
ಬಾಲ್ಕನಿಯಿಂದಸಂದರ್ಶನ
‘ಟಗರು’ ಸಂಭಾಷಣೆಕಾರ ಮಾಸ್ತಿ ಜೊತೆ ಬಾಲ್ಕನಿ ಚಿಟ್ ಚಾಟ್!!
ಸ್ಯಾಂಡಲ್ ವುಡ್ ನಲ್ಲಿ 2006ರಲ್ಲಿ ತೆರೆಕಂಡ ‘ಸುಂಟರಗಾಳಿ’ ಸಿನಿಮಾಕ್ಕೆ ಸಂಭಾಷಣೆ ಬರೆಯುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಮಾಸ್ತಿ, ಈಗ ಚಿತ್ರರಂಗದ ಆಸ್ತಿ’.. ಮಾಲೂರು ಸಮೀಪದ ಉಪ್ಪಾರಹಳ್ಳಿಯ ಮಾಸ್ತಿ ಎನ್ನುವ ಕಡು ಸಿನಿಮಾಮೋಹಿ ಯುವಕ, ಚಂದನವನದಲ್ಲಿ ಸದ್ದಿಲ್ಲದೇ ತನ್ನ ಛಾಪು ಮೂಡಿಸುತ್ತಿರುವ ಸಂಭಾಷಣೆಕಾರ. ‘ಟಗರು’ ಸಿನಿಮಾದಲ್ಲಿ ಮಾತ್ರ ಅವರ ಸಂಭಾಷಣೆಯ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಒಂದು ರೀತಿಯ ಟ್ರೆಂಡ್ ಸೆಟ್ ಮಾಡಿದ್ದಾರೆ.
‘ಟಗರು’ ಚಿತ್ರ ನೋಡಿದವರಿಗೆಲ್ಲಾ ನೆನಪಾಗುವುದು ಆ ಚಿತ್ರದ ಮಾಸ್ ಡೈಲಾಗ್!!..ಟಗರು ಸಿನಿಮಾದ ನಂತರ ಮಾಸ್ತಿಗೆ ಡಿಮಾಂಡ್ ಹೆಚ್ಚಾಗಿದೆ. ಈಗಾಗಲೇ ಇವರು ರಾಮ್ ಗೋಪಾಲ್ ವರ್ಮಾ ಚಿತ್ರಕ್ಕೆ ಸಂಭಾಷಣೆ ಕೂಡ ಬರೆದಿದ್ದರು.. ‘ಕಡ್ಡಿ ಪುಡಿ’, ‘ಟಗರು’, ‘ಕಾಲೇಜುಕುಮಾರ’, ಚಿತ್ರಕ್ಕೆ ಸಂಭಾಷಣೆ ಬರೆದಿರುವ ಇವರು, ಮುಂದೆ ‘ಎಸ್ ಆರ್ ಕೆ’, ‘ನಾಥೂರಾಮ್’ ಚಿತ್ರಗಳಿಗೆ ಸಂಭಾಷಣೆ ಬರೆಯಲಿದ್ದಾರೆ.. ಹೀಗಿರುವಾಗ ಮಾಸ್ತಿ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ಬಿಡುವು ಮಾಡಿಕೊಂಡು ನಮ್ಮ ಬಾಲ್ಕನಿ ನ್ಯೂಸ್ ತಂಡದೊಂದಿಗೆ ಮಾತಿಗೆ ಸಿಕ್ಕಾಗ…
- ಸಂಭಾಷಣೆ ಬರೆಯುವುದು ಸುಲಭದ ಕೆಲಸವಲ್ಲ, ನೀವು ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದೀರ ಹೇಗೆ ಅನ್ನಿಸುತ್ತಿದೆ?
