ಉದಯೋನ್ಮುಖರುಜೀವನ ಶೈಲಿಬಾಲ್ಕನಿಯಿಂದಸುದ್ದಿಗಳು

‘ಹಾಡು ಹಳೆಯದಾದರೇನು, ಭಾವ ನವನವೀನ…!!!’

ಶಂಕರ್ ಶಾನ್ಭೋಗ್ ರ  ವಿನೂತನ ಕಾವ್ಯ ಸಂಗೀತ ಕಚೇರಿ..!!

ಬೆಂಗಳೂರು, ಡಿ-4: ‘ಹಾಡು ಹಳೆಯದಾದರೇನು, ಭಾವ ನವನವೀನ..’, ಹೌದು ಇದೊಂದು ವಿಖ್ಯಾತ ಸುಗಮ ಸಂಗೀತದ ಕೃತಿ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ವಿರಚಿತ  ಇದೇ ಹಾಡನ್ನು ಸಿನೆಮಾ ದಿಗ್ಗಜ ಪುಟ್ಟಣ್ಣ ಕಣಗಾಲ್ ತಮ್ಮ ಹಿಟ್ ಚಿತ್ರ ‘ಮಾನಸ ಸರೋವರ’ ಕ್ಕೆ ಆಮದು ಮಾಡಿಕೊಂಡೂ,  ಮನೋಜ್ಞವಾಗಿಯೂ  ಅಳವಡಿಸಿಕೊಂಡಿದ್ದರು!

ಇನ್ನು, ರಾಜಧಾನಿಯ ಕಾವ್ಯ ಸಂಗೀತ ಗುರುಕುಲ ಮತ್ತು ಇಂಚರ ಸುಗಮ ಸಂಗೀತ ಸಂಸ್ಥೆ ಮೊನ್ನೆ  ಚಾಮರಾಜಪೇಟೆಯಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಹೃದ್ಭಾಗದ “ಶ್ರೀ ಕೃಷ್ಣರಾಜ ಪರಿಷನ್ಮಂದಿರ” ದಲ್ಲಿ “ಭಾವ ನವನವೀನ” ಎಂಬ ವಿನೂತನ ಕಾವ್ಯ ಸಂಗೀತ ಕಚೇರಿಯನ್ನು ಪ್ರಸ್ತುತಪಡಿಸಿತ್ತು. ಕವಿ-ಕವಿತೆ-ಕಾವ್ಯರಚನೆ-ಕಾವ್ಯ ವಾಚನ ಪ್ರಕ್ರಿಯೆಗಳು ಮರೆತುಹೋದ ನಿನ್ನೆಯ ಪನ್ನಗಳಿಗೆ ಸೇರಿಕೊಳ್ಳುವ ಮುನ್ನ ಕರುನಾಡ ಕಂಚಿನ ಕಂಠಸಿರಿ ಹೊತ್ತ ಪಂಡಿತ್‍. ಶಂಕರ್ ಶಾನ್ಭೋಗ್ ನೇತೃತ್ವದಲ್ಲಿ ಈಗಾಗಲೇ  ಜನಮಾನಸದಲ್ಲಿ ನವನವೀನವಾಗಿ ಬೆರೆಯುತ್ತಿರುವ  ಕಾವ್ಯದಾ, ಸಂಗೀತದಾ ಉತ್ಕೃಷ್ಟ ಪ್ರಸ್ತುತಿಗಳವು…! ಕಾವ್ಯ ಸಂಗೀತ ಕಚೇರಿ..!! ಭೇಷ್..!!!

