ಬಾಲ್ಕನಿಯಿಂದಸಂದರ್ಶನ

‘ಪ್ರತಿಭಾ’ವಂತೆ!

ಮಹಾನಗರಿ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶರ್ಮಿಳಾ ಚಂದ್ರಶೇಖರ್ ಇಂದು ಪತ್ತೆದಾರಿ ಪ್ರತಿಭಾ ಎಂದೇ ಪರಿಚಿತ. ನಿಗೂಢ ರಹಸ್ಯವನ್ನು ಭೇದಿಸುವಲ್ಲಿ ಪ್ರತಿಭಾ ಸಿದ್ಧಹಸ್ತಳು. ಯಾವ ಪ್ರತಿಭಾ ಎಂದು ಆಲೋಚನೆ ಮಾಡುತ್ತಿದ್ದೀರಾ? ಹಾಗಾದರೆ ಇಲ್ಲಿ ಕೇಳಿ… ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನವೀನ್ ಕೃಷ್ಣ ನಿರ್ದೇಶನದ ಪತ್ತೆದಾರಿ ಪ್ರತಿಭಾ ಧಾರಾವಾಹಿಯಲ್ಲಿ ಪ್ರತಿಭಾ ಆಗಿ ಮಿಂಚಿತ್ತಿರುವ ಶರ್ಮಿಳಾರನ್ನು ಕಂಡಾಗ ತನಗೂ ಇಂತ ಸೊಸೆ, ಹೆಂಡತಿ, ಅಕ್ಕ ಬೇಕು ಎಂಬ ಆಲೋಚನೆ ಪ್ರತಿಯೊಬ್ಬರಲ್ಲೂ ಮೂಡದಿರದು! ಸಾಮಾನ್ಯ ಗೃಹಿಣಿಯೊಬ್ಬಳು ತನ್ನೆಲ್ಲಾ ಮನೆ ಕೆಲಸದೊಂದಿಗೆ ಪತ್ತೆದಾರಿಕೆಯನ್ನು ಅದು ಹೇಗೆ ಸರಿದೂಗಿಸಿಕೊಂಡು ಹೋಗುತ್ತಾಳೆ ಎಂಬುದೇ ಕಥೆಯ ಸಾರಾಂಶ.

ಈಗಾಗಲೇ ನಟನೆಯ ಮೂಲಕ ಮನೆ ಮಾತಾಗಿರುವ ಶರ್ಮಿಳಾ ಚಂದ್ರಶೇಖರ್ ಕೂಚುಪುಡಿ ನೃತ್ಯಗಾರ್ತಿಯೂ ಹೌದು. ದಿ. ಲಕ್ಷ್ಮೀ ರಾಜಾಮಣಿ ಅವರಿಂದ ಕೂಚುಪುಡಿ ನೃತ್ಯವನ್ನು ಕಲಿತಿರುವ ಇವರು ಸುಮಾರು ಇಪ್ಪತ್ತು ವರುಷಗಳ ಕಾಲ ಕೂಚುಪುಡಿ ನೃತ್ಯವನ್ನು ಅಭ್ಯಾಸ ಮಾಡಿರುತ್ತಾರೆ. ಮಾತ್ರವಲ್ಲ 678 ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ನೃತ್ಯಗಾರ್ತಿಯಾಗಿದ್ದ ಶರ್ಮಿಳಾ ಬಣ್ಣದ ಲೋಕಕ್ಕೆ ಕಾಲಿಡಲು ಕೂಡಾ ಇದೇ ನೃತ್ಯ ಕಾರಣ ಎಂದರೆ ನಂಬಲೇ ಬೇಕು! ಹೌದು. ಸೀತೆ ಧಾರಾವಾಹಿಗೆ ಕ್ಲಾಸಿಕ್ ಡ್ಯಾನ್ಸರ್ ಗಳ ಹುಡುಕಾಟ ನಡೆಯುತ್ತಿತ್ತು. ಆ ಸಮಯದಲ್ಲಿ ತನ್ನ ಗೆಳತಿ ಹೇಳಿದುದನ್ನು ಕೇಳಿ ಆಡಿಶನ್ ಗೆ ಹೋದ ಶರ್ಮಿಳಾ ಆಯ್ಕೆಯೂ ಆದರು. ಪೌರಾಣಿಕ ಧಾರಾವಾಹಿ ಸೀತೆಯ ಮೂಲಕ ತಮ್ಮ ಕಿರುತೆರೆ ಪ್ರಯಾಣವನ್ನು ಆರಂಭಿಸಿದ ಶರ್ಮಿಳಾ ಮುಂದೆ ಪಲ್ಲವಿ ಅನುಪಲ್ಲವಿ, ಪರಿಣೀತಾ ಧಾರಾವಾಹಿಯಲ್ಲಿ ನಟಿಸಿರುತ್ತಾರೆ. ಮುಂದೆ ಪರಭಾಷೆಗೆ ಕಾಲಿಟ್ಟ ಮಹಾನಗರಿಯ ಮುದ್ದು ಮುಖದ ಚೆಲುವೆ ತೆಲುಗಿನ ನಾ ಮೊಗುಡು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಸದ್ಯ ಮನಸು ಮಮತಾ ಧಾರಾವಾಹಿಯಲ್ಲಿ ನಟಿಸುತ್ತಿರುವ ಇವರಿಗೆ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳುವ ಬಯಕೆ.

ಪಲ್ಲವಿ ಅನುಪಲ್ಲಿವಿ ಧಾರಾವಾಹಿಯ ಅಭಿನಯಕ್ಕೆ ಪ್ರಶಸ್ತಿಯನ್ನು ಪಡೆದಿರುವ ಶರ್ಮಿಳಾ ‘’ ನಾನು ನಟನಾ ಲೋಕಕ್ಕೆ ಬರುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನೃತ್ಯಗಾರ್ತಿಯಾಗಿ ಅಥವಾ ಉದ್ಯೋಗದಲ್ಲಿ ಮುಂದುರಿಯುತ್ತೇನೆ ಎಂದುಕೊಂಡಿದ್ದೆ’’ ಎನ್ನುತ್ತಾರೆ. ನಟನೆ ನನಗೆ ತಾಳ್ಮೆಯ ಪಾಠ ಕಲಿಸಿದೆ ಎನ್ನುವ ಇವರಿಗೆ ಹಾಲಿವುಡ್ ನಟಿ ಕ್ಯಾಮರನ್ ಡಯಾಜ್ ಸ್ಫೂರ್ತಿ.

ಬಿಡುವಿನ ಸಮಯದಲ್ಲಿ ಪುಸ್ತಕ ಓದುತ್ತಾ, ಸಿನಿಮಾ ನೋಡುತ್ತಾ ಕಾಲ ಕಳೆಯುವ ಶರ್ಮಿಳಾ ಮನೆಯವರ ಪೂರ್ಣ ಪ್ರಮಾಣದ ಬೆಂಬಲವಿದೆ.

ಅನಿತಾ ಬನಾರಿ

 

Tags