ಬಾಲ್ಕನಿಯಿಂದವಿಡಿಯೋಗಳು

‘ಕುಚ್ಚಿಕೂ ಕುಚ್ಚಿಕು’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ‘ಮಧುರ ನೆನಪುಗಳು’

ಜುಲೈ 6 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿರುವ ‘‘ಕುಚ್ಚಿಕೂ ಕುಚ್ಚಿಕು’ ಚಿತ್ರದ ಪತ್ರಿಕಾಗೋಷ್ಟಿ ಇತ್ತಿಚೆಗಷ್ಟೇ ನಡೆಯಿತು. ಈ ಚಿತ್ರವನ್ನು ದಿವಂಗತ ಡಿ.ರಾಜೇಂದ್ರ ಬಾಬು ಅವರು ನಿರ್ದೇಶನ ಮಾಡಿದ್ದು, ಇದು ಇವರ ಕೊನೆಯ ಚಿತ್ರವಾಗಿದೆ. ಚಿತ್ರದಲ್ಲಿ ಜಯರಾಮ್ ಕಾರ್ತಿಕ್, ಪ್ರವೀಣ್ ಕುಮಾರ್ ಹಾಗೂ ನಕ್ಷತ್ರಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ರಮೇಶ್ ಭಟ್, ಸುಮಿತ್ರಾದೇವಿ ಸೇರಿದಂತೆ ಅನೇಕರು ಕಲಾವಿದರು ಚಿತ್ರದಲ್ಲಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ತಂಡದವರು ಹಾಜರಿದ್ದು, ಚಿತ್ರದ ಕುರಿತಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಾಗೂ ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಸಂಗೀತ ನೀಡಿದ್ದು, ಈ ಚಿತ್ರದ ಮೇಲೆ ಅವರಿಗೊಂದು ವಿಶೇಷವಾದ ಪ್ರೀತಿ ಇದೆ.

ಅದಕ್ಕೆ ಎರಡು ಕಾರಣ ಮೊದಲನೆಯದು ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಜೊತೆಗಿನ ಆತ್ಮೀಯತೆಯಾದರೆ, ಮತ್ತೊಂದು ಕಾರಣ ಈ ಸಿನಿಮಾದ ಸಂಭಾವನೆಯಿಂದ ಅವರ ಮಗಳ ಮದುವೆಯ ಸಭಾಂಗಣ ಬುಕ್ಕಿಂಗ್ ಗೆ ಅಡ್ವಾನ್ಸ್ ಮಾಡಿದ್ದು. ಈ ವಿಷಯವನ್ನು ಸ್ವತಃ ಹಂಸಲೇಖ ಅವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“ಇದು ಬರೀ ಕುಟುಂಬವಲ್ಲಾ, ಇದೊಂದು ಸಿನಿಮಾ ಕುಟುಂಬ , ಅವರು ಸಿನಿಮಾ ಪ್ರೀತಿಯನ್ನು ಮೆಚ್ಚಬೇಕಾದದ್ದೇ. ನನಗೊಂದು ಹೆಮ್ಮೆಯಿದೆ. ಡಿ. ಬಾಬು ಅವರ ಸಿನಿಮಾದಿಂದಲೇ ನಾನು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೀನಿ. ನನ್ನನ್ನು ‘ಲೇಖೇ’ ಎಂದು ಕರೆಯುತ್ತಿದ್ದರು. ಅವರೂ ಹಾಗೂ ರವಿಚಂದ್ರನ್ ಅವರು. ಇಬ್ಬರೂ ನನ್ನನ್ನು ಬೆಳೆಯಲಿಕ್ಕೆ ಸಪೋರ್ಟ್ ಮಾಡಿದವರು.

ನನಗೆ ಯಜಮಾನವರು (ರವಿಚಂದ್ರನ್) ಅವಕಾಶ ಕೊಟ್ಟರೆ, ಸಿನಿಮಾದ ಕೋಚ್ ಆಗಿ ಕೆಲಸ ಮಾಡಿದವರು ಬಾಬು ಅವರು. ಸಿನಿಮಾದ ಪರಿಭಾಷೆ ಸೇರಿದಂತೆ ಹಲವು ವಿಷಯವನ್ನು ಕಲಿಸಿಕೊಟ್ಟವರು ಬಾಬು ಅವರು. ಈಗ ಅವರ “ಕುಚ್ಚಿಕೂ ಕುಚ್ಚಿಕು’ ಚಿತ್ರ ಬಿಡುಗಡೆಯಾಗುತ್ತಿದೆ. ಇದು ಅವರ ಕನಸಿನ ಚಿತ್ರ ಕೂಡಾ. ಇನ್ನು ಈ ಚಿತ್ರ ಮೇಲೆ ನನಗೆ ಮತ್ತೊಂದು ಸೆಂಟಿಮೆಂಟ್ ಇದೆ.

