ಬಾಲ್ಕನಿಯಿಂದಸಂದರ್ಶನ

ಮಲೆನಾಡ ಹುಡುಗಿಯ ಬಣ್ಣದ ಪಯಣ

ಬೆಂಗಳೂರು, ಮಾ.25:

ಸದಾ ಕಾಲ ನವನವೀನ ಕಾರ್ಯಕ್ರಮಗಳೊಂದಿಗೆ ಜನರ ಮನ ಸೂರೆಗಳ್ಳುತ್ತಿರುವ ವಾಹಿನಿಗಳ ಪೈಕಿ ಝೀ ಕನ್ನಡವೂ ಒಂದು. ನಾನಾ ಬಗೆಯ ಧಾರಾವಾಹಿಗಳು, ರಿಯಾಲಿಟಿ ಶೋಗಳಿಂದ ಮನೆ ಮಾತಾಗಿರುವ ಸದ್ಯ ಹೊಚ್ಚ ಹೊಸ ಧಾರಾವಾಹಿಗಳ ರಸದೌತಣವನ್ನು ವೀಕ್ಷಕರಿಗೆ ಉಣಬಡಿಸುತ್ತದೆ. ಅದರಲ್ಲಿ ಸುಬ್ಬುಲಕ್ಷ್ಮಿ ಸಂಸಾರವೂ ಒಂದು. ಸುಬ್ಬುಲಕ್ಷ್ಮಿ ಸಂಸಾರದಲ್ಲಿ ಗ್ಯಾರಿ ಗ್ಯಾರಿ ಎಂದು ಓಡಾಡುತ್ತಾ ಹೈ ಫೈ ಜೀವನವನ್ನೇ ಬಯಸುವ ಶನಯ ಪಾತ್ರ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಮುದ್ದು ಮುಖದ ಚೆಲುವೆಯ ಕುರಿತು ಮುದ್ದಾದ ಸಂದರ್ಶನ ನಿಮಗಾಗಿ…

ಪರಿಚಯ?

ನನ್ನ ಹೆಸರು ಅಪೂರ್ವ. ಆದರೆ ಇದೀಗ ನಾನು ಹೆಸರನ್ನು ಸಮೀಕ್ಷಾ ಎಂದು ಬದಲಾಯಿಸಿಕೊಂಡಿದ್ದೇನೆ.

ಕಿರುತೆರೆಯ ಪಯಣವನ್ನು ಸ್ವಲ್ಪ ವಿವರಿಸುತ್ತೀರಾ?

ಮೀನಾಕ್ಷಿ ಮದುವೆ ನನ್ನ ಮೊದಲ ಧಾರಾವಾಹಿ. ಅದರಲ್ಲಿ ನಾನು ಮೀನಾಕ್ಷಿ ಪಾತ್ರ ಮಾಡಿದ್ದೆ. ಮೊದಲಿನಿಂದಲೂ ನಟನೆಯತ್ತ ವಿಶೇಷ ಒಲವು ಇದ್ದ ನನಗೆ ಮೊದಲ ಆಡಿಶನ್ ನಲ್ಲಿ ಅವಕಾಶ ಸಿಕ್ಕಿತ್ತು. ಮಾತ್ರವಲ್ಲ ಅದು ಕೂಡಾ ನಾಯಕಿ ಪಾತ್ರ. ತುಂಬಾ ಖುಷಿಯಾಗುತ್ತಿದೆ.

ಮೊದಲ ಬಾರಿ ಕ್ಯಾಮೆರಾ ಮುಂದೆ ನಿಂತಾಗ?

