ಚಿತ್ರ ವಿಮರ್ಶೆಗಳುಬಾಲ್ಕನಿಯಿಂದಸುದ್ದಿಗಳು

ಮನೆ ಮಾರಾಟಕ್ಕಿದೆ: ಕಾಡುವ ದೆವ್ವದೊಂದಿಗೆ ಭರ್ಜರಿ ಕಾಮಿಡಿ ಕಮಾಲ್

ರೇಟಿಂಗ್: 3.5/5

ಚಿತ್ರ: ಮನೆ ಮಾರಾಟಕ್ಕಿದೆ

ನಿರ್ದೇಶನ: ಮಂಜು ಸ್ವರಾಜ್

ನಿರ್ಮಾಪಕ: ಎಸ್ ವಿ ಬಾಬು

ಕಲಾವಿದರು: ಚಿಕ್ಕಣ್ಣ, ಸಾಧುಕೋಕಿಲಾ, ಕುರಿ ಪ್ರತಾಪ್, ರವಿಶಂಕರ್ ಗೌಡ, ಶ್ರುತಿ ಹರಿಹರನ್, ಗಿರಿ, ಶಿವರಾಂ, ರಾಜೇಶ್ ನಟರಂಗ ಮತ್ತು ಇತರರು

ಬರೀ ಭೂತ ಪ್ರೇತಗಳ ಕಥೆಗಳು ಹೆಜ್ಜೆ ಹೆಜ್ಜೆಗೂ ಭಯ, ನಡುಕ ಹುಟ್ಟಿಸುತ್ತವೆ. ಅಂಥಾ ಭೂತ ಚೇಷ್ಟೆಗೆ ಕಾಮಿಡಿ ಸನ್ನಿವೇಶಗಳು ಜೊತೆಯಾದರೆ ಅದರ ಮಜಾ ಬೇರೆಯದ್ದಿರುತ್ತದೆ. ಈ ಕಾರಣದಿಂದಲೇ ಕಾಮಿಡಿ ಹಾರರ್ ಜಾನರಿನ ಚಿತ್ರಗಳಿಗಾಗಿ ಪ್ರೇಕ್ಷಕರು ಹಂಬಲಿಸುತ್ತಾರೆ. ಆದರೆ ಅಪರೂಪಕ್ಕೆಂಬಂತೆ ಇಂಥಾ ಸಿನಿಮಾಗಳು ತೆರೆಗಾಣುತ್ತವೆ. ಇದೀಗ ಅದೇ ಜಾನರಿನ `ಮನೆ ಮಾರಾಟಕ್ಕಿದೆ’ ಚಿತ್ರ ಬಿಡುಗಡೆಯಾಗಿದೆ. ಕಾಡುವ ದೆವ್ವದೊಂದಿಗೆ ಭರ್ಜರಿ ಕಾಮಿಡಿ ಕಮಾಲ್ ಪ್ರತೀ ನೋಡುಗರನ್ನೂ ಥ್ರಿಲ್ ಆಗಿಸಿದೆ.

ಎಸ್.ವಿ ಬಾಬು ನಿರ್ಮಾಣದ ಈ ಚಿತ್ರವನ್ನು ಮಂಜು ಸ್ವರಾಜ್ ನಿರ್ದೇಶನ ಮಾಡಿದ್ದಾರೆ. ಈ ವರೆಗೂ ನಾಲಕ್ಕು ಸಿನಿಮಾಗಳಲ್ಲಿ ಭಿನ್ನವಾದ ಕಥೆಗಳ ಮೂಲಕವೇ ಗೆಲುವು ಕಂಡಿದ್ದ, ಪ್ರತಿಭಾವಂತ ನಿರ್ದೇಶಕರೆನ್ನಿಸಿಕೊಂಡಿದ್ದ ಮಂಜು ಈ ಸಿನಿಮಾ ಮೂಲಕ ಕಾಮಿಡಿ ಹಾರರ್ ಜಾನರಿನ ಕಥೆ ಹೇಳಿದ್ದಾರೆ. ಹಾಸ್ಯವನ್ನು ಒಂದೆರಡು ದೃಶ್ಯಾವಳಿಗಳಲ್ಲಿ ಹಿಡಿದಿಡುವುದೇ ಕಷ್ಟ. ಒಂದಿಡೀ ಸಿನಿಮಾದಲ್ಲಿ ಅದು ಪರಿಣಾಮಕಾರಿಯಾಗಿ ಮೂಡಿ ಬರುವಂತೆ ಮಾಡುವುದು ನಿಜಕ್ಕೂ ಒಂದು ಸಾಹಸವೇ.

ನಿರ್ದೇಶಕರು ಅದನ್ನು ಜಾಣ್ಮೆಯಿಂದಲೇ ಸಾಧ್ಯವಾಗಿಸಿದ್ದಾರೆ. ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ಎಲ್ಲಿಯೂ ಕುತೂಹಲ ಸಡಿಲಗೊಳ್ಳದಂತೆ ಪ್ರೇಕ್ಷಕರ ಕಡೆಯಿಂದ ನಗು, ಕೇಕೆಗಳು ಮಂಕಾಗದಂತೆ ಮಂಜು ಸ್ವರಾಜ್ ಈ ಸಿನಿಮಾವನ್ನು ರೂಪಿಸಿದ್ದಾರೆ.

