ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಕಥೆಯೊಂದು ಶುರುವಾಗಿದೆ: ಇದು ನಮ್ಮ ನಿಮ್ಮ ನಡುವಿನ ಕಥಾನಕ

ನಟ ದಿಗಂತ್ ‘ಕಥೆಯೊಂದು ಶುರುವಾಗಿದೆ’ ಚಿತ್ರದ ಮೂಲಕ ಮರಳಿ ಬಂದಿದ್ದಾರೆ. ನಿರ್ದೇಶಕ ಸೆನ್ನಾ ಹೆಗ್ಡೆ ಅವರ ನಿರೂಪಣೆ ನಿಧಾನವೆನಿಸಿದರೂ ಮನಸೆಳೆಯುತ್ತದೆ. ಇದೊಂದು ಕಮರ್ಶಿಯಲ್ ಚಿತ್ರವಲ್ಲದಿದ್ದರೂ ಮನಮುಟ್ಟುವ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಅಂಶಗಳನ್ನು ಒಳಗೊಂಡಿದೆ.

ಕಥಾಹಂದರ

ನಾಯಕ ತರುಣ್(ದಿಗಂತ್)ನಿಗೆ ವಿದೇಶದಲ್ಲಿ ಒಳ್ಳೆಯ ಕೆಲಸ,ಕೈ ತುಂಬ ಸಂಬಳ ಇದ್ದರೂ, ತರುಣ್ ದಿನ ನಿತ್ಯ ಅದೇ ಕೆಲಸ ಮಾಡುತ್ತಾ ಬೇಸರಗೊಂಡು ತನ್ನೂರಿಗೆ ಬರುತ್ತಾನೆ. ಫಾರಿನ್ ನಲ್ಲಿಯೇ ಬದುಕಬೇಕು ಎನ್ನುವ ಪ್ರೇಯಸಿಯನ್ನು ಕೂಡ ಇದೇ ಕಾರಣಕ್ಕೆ ದೂರ ಮಾಡಿಕೊಳ್ಳುತ್ತಾನೆ. ಬಳಿಕ ತನ್ನ ಊರಿಗೆ ಬಂದು ತನ್ನದೇ ಆದ ರೆಸಾರ್ಟ್ ತೆರೆಯುತ್ತಾನೆ. ಆರಂಭದಲ್ಲಿ ಎಲ್ಲ ಚೆನ್ನಾಗಿರುತ್ತದೆ. ಆದರೆ, ಬರಬರುತ್ತಾ ರೆಸಾರ್ಟ್ ಖಾಲಿ ಆಗುತ್ತದೆ. ಈ ವೇಳೆಗೆ ಆತನ ರೆಸಾರ್ಟ್ ಗೆ ನಾಯಕಿ ತಾನಿಯಾ (ಪೂಜಾ ದೇವಾರಿಯಾ) ಬರುತ್ತಾಳೆ. ಇಲ್ಲಿಂದ ಇಬ್ಬರ ನಾಲ್ಕು ದಿನದ ಕಥೆ ಶುರು ಆಗುತ್ತದೆ.

ಮೂವರು ಜೋಡಿಗಳು

ಈ ಚಿತ್ರದಲ್ಲಿ ಒಟ್ಟು ಮೂರು ಜೋಡಿಗಳು ಕಂಡು ಬರುತ್ತವೆ. ಮಕ್ಕಳಿಲ್ಲದ ಮೂರ್ತಿ (ಬಾಬು ಹಿರಣ್ಣಯ್ಯ) ಮತ್ತು ರಾಧಾ (ಅರುಣಾ ಬಾಲರಾಜ್) ದಂಪತಿಗೆ ಮಗನಂತಿರುವ ದಿಗಂತ್ ಅವರ ಕಥೆ ಗಮನ ಸೆಳೆಯುತ್ತದೆ. ಅವರಂತೆಯೇ ಬರುವ ಮತ್ತೊಂದು ಜೋಡಿ ಆಕರ್ಷಕವೆನಿಸುತ್ತದೆ. ಇಲ್ಲಿ ಮೂರು ಜೋಡಿ ಬೇರೆ ಬೇರೆ ವಯೋಮಾನದವರು. ಅವರಿಗೆ ಅವರದೇ ಆದಂತ ಕನಸು, ನಿರೀಕ್ಷೆ, ಕಷ್ಟ-ಸುಖಗಳು ಇರುತ್ತವೆ. ಜೊತೆಗೆ ಈ ಮೂವರ ಜೀವನದಲ್ಲೊಂದು ಹೊಸ ತಿರುವು ಸಿಗುತ್ತದೆ. ಮುಂದೇನಾಗುತ್ತದೆ ಎಂಬುದನ್ನು ತೆರೆಯ ಮೇಲೆ ನೋಡಿದರೆ ಚಂದ.

