ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಭಯಾನಕ ಆಟದೊಂದಿಗೆ ಮನರಂಜಿಸುವ ‘ಲೌಡ್ ಸ್ಪೀಕರ್’

ಇತ್ತಿಚೆಗಿನ ದಿನಗಳಲ್ಲಿ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಸೋಶಿಯಲ್ ಮೀಡಿಯಾಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಯುವ ಜನತೆ ಯಾವ ರೀತಿ ದಾರಿ ತಪ್ಪುತ್ತದೆ, ಸಂಬಂಧಗಳು ಹೇಗೆ ಮೌಲ್ಯ ಕಳೆದುಕೊಳ್ಳುತ್ತವೆ ಎಂಬ ಗಂಭೀರ ವಿಷಯವನ್ನು ಕಾಮಿಡಿ ಹಿನ್ನೆಲೆಯಲ್ಲಿ ಹೇಳಿರುವ ‘ಲೌಡ್ ಸ್ಪೀಕರ್’ ಚಿತ್ರವು ಗಮನ ಸೆಳೆಯುತ್ತದೆ.

ಜಗತ್ತಿನ ಭಯಾನಕ ಆಟ

ಚಿತ್ರದ ಪೋಸ್ಟರ್ ನಲ್ಲಿ ಮುದ್ರಿಸಿರುವಂತೆ ‘ಲೌಡ್ ಸ್ಪೀಕರ್’ ಚಿತ್ರವು ಜಗತ್ತಿನ ಅತೀ ಭಯಾನಕ ಆಟದ ಬಗ್ಗೆ ಪ್ರಸ್ತುತ ಪಡಿಸುತ್ತದೆ. ಇದು ಮೂರು ಜೋಡಿಗಳು ಹಾಗೂ ಎಲ್ಲರಿಗೂ ಕಾಮನ್ ಫ್ರೆಂಡ್ ಆಗಿದ್ದ ವ್ಯಕ್ತಿ ಸೇರಿ ಒಟ್ಟು ಏಳು ಜನರ ಮಧ್ಯೆ ಒಂದೇ ಮನೆಯಲ್ಲಿ ನಡೆಯುವ ಕಥೆ. ಈ ಎಲ್ಲಾ ಜನರು ಒಂದು ಆಟವನ್ನು ಆಡುತ್ತಾರೆ. ಅದರ ಹೆಸರೇ ‘ಲೌಡ್ ಸ್ಪೀಕರ್’.

ಈ ಏಳು ಜನರಲ್ಲಿ ಯಾರಿಗೇ ಫೋನ್ ಅಥವಾ ಮೆಸೆಜ್ ಬಂದರೂ ಅದನ್ನು ‘ಲೌಡ್ ಸ್ಪೀಕರ್’ ಆನ್ ಮಾಡಿ ಎಲ್ಲರ ಎದುರು ಮಾತನಾಡಬೇಕು. ಹೀಗೆ ಶುರುವಾಗುವ ಆಟ ಹೇಗೆ ಏಳು ಜನರ ಜೀವನವನ್ನು ಬದಲಿಸುತ್ತದೆ ಎಂಬುದನ್ನು ಸ್ವಲ್ಪ ಸೀರಿಯಸ್ ಮತ್ತು ಕಾಮಿಡಿ ಮುಖಾಂತರ ಚಿತ್ರವನ್ನು ನಿರೂಪಿಸಲಾಗಿದೆ. ಮತ್ತು ಯುವ ಜನತೆ ಮೊಬೈಲ್ ಗೆ ಎಷ್ಟೊಂದು ಅಂಟಿಕೊಂಡಿದ್ದಾರೆಂಬ ಅಂಶಗಳೊಂದಿಗೆ ಚಿತ್ರವು ಸಾಗಲಿದೆ.

ಮನ ಸೆಳೆಯುವ ಅಭಿನಯ

ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯವು ಇಷ್ಟವಾಗುತ್ತದೆ. ಇಲ್ಲಿ ಕಥೆಯೇ ನಾಯಕನಾಗಿರುವುದರಿಂದ ಯಾರ ಪಾತ್ರಗಳು ಹಿಗ್ಗದೇ ಮತ್ತು ಕುಗ್ಗದೇ ಸಮನಾಂತರವಾಗಿ ಸಾಗುತ್ತವೆ. ಇಲ್ಲಿ ಗಂಭೀರ ವಿಷಯಗಳು ಹಾಸ್ಯದ ರೂಪದಲ್ಲಿ ತೆರೆಯ ಮೇಲೆ ಬರುವುದನ್ನು ನೋಡಿ, ಪ್ರೇಕ್ಷಕರು ಎಂಜಾಯ್ ಮಾಡಬಹುದು.