ಸ್ವಲ್ಪ ಭಯವಾಯ್ತು. ನಾನು ಉಳಿದವರು ಅಭಿನಯಿಸುವಾಗ ತುಂಬಾ ಗಮನವಿಟ್ಟು ನೋಡುತ್ತಿದ್ದೆ. ಯಾವ ಸನ್ನಿವೇಶಕ್ಕೆ ಅವರು ಯಾವ ತರಹ ನಟಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೆ. ಮೊದಮೊದಲು ಕಷ್ಟವಾಗ್ತಿತ್ತು. ಆದರೆ ಸೀನಿಯರ್ ಕಲಾವಿದರು ಹೇಳಿಕೊಟ್ಟರು.

ಶನಯ ಬಗ್ಗೆ ಹೇಳೋದಾದ್ರೆ?

ಸುಬ್ಬುಲಕ್ಷ್ಮಿ ಸಂಸಾರದಲ್ಲಿ ನನ್ನದು ಹೊಸ ತಲೆಮಾರಿನ ಹುಡುಗಿ ಪಾತ್ರ ಅನ್ನಬಹುದು. ಶನಯಗೆ ದುಡ್ಡು ವೈಭೋಗ ಬಿಟ್ಟರೆ ಬೇರೇನೂ ಬೇಡ. ತನ್ನ ಅಗತ್ಯಗಳನ್ನು ಪೂರೈಸುವ ಸಿಕ್ಕಿದರೆ ಸಾಕು. ಇಲ್ಲಿ ಗುರುಮೂರ್ತಿ ಶನಯಳಿಗೆ ಬೇಕಾದ ಹಾಗೆ ನಡೆದುಕೊಳ್ಳುವ ಕಾರಣ ಗ್ಯಾರಿ ಇಷ್ಟ.

ಸಮೀಕ್ಷಾ ಶನಯಳಾಗಿ ಬದಲಾದಾಗ?

ಮೊದಮೊದಲು ತುಂಬಾ ಅಂದ್ರೆ ತುಂಬಾನೇ ಕಷ್ಟ ಆಗ್ತಿತ್ತು. ಯಾಕೆಂದರೆ ವೈಯಕ್ತಿಕವಾಗಿ ನಾನು ಇಂತಹ ವ್ಯಕ್ತಿತ್ವವನ್ನು ವಿರೋಧಿಸುವವಳು. ಎಷ್ಟೋ ಸಲ ನಾನು ಈ ಪಾತ್ರದಲ್ಲಿ ಅಭಿನಯಿಸಬೇಕಾ ಎಂದು ಅಂದುಕೊಂಡಿದ್ದೇನೆ. ಪಾತ್ರ ವಿಭಿನ್ನವಾದ ಕಾರಣ ಒಪ್ಪಿಕೊಂಡೆ.

ಕನಸಿನ ಪಾತ್ರ?

ನನಗೆ ಇಂತಹದ್ದೇ ಪಾತ್ರದಲ್ಲಿ ನಟಿಸಬೇಕು ಎಂಬ ಆಕಾಂಕ್ಷೆಯಿಲ್ಲ. ಕಲಾವಿದೆ ಎಂದು ಗುರುತಿಸಿಕೊಂಡ ಮೇಲೆ ಬೇರೆ ಬೇರೆ ಪಾತ್ರಗಳನ್ನು ನಿಭಾಯಿಸಲು ತಯಾರಿರಬೇಕಾಗುತ್ತದೆ. ಹಾಗೆ ನಾನೂ ಕೂಡ. ನಾನು ನಟಿಸುವ ಪಾತ್ರ ಜನರಿಗೆ ತಲುಪಬೇಕು ಮಾತ್ರವಲ್ಲ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು.

ನಟನಾ ಕ್ಷೇತ್ರದಲ್ಲಿ ನಿಮಗೆ ಸ್ಫೂರ್ತಿ?

