ಚಿತ್ರ ವಿಮರ್ಶೆಗಳುಬಾಲ್ಕನಿಯಿಂದ

ಮನ್ ಕೀ ಬಾತ್ ಅಲ್ಲ, ಮಂಕೀ “ಬಾತ್”

ಇದು ತಲೆ “ಎತ್ತಿ” ಬದುಕುವವರ ಸಿನಿಮಾ

ಚಿತ್ರ : ಪಾಪ್ ಕಾರ್ನ್ ಮಂಕೀ ಟೈಗರ್
ನಿರ್ದೇಶನ : ಸೂರಿ
ತಾರಾಗಣ ಧನಂಜಯ್ , ಸ್ಮಿತಾ ಮುಂತಾದವರು

ರೇಟಿಂಗ್- 4/5

-ಹರಿ ಪರಾಕ್

ಚಿತ್ರದ ಹೆಸರು ಕೇಳಿದ ಕೂಡಲೇ ಗೊತ್ತಾಗುತ್ತೆ, ಇದು ಕಷ್ಟ ಸುಖ ಮಾತಾಡುವ ಸಾಮಾಜಿಕ ಸಿನಿಮಾ ಅಲ್ಲ, ಪಕ್ಕಾ, ಸುಕ್ಕಾ ಸ್ಪೆಷಲಿಸ್ಟ್ ಸೂರಿ ಸಿನಿಮಾ ಅಂತ. ಪಾಪ್ ಕಾರ್ನ್ ಮಂಕೀ ಟೈಗರ್ ಚಿತ್ರ, ಪಾಪ್ ಕಾರ್ನ್ ತಿಂದುಕೊಂಡು ಕೂಲಾಗಿ ನೋಡುವಂಥ ಚಿತ್ರ ಅಲ್ಲ. ಸೀಟಿನ ಕಾರ್ನರ್ ಎಡ್ಜ್ ನಲ್ಲಿ ಕೂತು ನೋಡುವಂಥ ಚಿತ್ರ. ಈ ಪಾಪಿಗಳ ಲೋಕದಲ್ಲಿರುವವರು ತಲೆ “ಎತ್ತಿ” ಬದುಕುತ್ತಾರೆ.. ಆಗಾಗ ಪೊಲೀಸರ ಮತ್ತು ತಮ್ಮ ವಿರೋಧಿಗಳ ಭಯದಿಂದ ತಲೆ ಮರೆಸಿಕೊಳ್ಳುತ್ತಾರೆ ಕೂಡ. ಹಾಗಂತ ಒಮ್ಮೆ ನೋಡಿ ಮರೆತುಬಿಡುವಂಥ ಚಿತ್ರವೂ ಅಲ್ಲ.

ಈ ಚಿತ್ರದ ವಿಶೇಷ ಅಂದ್ರೆ ಇಲ್ಲಿ ನೀವು ಕಥೆ ಹುಡುಕಲು ಹೋದ್ರೆ ಅದು ಸಿಗಲ್ಲ, ಅಥವಾ ಹತ್ತಾರು ಕಥೆಗಳು ಸಿಗುತ್ತವೆ ಅಂತಲೂ ಅನಿಸಬಹುದು. ಯಾಕಂದ್ರೆ ಇಲ್ಲಿ ಪ್ರತಿಯೊಂದು ಪಾತ್ರದಲ್ಲೂ ಕಥೆಯಿದೆ. ಪಾಪ್ ಕಾರ್ನ್ ದೇವಿ ಆಗಲೀ ಮಂಕಿ ಸೀನ ಆಲಿಯಾಸ್ ಟೈಗರ್ ಸೀನ ಆಗಲಿ ಇಲ್ಲಿ ಕಥೆ ಹೇಳುತ್ತಾರೆ. ದೇವಿಯ ಕಥೆಗೆ ಅಂತ್ಯ ಸಿಗಲ್ಲ. ಆದರೆ ಟೈಗರ್ ಸೀನನ “ಕಥೆಯಂತೂ ಮುಗಿಯುತ್ತದೆ” .