ಕಾವ್ಯಸಂಗೀತ  ಕಚೇರಿ ಎಂಬ ಸಾಹಿತ್ಯಿಕ ಮೌಲ್ಯಯುತ ಕೃತಿಗಳ ವಾಚನ-ಗಾಯನ ವಾಹ್! ವಾಹ್!! ಎಂಬ ಉದ್ಗಾರಗಳನ್ನು ಪಡೆಯುತ್ತಿರುವುದು ಶಂಕರ್ ಶಾನ್ಭೋಗ್ ರ ಗುರಿ-ದೂರದೃಷ್ಟಿ-ಪರಿಶ್ರಮಗಳ ಸಮನ್ವಯತೆಯನ್ನು  ಎತ್ತಿತೋರಿಸುತ್ತಿದೆ. ಅವರೊಡನೆ ಸಾಥ್ ನೀಡಿದ್ದ ಯುವಸುಗಮ ಸಂಗೀತ ಗಾಯಕರಾದ ಇಂಚರ ಪ್ರವೀಣ್ ಕುಮಾರ್, ಆಶಿಶ್ ನಾಯಕ್ ಸಮರ್ಥವಾಗಿ ತಮ್ಮ ಪಾಲಿನ ಜವಾಬ್ದಾರಿಯನ್ನು ನಿಭಾಯಿಸಿದ್ದರು. ತಬಲಾದಲ್ಲಿ ಜಲಿಲ್ ಮುದ್ದಬಿಳಿ, ಪಿಟೀಲಿನಲ್ಲಿ ವಿ. ಲಂಡನ್ ಚಂದ್ರು, ಹಾರ್ಮೋನಿಯಮ್ ನಲ್ಲಿ ವಿ. ವೆಂಕಟೇಶ್ ಆಲ್ಕೋಡ್ ಹಿತವಾಗಿ ಜೊತೆಗಾರಿಕೆಯನ್ನು ಮೆರೆದರು. ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಸಂಗೀತ ಪೋಷಕ ಎಮ್. ಕೃಷ್ಣಮೂರ್ತಿಯವರ  ಸಹಯೋಗದಲ್ಲಿ ಈ ಅಮೋಘ ಕಚೇರಿಯನ್ನು ಆಯೋಜಿಸಲಾಗಿತ್ತು.

ಕಾವ್ಯಸಂಗೀತ  ಕಚೇರಿ – ಪ್ರಸಕ್ತ ಸಮಾಜದ ಮಟ್ಟಿಗೆ, ಇದೊಂದು ಹೊಸ ಬೆಳವಣಿಗೆಯಾಗಿದ್ದು, ಅಪ್ಪಟ ಸದಭಿರುಚಿಯನ್ನು ಇತ್ತ ಕಾವ್ಯ-ಕವಿತಾ ರಚನೆ ಹಾಗೂ ಅರ್ಥೈಸುವಿಕೆ ದೃಷ್ಟಿಯಲ್ಲೂ, ಅತ್ತ ಸುಗಮ ಸಂಗೀತದ ವಿಹಂಗಮತೆಯಲ್ಲೂ ಬೆಳೆಸುತ್ತಾ, ತನ್ನೊಡನೆ  ತೇಲಿಸಿ ಕರೆದೊಯ್ಯುವ ಶಕ್ತಿ ಹೊಂದಿದೆ. ಮುಂದುವರೆದು, ಇಂಥಾ ಕಾವ್ಯ ಸಂಗೀತ ಕಚೇರಿಗಳು ಹೆಚ್ಚುಹೆಚ್ಚಾಗಿ ನಮ್ಮ ಕನ್ನಡ ಜನತೆಯನ್ನು ಎಲ್ಲೆಡೆ ತಲುಪಬೇಕಿದೆ. 

ಒಂದು ಉತ್ತಮ ಪರಂಪರೆಯಾಗಿ ಬೆಳೆದು ಇತರ ಸಂಗೀತಗಾರರೂ ಶಾಸ್ತ್ರೀಯತೆಯ ಚೌಕಟ್ಟನ್ನೂ ಉಳಿಸಿಕೊಳ್ಳಲೂ, ಸಾಹಿತ್ಯದ ನಿಜ ರಸಸ್ವಾದನೆ ಮಾಡಲೂ ಕಾವ್ಯಸಂಗೀತ  ಕಚೇರಿ ಒಂದು ಪರಿಷ್ಕೃತ ಹಾದಿ ಎನ್ನಬಹುದೇನೋ..! ಈ ಹಾದಿ ಸುಗಮವಾಗಲಿ.

editor@balkani.com

Tags