ಬಾಲ್ಕನಿಯಿಂದಸಂದರ್ಶನ

ಇದು ಯುಗ ಯುಗಗಳ ಗೀತೆ ……

ಈ ಮುದ್ದು ಮುಖದ ಚೆಂದೊಳ‍್ಳಿ ಚೆಲುವೆ ಉತ್ತರ ಕರ್ನಾಟಕದವಳು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯುಗಗಳ ಗೀತೆ ಧಾರಾವಾಹಿಯಲ್ಲಿ ನಾಯಕಿಯಾಗಿ ಪಂಚಮಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಎಲ್ಲರ ಮನೆ ಮಾತಾಗಿದ್ದಾಳೆ. ಅವರ ಸಂದರ್ಶನ ನಿಮ್ಮ ಮುಂದೆ…

 • ನಿಮ್ಮ ಹಿನ್ನಲೆ?

ಸಿರಿ ಪ್ರಹ್ಲಾದ್. ಮೂಲತಃ ನಾನು ಉತ್ತರ ಕರ್ನಾಟಕದವಳು, ಹೊಸಪೇಟೆ ನನ್ನ ಊರು.

 • ಅಭಿನಯದೆಡೆ ಒಲವು ಮೂಡಿದ್ದಾದರೂ ಹೇಗೆ?

ಇದೇ ವರ್ಷ ನಾನು ಅಭಿನಯಕ್ಕೆ ಕಾಲಿಟ್ಟಿದ್ದು. ಮೊದಲಿನಿಂದಲೂ ನಾನು ಡ್ಯಾನ್ಸರ್. ಬಾಲ್ಯದಿಂದಲೂ ನನಗೆ ನಟನೆಯಲ್ಲೇ ಮುಂದುವರಿದು ಏನಾದರೂ ಸಾಧಿಸಬೇಕು ಎಂಬ ಕನಸಿತ್ತು. 2014 ರಲ್ಲಿ ನಾನು ಮಾಡೆಲಿಂಗ್ ಮಾಡುತ್ತಿದ್ದೆ ಆಗಲೇ ನಟಿಸಲು ನನಗೆ ಕೆಲವು ಆಫರ್ ಗಳು ಬಂದವು. ಆದರೆ ನಾನು ಓದಿನ ಕಡೆಗೆ ಗಮನ ಕೊಟ್ಟೆ. ಡಿಗ್ರಿ ಮೊನ್ನೆಯಷ್ಟೆ ಮುಗಿಸಿದೆ. ಉದ್ಯೋಗಾವಕಾಶ ಸಿಕ್ಕಿದರೂ ಕೂಡ ನಾನು ಅದನ್ನು ತ್ಯಜಿಸಿ, ನಟನಾ ಕ್ಷೇತ್ರದಲ್ಲೇ ಮುಂದುವರಿಬೇಕೆಂದು ಆಡಿಷನ್ ಕೊಡುವ ಮೂಲಕ ಯುಗಗಳ ಗೀತೆ ಧಾರಾವಾಹಿಗೆ ಆಯ್ಕೆಯಾದೆ.

 • ಮಾಡೆಲಿಂಗ್ ಕ್ಷೇತ್ರವನ್ನು ನೀವು ಏಕೆ ಆಯ್ದುಕೊಂಡಿರಿ?

ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇತ್ತು, ನಮ್ಮ ಕಾಲೇಜಿನಲ್ಲಿ ಟೈಮ್ಸ್ ಆಫ್ ಇಂಡಿಯಾದವರು ನಡೆಸಿದ ಫ್ರೆಶ್ ಫೇಸ್ ಸ್ಪರ್ಧೆಯಲ್ಲಿ ನಾನು ಗೆದ್ದೆ. ನಂತರ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಟಾಪ್ 5ರಲ್ಲಿ ಹೋದಾಗ ತುಂಬಾ ಆಫರ್ ಗಳು ಬರಲು ಶುರುವಾದವು. ಮುಂದೆ ಪ್ರಸಾದ್ ಬಿಡ್ಡಪ್ಪ ಅವರ ಮಾಡೆಲಿಂಗ್ ಏಜೆನ್ಸಿಯಲ್ಲಿ ಟ್ರೈನಿಂಗ್ ತೆಗೆದುಕೊಂಡಿದ್ದೆ, ನಂತರ ಫ್ಲಿಪ್ ಕಾರ್ಟ್, ಎಮೆಜಾನ್ ಅವರ ಕಡೆಯಿಂದ ಅನೇಕ ಆಫರ್ ಗಳು ಬರಲು ಶುರುವಾದವು ಹೀಗೆ ನನ್ನ ಮಾಡೆಲಿಂಗ್ ಪ್ರಯಾಣ ಶುರುವಾಯಿತು.

 • ಶಾಲಾ ಕಾಲೇಜು ದಿನಗಳಲ್ಲಿ ಇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಿರೇ?

ಬಾಲ್ಯದಿಂದಲೂ ನಾನು ಡ್ರಾಮ ಹಾಗೂ ಡ್ಯಾನ್ಸ್ ನಲ್ಲಿ ತಪ್ಪದೆ ಭಾಗವಿಸುತ್ತಿದ್ದೆ. ಕಾಲೇಜು ದಿನಗಳಲ್ಲಿ ಫ್ಯಾಶನ್ ಟೀಂನಲ್ಲಿ ನಾನೇ ತಂಡದ ನಾಯಕಿಯಾಗಿದ್ದೆ.

 • ಡ್ರೀಮ್ ರೋಲ್?

ಪೌರಾಣಿಕ ಕಥೆಗಳೆಂದರೆ ಇಷ್ಟ. ದೇವಿ ಪಾತ್ರ ಅಥವಾ ರಾಣಿ ಪಾತ್ರ ಮಾಡೋದೆಂದರೆ ಏನೋ ಖುಷಿ ಅದಲ್ಲದೆ ದೆವ್ವದ ಪಾತ್ರ ಅದರಲ್ಲೂ ತುಂಬಾ ವಿಭಿನ್ನವಾದ ಪಾತ್ರಗಳು ಮಾಡಬೇಕೆಂಬ ಡ್ರೀಮ್ ಇದೆ.

 • ಸಿನಿಮಾ ಆಫರ್ ಗಳು?

ಸದ್ಯಕ್ಕೆ ಯಾವುದೂ ಬಂದಿಲ್ಲ. ಧಾರಾವಾಹಿಯಲ್ಲೇ ಬ್ಯುಸಿಯಾಗಿದ್ದೇನೆ. ಮುಂದೆ ಒಳ‍್ಳೆಯ ಆಫರ್ ಗಳು ಬಂದರೆ ಸಿನಿಮಾದಲ್ಲಿ ಅಭಿನಯಿಸುತ್ತೇನೆ.

 • ಟೆಲಿ ಸೀರಿಯಲ್ ಬಿಟ್ಟು ಸಿನಿಮಾ ಕಡೆ ಮುಖ ಮಾಡುತ್ತೀರಾ?

ಸೀರಿಯಲ್ ಬಿಟ್ಟು ಹೋಗೋದಿಲ್ಲ. ಒಳ‍್ಳೆಯ ಸಿನಿಮಾ ಆಫರ್ ಬಂದರೆ ನಮ್ಮ ಟೀಂ ಜೊತೆ ಮಾತುಕತೆ ಮಾಡಿ ಡೇಟ್ಸ್ ಹೊಂದಿಕೆಯಾದರೆ ಸಿನಿಮಾದಲ್ಲಿ ಅಭಿನಯಿಸುತ್ತೇನೆ.

 • ನಟನೆಗೆ ಸ್ಪೀರ್ತಿ?

ರಾಧಿಕಾ ಪಂಡಿತ್. ಅವರ ಕೆಲಸ ,ಶ್ರದ್ದೆ ಎಲ್ಲವೂ ನನಗೆ ಇಷ್ಟ. ಹಾಗಾಗಿ ಅವರೇ ನನಗೆ ಸ್ಪೂರ್ತಿ.

