ಸಂದರ್ಶನ

ನಮ್ಮೊಂದಿಗೆ ‘ತಾರಕಾಸುರನ’ ಮನದಾಳದ ಮಾತು, ಕಥೆ!

ವೆಂಕಟ ಲಕ್ಷ್ಮಿ ಅರ್ಪಿಸುವ  ಓಂ ಬಾಲಾಜಿ ಎಂಟರ್ಟೈನರ್ಸ್ ಬ್ಯಾನರ್ಸ್ ಅಡಿಯಲ್ಲಿ ಕನ್ನಡದ ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದಲ್ಲಿ ಉದಯೋನ್ಮುಖ ನಟ ವೈಭವ್ ಅವರ ಪರಿಚಯದೊಂದಿಗೆ ‘ತಾರಕಾಸುರ’ ನ್ನುವ ಶೀರ್ಷಿಕೆಯೊಂದಿಗೆ ನೂತನ ಸಿನಿಮಾ ವಿಶಿಷ್ಟ ಕಥೆಯೊಂದಿಗೆ ಚಂದನವನದಲ್ಲಿ ಸದ್ದು ಮಾಡಲು ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬಾಲ್ಕಾನಿಯೊಂದಿಗೆ ನೀಡಿದ ಸಂದರ್ಶನದಲ್ಲಿ ಈ ಚಿತ್ರದ ನಾಯಕ ನಟ ವೈಭವ್ ಅವರ ಸಿನಿಮಾದೊಂದಿಗಿನ ಮನದಾಳದ ಮಾತುಗಳಿಗೆ ಅಕ್ಷರದ ರೂಪ ಕೊಟ್ಟು ತಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.

ನಟ ವೈಭವ್ ಅವರ ಸಿಂಪ್ಲಿಸಿಟಿಯ ನಡುಗೆ ನಮ್ಮ ಬಾಲ್ಕಾನಿಯ ಮೆಟ್ಟಿಲೇರಿ ಬರುವುದನ್ನು ಕುತೂಹಲಕ್ಕೆ ಕೇಳಿದ ಪ್ರಶ್ನೆಗಳಿಗೆ ಅವರ ಪ್ರತಿಕ್ರಿಯೆ ಹಾಗು ಅವರಲ್ಲಿರುವ ಸಿನಿಮಾದೊಂದಿಗಿನ ವಿಷನ್ ನೋಡಿ ನಮಗೆ ಖಂಡಿತವಾಗಿಯೂ ಆಶ್ಚರ್ಯವಾಗಿದೆ. ಏನಪ್ಪಾ ಇಷ್ಟೊಂದು ಹೇಳ್ತಿದ್ದಾರೆ. ಅಸಲಿಗೆ ವಿಷಯ ಏನು ಎನ್ನುವ ನಿಮ್ಮ ಕುತೂಹಲಕ್ಕೆ ವೈಭವ್ ಅವರ ಉತ್ತರಗಳು……

  • ನೀವು ಈ ಸಿನಿಮಾರಂಗಕ್ಕೆ ಬರಲು ಮೂಲ ಕಾರಣ?

ನಾನು ಚಿಕ್ಕಂದಿನಿಂದ ಸಿನಿಮಾಗಳನ್ನು ನೋಡುತ್ತಾ ಬೆಳೆದವನು ಅನೇಕ ದಿಗ್ಗಜ ಕಲಾವಿದರು ತೆರೆಯ ಮೇಲೆ ತಮ್ಮನ್ನು ತಾವು ಪ್ರಸ್ತುತ ಪಡಿಸುತ್ತಿರುವ ರೀತಿ ಹಾಗೂ ಅವರ ನೈತಿಕ ಜೀವನ ನನ್ನನ್ನು ಈ ನಿಟ್ಟಿನಲ್ಲಿ ಕನಸು ಕಾಣುವಂತೆ ಮಾಡಿತು. ಈ ನನ್ನ ಕನಸು ನನ್ನಲ್ಲೇ ಕಮರಿ ಹೋಗದಿರಲು ನನ್ನ ತಂದೆ ನನ್ನ ಕನಸಿಗೆ ರೆಕ್ಕೆ ಕಟ್ಟಿ ನನ್ನ ಪಾಡಿಗೆ ನನ್ನನ್ನು ತಾರಾಲೋಕದಲ್ಲಿ ಹಾರಾಡುವ ಸ್ವತಂತ್ರ ಕೊಟ್ಟು ಪೋಷಿಸಿದ್ದಾರೆ ಎಂದು ಹೇಳಲು ಹೆಮ್ಮೆ ಪಡುತ್ತೇನೆ.