ನನಗೆ ನಿರ್ದೇಶಕಿ ಸ್ವಪ್ನಾ ಕೃಷ್ಣ ಅವರೇ ಸ್ಫೂರ್ತಿ ಅಂಥ ಹೇಳ್ಬಹುದು. ಶನಯ ಪಾತ್ರ ನೆಗೆಟಿವ್ ಆಗಿದ್ದು ನಾನು ಅಭಿನಯಿಸೋದಕ್ಕೆ ತುಂಬಾ ಹಿಂಜರಿದಿದ್ದೆ. ಆಗ ಸ್ವಪ್ನಾ ಅವರೇ ಧೈರ್ಯ ಹೇಳಿದರು. ರಾವಣ ಇಲ್ಲ ಅಂದಿದ್ರೆ ರಾಮನ ಬೆಲೆ ಲೋಕಕ್ಕೆ ಗೊತ್ತಾಗ್ತಾ ಇರ್ಲಿಲ್ಲ ಎನ್ನುವ ಅವರ ಒಂದು ಮಾತು ನನ್ನನ್ನು ಶನಯಳಾಗುವಂತೆ ಪ್ರೇರೇಪಿಸಿತು.

ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯ?

ವೀ ಆರ್ ಬ್ಲೆಸ್ಡ್ ಟು ಬೀ ಆಕ್ಟರ್.. ಅದೆಷ್ಟು ಪಾತ್ರಗಳ ಒಳಹೊಕ್ಕು, ಅದನ್ನು ಅರಿತು, ಅದಕ್ಕೆ ಜೀವ ತುಂಬಲು ಕಲಾವಿದನಿಗೆ ಮಾತ್ರ ಸಾಧ್ಯ. ನನಗೆ ಆ ಅವಕಾಶ ಸಿಕ್ಕಿದೆ.

ಮುಂದಿನ ಯೋಜನೆ?

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘99’ರಲ್ಲಿ ನಟಿಸಿದ್ದೇನೆ. ಆದರೆ ಸದ್ಯಕ್ಕೆ ನಾನು ಸುಬ್ಬುಲಕ್ಷ್ಮಿಯಲ್ಲಿ ಬ್ಯುಸಿ. ಮುಂದೆ ನಟನಾ ರಂಗದಲ್ಲೇ ಮುಂದುವರಿಯುವ ಬಯಕೆ. ಮತ್ತೂ ಮುಂದುವರಿಯುತ್ತೇನೆ ಎಂಬ ವಿಶ್ವಾಸವೂ ನನಗಿದೆ.

ಬಣ್ಣದ ಲೋಕದ ನಂಟಿನಿಂದ ನೀವು ಕಲಿತದ್ದು?

ನಾನು ಸುಮಾರು ವಿಷಯಗಳನ್ನು ಕಲಿತಿದ್ದೇನೆ. ಮುಖ್ಯವಾಗಿ ಸಮಯದ ಬೆಲೆಯ ಬಗ್ಗೆ ಇದೀಗ ತಿಳಿದಿದೆ. ಮತ್ತೆ ಯಾವ ರೀತಿ ಮಾತನಾಡಬೇಕು, ಹೇಗಿರಬೇಕು ಎಂಬುದನ್ನು ತಿಳಿದುಕೊಂಡೆ.

ಮನೆಯವರ ಬೆಂಬಲ ಹೇಗಿದೆ?

ಅಪ್ಪ ರಾಮು, ಅಮ್ಮ ನಂದಿನಿ, ತಂಗಿ ಅದಿತಿಯ ಸಹಕಾರದಿಂದಲೇ ನಾನಿಂದು ಈ ರಂಗದಲ್ಲಿ ಯಶಸ್ವಿಯಾಗಿ ಮಿಂಚಲು ಕಾರಣ.

ಇಂತಿಪ್ಪ ಮುದ್ದು ಕಲಾವಿದೆಗೆ ನಮ್ಮ ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

– ಅನಿತಾ ಬನಾರಿ

ನಿರ್ದೇಶನದತ್ತ ಪುಟ್ಟ ಗೌರಿಯ ರಂಜನಿ

#balkaninews #kannadaserialactresssamiksha #actresssamiksha #subbalakshmiserial #meenakshimaduvekannadaserial

Tags