ನಾನು ಬಹಳ ಆಲೋಚನೆ ಇಟ್ಟುಕೊಂಡೆ ಬರೆಯುತ್ತೇನೆ. ಇದು ನನ್ನಿಂದ ಸಾಧ್ಯಾವೇ? ತಾಯಿ ಶಾರದೆಯ ಆಶೀರ್ವಾದ, ಒಂದಷ್ಟು ನನ್ನ ಕೈಯಲ್ಲಿ ಬರೆಸಿಕೊಂಡು ಹೋಗುತ್ತಿದೆ.. ಹಲವಾರು ಕಥೆಗಳು ಬರುತ್ತದೆ.. ಎಲ್ಲವನ್ನೂ ನಾವು ಬರೆಯೋದಿಕ್ಕೆ ಆಗುವುದಿಲ್ಲ, ರೌಡಿಸಂ, ಪೋಲೀಸ್, ಗಾಂಧೀಜಿ, ದೆವ್ವದ ಕಥೆ ಹೀಗೆ ಕಥೆಗಳನ್ನು ಕೇಳಿ ಅದರಲ್ಲಿ ನಾನು ಬೆರೆಯುತ್ತೇನೆ, ಒಬ್ಬ ಬರಹಗಾರನಿಗೆ ಅದು ಮುಖ್ಯ, ನಿರ್ದೇಶಕ ಹೇಳುವ ಕಥೆಗಳನ್ನು ಕೇಳಿ ಅದರಲ್ಲಿ ಬೆರೆತರೆ ಬರವಣಿಗೆ ಬಹಳ ಸುಲಭ..
- ಎಲ್ ಎಲ್ ಬಿ ಮಾಡಲು ಬೆಂಗಳೂರಿಗೆ ಬಂದವರು ಆದರೆ ನಿಮ್ಮ ಆಸಕ್ತಿ ಬರವಣಿಗೆ ಕಡೆ ತಿರುಗಿದ್ದು ಹೇಗೆ?
ಸಿನಿಮಾ ಅಂದರೆ ಒಂದು ಒಡನಾಟ. ನನಗೆ ಬರವಣಿಗೆಯಲ್ಲಿ ಮೊದಲಿನಿಂದಲೂ ಆಸಕ್ತಿ ಇತ್ತು. ನನ್ನ ಸ್ನೇಹಿತರ ಬಳಗ ಹಾಗೆ ಇತ್ತು. ಅವರು ನೋಡಿಕೊಂಡು ಬಂದಂತಹ ಸಿನಿಮಾ, ಕೇಳಿದಂತಹ ಕಥೆಗಳು ಇವೆಲ್ಲವೂ ನನಗೆ ಸ್ಪೂರ್ತಿಯಾಗಿ ಬರವಣಿಗೆ ಕಡೆ ಒಗ್ಗಿತು..
- ಮುಂದೆ ನೀವು ಬರೆಯುತ್ತಲೇ ಇರುತ್ತೀರಾ ಅಥವಾ ನಿರ್ದೇಶನದತ್ತ ವಾಲುತ್ತೀರಾ?
ನಿರ್ದೇಶನದತ್ತ ಆಲೋಚನೆ ಸದ್ಯಕ್ಕಿಲ್ಲ. ಯಾಕೆಂದರೆ ಬರವಣಿಗೆಯಲ್ಲಿ ಪಕ್ವಾ ಆಗಬೇಕು.. ಇಲ್ಲಿ ತುಂಬಾ ಸುಲಭವಾಗಿ ನಿರ್ದೇಶನ ಮಾಡಬಹುದು ಆದರೆ ಜವಾಬ್ದಾರಿ ಇದೆ… ಈಗ ಬೇಸರ ಏನೆಂದರೆ ವಾರಕ್ಕೆ 8 ಸಿನಿಮಾಗಳು ಬರುತ್ತವೆ.. ನಾನು ಸಿನಿಮಾ ಮಾಡಿ ಯಾವ ಥಿಯೇಟರ್ ಮುಂದೆ ನಿಲ್ಲಲ್ಲಿ?.. ಚಿತ್ರದಲ್ಲಿ ಒಂದು ಕ್ವಾಲಿಟಿ ಬರಬೇಕು. ಹಾಗಾಗಿ ಸ್ಪರ್ಧೆಗೆ ಇಳಿಯೋದು ಬೇಡ ಎಂದು ಸದ್ಯ ಸುಮ್ಮನಿದ್ದೇನೆ..
- ಮುಂದೆ ಸಿನಿಮಾ ಮಾಡುವುದಾದರೆ ಯಾವ ನಟ ಜೊತೆ ಮಾಡಲಿದ್ದೀರಿ?
ಸಿನಿಮಾ ಮಾಡಬೇಕೆಂದಿದ್ದೇನೆ, ಆದರೆ ಇದೇ ನಟನ ಜೊತೆ ಎಂದಿಲ್ಲ, ಚಿತ್ರರಂಗದಲ್ಲಿ ಎಲ್ಲರ ಜೊತೆ ಒಡನಾಟ ಇರುವುದರಿಂದ ನಮ್ಮ ಕಥೆಗೆ ಯಾರು ಒಗ್ಗುತ್ತಾರೋ ಅವರ ಜೊತೆ ಕೆಲಸ ಮಾಡುತ್ತೇನೆ..
