ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಮನಸನ್ನು ಗೆಲ್ಲುವ “ಕುಚ್ಚಿಕೂ”ಗಳ ಪ್ರೀತಿ

ದಿವಂಗತ ಡಿ. ರಾಜೇಂದ್ರ ಬಾಬು ಅವರ ಕೊನೆಯ ಚಿತ್ರ ‘ಕುಚ್ಚಿಕೂ ಕುಚ್ಚಿಕು’ ಚಿತ್ರವು ಇಬ್ಬರು ನಾಯಕರು ಮತ್ತು ಓರ್ವ ನಾಯಕಿಯ ಸುತ್ತ ಸುತ್ತುವ ಪ್ರೇಮ ಮತ್ತು ಸ್ನೇಹಮಯ ಚಿತ್ರ. ಇಲ್ಲಿ ‘ಗೆಳೆಯರ’ ಆತ್ಮೀಯತೆ ಮತ್ತು ಪ್ರೀತಿಯನ್ನು ನೋಡಬಹುದು ಈ ಹಿಂದೆ ದಿಗ್ಗಜರು ಚಿತ್ರದಲ್ಲಿ ಸ್ಮೇಹದ ಮಹತ್ವ ಸಾರಿದ್ದ ಡಿ.ಬಾಬು ಅವರು ಇದೀಗ ಗಾಡ ಸ್ನೇಹದ ಕುರಿತಂತೆ ತೋರಿಸಿದ್ದಾರೆ.

ಇಲ್ಲಿ ಶ್ರೀಮಂತ ನಾಯಕ ಸಿದ್ದಾರ್ಥ (ಜೆಕೆ) ಮತ್ತು ಬಡ ಮೆಕ್ಯಾನಿಕ್ ದತ್ತ (ಪ್ರವೀಣ್ ಕುಮಾರ್) ಅವರ ಸ್ನೇಹದ ಕಥೆ ಮತ್ತು ನಾಯಕಿ ದೀಪು (ನಕ್ಷತ್ರಾ ಬಾಬು) ಮೇಲಿನ ಪ್ರೀತಿಯ ಕಥೆಯಿದೆ. ನಾಯಕಿ ನಕ್ಷತ್ರಾ ಇಲ್ಲಿ ಎರಡು ರೀತಿಯ ಪಾತ್ರದಲ್ಲಿ ಅಂದರೆ ಮಾಡರ್ನ್ ಲುಕ್ ಮತ್ತು ಟ್ರೆಡಿಶನಲ್ ಲುಕ್ಕಿನಲ್ಲಿ ಕಾಣಸಿಕೊಂಡಿದ್ದಾರೆ. ಮಾಡರ್ನ್ ಲುಕ್ಕಿನಲ್ಲಿದ್ದಾಗ ತನ್ನ ನಕ್ಷತ್ರ ಅಪ್ಪನ ಕೈಯಲ್ಲೇ ಸಿಕ್ಕಿಹಾಕಿಕೊಂಡ ನಂತರ ಕಥೆಗೊಂದು ತಿರುವು ಪಡೆಯುತ್ತದೆ.

ಸಾಮಾನ್ಯವಾಗಿ ಲವ್ ಸ್ಟೋರಿ ಚಿತ್ರಗಳಲ್ಲಿ ಇದೆಲ್ಲಾ ಮಾಮೂಲು ಎಂದು ಭಾವಿಸಬೇಡಿ. ಈ ಚಿತ್ರದಲ್ಲೊಂದು ಟ್ವಿಸ್ಟ್ ಇದೆ. ಹಿರಿಯ ನಿರ್ದೇಶಕ ಡಿ.ರಾಜೇಂದ್ರಬಾಬು ಅವರು ಎಲ್ಲಾ ತರಹದ ಚಿತ್ರಗಳನ್ನೂ ಕಟ್ಟಿಕೊಟ್ಟವರು. “ಕುಚ್ಚಿಕೂ ಕುಚ್ಚಿಕು’ ಈಗಿನ ಟ್ರೆಂಡ್ ಗೆ ಅಂತಾನೇ ಮಾಡಿದ್ದಾರೆ. ಎಲ್ಲಾ ಲವ್ ಸ್ಟೋರಿಗಳಲ್ಲಿ ಇರುವಂತೆ ಇಲ್ಲೂ ಪ್ರೀತಿ, ಪ್ರೇಮ, ಪ್ರಣಯ, ಮನೆಯವರ ವಿರೋಧ ಸೇರಿದಂತೆ ಎಲ್ಲವೂ ಇದೆ ಹಾಗೂ ಇವೆಲ್ಲದರ ಜೊತೆಗೊಂದು ಸಂದೇಶವೂ ಸಹ ಇದೆ.

ನಟಿ ನಕ್ಷತ್ರಾ ಅವರಿಗಿದು ಮೊದಲ ಚಿತ್ರವಾದರೂ ಅವರ ಎರಡನೇ ಚಿತ್ರ ಗೋಕುಲ ಆಗಲೇ ತೆರೆಕಂಡಾಗಿದೆ. ಈ ಮೂಲಕ ಕನ್ನಡಕ್ಕೊಬ್ಬಳು ಭರವಸೆಯ ನಟಿ ಸಿಕ್ಕಂತಾಗಿದೆ. ಅವರಂತೆ ಜೆಕೆ, ಪ್ರವೀಣ್ ಕುಮಾರ್, ಸುಮಿತ್ರಾ ದೇವಿ, ರಮೇಶ್ ಭಟ್, ಸುಂದರ್ ಭಟ್ ಸೇರಿದಂತೆ ಎಲ್ಲರ ಅಭಿನಯವೂ ಅಚ್ಚು ಕಟ್ಟಾಗಿದೆ. ಚಿತ್ರದ ಬೈಕ್ ರೇಸ್ ದೃಶ್ಯಗಳು ಸೇರಿದಂತೆ ಕೆಲ ಸನ್ನಿವೇಶಗಳು ರೋಚಕವಾಗಿದ್ದು, ಡಿ. ರಾಜೇಂದ್ರ ಬಾಬು ಅವರ ಈ ಕೊನೆಯ ಚಿತ್ರವು ಮನಸನ್ನು ಕಾಡುತ್ತದೆ. ಇಲ್ಲಿ ಸ್ನೇಹದ ಕಥೆಯೊಂದಿಗೆ ಪ್ರೀತಿಯ ಟ್ರ್ಯಾಕ್ ಸಹ ಬೆರೆತಿರುವುದರಿಂದ ಚಿತ್ರವು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಚಿತ್ರವನ್ನು ಶ್ರೀ ಚಲುವರಾಯಸ್ವಾಮಿ ಮೂವೀಸ್ ಬ್ಯಾನರ್ ನಡಿಯಲ್ಲಿ ಎನ್ ಕೃಷ್ಣಕುಮಾರ್ ಅವರ ನಿರ್ಮಾಣದ ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖಾ ಅವರೇ ಹಾಡುಗಳನ್ನು ಹೊಸೆದು ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಎಂ.ಯೂ ನಂದಕುಮಾರ್ ಛಾಯಾಗ್ರಹಣವಿದ್ದು ಈ ಕುಚ್ಚಿಕೂ ಗೆಳೆಯರ ಸ್ನೇಹ ಮತ್ತು ಪ್ರೀತಿಯನ್ನು ಹೆಚ್ಚಿಸಿದೆ.

Tags