 • ನಟನಾ ಲೋಕ ಹೇಗಿದೆ?

ಮೊದಲಿನಿಂದಲೂ ಇದು ನನ್ನ ಕನಸಾಗಿತ್ತು. ಅದು ಈಗ ನನಸಾಗಿದೆ. ನಮ್ಮಲ್ಲಿ ಇರುವುದು ಒಂದೇ ಜೀವನ. ಹಾಗಾಗಿ  ನಾವು ಈ ಜೀವನದಲ್ಲಿ ಹಲವಾರು ಬಣ‍್ಣ ಹಚ್ಚುವ ಮೂಲಕ ವಿಭಿನ್ನ ಪಾತ್ರಗಳನ್ನು ಮಾಡಬಹುದು. ನಟನೆಯಿಂದ ನಾವು ಹಲವಾರು ಜನರಿಗೆ ಮಾದರಿಯಾಗಬಹುದು.

 • ಸಾಧಿಸಬೇಕು ಎನ್ನುವವರಿಗೆ ನಿಮ್ಮ ಕಿವಿ ಮಾತು?

ಮೊದಲು ಏನು ಸಾಧನೆ ಮಾಡಬೇಕೆಂದಿದೆ ಅದರ ಬಗ್ಗೆ ಕನಸು ಕಾಣಬೇಕು. ಆತ್ಮವಿಶ್ವಾಸ, ಶ್ರದ್ದೆ, ಹಾಗೂ ಪರಿಶ್ರಮ ಸಾಧನೆಯ ಮೂಲ ಮಂತ್ರ.

 • ನಿಮ್ಮ ಈ ಯಶಸ್ಸಿನ ಖುಷಿಯಲ್ಲಿ ಯಾರು ಯಾರಿಗೆ ಕೃತಜ್ಞತೆ ಸಲ್ಲಿಸುತ್ತೀರಾ?

ಮೊದಲನೆಯದಾಗಿ ನಮ್ಮ ತಂದೆ ತಾಯಿ ಹಾಗೂ ನನ್ನ ಇಬ್ಬರು ಅಕ್ಕಂದಿರು. ಅದಲ್ಲದೆ ನನ್ನ ಡ್ಯಾನ್ಸ್ ಹಾಗೂ ನಾಟಕ ಕಲಿಸಿ ಕೊಟ್ಟ ಗುರುಗಳಿಗೆ ಹಾಗೂ ನಮ್ಮ ಪ್ರೊಡ್ಯೂಸರ್ ನಂದಿನಿ ಅವರಿಗೆ ನಾನು ಯಾವತ್ತೂ ಕೃತಜ್ಞತೆ ಸಲ್ಲಿಸುತ್ತೇನೆ.

 • ಯುಗಗಳ ಗೀತೆ ಪಾತ್ರದಲ್ಲಿ ನೀವು ಹೇಗೆ ಇನ್ವಾಲ್ ಆಗ್ತೀರಾ?

ನಿಜ ಜೀವನದಲ್ಲಿ ಪಂಚಮಿಗೆ ಹಾಗೂ ಸಿರಿಗೆ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಪಂಚಮಿಯಿಂದ ಕಲಿಯೋದು ಸಾಕಷ್ಟಿದೆ. ಅವಳು ಏನನ್ನೂ ನಿರೀಕ್ಷೆ ಮಾಡದೆ ಎಲ್ಲರಿಗೂ ಒಳ‍್ಳೆಯದಾಗಲಿ ಎಂದು ಬಯಸುತ್ತಾಳೆ. ನನಗೆ ಮೊದಲೇ ಪ್ರೊಡ್ಯೂಸರ್ ನಂದಿನಿ ಅವರು ಪಾತ್ರ ಹೇಗಿದೆ ಹಾಗೂ ಹೇಗೆ ತಯಾರಿ ಮಾಡಿಕೊಳ‍್ಳಬೇಕೆಂದು ಸಲಹೆ ನೀಡಿದ್ದರು. ಹಾಗಾಗಿ ನಾನು ದಿನ ಆಫ್ ಸ್ಕ್ರೀನ್ ಕೂಡ ಪಂಚಮಿ ಆಗಿರೋಕೆ ಪ್ರಯತ್ನಿಸುತ್ತೇನೆ, ಅದು ನನಗೆ ಆನ್ ಸ್ಕ್ರೀನ್ ಗೆ ಸಹಾಯವಾಗುತ್ತದೆ.

