಗಿ ಕರೆದಾಗ ಮಾತ್ರ ಬಂದು ಕೆಲಸ ಮಾಡಿಕೊಡುತ್ತೇನೆ.

#Bicchugatti #Hamsalekha #Balkaninewskannada #BLVenu #HariParaak #HariSantosh #HariPriya

 

Tags