ಬಾಲ್ಕನಿಯಿಂದಸಂದರ್ಶನ

ಗುಳಿಕೆನ್ನೆಯ ಸುಂದರ ಸಿದ್ಧು

ಅಗ್ನಿಸಾಕ್ಷಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅತೀ ಜನ ಮನ್ನಣೆ ಗಳಿಸಿರುವ ಮನ ಮೆಚ್ಚಿದ ಧಾರಾವಾಹಿ ಅಗ್ನಿಸಾಕ್ಷಿಯನ್ನು ಇಷ್ಟ ಪಡದವರೇ ಇಲ್ಲ. ಕಲರ್ಸ್ ಕನ್ನಡ ವಾಹಿನಿಯ ಅತೀ ಬೇಡಿಕೆಯಲ್ಲಿರುವ ಧಾರಾವಾಹಿ ಇದಾಗಿದೆ. ಅಗ್ನಿಸಾಕ್ಷಿಯಲ್ಲಿ ಪ್ರತಿ ಪಾತ್ರವೂ ತನ್ನದೇ ಆದ ಅಭಿಮಾನಿಗಳನ್ನು ಒಳಗೊಂಡಿದೆ ಎಂಬುದು ಸುಳ‍್ಳಲ್ಲ. ಮುಗುಳು ನಗೆ, ಮೊಗದಲ್ಲಿ  ಮಂದಹಾಸದ ನಗು, ಗೋಧಿ ಬಣ‍್ಣ, ಸಾಲದಕ್ಕೆ ಕೆನ್ನೆಯಲೊಂದು ಗುಳಿ. ಚಾಕ್ಲೆಟ್ ಬಾಯ್ ಎಂದೇ ಖ್ಯಾತಿ ಪಡೆದಿರುವ ಈ ಗುಳಿ ಕೆನ್ನೆ ಚೆಲುವ ವಿಜಯ್ ಸೂರ್ಯ ಅಲಿಯಾಸ್ ಸಿದ್ಧಾರ್ಥ್ ನನ್ನು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?

ಲಕ್ಷೀ ಬಾರಮ್ಮ ಧಾರಾವಾಹಿಯಿಂದ ಸಿದ್ಧಾರ್ಥನ ಕಥೆ ಶುರುವಾಗುತ್ತದೆ. ಸನ್ನಿಧಿಯ ಮುದ್ದಿನ ಗಂಡ ಸಿದ್ಧಾರ್ಥ್. ಮನೆಯಲ್ಲಿ ಸಿದ್ಧಾರ್ಥ್ ಎಂದರೆ ಎಲ್ಲರಿಗೂ ಪಂಚಪ್ರಾಣ ಕುತಂತ್ರಿ ಚಂದ್ರಿಕಾಳನ್ನು ಹೊರತು. ಲವರ್ ಬಾಯ್ ಆಗಿದ್ದ ಸಿದ್ಧು ಈಗ ಜವಬ್ಧಾರಿಯುತನಾಗಿದ್ದಾನೆ. ಮನೆಯಲ್ಲಿರುವ ಸಮಸ್ಯೆಯನ್ನು ನಿವಾರಿಸುವುದರಲ್ಲೇ ಸದಾ ಮುಳುಗಿರುವ ಸಿದ್ಧುಗೆ ಕುತಂತ್ರಿ ಚಂದ್ರಿಕಾಳ ಸತ್ಯ ಅಲ್ಪ ಸ್ವಲ್ಪ ಗೊತ್ತಾಗಿದೆ. ಚಂದ್ರಿಕಾಳ ಕುತಂತ್ರಕ್ಕೆ ಯಾವಾಗ ಪೂರ್ಣ ವಿರಾಮ ಬೀಳುತ್ತೆ ಎಂದು ಮುಂದಿನ ದಿನಗಳಲ್ಲಿ ಕಾದು ಕುಳಿತು ನೋಡಬೇಕಾಗಿದೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ವಿಜಯ್ ಸೂರ್ಯ ತಮ್ಮ ಪಿಯುಸಿ ವಿದ್ಯಾಭ್ಯಾಸದ ನಂತರ ಮುಂಬೈಯ ಮಹಾನಗರಿಯಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ವ್ಯಾಸಂಗ ಮಾಡಿ ನಂತರ ಮೊದಲು ಬಣ‍್ಣ ಹಚ್ಚಿದ್ದು ಕನ್ನಡದಲ್ಲಿ ಕ್ರೇಜಿಲೋಕ ಸಿನಿಮಾಕ್ಕೆ ಅಲ್ಲಿಂದ ತಮ್ಮ ಬಣ‍್ಣದ ಪಯಣ ಶುರು ಹಚ್ಚಿಕೊಂಡರು ವಿಜಯ್ ಸೂರ್ಯ. ‘ಸ’, ‘ಇಷ್ಟಕಾಮ್ಯ’ ಸಿನಿಮಾದಲ್ಲೂ ನಟಿಸಿದ್ದಲ್ಲದೆ ಇವರು ನಟಿಸಿದ ಇಷ್ಟಕಾಮ್ಯ ಸಿನಿಮಾ ಅಪಾರ ಜನರ ಮೆಚ್ಚುಗೆ ಪಡೆದಿದೆ. ಇನ್ನು ಲಖ್ ನೌ ಟು ಬೆಂಗಳೂರು ಸಿನಿಮಾ ಬಿಡುಗಡೆಗಾಗಿ ಕಾಯಬೇಕಿದೆ ಅದಲ್ಲದೆ ಇನ್ನೂ ಹೆಸರಿಡದ ಸಿನಿಮಾದಲ್ಲೂ ವಿಜಯ್ ನಟಿಸುತ್ತಿದ್ದಾರೆ. ಕಿರುತೆರೆಲ್ಲಿ ಮಾತ್ರವಲ್ಲದೆ ಬೆಳ‍್ಳಿತರಯಲ್ಲೂ ಮಿಂಚುವ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ವಿಜಯ್.