 • ಇಷ್ಟವಾದ ನಟ ಹಾಗೂ ನಟಿ?

ಡಾ|| ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್.

 • ಮರೆಯಲಾಗದಂತ ನೆನಪು?

ಈ ಧಾರಾವಾಹಿಗೆ ಆಫರ್ ಸಿಕ್ಕ ಕ್ಷಣ ಹಾಗೂ ಯುಗಗಳ ಗೀತೆ ಪೋಸ್ಟರ್ ಹೊರಗೆ ನೋಡಿದ್ದು , ನಂತರ ಮೊದಲ ಎಪಿಸೋಡ್ ಬಂದಾಗ ನಾನು ನನ್ನನ್ನೇ ಟವಿಯಲ್ಲಿ ನೋಡಿ, ಮನೆಯಲ್ಲಿ ಅಮ್ಮ – ಅಪ್ಪ ಅಭಿಪ್ರಾಯ ತಿಳಿಸಿದ್ದು ನನ್ನ ಜೀವನದಲ್ಲೇ ಮರೆಯಲಾಗದ ಒಂದು ಸಿಹಿ ನೆನಪು.

 • ನಿಮಿಗಿಷ್ಟವಾದ ಆಹಾರ?

ಜೋಳದರೊಟ್ಟಿ ಮತ್ತು ಬದನೆಕಾಯಿ ಎಣ‍್ಣೆಗಾಯಿ.

 • ನಿಮ್ಮ ಫಿಟ್ನೆಸ್ ಹೇಗೆ ಕಾಪಾಡಿಕೊಳ‍್ಳುತ್ತೀರ?

ನನ್ನ ಫಿಟ್ನೆಸ್ ಮಂತ್ರ ಡ್ಯಾನ್ಸ್. ದಿನದಲ್ಲಿ ಅರ್ಧ ಮುಕ್ಕಾಲು ಗಂಟೆ ಡ್ಯಾನ್ಸ್ ಮಾಡುತ್ತೇನೆ ಅದಲ್ಲದೆ ಯೋಗ ಹಾಗೂ ವಾಕಿಂಗ್. ಆದಷ್ಟು ಒಳ‍್ಳೆಯ ಆಹಾರಗಳನ್ನು ತಿನ್ನುತ್ತೇನೆ.

 • ವೀಕ್ಷಕರಿಗೆ ಏನು ಹೇಳೋಕೆ ಇಷ್ಟಪಡುತ್ತೀರ?

ಕಾಲೇಜ್ ಹುಡುಗರಿಂದ ಹಿಡಿದು ಎಲ್ಲಾ ವಯಸ್ಸಿನವರು ಕೂತು ನೋಡಬಹುದಾದ ಧಾರಾವಾಹಿ. ತುಂಬಾ ಹಿರಿಯ ಕಲಾವಿದರು ಕೂಡ ಇದ್ದಾರೆ. ಇದೇ ಮೊದಲ ಬಾರಿಗೆ ಕಾಲೇಜ್ ಲೈಫ್ ಬಗ್ಗೆ ಧಾರಾವಾಹಿ ಪ್ರಸಾರವಾಗುತ್ತಿದೆ. ಹಾಗಾಗಿ ಎಲ್ಲರ ಸಹಕಾರ ಆರ್ಶೀವಾದ ಬೇಕು.

 ಸುಹಾನಿ.ಬಡೆಕ್ಕಿಲ

Tags