ಪಕ್ಕಾ ಕ್ಲಾಸ್ ಸಿನಿಮಾ

ಹೌದು, ಚಿತ್ರದ ನಿರೂಪಣೆಯು ನಿಧಾನವೆನಿಸಿದರೂ ಮನಸೆಳೆಯುತ್ತದೆ. ನಿರ್ದೇಶಕ ಸೆನ್ನಾ ಹೆಗ್ಡೆ ಎಲ್ಲವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಇದು ಯಾರ ಜೀವನದಲ್ಲಾದರೂ ಮತ್ತು ಎಲ್ಲರ ಜೀವನದಲ್ಲೂ ನಡೆಯಬಹುದಾದ ಘಟನೆಗಳನ್ನು ಚಿತ್ರದಲ್ಲಿ ಕಾಣಬಹುದು. ಇಡೀ ಚಿತ್ರದ ಪಯಣ ನವಿರಾಗಿದ್ದು, ತಾಳ್ಮೆಯಿಂದ ನೋಡಿದರೆ ಬಹುತೇಕ ದೃಶ್ಯಗಳು ಮನಸ್ಸಿಗೆ ಹತ್ತಿರವಾಗುತ್ತದೆ.

ನಟನೆ

ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರ ಪಾತ್ರಗಳು ಗಮನ ಸೆಳೆಯುತ್ತವೆ. ದಿಗಂತ್, ಪೂಜಾ, ಶ್ರೇಯಾ, ಬಾಬು ಹಿರಣ್ಣಯ್ಯ , ಅರುಣಾ ಬಾಲರಾಜ್, ರಘು ರಾಮನಕೊಪ್ಪ ಸೇರಿದಂತೆ ಎಲ್ಲರ ಅಭಿನಯ ಮನೋಜ್ಞವಾಗಿದೆ. ಜೊತೆಗೆ ಶ್ರೀರಾಜ್ ರವಿಚಂದ್ರನ್ ಛಾಯಾಗ್ರಹಣ, ಸಚಿನ್ ವಾರಿಯರ್ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿವೆ.
ಒಟ್ಟಾರೆ, ‘ಕಥೆಯೊಂದು ಶುರುವಾಗಿದೆ’ ಚಿತ್ರವನ್ನು ಧಾರಾಳವಾಗಿ ನೋಡಿ ಆನಂದಿಸಬಹುದು.

ಚಿತ್ರ           : ಕಥೆಯೊಂದು ಶುರುವಾಗಿದೆ

ಅಂಕ         : 3.5 / 5

ತಾರಾಬಳಗ: ದಿಗಂತ್, ಪೂಜಾ ದೇವಾರಿಯಾ, ಬಾಬು ಹಿರಣ್ಣಯ್ಯ, ಶ್ರೇಯಾ , ಅರುಣಾ ಬಾಲರಾಜ್, ರಘು ರಾಮನಕೊಪ್ಪ ,ಅಶ್ವಿನ್ ರಾವ್ ಪಲ್ಲಕ್ಕಿ ಮತ್ತು ಇತರರು

ನಿರ್ಮಾಣ  : ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ

ನಿರ್ದೇಶನ: ಸೆನ್ನಾ ಹೆಗ್ಡೆ

Tags