ಇಲ್ಲಿ ಮದುವೆ ಮಾತುಕತೆ ನಡೆಯುವಾಗ ತಾಂಬೂಲ ಕೊಟ್ಟು, ತೆಗೆದುಕೊಳ್ಳುವಂತೆ, ತಲೆ ತೆಗೆಯಲು ಸುಪಾರಿ ಕೊಟ್ಟು, ತೆಗೆದುಕೊಳ್ಳುವವರು ಇದ್ದಾರೆ, ಆದರೆ ಚಿತ್ರದ ಸಂಭಾಷಣೆಯೊಂದು ಹೇಳುವಂತೆ ಇವರ್ಯಾರೂ ಲಕ್ಷ, ಕೋಟಿಗಟ್ಟಲೇ ಸುಪಾರಿ ತೆಗೆದುಕೊಳ್ಳುವವರಲ್ಲ, ಮೊಬೈಲ್ ರೀ ಚಾರ್ಜ್ ಮಾಡಿಸಿದ್ರೆ ಸಾಕು ತಲೆ ಎತ್ತಲು ರೆಡಿ. ಪಾಪ್ ಕಾರ್ನ್ ಮಂಕಿ ಚಿತ್ರಕ್ಕೂ ಇತರ ಭೂಗತ ಲೋಕದ ಚಿತ್ರಗಳಿಗೂ ವ್ಯತ್ಯಾಸ ಇರೋದು ಇಲ್ಲೇ, ಸೂರಿ ಈ ವಾತಾವರಣದ ಯಾವ ವಿಷಯವನ್ನೂ ಅನಗತ್ಯವಾಗಿ ವೈಭವೀಕರಿಸಲು ಹೋಗಿಲ್ಲ. ಅದರ ಬದಲಾಗಿ ಅಲ್ಲಿನ ನಿಜವಾದ ಸೂಕ್ಷ್ಮಗಳನ್ನು ಅರಿತು ಸಿನಿಮಾ ಮಾಡಿದ್ದಾರೆ.

ಅನೇಕರಿಗೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಟಗರು ಚಿತ್ರದ ಮುಂದುವರಿದ ಅಧ್ಯಾಯದಂತೆ ಅನ್ನಿಸಬಹುದು. ಅಥವಾ ಶಿವರಾಜ್ ಕುಮಾರ್ ಮೈನಸ್ ಟಗರು ಅಂತಲೂ ಅನ್ನಿಸಬಹುದು. ಆದರೆ ಅದೇ  ಚಿತ್ರದ ಪ್ಲಸ್ ಪಾಯಿಂಟ್. ಇಲ್ಲಿ ಮುಂದೇನಾಗುತ್ತೆ ಅನ್ನೋ ಕುತೂಹಲ ಹೆಚ್ಚಿಲ್ಲ, ಈಗ ಏನಾಗ್ತಾ ಇದೆ ಅನ್ನೋದನ್ನ ತೋರಿಸೋದಷ್ಟೇ ಸೂರಿ ಅವರಿಗೆ ಮುಖ್ಯ. ಈ ಕಾರಣಕ್ಕೆ ಆಗಾಗ ಫ್ಲ್ಯಾಷ್ ಬ್ಯಾಕಿಗೆ ಹೋದ್ರೂ ಈ ಚಿತ್ರದ ಜೀವ ಇರೋದು ಪ್ರೆಸೆಂಟ್ ನಲ್ಲೇ. ಈ ನಿಟ್ಟಿನಲ್ಲಿ ರಾ ಚಿತ್ರಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ಸೂರಿ ಒಂದೊಳ್ಳೆ ಪ್ರೆಸೆಂಟ್ ಕೊಟ್ಟಿದ್ದಾರೆ ಎನ್ನಬಹುದು.