ಅದೇನೆಂದರೆ ನನ್ನ ಮಗಳ ಮದುವೆಗೆ ಹಾಲ್ ಬುಕ್ ಮಾಡಲು ಬ್ಯಾಂಕ್ನಿಂದ ಎರಡು ಲಕ್ಷ ಡ್ರಾ ಮಾಡಿ ಅಡ್ವಾನ್ಸ್ ಕೊಡಲು ಮ್ಯಾನೇಜರ್ ಗೆ ಹೇಳಿದ್ದೆ. ಅಷ್ಟೊತ್ತಿಗೆ ಈ ಸಿನಿಮಾದ ನಿರ್ಮಾಪಕ ಕೃಷ್ಣಮೂರ್ತಿ ಬಂದು, ಐದು ಲಕ್ಷ ಕೊಟ್ಟು ನಮ್ಮ ಸಿನಿಮಾಕ್ಕೆ ನೀವು ಸಂಗೀತ ನೀಡಬೇಕು ಎಂದರು. ಕಟ್ ಮಾಡಿದರೆ, ಮ್ಯಾನೇಜರ್ ಗೆ ಬ್ಯಾಂಕ್ನಿಂದ ಡ್ರಾ ಮಾಡಬೇಡಿ, ಇದನ್ನೇ ಅಡ್ವಾನ್ಸ್ ಮಾಡಿ ಎಂದು ಕೃಷ್ಣಮೂರ್ತಿಯವರು ಕೊಟ್ಟ ಹಣವನ್ನು ಹಾಲ್ ಗೆ ಕೊಟ್ಟೆ. ಅಂದು ನನ್ನ ಮಗಳ ಮದುವೆಯ ಹಾಲ್ಗೆ ಅಡ್ವಾನ್ಸ್ ಮಾಡಿದ್ದು “ಕುಚ್ಚಿಕ್ಕು ಕುಚ್ಚಿಕು’ ನಿರ್ಮಾಪಕರ ದುಡ್ಡನ್ನು. ನನ್ನ ಮಗಳು-ಅಳಿಯ ಚೆನ್ನಾಗಿದ್ದಾರೆ. ಅದೇ ರೀತಿ ಈ ಸಿನಿಮಾ ಕೂಡಾ ಚೆನ್ನಾಗಿ ಆಗುತ್ತದೆ ಎಂಬ ವಿಶ್ವಾಸವಿದೆ’ ಎಂದು ಸಿನಿಮಾಕ್ಕೆ ಶುಭಕೋರಿದರು.

“ಗಜಗರ್ಭದ ಒಂದು ಶಿಶುವಾಗಿ ಈ ಚಿತ್ರವು ಜುಲೈ 6 ನೇ ತಾರೀಖು ಹೊರ ಬರ್ತಾ ಇದೆ. ಈ ಚಿತ್ರ ನನಗೆ ತುಂಬಾ ಸಂತೋಷ ಕೊಟ್ಟಿದೆ. ಈ ಚಿತ್ರದಲ್ಲಿನ ನನ್ನ ಅಭಿನಯವನ್ನು ನಿರ್ದೇಶಕರು ತುಂಬಾ ತುಂಬಾ ಮೆಚ್ಚಿಕೊಂಡಿದ್ದರು.” ಎಂದು ಹೇಳುತ್ತಾ ಅಗಲಿದ ನಿರ್ದೇಶಕರನ್ನು ನೆನಪಿಸಿಕೊಂಡು ಕೆಲ ಕಾಲ ಭಾವುಕರಾದರು.

ಇವರೊಂದಿಗೆ ಚಿತ್ರದ ನಾಯಕರಾದ ಜಯರಾಮ್ ಕಾರ್ತಿಕ್ ಹಾಗೂ ಪ್ರವೀಣ್ ಕುಮಾರ್ ಅವರು ತಮ್ಮ ಚಿತ್ರದೊಂದಿಗಿನ ಹಾಗೂ ನಿರ್ದೇಶಕರೊಂದಿಗಿನ ಸಂಭಂದವನ್ನು ಹೇಳುತ್ತಾ, ಕೆಲ ಕಾಲ ಭಾವುಕರಾದರು.

ಇನ್ನು ನಿರ್ದೇಶಕ ಡಿ, ಬಾಬು ಅವರ ಮಗಳಾದ ನಕ್ಷತ್ರ ಅವರು ಚಿತ್ರದ ಬಗ್ಗೆ ಹಾಗೂ ತಮ್ಮ ಮತ್ತು ತಮ್ಮ ತಂದೆಯವರೊಂದಿಗಿನ ಆತ್ಮಿಯತೆಯ ಕುರಿತಂತೆ “ತುಂಬಾ ದಿನಗಳಿಂದ ನಮ್ಮ ತಂದೆಯವರೊಂದಿಗೆ ಸಿನಿಮಾ ಮಾಡಬೇಕು ಎಂಬ ಆಸೆಯಿತ್ತು. ಜೊತೆಗೆ ಅಕ್ಕಾ ಉಮಾ ಸಹ ಅಪ್ಪನ ನಿರ್ದೇಶನದ ಚಿತ್ರದಲ್ಲಿ ನಟಿಸಿದ್ದರು. ಹೀಗಾಗಿ ಈ ಚಿತ್ರದಲ್ಲಿ ನಟಿಸಿದ್ದು ನನಗೆ ಹೆಮ್ಮೆಯಿದೆ. ಜೊತೆಗೆ ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ ಚಿತ್ರದ ಪ್ಲಸ್ ಪಾಯಿಂಟ್ “ ಎಂದು ಹೇಳಿದರು. ಜೊತೆಗೆ ಅವರ ತಾಯಿಯವರಾದ ಸುಮಿತ್ರಾ ದೇವಿಯವರು ಸಹ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಚಿತ್ರವನ್ನು ಶ್ರೀ ಚೆಲುವರಾಯಸ್ವಾಮಿ ಮೂವೀಸ್ ಬ್ಯಾನರ್ ನಡಿಯಲ್ಲಿ ಎನ್.ಕೃಷ್ಣಮೂರ್ತಿ ಅವರು ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಎಮ್.ಯೂ ನಂದಕುಮಾರ್ ಅವರ ಛಾಯಾಗ್ರಹಣವಿದೆ. ಜಯಣ್ಣ-ಭೋಗೇಂದ್ರ ಅವರ ಹಂಚಿಕೆಯಲ್ಲಿ ಈ ಚಿತ್ರವು ತೆರೆಗೆ ಬರಲಿದೆ.

Tags