ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಕೆ.ಜಿ.ಎಫ್: ಚಿನ್ನದಂಥ ಚಿತ್ರ…..

"ಹತ್ತು ಜನರನ್ನು ಹೊಡೆದು ಡಾನ್ ಆಗಿದ್ದಲ್ಲ. ನಾನು ಹೊಡೆದಿರೋ ಹತ್ತು ಜನಗಳೂ ಡಾನೇ.!"

ಚಿತ್ರ: ಕೆ.ಜಿಎಫ್

ತಾರಾಗಣ: ಯಶ್, ಶ್ರೀನಿಧಿ ಶೆಟ್ಟಿ

ನಿರ್ದೇಶನ: ಪ್ರಶಾಂತ್ ನೀಲ್

ನಿರ್ಮಾಣ: ವಿಜಯ್ ಕಿರಗಂದೂರು

ರೇಟಿಂಗ್ಸ್: 4/5

“ಚಿನ್ನದ ಹುಂಡಿಯನ್ನು ಚಿಲ್ರೆ ಕಾಸು ಹಾಕೋಕೆ ಇಟ್ಟಿದ್ದಾರೆ..”

ಇದು ಮುಂಬೈನಲ್ಲಿ ಗ್ಯಾಂಗ್ ಸ್ಟರ್ ಆಗಿರುವ ರಾಕಿಯನ್ನು ಕಂಡು ಬೆಂಗಳೂರಿನಿಂದ ಹೋಗಿರುವ ಡಾನ್ ಒಬ್ಬ ಹೇಳುವ ಮಾತು. ಈ ಮಾತು ರಾಕಿ ಪಾತ್ರಕ್ಕೆ ಮಾತ್ರವಲ್ಲ, ನಿಜ ಜೀವನದಲ್ಲಿ ಯಶ್ ಗೂ ಅನ್ವಯಿಸುವಂತೆ ಕಾಣಿಸುತ್ತದೆ. ಯಾಕೆಂದರೆ ಇಷ್ಟೊಂದು ಡೆಡಿಕೇಶನ್ ತುಂಬಿರುವ ನಾಯಕನನ್ನು ದಶಕಗಳ ಕಾಲ ಎಂತೆಂಥ ಚಿತ್ರಗಳಲ್ಲಿ ನಟಿಸುವಂತೆ ಮಾಡಿಬಿಟ್ಟೆವು ಎಂದು ಚಿತ್ರರಂಗವೇ ಕೊರಗುವಂತೆ ಮಾಡುತ್ತದೆ. ಆ ಮಟ್ಟಿಗೆ ಚಿತ್ರ ಮತ್ತು ಯಶ್ ನ ಪಾತ್ರ ಮನಗೆಲ್ಲುವ ರೀತಿಯಲ್ಲಿ ಕೆಜಿಎಫ್ ಮೂಡಿಬಂದಿದೆ.

Image result for kgf poster

ಕೋಲಾರದ ಜನ್ಮಸ್ಥಳಕ್ಕೆ ಮರಳಬೇಕಾದ ಸಂದರ್ಭ ಬರುತ್ತದೆ. ಅದು ಯಾಕೆ?

ಆತನ ಹೆಸರು ರಾಖಿ. ಬಡತನದಲ್ಲೇ ಹುಟ್ಟುತ್ತಾನೆ. ಹುಟ್ಟುವಾಗಲೇ ತಂದೆಯನ್ನು ಕಳೆದುಕೊಂಡಿರುತ್ತಾನೆ. ಚಿಕ್ಕ ಹುಡುಗನಾಗಿದ್ದಾಗಲೇ ತಾಯಿ ಕೂಡ ತೀರಿಹೋಗುತ್ತಾಳೆ. ಆದರೆ ಆಕೆ ಆತನಿಂದ ತೆಗೆದುಕೊಳ್ಳುವ ಒಂದು ಮಾತು ಆತನ ಮುಂದಿನ ಬದುಕನ್ನೇ ರೂಪಿಸುತ್ತದೆ.  ಬಡತನದಲ್ಲಿ ಹುಟ್ಟಬಾರದು ಎಂದು ನನಗೆ ತಿಳಿದಿತ್ತು. ಆದರೆ ಸಾಯುವಾಗ ಶ್ರೀಮಂತನಾಗಿ ಸಾಯಬೇಕೆಂದು ಅರಿತುಕೊಂಡೆ ಎನ್ನುತ್ತಾಳೆ. ಹಾಗಾಗಿ ರಾಕಿ ಶ್ರೀಮಂತನಾಗಿ ಸಾಯುವ ಗುರಿ ಹೊಂದುತ್ತಾನೆ. ಆದರೆ ಅದಕ್ಕಾಗಿ ಯಾವ ಮಾರ್ಗ ಹಿಡಿಯಬೇಕೆಂದು ಹೇಳುವವರು ಇರುವುದಿಲ್ಲ. ಮುಂಬೈಗೆ ಪಯಣಿಸುತ್ತಾನೆ. ಅಲ್ಲಿ ಡಾನ್ ಆಗುತ್ತಾನೆ. ಆದರೆ ಈ ನಡುವೆ ಮತ್ತೆ ಕೋಲಾರದ ಜನ್ಮಸ್ಥಳಕ್ಕೆ ಮರಳಬೇಕಾದ ಸಂದರ್ಭ ಬರುತ್ತದೆ. ಅದು ಯಾಕೆ? ಅಲ್ಲೇನು ಮಾಡುತ್ತಾನೆ ಎನ್ನುವುದೇ ಚಿತ್ರದ ಪ್ರಮುಖ ತಿರುವು. ಆ ಕತೆಗೆ ಮಾತ್ರವಲ್ಲ ಒಟ್ಟು ಮೇಕಿಂಗ್ ಗಾಗಿ ಚಿತ್ರವನ್ನು ಥಿಯೇಟರಲ್ಲಿ ನೋಡುವುದೇ ಒಂದು ಹಬ್ಬ.