ದೇವಿ ಪಾತ್ರದಲ್ಲಿ ಸ್ಮಿತಾ ಸೂರಿ ಚಿತ್ರಕ್ಕೆ ಸರಿಯಾದ ಆಯ್ಕೆ. ತಾಯಿಗಿಂತ ದೇವರಿಲ್ಲ ಅನ್ನೋ ಮಾತನ್ನು ದೇವಿಗಿಂತ ತಾಯಿಯಿಲ್ಲ ಅಂತೆಲ್ಲಾ ಬದಲಾಯಿಸಿಕೊಂಡು ಸೆಂಟಿಮೆಂಟಲ್ ಆಗಿ ನೋಡುವಂಥ ತಾಯಿ ಏನಲ್ಲ ಈ ದೇವಿ. ಟೈಗರ್ ಸೀನ ಕೂಡ ಕೆಲವರ ಪಾಲಿಗೆ ಮಂಕಿ ಸೀನ. ಅದು ಅವನ “ಹಣೆಬರಹ” ಕೂಡ. ತನ್ನ ತಲೆಯ ಮೇಲೆ ಮಂಕಿ ಎಂದು ಬರೆಯುವ ಶತ್ರುಗಳನ್ನು ಎದುರು ಹಾಕಿಕೊಂಡು ಬದುಕುವ ಸೀನ, ಪಾಪಿಗಳ ಲೋಕದಲ್ಲೇ ಇದ್ದುಕೊಂಡು ತನ್ನ ಪಾಪುವನ್ನು ಹುಡುಕುವ ದೇವಿಯ ಜೊತೆ ಇಲ್ಲಿ ಅನೇಕ ಪಾತ್ರಗಳಿವೆ. ಎಲ್ಲರೂ ತಾ ಮುಂದು, ನಾ ಮುಂದು ಎನ್ನುವಂತೆ ತಮ್ಮ ತಮ್ಮ ಕಥೆ ಹೇಳುತ್ತಾರೆ. ಇವರ ನಡುವೆ ಕೆಂಡಸಂಪಿಗೆಯ ಕಾಗೆ ಬಂಗಾರದ ಕಸ್ಟಮರ್ ಗಳೂ ಬಂದು ಹೋಗುತ್ತಾರೆ. ಹೀಗೆ ಸೂರಿ ಈ ಸಿನಿಮಾ ಹೇಳಲು ವಿಶೇಷ ಟೆಕ್ನಿಕ್ ಅನ್ನು ಬಳಸಿಕೊಂಡಿದ್ದಾರೆ.

ಸಿನಿಮಾ ಅಂದ್ರೆ ಹೀಗೇ ಇರಬೇಕು ಅನ್ನೋ ನಿಯಮವನ್ನು ಮುರಿದು, ಸಿನಿಮಾ ಕೂಡ ಜೀವನದಂತೆ ಅನ್ ಪ್ರಿಡಿಕ್ಟಬಲ್, ಹಾಗಾಗಿ ಅದು ಹೇಗೆ ಬೇಕಾದರೂ ಇರಬಹುದು ಅನ್ನೋ ಮೆಂಟಾಲಿಟಿ ನಿರ್ದೇಶಕ ಸೂರಿ ಅವರದ್ದು.

ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಅನ್ನೋದು ಢಾಳಾಗಿದೆ. ಆದರೆ ಅದರಿಂದ ಚಿತ್ರ ಹಾಳಾಗಿಲ್ಲವಾದ್ರೂ, ಪ್ರತಿ ಬಾರಿಯೂ ಮೊದಲು ತೊಳಕೊಂಡು ಆಮೇಲೆ ಕಕ್ಕ ಮಾಡುವ ವಿಧಾನ ಕೊಂಚ ಅನವಶ್ಯಕ ಎನಿಸಿದರೆ ತಪ್ಪಿಲ್ಲ.

ಮಾತೆತ್ತಿದರೆ ಕೈ ಕಾಲು ಎತ್ತುವವರು, ನಂಬಿಸಿ ಕೈ ಎತ್ತುವವರು ಇಲ್ಲಿದ್ದಾರೆ. ಅವರ ಲೋಕವನ್ನು ಕಚ್ಚಾ ಆಗಿಯೇ ತೋರಿಸಲಾಗಿದೆ. ಹಾಗಾಗಿ ಚಿತ್ರದ ಬಹುತೇಕ ದೃಶ್ಯಗಳಲ್ಲಿ ಲೆಗ್ ಪೀಸ್ ಜೊತೆ ಎಣ್ಣೆ ಹೊಡೆಯುವ ಟ್ರೆಂಡ್ ಕಾಣಿಸುತ್ತದೆ. ಇಲ್ಲಿ ಮಧ್ಯಂತರ ಇದೆ. ಆದರೆ ಮದ್ಯ ಸೇವಿಸುವ ದೃಶ್ಯಗಳ ನಡುವೆ ಅಂತರ ಕಡಿಮೆ.