  • ಸಿನಿಮಾಗೆ ಬರುವ ನಿಮ್ಮ ಕನಸನ್ನು ನನಸಾಗಿಸುವ ನಿರ್ಧಾರದ ತಯಾರಿ ಹೇಗೆ ನಡೆದಿದೆ?

ಅಯ್ಯೋ ನಾನು ಅಂದುಕೊಂಡಷ್ಟು ಸುಲಭವಲ್ಲ, ನನ್ನ ಹಂಬಲದಂತೆ ನನ್ನನ್ನು ನಾನು ಕ್ಯಾಮರದ ಮುಂದೆ ನಿಂತು ಸಮಾಜದಲ್ಲಿ ಯುವಕರು ವಿವಿಧ ರೀತಿಯ ಭಾವನೆಗಳಿಗೆ ಜೀವ ತುಂಬಿ ಪಾತ್ರ ಪೋಷಿಸುವುದು ಎಂದರೇ ಅದಕ್ಕೆ ಪೂರ್ವ ತಯಾರಿ ಹಾಗು ಶಿಸ್ತಿನ ಕ್ರಮ ಅತ್ಯವಶ್ಯಕ  ನಿಟ್ಟಿನಲ್ಲಿ ಆಂಧ್ರಪ್ರದೇಶದ ಖ್ಯಾತ ನಟರಾದ ಪವನ್ ಕಲ್ಯಾಣ್, ಪ್ರಭಾಸ್, ಮಹೇಶ್ ಬಾಬುರಂತವರು ಪಳಗಿರುವ ಗರಡಿಯಾದ ವಿಶಾಖಪಟ್ಟಣದ ಸತ್ಯಾನಂದ ಯಾಕ್ಟಿಂಗ್ ಇನ್ಸ್ಟ್ಯೂಟ್ ನಲ್ಲಿ ತರಬೇತಿ ಪಡೆದು ಸುಮಾರು ಎರಡು ವರ್ಷಗಳಿಂದ  ಕಥೆಗೆ ತಕ್ಕ ತಯಾರಿ ನಡೆಸುತ್ತಾ ನಿರ್ದೇಶಕರ ಸಲಹೆಗಳಂತೆ ನನ್ನನ್ನು ನಾನು ಪಳಗಿಸಿಕೊಂಡಿದ್ದೇನೆ. ಒಟ್ಟಿನಲ್ಲಿ ಹೇಳುವುದಾದರೆ ಕನಸುಕಾಣುವುದು ಸುಲಭ ಆದರೆ ಅದನ್ನು ನನಸಾಗಿಸಲು ಶ್ರಮ ಅವಶ್ಯಕ ಹಾಗೂ ನನಗೆ ಪ್ರಾಕ್ಟಿಕಲ್ ಆಗಿ ಅನುಭವವಾಗಿದೆ.

  • ಈ ಸಿನಿಮಾಗೆ ಸಂಭಂದಿಸಿದಂತೆ ಚಿತ್ರಕಥೆ ಹಾಗೂ ನಿರ್ದೇಶಕರ ಕುರಿತಾಗಿ ನಿಮ್ಮ ಅಭಿಪ್ರಾಯವೇನು?