ಬಾಲ್ಯದಿಂದಲೂ ಡ್ಯಾನ್ಸ್ ನಲ್ಲಿ ಆಸಕ್ತಿ ಹೊಂದಿದ್ದ ವಿಜಯ್ ಶಾಲಾ ಕಾಲೇಜು ದಿನಗಳಲ್ಲಿ ಪ್ರತೀ ವರ್ಷವೂ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದೆ ಎನ್ನುವ ಇವರು ನನ್ನ ತಂದೆ ಹಾಗೂ ತಾಯಿ ಹೆಚ್ಚು ಸಿನಿಮಾಗಳನ್ನು ನೋಡುತ್ತಿದ್ದರು ಹಾಗಾಗಿ ನಾನೂ ನೋಡುತ್ತಿದ್ದೆ ಆಗಿನಿಂದಲೇ ನನಗೆ ನಟನಾ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಕನಸಿತ್ತು ಎಂದು ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟರು. ಕ್ಯಾಮರವನ್ನು ಮೊದಲ ಬಾರಿ ಎದುರಿಸುವಾಗ ತುಂಬಾ ಭಯಭೀತನಾಗಿದ್ದೆ, ಈಜಲು ಬಾರದವನನ್ನು ಒಮ್ಮೆಲೇ ನೀರಿಗೆ ಧುಮ್ಮಿಕ್ಕಿದರೆ ಹೇಗಿರುತ್ತೆ ಹಾಗಾಗಿತ್ತು ನನಗೆ, ಮುಂದೆ ಸಲಿಸಾಗುತ್ತಾ ಹೋಯಿತು ಎಂದು ಜೋರಾದ ನಗುವಿನೊಂದಿಗೆ ಹೇಳುತ್ತಾರೆ ಈ ಗುಳಿ ಕೆನ್ನೆಯ ಯುವಕ.