ತುಂಬಾ ಬೆಳೆದುಬಿಟ್ಟಿದೀಯ, ಬೆಳೆದ್ರೆ ತಾನೇ ಕಟ್ ಮಾಡೋಕಾಗೋದು ಎನ್ನುವ ಡೈಲಾಗ್ ಸಿನಿಮಾದಲ್ಲಿದೆ. ಅದರಂತೆ, ಸಿನಿಮಾ ಬೆಳೆದಂತೆ ಅದನ್ನು ಹಾಗೇ ಬಿಡದೆ ಶಾರ್ಪ್ ಆಗಿ ಕಟ್ ಮಾಡಲಾಗಿದೆ. ಹಾಗಾಗಿ ಚಿತ್ರ ಲಾಂಗ್ ಗಳ ಬಗ್ಗೆಯೇ ಹೆಚ್ಚು ಮಾತಾಡಿದರೂ ಲೆಂತ್ ಮಾತ್ರ ಶಾರ್ಟ್ ಅಂಡ್ ಸ್ವೀಟ್ ಆಗಿದೆ.

ಟೈಗರ್ ಸೀನನಾಗಿ ಮಾನವೀಯ ಮತ್ತು ಅಮಾನವೀಯ ಗುಣಗಳನ್ನು ತೋರಿಸುವಲ್ಲಿ ಧನಂಜಯ ಜಯಿಸಿಕೊಂಡಿದ್ದಾರೆ. ಡಾಲಿಗಿಂತ ಹೆಚ್ಚೇ ಖದರು ಸೀನನಲ್ಲಿದೆ. ಚಿತ್ರರಂಗದಲ್ಲಿ ಧನಂಜಯ ಎಂಬ ಪ್ರತಿಭೆ ಬೆಳೆಯುತ್ತಿರುವ ವೇಗ ಮತ್ತು ಪಾಪ್ ಕಾರ್ನ್ ಮಂಕಿ ಚಿತ್ರದ ವೇಗ ಎರಡೂ ಸಮೀಕರಣಗೊಂಡಿದೆ. ದೇವಿ ಪಾತ್ರದಲ್ಲಿ ಸ್ಮಿತಾ ಅವರ ಅಭಿನಯದಲ್ಲಿ ದೈವಿಕ ಶಕ್ತಿ ಇದೆ. ಗಲೀಜು ಕ್ಲೀನ್ ಸ್ವೀಪ್ ಮಾಡಿದ್ದಾನೆ. ಮೂಗ ಮುಕ್ತವಾಗಿ ಮಾತಾಡಿದ್ದಾನೆ. ಅಂಕಲ್ ಕಲೈ ಅವರದ್ದೂ ವಯಸ್ಸಿಗೆ ತಕ್ಕಂಥ ಪ್ರತಿಭೆ. ಹಾಗೆ ನೋಡಿದರೆ ಚಿತ್ರದ ಪ್ರತಿಯೊಂದು ಪಾತ್ರ ಕೂಡ ಚಿತ್ರದ ಓಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಹಾಡುಗಳಿಗೆ ಅಷ್ಟು ಮಹತ್ವ ಇಲ್ಲದಿದ್ದರೂ ಅಂಡರ್ ವರ್ಲ್ಡ್ ಆಧಾರಿತ ಚಿತ್ರದಲ್ಲಿ ಬ್ಯಾಕ್ ಗ್ರೌಂಡ್ ಮ್ಯೂಸಿಕ್  ಕಿವಿಯಿಂದ ಎದೆಗಿಳಿಯುತ್ತದೆ. ಒಟ್ಟಾರೆ ಸೂರಿ ಅವರ ಪಾಪ್ ಕಾರ್ನ್ ಮಂಕಿ ಟೈಗರ್ ಒಂದು ಲಕ್ಷಣವಾದ, ವಿಲಕ್ಷಣ ಚಿತ್ರ ಎನ್ನಬಹುದು.

#PopcornMonkeyTigerReview #KannadaCinema #Dhananjay #Kannada #Soori #DuniyaSoori #KannadaTrends

Tags