ಇದು ಒಂದು ಬೃಹತ್ತಾದ, ಬಂಗಲೆಯಂಥಾ ಮನೆಯಲ್ಲಿ ಘಟಿಸುವ ಕಥೆಯನ್ನೊಳಗೊಂಡಿರುವ ಚಿತ್ರ. ಆ ಮನೆಯಲ್ಲಿ ವಾಸಿಸೋದು ವಯಸ್ಸಾದ ಎರಡು ಜೀವಗಳು ಮಾತ್ರ. ವಿದೇಶದಲ್ಲಿರುವ ಅದರ ಮಾಲೀಕರಿಗೆ ಹೆತ್ತವರಿರುವ ಆ ಮನೆಯನ್ನು ಹೇಗಾದರೂ ಮಾರಾಟ ಮಾಡುವ ತವಕ. ಆದರೆ ಆ ಮನೆಯ ಬಗ್ಗೆ ಹುಟ್ಟಿಕೊಳ್ಳುವ ಚಿತ್ರವಿಚಿತ್ರ ಕಥೆಗಳು, ಭೂತ ಚೇಷ್ಟೆಯ ಭಯಾನಕ ವಿಚಾರಗಳು ಊರು ತುಂಬಾ ಇಟ್ಟಾಡಲಾರಂಭಿಸುತ್ತವೆ. ಹಾಗಾದ ಮೇಲೆ ಸಹಜವಾಗಿಯೇ ಯಾರೊಬ್ಬರೂ ಆ ಮನೆಯನ್ನು ಖರೀದಿ ಮಾಡುವ ಸಾಹಸಕ್ಕೆ ಮುಂದಾಗುವುದಿಲ್ಲ.

ಇದರಿಂದಾಗಿ ಈ ಮನೆಯೊಳಗಿರುವ ದೆವ್ವವನ್ನು ಓಡಿಸಿ ಮನೆ ಮಾರಾಟ ಮಾಡುವಂತೆ ನೋಡಿಕೊಳ್ಳುವವರಿಗೆ ಭರ್ಜರಿ ಬಹುಮಾನದ ಆಫರ್ ಒಂದು ಹೊರ ಬೀಳುತ್ತದೆ. ನಾನಾ ವೃತ್ತಿ ಮಾಡುತ್ತಾ ಸಾಲದ ಸುಳಿಯಲ್ಲಿ ಸಿಕ್ಕ ನಾಲ್ವರ ಕಿವಿಗೂ ಅದು ಬೀಳುತ್ತದೆ. ಆ ನಾಲಕ್ಕೂ ಮಂದಿ ಈ ಬಂಗಲೆಗೆ ಎಂಟ್ರಿ ಕೊಡುವುದರೊಂದಿಗೆ ಭೂತ ಮತ್ತು ನಗುವಿನ ಜುಗಲ್ಭಂದಿಯ ಅಸಲೀ ಆಟ ಶುರುವಾಗುತ್ತದೆ. ಈ ನಾಲಕ್ಕೂ ಪಾತ್ರಗಳನ್ನು ಸಾಧು ಕೋಕಿಲಾ, ರವಿಶಂಕರ್ ಗೌಡ, ಕುರಿ ಪ್ರತಾಪ್ ಮತ್ತು ಚಿಕ್ಕಣ್ಣ ಆವಾಹಿಸಿಕೊಂಡಂತೆ ನಿರ್ವಹಿಸಿದ್ದಾರೆ. ಶ್ರುತಿ ಹರಿಹರನ್ ಮತ್ತು ಕಾರುಣ್ಯಾ ರಾಮ್ ಕೂಡಾ ಅದಕ್ಕನುಗುಣವಾಗಿಯೇ ಸಾಥ್ ಕೊಟ್ಟಿದ್ದಾರೆ.

ಇಡೀ ಕಥೆ ಹೆಚ್ಚೂ ಕಮ್ಮಿ ಮನೆಯೊಳಗೇ ಘಟಿಸಿದರೂ ಎಲ್ಲಿಯೂ ಬಿಗುವು ಕಳೆದುಕೊಳ್ಳದಂತೆ, ಬೋರು ಹೊಡೆಸದಂತೆ ನಿರ್ದೇಶಕರು ನಿಗಾ ವಹಿಸಿದ್ದಾರೆ. ಪ್ರತೀ ಸೀನುಗಳಲ್ಲಿಯೂ ನಗಿಸುವಲ್ಲಿಯೂ ಸಂಭಾಷಣೆ ಯಶ ಕಂಡಿದೆ. ಅತ್ಯಂತ ಚುರುಕಾದ ನಿರೂಪಣೆ ಈ ಸಿನಿಮಾದ ಪ್ರಧಾನವಾದ ಪ್ಲಸ್ ಪಾಯಿಂಟ್.

ಹಿನ್ನೆಲೆ ಸಂಗೀತವಂತೂ ನಗು ಮತ್ತು ಪ್ರೇತ ಬಾಧೆಯನ್ನು ಮತ್ತಷ್ಟು ತೀವ್ರವಾಗಿಸಿದೆ. ಎಲ್ಲವೂ ಒಂದಕ್ಕೊಂದು ಪೂರಕವಾಗಿರೋ ಕಾರಣದಿಂದಲೇ ‘ಮನೆ ಮಾರಾಟಕ್ಕಿದೆ’ ಎಂಬುದು ನಗೆ ಹಬ್ಬದಂತೆ ಮೂಡಿ ಬಂದಿದೆ. ಪ್ರೇಕ್ಷಕರೆಲ್ಲ ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡಬಹುದಾದ ಚಿತ್ರವಿದು.

ಡಾ. ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ ಪಡೆದ ‘ಒಂದಲ್ಲಾ ಎರಡಲ್ಲಾ’

#ManeMaratakkide #ManeMaratakkideMovie #ManeMaratakkideReview #kannadaSuddigalu

Tags