ಕುಟುಂಬ ಸಮೇತರಾಗಿ ನೋಡುವ ಸಿನಿಮಾ

‘ಲೌಡ್ ಸ್ಪೀಕರ್’ ಚಿತ್ರವು ಯಾವುದೇ ಅತಿರೇಕವಿಲ್ಲದೇ, ಡಬ್ಬಲ್ ಮೀನಿಂಗ್ ಸಂಭಾಷಣೆಗಳಿಲ್ಲದೇ, ಒಂದೊಳ್ಳೆ ಸಂದೇಶವನ್ನು ಮನರಂಜನೆಯ ಮೂಲಕ ನೀಡುವುದರಲ್ಲಿ ಚಿತ್ರವು ಯಶಸ್ವಿಯಾಗಿದೆ. ಇಡೀ ಚಿತ್ರವು ಪಕ್ಕಾ ಕ್ಲಾಸ್ ಚಿತ್ರದಂತೆ ಮೂಡಿ ಬಂದಿದ್ದು, ಇಡೀ ಕುಟುಂಬ ಒಟ್ಟಿಗೆ ಕುಳಿತು ಯಾವುದೇ ಮುಜುಗರವಿಲ್ಲದೇ ಚಿತ್ರವನ್ನು ನೋಡಿ ಆನಂದಿಸಬಹುದು.

ಒಮ್ಮೆ ನೋಡಬಹುದು

ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ ಎಲ್ಲಾ ಕಲಾವಿದರ ಅಭಿನಯ. ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಯಾವುದೇ ರೀತಿಯ ಹಾಡುಗಳು ಮತ್ತು ಸಾಹಸ ಸನ್ನಿವೇಶಗಳು ಕಂಡು ಬರುವುದಿಲ್ಲ. ಎಲ್ಲಿಯೂ ಕೂಡಾ ಅನಾವಶ‍್ಯಕ ಸನ್ನಿವೇಶಗಳು ಕಂಡು ಬರುವುದಿಲ್ಲ. ಬಹುತೇಕ ಒಂದೇ ಮನೆಯಲ್ಲಿ ಚಿತ್ರದ ಶೂಟಿಂಗ್ ಆಗಿದೆ. ಹಾಗೂ ಅದಕ್ಕೆ ಪೂರಕವಾಗಿ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಸಾಥ್ ನೀಡಿದೆ.

ಇಡೀ ಕಥೆ ಒಂದೇ ಮನೆಯೊಳಗೆ ನಡೆಯುವುದರಿಂದ ಇರುವಷ್ಟು ಇಕ್ಕಟ್ಟಾದ ಜಾಗದಲ್ಲೇ ಕಥೆಯನ್ನು ದೃಶ್ಯದ ಮೂಲಕ ತೋರಿಸುವುದು ಮತ್ತು ಅರ್ಥೈಸುವುದು ಬಹು ಕಷ್ಟದ ಕೆಲಸ. ಈ ಕಷ್ಟಕರವಾದ ಸನ್ನಿವೇಶಗಳನ್ನು ಛಾಯಾಗ್ರಹಕ ಕಿರಣ್ ಹಂಪಾಪುರ ಸಮರ್ಥವಾಗಿ ನಿಭಾಯಿಸಿದ್ದಾರೆ. ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ಗಾದೆಯಂತೆ ತಮಗೆ ಸಿಕ್ಕ ಚಿಕ್ಕ ಲೊಕೇಶನ್ ನಲ್ಲಿಯೇ ಸಿಕ್ಕ ತಕ್ಕ ಮಟ್ಟಿಗಿನ ಸೌಲಭ್ಯಗಳಿಂದಲೇ ಎಲ್ಲಿಯೂ ಲೋಪವಾಗದಂತೆ ತಮ್ಮ ಅದ್ಭುತ ಕೈ ಚಳಕದಿಂದ  ದೃಶ್ಯಗಳನ್ನು ಸೆರೆ ಹಿಡಿದು ಜನರಿಗೆ ತಲುಪಿಸಿದ್ದಾರೆ.

ಚಿತ್ರ            : ಲೌಡ್ ಸ್ಟೀಕರ್

ನಿರ್ದೇಶನ  : ಶಿವ ತೇಜಸ್

ನಿರ್ಮಾಪಕ : ಡಾ ರಾಜು.ಕೆ

ಸಂಗೀತ ನಿರ್ದೇಶನ: ಹರ್ಷವರ್ಧನ್ ರಾಜ್

ಛಾಯಾಗ್ರಹಣ : ಕಿರಣ್ ಹಂಪಾಪುರ

ಸಂಕಲನ         : ಕೆ.ಎಂ.ಪ್ರಕಾಶ್

ಕಲಾವಿದರು    : ಅಭಿಷೇಕ್ ಜೈನ್, ಅನುಷಾ, ಕಾರ್ತಿಕ್ ರಾವ್, ಕಾವ್ಯ ಶಾ,ಸುಮಂತ್ ಭಟ್, ದಿಶಾ ದಿನಕರನ್, ವಿಜಯ್                              ಈಶ್ವರ್,ದತ್ತಣ‍್ಣ, ರಂಗಾಯಣ ರಘು ಮತ್ತು ಇತರರು.

Tags