ವಿಜಯ್ ಗೆ ಮುಂದಿನ ದಿನಗಳಲ್ಲಿ ಕೃಷ್ಣ ಅಥವಾ ಬುದ್ಧನ ಹಾಗಿರುವ ಮೈಥಲಾಜಿಕಲ್ ಹಾಗೂ ಗ್ಯಾಂಗಸ್ಟರ್ ಪಾತ್ರ ಮಾಡಬೇಕೆಂಬುದು ಇವರ ಕನಸಿನ ಪಾತ್ರವಂತೆ. ಅಗ್ನಿಸಾಕ್ಷಿಯಲ್ಲಿ ಪ್ರಶಸ್ತಿ ಲಭಿಸಿದಾಗ ನನಗೆ ತುಂಬಾ ಸಂತೋಷವಾಯಿತು ಯಾಕೆಂದರೆ ಒಂದು ಧಾರಾವಾಹಿಯನ್ನು ಜನರು ಅಷ್ಟು ಇಷ್ಟ ಪಟ್ಟು, ಪ್ರೀತಿ ಪ್ರೋತ್ಸಾಹ ಕೊಟ್ಟು ನಮ್ಮನ್ನು ಇಲ್ಲಿಯವರೆಗೆ ಬೆಳೆಸಿದ್ದಾರೆ ಇದೆಲ್ಲಾ ಜನರ ಪ್ರೀತಿಯಿಂದ ಮಾತ್ರ ಸಾಧ್ಯ ಎಂದು ಹೇಳಲು ಮರೆಯಲಿಲ್ಲ. ಕುಟುಂಬದಲ್ಲಿ ಯಾರೂ ರಂಗಭೂಮಿಯಿಂದ ಬಂದವರಲ್ಲ ಎನ್ನುವ ವಿಜಯ್ ಯವರಿಗೆ ರಂಗಭೂಮಿ ಎಂಬುದು ಒಂದು ಮ್ಯಾಜಿಕಲ್ ವರ್ಲ್ಡ್, ಇಂತಹ ರಂಗಭೂಮಿಯಲ್ಲಿ ಕೆಲಸ ಮಾಡುವುದು ನಮ್ಮ ಅದೃಷ್ಟ, ಯಾಕೆಂದರೆ ನಮ್ಮ ಕೆಲಸ ಜನರಿಗೆ ತಲುಪತ್ತೆ ಹಾಗೂ ಜನರ ಮೇಲೂ ಒಳ‍್ಳೆಯ ಪ್ರಭಾವ ಬೀರುತ್ತೆ , ಅದು ನಮ್ಮ ಕೈಯಲ್ಲಿದೆ. ನಾವು ಮಾಡುವ ಕೆಲಸವನ್ನು ನೋಡಿ ಜನರು ಖುಷಿ ಪಡುತ್ತಾರೆ ಹಾಗಾಗಿ ನನಗೆ ಇಡೀ ಸಿನಿಮಾ ಇಂಡಸ್ಟ್ರಿ ಹಾಗೂ ಜನರೇ ಸ್ಫೂರ್ತಿ ಎನ್ನುತ್ತಾರೆ.

ನಟನೆಗೆ ತುಂಬಾ ಶಕ್ತಿಯಿದೆ. ಈ ಒಂದು ಕಲೆಯಿಂದ ಏನು ಬೇಕಾದರೂ ಸಾಧನೆ ಮಾಡಬಹುದು, ಜನರಿಗೆ ಒಳ‍್ಳೆಯದನ್ನು ಹೇಳಬಹುದು, ತಪ್ಪನ್ನು ತೋರಿಸಬಹುದು ಹಾಗಾಗಿ ಅಂತಹ ಶಕ್ತಿಯಿರುವುದು ಕೆಲವು ವೃತ್ತಿಗೆ ಮಾತ್ರ ಅದರಲ್ಲಿ ನಟನೆಯೂ ಕೂಡ ಒಂದು ಎಂಬುದು ನಟನೆಯ ಬಗ್ಗೆ ವಿಜಯ್ ಅವರ ಪ್ರೀತಿಯ ಮಾತು. ಅಗ್ನಿಸಾಕ್ಷಿಯಲ್ಲಿ ಸಿದ್ಧಾರ್ಥ್ ತನ್ನ ಮನಸ್ಸಿಗೆ ಬಂದಿರುವುದನ್ನು ಹೇಳಿಯೇ ಬಿಡುತ್ತಾನೆ. ಆದರೆ ನಿಜ ಜೀವನದಲ್ಲಿ ವಿಜಯ್ ಸೂರ್ಯ ಹಾಗಲ್ಲವಂತೆ. ನಾನು ಮನಸ್ಸಿನಲ್ಲಿರುವುದನ್ನು  ಹೆಚ್ಚೇನು ಹೇಳಿಕೊಳ‍್ಳವುದಿಲ್ಲ ಆದರೆ ಕೆಲವೊಮ್ಮೆ ಹೇಳಿ ಬಿಡುತ್ತೇನೆ ಎನ್ನುತ್ತಾರೆ. ಚಿಕ್ಕವಯಸ್ಸಿನಿಂದಲೂ ಇವರ ತಂದೆ ಪ್ರೀತಿಯಿಂದ ಇವರನ್ನು ಸಿದ್ಧು ಎಂದೇ ಅಡ್ಡ ಹೆಸರಿನಿಂದ ಕರೆಯುತ್ತಿದ್ದರಂತೆ. ಅಗ್ನಿಸಾಕ್ಷಿಯಲ್ಲಿ ಸಿದ್ಧಾರ್ಥ್ ಎಂದೇ ಚಿರಪರಿಚಿತರಾಗಿರುವ ಇವರನ್ನು ಹೊರಗೆ ಜನರು ಸಿದ್ಧಾರ್ಥ್ ಎಂದೇ ಗುರುತಿಸಿಕೊಂಡಿರುವ ವಿಜಯ್ ಬಿಡುವಿನ ಸಮಯದಲ್ಲಿ ವ್ಯಾಯಾಮ ಮಾಡುತ್ತಾರೆ ಅದರೊಂದಿಗೆ ಕುಟುಂಬ ಹಾಗೂ ಗೆಳೆಯರೊಂದಿಗೆ ಹೆಚ್ಚು ಕಾಲ ಕಳೆಯಲು ಬಯಸುತ್ತಾರೆ. ಇತ್ತೀಚೆಗೆ ಜನರು ಹೆಚ್ಚು ಡಿಪ್ರೆಷನ್ ಗೆ ಒಳಗಾಗುವುದನ್ನು ನಾವು ಕಾಣುತ್ತೇವೆ, ಹಿಂದೆಯಲ್ಲಾ ಡಿಪ್ರೆಷನೆಂಬ ಕಾಯಿಲೆಯಿರಲಿಲ್ಲ, ಹಾಗಾಗಿ ನಾವು ಆದಷ್ಟು ಮೊಬೈಲ್ ಜಾಲಾತಾಣಗಳಿಂದ ದೂರ ಉಳಿಯಬೇಕು, ಅಗತ್ಯವಿದ್ದಷ್ಟೇ ಉಪಯೋಗಿಸಬೇಕು, ದಿನ ನಿತ್ಯ ಎಲ್ಲರೂ ಯೋಗಾಭ್ಯಾಸ, ಲಘು ವ್ಯಾಯಾಮ ರೂಢಿಸಿಕೊಂಡಲ್ಲಿ ಆರೋಗ್ಯವಿದೆ ಎಂದು ಫಿಟ್ನೆಸ್ ಬಗ್ಗೆ ಕಿವಿ ಮಾತು ಹೇಳುವರು.