- ‘ಪಂಚತಂತ್ರ’ ಚಿತಕ್ಕೆ ನೀವು ಕಥೆ ಬರೆದಿದ್ದೀರಿ, ಅದು ಒಂದು ಶಾರ್ಟ್ ಮೂವಿಗೆ ಬರೆದ ಕಥೆ ಅಲ್ಲವೇ?
ಹೌದು, ಅದು ಯೋಗರಾಜ್ ಭಟ್ರ ಧೈರ್ಯ. ನಾನು ನನ್ನ ಸ್ನೇಹಿತ, ನನ್ನ ಹತ್ತಿರ ಇದ್ದ ಶಾರ್ಟ್ ಮೂವಿ ಕಥೆಯನ್ನು ಹೇಳಿದ್ವಿ. ಇದನ್ನು ಫೀಚರ್ ಸಿನಿಮಾ ಮಾಡಬಹುದು ಎಂದು ಭಟ್ರು ಸಲಹೆ ನೀಡಿದ್ರು. ನಂತರ ಮೂರು ತಿಂಗಳು ಕಾಲ ಅದರ ಮೇಲೆ ಕೆಲಸ ಮಾಡಿದೆವು. ಒಂದು ಮುಕ್ಕಾಲು ಸಿನಿಮಾ ಆಗುವಷ್ಟು ಕಥೆ ರೆಡಿಯಾಯ್ತು..
- ‘ಪಂಚಂತಂತ್ರ’ ಸಿನಿಮಾವನ್ನು ಏಕೆ ನೋಡಬೇಕು?
ಅದೊಂದು ಅನುಭವದ ಮಂಟಪ.. ಆ ಮಂಟಪದ ತುಂಬಾ ಖುಷಿ ಕೊಡುತ್ತೆ.. ಯಾರೆಲ್ಲಾ ಬಾಲ್ಯದಲ್ಲಿ ‘ಆಮೆ ಮೊಲ’ ಕಥೆ ಕೇಳಿರುತ್ತಿರೋ, ಅದನ್ನು ಅಳವಡಿಸಿಕೊಂಡು ಸಿನಿಮಾ ಮಾಡಿದರೆ ಹೇಗಿರುತ್ತೆ? ಇದರಲ್ಲಿ ಮನೋರಂಜನೆಯ ಭೂರಿ ಔತಣವಿದೆ.. ಹಾಸ್ಯ, ಪ್ರೇಮ, ಭಾವುಕತೆ, ಎರಡು ವಯಸ್ಸಿನ ಅಂತರವಿದೆ , ಒಂದು ಅನುಭವದ ಬುತ್ತಿಯಿದೆ .. ಇಡೀ ಸಿನಿಮಾವೇ ಒಂದು ಸಂದೇಶ ನೀಡಲಿದೆ.. ಎರಡುವರೆ ಘಂಟೆ ನಿಮಗೆ ಪಕ್ಕಾ ಮನೋರಂಜನೆ ಸಿಗಲಿದೆ.. ಅದಕ್ಕಾಗಿ ನೀವು ಕುಟುಂಬ ಸಮೇತ ಈ ಚಿತ್ರವನ್ನು ನೋಡಲೇ ಬೇಕು
- ಆರ್ ಜಿವಿ ಜೊತೆ ಕೆಲಸ ಮಾಡಿದ್ದೀರಿ?
ಆರ್ ಜಿವಿ ಜೊತೆ ಕೆಲಸ ಮಾಡಿದ್ದು ಒಂದು ಸಿಹಿ ಹಾಗೂ ಕಹಿ ಘಟನೆ..
- ಸಿಹಿ ಹಾಗೂ ಕಹಿ ಘಟನೆ ಯಾಕೆ?
ಹ್ಹ ಹ್ಹ..ಅವರು ಹೇಗೆ ಕೆಲಸ ಮಾಡುತ್ತಾರೆ ಎನ್ನುವುದು ಸಿಹಿ, ಸಿನಿಮಾವನ್ನು ಅಷ್ಟು ಬೇಗ ಮುಗಿಸುತ್ತಾರೆ ಅನ್ನುವುದು ಕಹಿ ಘಟನೆ.. ಅದು ಅವರ ಸ್ಟೈಲ್ ಪಟ್ ಅಂತಾ ಕೆಲಸ ಮುಗಿಸುತ್ತಾರೆ..