Related image

ಡೈಲಾಗ್ ಗಳೇ ಚಿತ್ರದ ಪ್ರಮುಖ ಆಕರ್ಷಣೆ

“ಹತ್ತು ಜನರನ್ನು ಹೊಡೆದು ಡಾನ್ ಆಗಿದ್ದಲ್ಲ. ನಾನು ಹೊಡೆದಿರೋ ಹತ್ತು ಜನಗಳೂ ಡಾನೇ.!”ಎಂಬಂಥ ಮಾಸ್ ಡೈಲಾಗ್ ಗಳು ಚಿತ್ರದ ತುಂಬ ರಾಕಿಯ ಪಾತ್ರಕ್ಕೆ ಬಿಲ್ಡಪ್ ನೀಡುತ್ತಲೇ ಹೋಗುತ್ತದೆ. ರಾಕಿಯಾಗಿ ಯಶ್ ಸೆಟಲ್ಡ್ ಅಭಿನಯ ನೀಡಿದ್ದಾರೆ. ಸಂಭಾಷಣೆಗಳು ಅವರ ಪಾತ್ರವನ್ನು ಕಟ್ಟಿಕೊಡುತ್ತವೆ. ಹಾಗಾಗಿ ಡೈಲಾಗ್ ಗಳೇ ಚಿತ್ರದ ಪ್ರಮುಖ ಆಕರ್ಷಣೆ ಎನ್ನಬಹುದು. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಸ್ಯಾಂಪಲ್ ಎಂಬಂತೆ ಅಭಿನಯ ನೀಡಿದ್ದು, ಮುಂದಿನ ಭಾಗದಲ್ಲಿ ಹೆಚ್ಚು ಆವರಿಸಿಕೊಳ್ಳಲಿದ್ದಾರೆ ಎಂಬ ಭರವಸೆ ಮೂಡುತ್ತದೆ. ಉಳಿದಂತೆ ಅನಂತನಾಗ್, ಮಾಳವಿಕಾ, ಟಿಎಸ್ ನಾಗಾಭರಣ, ಬಿ.ಸುರೇಶ್, ಅಚ್ಯುತ್ ಕುಮಾರ್ ಹೀಗೆ ಪ್ರತಿಭಾವಂತರು ಪೋಷಕ ಪಾತ್ರಗಳ ಮೂಲಕ ಅಲಂಕಾರವಾಗಿದ್ದಾರೆ.

Related image

ಖಳನಟರಲ್ಲಿ ವಸಿಷ್ಠಸಿಂಹ ಗಮನ ಸೆಳೆಯುತ್ತಾರೆ. ಯುವನಟರಾದ ಯಶ್ ಶೆಟ್ಟಿ, ಸಂಪತ್ ಕುಮಾರ್ ಮೊದಲಾದವರ ಜೊತೆಗೆ ಉಷಾ ಭಂಡಾರಿ ಮೊದಲಾದವರು ತಾರಾಗಣದಲ್ಲಿದ್ದಾರೆ. ಪ್ರಶಾಂತ್ ನೀಲ್ ಅವರ ಕನಸು ನನಸಾಗಿಸುವಲ್ಲಿ ಭುವನ್ ಗೌಡರ ಛಾಯಾಗ್ರಹಣ ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಮತ್ತು ಸಂಗೀತ ನಿರ್ದೇಶಕ ರವಿಬಸ್ರೂರು ಅವರ ಕೊಡುಗೆ ಗಮನಾರ್ಹ. ಒಟ್ಟಿನಲ್ಲಿ ಚಿತ್ರ ಚಾಪ್ಟರ್ 2 ನೋಡುವ ಕುತೂಹಲವನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ.

ಶಶಿಕರ ಪಾತೂರು

 

 

Tags