ಬಾಲ್ಕನಿಯಿಂದಸಂದರ್ಶನ

ಶಿಲ್ಪಾ ಎಂಬ ಹಾಡುವ ಕೋಗಿಲೆ…

ಬೆಂಗಳೂರು, ಮಾ.16:

ಆಸಕ್ತಿ ಮತ್ತು ಶ್ರದ್ಧೆಯಿಂದ ಕಲೆಯ ಆರಾಧನೆ ಮಾಡಿದರೆ ಕಲಾ ಸರಸ್ವತಿ ಒಲಿದೇ ಒಲಿಯುತ್ತಾಳೆ. ಅದಕ್ಕೆ ಗಾಯಕಿ ಶಿಲ್ಪಾ ಮಧುಸೂದನ್ ಅವರೇ ಸಾಕ್ಷಿ.

ಸದ್ಯ ಚಂದನವನದಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿರುವ ಶಿಲ್ಪಾ ಮಧುಸೂಧನ್ ಗೆ ಸಂಗೀತದ ಬಗ್ಗೆ ಆಸಕ್ತಿ ಮೂಡಿದಾಗ ಕೇವಲ ನಾಲ್ಕು ವರುಷ!! ಸಂಗೀತದ ಬಗ್ಗೆ ಒಲವು ಮೂಡಿದ್ದೇ ತಡ, ಮತ್ತಷ್ಟು ಕಲಿಯಬೇಕು ಎಂಬ ತುಡಿತ ಹೆಚ್ಚಾಯಿತು. ಮುಂದೆ ಅನಂತ ಭಾಗವತರ್ ಅವರ ಸಂಗೀತ ಗರಡಿಯಲ್ಲಿ ಪಳಗಿದ ಶಿಲ್ಪಾ, ಅನಂತ ಭಾಗವತರ್ ಅವರಿಂದ ಹಿಂದೂಸ್ಥಾನಿ ಸಂಗೀತ ಕಲಿತರು. ಇದರ ಜೊತೆಗೆ ಪ್ರವೀಣ್ ದತ್ ಸ್ಟೀಫನ್ ಅವರ ಬಳೊ ವೆಸ್ಟರ್ನ್ ಅನ್ನು ಅಭ್ಯಸಿಸಿದರು. ಮಾತ್ರವಲ್ಲ ಎರಡು ಗ್ರೇಡ್ ಪಾಸು ಕೂಡ ಆಗಿದೆ. ನೂರಕ್ಕೆ ನೂರು ತೆಗೆದುಕೊಂಡೆ ಎಂದು ಖುಷಿಯಿಂದ ಶಿಲ್ಪಾ ಹೇಳುವಾಗ ಅವರ ಮುದ್ದು ಮುಖದಲ್ಲಿ ಅದು ಪ್ರತಿಬಿಂಬಿಸುತ್ತದೆ.” ನಾನು ಇಲ್ಲಿಯ ತನಕ ಸುಮಾರು 700 ಸಿಡಿಗಳಿಗೆ ಹಾಡಿದ್ದೇನೆ. ಇದರ ಜೊತೆಗೆ ಮೆಲೋಡಿ ಕ್ರಿಯೇಟರ್ಸ್ ಅನ್ನುವ ತಂಡದ ಜೊತೆ ಸುಮಾರು ಹತ್ತು ವರುಷಗಳ ಕಾಲ ಗಾಯಕಿಯಾಗಿ ಕೆಲಸ ಮಾಡಿದ್ದೇನೆ” ಎಂದು ತಮ್ಮ ಸಂಗೀತ ಪಯಣವನ್ನು ವಿವರಿಸುತ್ತಾರೆ ಶಿಲ್ಪಾ.

‘ಚಾರ್ ಮಿನಾರ್’ ಚಿತ್ರದ ಮೂಲಕ ಹಿನ್ನಲೆ ಗಾಯಕಿಯಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ ಶಿಲ್ಪಾ ಮುಂದೆ ನೀನಾದೆನಾ, ಶ್ರೀ ಕಂಠ, ಉಪೇಂದ್ರ ಮತ್ತೆ ಹುಟ್ಟಿ ಬಾ, ಘರ್ಷಣೆ, ಫಸ್ಟ್ ಲವ್ ಸೇರಿದಂತೆ ಹಲವು ಸಿನಿಮಾಗಳಿಗೆ ಹಾಡಿದ್ದಾರೆ. ತೆಲುಗು ಭಾಷೆಯಲ್ಲಿ ಹಾಡುವ ಮೂಲಕ ಪರಭಾಷೆಗೂ ಕಾಲಿಟ್ಟಾಗಿದೆ. ಚಂದನವನದ ಜೊತೆಗೆ ಕೋಸ್ಟಲ್ ವುಡ್ ನಲ್ಲೂ ಸಂಗೀತ ಸುಧೆಯನ್ನು ಹರಿಸಿರುವ ಶಿಲ್ಪಾ ನಿರಲ್ ಮತ್ತು ಎರೆಗ್ಲಾ ಪನೊಡ್ಚಿ ತುಳು ಚಿತ್ರಕ್ಕೆ ಹಿನ್ನಲೆ ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಶಿಲ್ಪಾ ಅವರ ಗಾಯನ ಕೇವಲ ಹಿರಿತೆರೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ಕಿರುತೆರೆ ವೀಕ್ಷಕರಿಗೂ ಇವರ ಗಾಯನದ ಸವಿಯ ರಸದೌತಣವನ್ನು ಉಣಬಡಿಸಿದ್ದಾರೆ. ಟಿವಿ ಧಾರಾವಾಹಿಗಳಿಗೂ ಟೈಟಲ್ ಸಾಂಗ್ ಧ್ವನಿ ಕೊಟ್ಟಿರುವ ಶಿಲ್ಪಾ ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲೂ ತಮ್ಮ ಸಂಗೀತದ ಪಯಣ ಮುಂದುವರಿಸಿದರು. ಮಿಲನ, ಸರಸ್ವತಿ, ನಾಗಿಣಿ, ಅರಮನೆ, ಮಹಾನದಿ ಧಾರಾವಾಹಿಗಳಿಗೆ ದನಿಯಾಗಿದ್ದಾರೆ.

ಇಂತಿಪ್ಪ ಶಿಲ್ಪಾ ಮಧುಸೂದನ್ ಅವರು ಗಾಯನದ ಜೊತೆಗೆ ಕಂಠದಾನಕ್ಕೂ ಸೈ. ರಚಿತಾ ರಾಮ್ ನಿರ್ಮಾಣದ, ಆರ್.ಜೆ ಮಯೂರ್ ನಿರ್ದೇಶನದ ಕಿರು ಚಿತ್ರ ರಿಷಭ ಪ್ರಿಯ ದಲ್ಲಿ ನಾಯಕಿ ರಾಗಿಣಿ ಚಂದ್ರನ್ ಅವರಿಗೆ ಡಬ್ ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮಿನುಗಹೊರಟಿರುವ ಶಿಲ್ಪಾ ಅವರ ಕಲಾ ಪಯಣ ನಿರಂತರವಾಗಿ ಸಾಗಲಿ ಎಂದು ಬಾಲ್ಕನಿ ನ್ಯೂಸ್ ಶುಭಹಾರೈಸುತ್ತದೆ.

– ಅನಿತಾ ಬನಾರಿ

ವಿಜೆಯಿಂದ ನಟನೆಗೇರಿದ ಮಂಗಳೂರ ಚೆಲುವ

#interview #balkaninews #shilpamadhusudhan #singershilpamadhusudhan

Tags

Related Articles