- ಟಗರು ಚಿತ್ರದಲ್ಲಿ ಎದ್ದು ಕಾಣುವುದು ಡೈಲಾಗ್, ಡೈಲಾಗ್ ಮೂಲಕ ಚಿತ್ರಕ್ಕೆ ಸಕ್ಸಸ್ ಸಿಕ್ಕಿತೇ?
ಡೈಲಾಗ್ ನಿಂದ ಮಾತ್ರವಲ್ಲ, ಮ್ಯೂಸಿಕ್, ಶಿವಣ್ಣ ಹಾಗೂ ಪಾತ್ರಗಳಿಂದ ಗೆದ್ದಿದ್ದು. ನಾವು ಗೆಲ್ಲಲೇ ಬೇಕೆಂದು ಸಿನಿಮಾ ಮಾಡಿದ್ದಲ್ಲ. ಈಗಿನ ಜನರೇಶನ್ ತುಂಬಾ ವಿಭಿನ್ನವಾಗಿ ಸಿನಿಮಾವನ್ನು ನೋಡಲು ಇಷ್ಟಪಡುತ್ತಾರೆ..ಈಗ 99 ವೆರೈಟಿ ಆಫ್ ದೋಸೆ ಇದೆ ನಾವು ಎಲ್ಲಾ ತರಹದ ದೋಸೆಯನ್ನು ಪ್ರಯತ್ನಿಸಬೇಕು.. ಹಾಗೆಯೇ ಸಿನಿಮಾ ಕೂಡ…
- ನಿಮ್ಮ ಮುಂದಿನ ಪ್ರಾಜೆಕ್ಟ್ ಗಳು?
ನಾಥೂರಾಮ್, ಧೀರನ್ , ಖಾಕಿ, ಮದಗಜ ಇನ್ನೊಂದು ಭಟ್ರ ಬ್ಯಾನರ್ ನಲ್ಲಿ ಸಿನಿಮಾದ ಮಾತುಕತೆ ನಡೆಯುತ್ತಿದೆ..
- ಯುವ ಸಂಭಾಷಣೆ ಬರಹಗಾರರಿಗೆ ನಿಮ್ಮ ಕಿವಿ ಮಾತು?
ಸಿನಿಮಾ ಪ್ರೀತಿ ಅನ್ನವುದಕ್ಕಿಂತ ಮೊದಲು ಕನ್ನಡವನ್ನು ಪ್ರೀತಿಸಿ, ಬರವಣಿಗೆಯನ್ನು ಬೆಳೆಸಿ.. ಸಿನಿಮಾ ಕಥೆ ಬಗ್ಗೆ ಚರ್ಚಿಸಿ, ಇದು ಸಂಭಾಷಣೆಕಾರರಿಗೆ ಬಹಳ ಸಹಾಯ ಮಾಡುತ್ತದೆ..
- ಮೊದಲು ಯಾವ ಚಿತ್ರಕ್ಕೆ ಸಂಭಾಷಣೆ ಬರೆದಿದ್ದೀರಿ?
‘ಬಾಲ್ ಪೆನ್’.. ರವಿ ಬೆಳಗರೆ ಅವರು ಇದನ್ನು ನಿರ್ಮಿಸಿದ್ದಾರೆ.. ಅವರು ನನ್ನಂತಹ ಸಣ್ಣ ಬರಹಗಾರನಿಗೆ ಬೆನ್ನು ತಟ್ಟಿ ಪ್ರೋತ್ಸಹಿಸಿದರು ಎನ್ನುತ್ತಾರೆ ಮಾಸ್ತಿ..
ಇನ್ನಷ್ಟು ಚಿತ್ರಗಳಿಗೆ ಸಂಭಾಷಣೆ ಬರೆದು, ಇನ್ನಷ್ಟು ಉತ್ತಮ ಚಿತ್ರಗಳನ್ನು ಚಂದನವನಕ್ಕೆ ಕೊಡುಗೆಯಾಗಿ ನೀಡುತ್ತಾ ಬನ್ನಿ ಎಂದು ಬಾಲ್ಕನಿ ನ್ಯೂಸ್ ಹಾರೈಸುತ್ತದೆ..
ಸುಹಾನಿ.ಬಡೆಕ್ಕಿಲ
#balkaninews #maasthiinterview #dialoguewriter #sandalwood