ಉದಯೋನ್ಮುಖರುಬಾಲ್ಕನಿಯಿಂದಸಂದರ್ಶನ

ನಿರ್ದೇಶನದತ್ತ ಪುಟ್ಟ ಗೌರಿಯ ರಂಜನಿ

ಬೆಂಗಳೂರು, ಮಾ.13:

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿ ಪಾತ್ರಧಾರಿಯಾಗಿ ವೀಕ್ಷಕರ ಮನ ಗೆದ್ದಿರುವ ರಂಜನಿ ರಾಘವನ್ ಸೀರಿಯಲ್ ಪ್ರಿಯರ ಪಾಲಿನ ಮುದ್ದು ಕಣ್ಮಣಿ. ಆಕಾಶದೀಪ ಧಾರಾವಾಹಿಯ ಮೂಲಕ ರಂಜನಿ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಅವರಿಗೆ ಹೆಸರು ತಂದು ಕೊಟ್ಟದ್ದು ಗೌರಿ ಪಾತ್ರ.

ಎಂಬಿಎ ಮುಗಿಸಿರುವ ರಂಜನಿಗೆ ನಟಿಯಾಗಬೇಕು ಎಂಬ ಬಯಕೆಯೇನು ಇರಲಿಲ್ಲ. ಬದಲಿಗೆ ತಾನೊಬ್ಬಳು ಗಾಯಕಿಯಾಗಬೇಕು ಎಂಬ ಮಹದಾಸೆ ಇತ್ತು. ನಟನಾ ಕ್ಷೇತ್ರಕ್ಕೆ ಬಂದದ್ದು ಆಕಸ್ಮಿಕ. ದೊರೆತ ಅವಕಾಶವನ್ನು ಬಿಡಲೊಲ್ಲದ ರಂಜನಿ ಇದೀಗ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ 2016 ರ ಜನ ಮೆಚ್ಚಿದ ನಾಯಕಿ ಅವಾರ್ಡ್ ಪಡೆದಿರುವುದು ಇದಕ್ಕೆ ಸಾಕ್ಷಿ. ಜೊತೆಗೆ ಸತತ ಎರಡನೇ ಬಾರಿಗೆ ಮನೆ ಮೆಚ್ಚಿದ ಸೊಸೆ ಅವಾರ್ಡ್ ಕೂಡಾ ಪಡೆದುಕೊಂಡಿರುತ್ತಾರೆ.ರಂಗಭೂಮಿಯ ಮೂಲಕ ನಟನಾ ಪಯಣವನ್ನು ಆರಂಭಿಸಿದ ರಂಜನಿ ‘’ ನಾನು ಯಾವತ್ತೂ ನಟಿಯಾಗಬೇಕು ಎಂದು ಅಂದುಕೊಂಡವಳಲ್ಲ. ಕಾಲೇಜಿನಲ್ಲಿ ರಂಗಭೂಮಿಗೆ ಸಂಬಂಧಿಸಿದಂತಹ ಚಟುವಟಿಕೆಗಳು ನಡೆಯುತ್ತಿದ್ದವು.. ಸಂದರ್ಭದಲ್ಲಿ ಪಾತ್ರವೊಂದರಲ್ಲಿ ನಟಿಸುವ ಅವಕಾಶ ದೊರೆಯಿತು. ನೋಡೋಣ ಎಂದು ಅಭಿನಯಿಸಿದೆ .  ಆ ಅಭಿನಯಕ್ಕೆ ಮೆಚ್ಚುಗೆಯೂ ಬಂತು. ಅಲ್ಲಿಂದ ರಂಗಭೂಮಿಯತ್ತ ಆಸಕ್ತಿ ಬೆಳೆಯಿತು’ ಎನ್ನುತ್ತಾರೆ ರಂಜನಿ.

ನಟನೆಯ ಹೊರತಾಗಿ ರಂಜನಿ ಉತ್ತಮ ಗಾಯಕಿಯೂ ಹೌದು. ನಾಲ್ಕನೇ ವಯಸ್ಸಿನಲ್ಲಿಯೇ ಹಾಡು ಹೇಳಲು ಆರಂಭಿಸಿರುವ ಇವರು ಶಾಸ್ತ್ರೀಯ ಸಂಗೀತ ಕಲಿರುತ್ತಾರೆ. ಚಿಂತನಪಲ್ಲಿ ಶ್ರೀನಿವಾಸ ಮತ್ತು ಆಶಾ ವಿಶ್ವನಾಥ್ ಅವರ ಸಂಗೀತ ಗರಡಿಯಲ್ಲಿ ಪಳಗಿರುವ ರಂಜನಿಗೆ ಮುಂದೆ ತಾನೊಬ್ಬಳು ಗಾಯಕಿ ಆಗಲೇಬೇಕು ಎಂಬ ಬಯಕೆ. ಇಂತಿಪ್ಪ ಬೆಡಗಿ ಸದ್ಯಕ್ಕೆ ಶೂಟಿಂಗ್ ನಲ್ಲಿ ಬ್ಯುಸಿ.

ಮುದ್ದು ಮುಖದ ರಂಜನಿ ಈಗಾಗಲೇ ಹಿರಿತೆರೆಗೆ ಪಾದಾರ್ಪಣೆ ಮಾಡಿಯಾಗಿದೆ. ರಾಜ ಹಂಸ, ಸುಬ್ಬ ಸುಬ್ಬಿ ಸಿನಿಮಾದಲ್ಲಿ ನಟಿಸಿದ  ರಂಜಿನಿ ಈಗ ಹೊಸ ಯೋಜನೆಗೆ ಮುಂದಾಗಿದ್ದಾರೆ. ಇಷ್ಟು ದಿನ ಪುಟ್ಟ ಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ರಂಜಿನಿ ಇದೀಗ ನಿರ್ದೇಶಕಿಯಾಗ ಹೊರಟಿದ್ದಾರೆ. ತಮ್ಮ ಸಾರಥ್ಯದಲ್ಲಿ ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡುವ ತಯಾರಿ ನಡೆಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಗಾಗಿ ಒಂದು ಧಾರಾವಾಹಿಯ ನಿರ್ದೇಶನದ ತಯಾರಿಯಲ್ಲಿರುವ ರಂಜನಿ ಗೌರಿಯಾಗಿ ಮನೆ ಮಾತಾದದ್ದು ಕೂಡಾ ಇದೇ ವಾಹಿನಿಯಲ್ಲಿ ಎಂಬುದು ವಿಶೇಷ.

ರಂಜನಿ ತಮ್ಮ ಹೊಸ ಧಾರಾವಾಹಿಗೆ ಆಡಿಷನ್ ಮಾಡುತ್ತಿದ್ದಾರೆ.  ಆಡಿಷನ್ ಮೂಲಕ ಹೊಸ ಮುಖಗಳನ್ನು ಹುಡುಕುತ್ತಿರುವ ರಂಜನಿ ಇದೀಗ ನಿರ್ದೇಶಕಿಯಾಗಿ ಬೆಳೆಯುವ ಉತ್ಸಾಹದಲ್ಲಿದ್ದಾರೆ.  ಅಲ್ಲದೇ ಈ ಧಾರಾವಾಹಿ ಪ್ರಾರಂಭ ಆಗುತ್ತಿರುವ ವಿಷಯವನ್ನು ಇನ್ನೂ ರಂಜನಿ ಅನೌನ್ಸ್ ಮಾಡಬೇಕಷ್ಟೇ…

#ranjiniraghavan #balkaninews #puttagowrimadhuve #serial #ranjiniraghavanmovies #interview

Tags