ಓದುವುದು ಹಾಗೂ ಪ್ರಯಾಣ ಮಾಡುವುದು ವಿಜಯ್ ಯವರ ಹವ್ಯಾಸ. ಬರೀ ಕರ್ನಾಟಕ ಮಾತ್ರವಲ್ಲದೆ ಹೊರಗಿನ ಹಲವಾರು ದೇಶಗಳಲ್ಲಿ ವಿಜಯ್ ಅವರು ತಮ್ಮ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅಗ್ನಿಸಾಕ್ಷಿಯ ಸಿದ್ಧಾರ್ಥ್ ನ ನಂತರ ಇವರು ‘ಸ’ ಸಿನಿಮಾದಲ್ಲಿ ನಟಿಸಿದ ರಾಹುಲ್ ಪಾತ್ರ ಇವರಿಗೆ ತುಂಬಾ ಖುಷಿ ನೀಡಿದೆ. ಮುಂದೆ ಯಾವುದಾದರು ಶೋ ಮುಖಾಂತರ ನನಗೆ ಟೀವಿನಲ್ಲಿ ಆ್ಯಂಕರಿಂಗ್ ಮಾಡಬೇಕೆನ್ನುವ ಕನಸಿದೆ ಎನ್ನುವ ವಿಜಯ್ ಹಳೆಯ ಸಿನಿಮಾ ಹೃದಯಕ್ಕೆ ತಟ್ಟುವಂತಿತ್ತು, ಸಾಮಾಜಿಕ ಕಳಕಳಿಯ ಸಂದೇಶವಿರುತ್ತಿತ್ತು ಆದರೆ ಈಗ ಹೊಸ ಚಿತ್ರಗಳಲ್ಲಿ ಕಥೆಯಲ್ಲಿ ಒಂದು ಭಾವನೆಯಿಲ್ಲ ಎಂದು ಹೇಳುತ್ತಾರೆ. ಕೊನೆಯದಾಗಿ ವಿಜಯ್ ಸೂರ್ಯ ಅವರು ಅಭಿಮಾನಿಗಳಿಗೆ ಒಂದು ಸಂದೇಶವನ್ನು ಹೇಳಿದ್ದಾರೆ ನಾನು ಯಾವುದೇ ಫೇಸ್ ಬುಕ್ ಎಕೌಂಟ್ ಮಾಡಿಲ್ಲ ನನ್ನ ಹೆಸರಲ್ಲಿ ಫೇಕ್ ಎಕೌಂಟ್ ಮಾಡಿ ದುರುಪಯೋಗ ಮಾಡುತ್ತಿದ್ದಾರೆ ಹಾಗಾಗಿ ಜಾಗರೂಕತೆಯಿಂದ ಇರಿಯೆಂದು ಹೇಳುವ ಇವರ ಮುಂದಿನ ಚಿತ್ರ ಲೋಕದ ಕನಸು ನನಸಾಗಲಿ ಎಂದು ಶುಭ ಹಾರೈಸೋಣ.

  —-ಸುಹಾನಿ.ಬಡೆಕ್ಕಿಲ

 

Tags