ಈ ವಿಚಾರವನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ನನಗೆ ತುಂಬಾ ಖುಷಿಯಾಗುತ್ತದೆ. ಕಾರಣ ‘ರಥಾವರ’ ಸಿನಿಮಾದಂತಹ ದೊಡ್ಡ ಹಿಟ್ ಸಿನಿಮಾ ಕೊಟ್ಟ ಒಬ್ಬ ಸ್ಟಾರ್ ಡೈರೆಕ್ಟರ್ ನನಗೆ ಸಿನಿಮಾ ಕೊಡುತ್ತಿದ್ದಾರೆ ಎಂದರೆನೇ ದೊಡ್ಡ ವಿಷಯ! ನಿಜವಾಗಲೂ ನನಗೆ ಇದು ಒಂದು ರೀತಿಯ ಚಾಲೆಂಜಿಂಗ್ ಟಾಸ್ಕ್ ಎನಿಸಿತ್ತು ಈ ನಿಟ್ಟಿನಲ್ಲಿ ಹೇಳುವುದಾದರೆ ಸಾಮಾನ್ಯವಾಗಿ ಕೆಲ ನಿರ್ದೇಶಕರು ಸ್ಟಾರ್ ನಟರಿಗೆ ಸಿನಿಮಾ ಮಾಡಿ ಸಕ್ಸಸ್ ಕನಸು ಕಾಣುತ್ತಾರೆ ಆದರೆ ಚಂದ್ರಶೇಖರ್ ಬಂಡಿಯಪ್ಪ ಮಾತ್ರ ನನ್ನಂತಹ ಯುವ ಪ್ರತಿಭೆಯನ್ನು ನಂಬುವುದರ ಮೂಲಕ ನನ್ನನ್ನು ಸಿನಿಮಾ ಕತೆಗೆ ತಕ್ಕಂತೆ ಮೌಲ್ಡ್ ಮಾಡಿದ್ದಾರೆ ಎಂದು ಹೇಳುತ್ತೇನೆ. ಜೊತೆಗೆ ನಿರ್ದೇಶಕರಾದ ಚಂದ್ರಶೇಖರ್ ಬಂಡಿಯಪ್ಪ ಅವರು ಮಗುವಿಗೆ ಶಿಕ್ಷಣ ನೀಡುವ ಹಾಗೆ ನನಗೆ ಅವರ ಅನುಭವಗಳನ್ನು ಧಾರೆ ಎರೆದಿದ್ದಾರೆ ಎಂದು ಧೈರ್ಯವಾಗಿ ಹೇಳುತ್ತೇನೆ.

ಮತ್ತು ಚಿತ್ರಕಥೆಗೆ ಸಂಭಂದಿಸಿದಂತೆ ಹೇಳುವುದಾದರೆ ಶೀರ್ಷಿಕೆಯೇ ಹೇಳುವಹಾಗೆ ‘ತಾರಕಾಸುರ’ ಎಂದರೆ ತಾರಕ+ಅಸುರ(ತಾರಕ ಎಂದರೆ ತಾರೆಗಳು,ಅಸುರ ಎಂದರೆ ರಾಕ್ಷಸ)  ಹೆಸರಿನಲ್ಲಿ ಎರಡು ರೀತಿಯ ಕ್ಯಾರೆಕ್ಟರ್ ಕಾಣುತ್ತವೆ. ಪುರಾಣಗಳ ಪ್ರಕಾರ ದೇವಾನು ದೇವತೆಗಳು ರಾಕ್ಷಸರನ್ನು ಸಂಹರಿಸುವುದರ ಮೂಲಕ ಜನರ ಭಕ್ತಿ ನಂಬಿಕೆಗಳಿಗೆ ಆಧಾರಸ್ಥಂಭವಾಗಿ ನಿಲ್ಲುತ್ತಿದ್ದರು. ಇದೇ ರೀತಿಯ ಸೀಕ್ವೆನ್ಸ್ ಇರುವ  ಕಥೆಯಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ದೇವರ ಹಾಗೆ ಇರುವ ಕ್ಯಾರೆಕ್ಟರ್ ಹಾಗೂ ರಾಕ್ಷಸನ ರೀತಿಯಲ್ಲಿ ವರ್ತಿಸುವ ಪಾತ್ರ ಖಂಡಿತವಾಗಿಯೂ ಎಲ್ಲರಲ್ಲಿಯೂ ಇರುತ್ತದೆ. ಈ ನಿಟ್ಟಿನಲ್ಲಿ ಒಂದೇ ಪಾತ್ರದಲ್ಲಿ ಮೂರು ಶೇಡ್ಗಳನ್ನು ಸೃಷ್ಟಿಸಿ ಇದಕ್ಕೆ ಅನುಸಾರವಾಗಿ ಭೂತ, ವರ್ತಮಾನ, ಭವಿಷ್ಯದ ಸನ್ನಿವೇಶಗಳಿಗೆ ಆಧಾರವಾಗಿ ಕೌಟುಂಬಿಕ ಹಿನ್ನೆಲೆ, ಪ್ರೀತಿ-ಪ್ರೇಮ, ಸ್ನೇಹ ,ಹಾಸ್ಯ, ಪ್ರತಿಕಾರದ ಹೀಗೆ ಹಲವಾರು ಸೀಕ್ವೆನ್ಸ್ ಗಳನ್ನು ತುಂಬಾ ಭಾವಾನಾತ್ಮಕವಾಗಿ ಚಿತ್ರಿಸಿದ್ದಾರೆ. ಒಂದು ಹೇಳುವುದಾದರೆ ಈ ಚಿತ್ರವನ್ನು ನೋಡುತ್ತಿರುವ ಪ್ರತಿಯೊಬ್ಬ ಪ್ರೇಕ್ಷಕನು ತಮ್ಮ ಜೀವನದ ಮಾನಸಿಕವಾದ ಕೆಲವು ಕ್ಷಣಗಳನ್ನು ತೆರೆಯ ಮೇಲೆ ಖಂಡಿತವಾಗಿ ನೋಡುತ್ತಾನೆ ಜೊತೆಗೆ ಫೀಲ್ ಮಾಡುತ್ತಾನೆ ಎನ್ನುವ ನಂಬಿಕೆ ನನಗೆ ಇದೆ.

  • ಈ ಸಿನಿಮಾದಲ್ಲಿ ನಟಿಸಿರುವ ನಟ-ನಟಿಯರ ಕುರಿತು ಹಾಗೂ ನಾಯಕಿ ಮಾನ್ವಿತಾ ಹರೀಶ್ ಅವರ ಕುರಿತಾಗಿ ನಿಮ್ಮ ಅಭಿಪ್ರಾಯ?

ತುಂಬಾ ಆರೋಗ್ಯಕರವಾದ ಅನುಭವಗಳು ಚಿತ್ರೀಕರಣದ ಸಮಯದಲ್ಲಿ ನಾವೆಲ್ಲರೂ ಫ್ಯಾಮಿಲಿಯ ಹಾಗೆ ಬೆರೆತು ತುಂಬಾ ಭಾವನಾತ್ಮಕ ಕ್ಷಣಗಳನ್ನು ನಾನು ಅನುಭವಿಸಿದ್ದೇನೆ. ವಿಶೇಷವಾಗಿ ಹೇಳುವುದಾದರೆ ಹಾಲಿವುಡ್ ನಟ ಡ್ಯಾನಿ ಅವರು ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗಿನ ಅನುಭವ ಅಭೂತಪೂರ್ವವಾದದ್ದು  ಇವರನ್ನು ಸೇರಿದಂತೆ ಸಾಧು ಕೋಕಿಲ ಹಾಗೂ ಮಾನ್ವಿತಾ ಹರೀಶ್ ಅವರು ನಟನೆಗೆ ಸಂಭಂದಿಸಿದಂತೆ ತಮಗಾಗಿರುವ ಅನುಭವಗಳನ್ನು ಧಾರೆ ಎರೆದಿದ್ದಾರೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಲವಾರು ಆರೋಗ್ಯಕರವಾದ ಬೆಳವಣಿಗೆಗಳನ್ನು ಕಂಡಿದ್ದೇನೆ.

  • ಕೊನೆಯದಾಗಿ ಸಿನಿಮಾ ಕುರಿತಾಗಿ ಪ್ರೇಕ್ಷಕರಿಗೆ ನೀವೇನು ಹೇಳುವಿರಿ?.

ಬರುವ ಜೂನ್ ತಿಂಗಳಲ್ಲಿ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ‘ತಾರಕಾಸುರ’ ತೆರೆ ಕಾಣಲಿದೆ . ಖಂಡಿತವಾಗಿಯೂ ಉತ್ತಮ ಸಾಮಾಜಿಕ ಹಿನ್ನೆಲೆ ಇರುವ ಸಿನಿಮಾ. ತಾವೆಲ್ಲರೂ ಈ ಯುವ ನಟನ ನಟನೆಯನ್ನು ಥಿಯೇಟರ್ ನಲ್ಲಿ ನೋಡುವುದರ ಮೂಲಕ ಆಶಿರ್ವದಿಸಿ ಇನ್ನು ಹಲವಾರು ಸಿನಿಮಾಗಳಲ್ಲಿ ನಟಿಸುವ ಹುರುಪು ನೀಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಹಾಗು ನಿಮ್ಮೊಂದಿಗೆ ಈ ವೈಭವ್ ಸದಾ ಚಂದನವನದಲ್ಲಿ ಮಿನುಗುವ ತಾರೆಯಾಗಿ ಪ್ರಜ್ವಲಿಸಲು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವುದರ ಮೂಲಕ ಹರಸಿ ಹಾರೈಸಿ ಎಂದು ಕೇಳಿಕೊಳ್ಳುತ್ತೇನೆ.

ಸುಮನ್@ಬಾಲ್ಕಾನಿ ನ್ಯೂಸ್ 

Tags