ಆರೋಗ್ಯಜೀವನ ಶೈಲಿ

ನಿಮ್ಮೊಳಗೇ ಸುಪ್ತಾವಸ್ಥೆಯಲ್ಲಿ ಅದ್ಭುತ ಶಕ್ತಿಯೊಂದಿದೆ, ನೀವು ಬಲ್ಲಿರಾ..?!?

ಕುಂಡಲಿನಿ ಶಕ್ತಿಯ  ಜಾಗೃತಿಯಿಂದ  ವ್ಯಕ್ತಿತ್ವ ವಿಕಾಸ!

ಕುಂಡಲಿನಿ ಶಕ್ತಿಯ  ಜಾಗೃತಿಯಿಂದ  ವ್ಯಕ್ತಿತ್ವ ವಿಕಾಸ

ಕುಂಡಲಿನಿ ಅಂದ ತಕ್ಷಣ ಅನೇಕರು ಇದು ಯೋಗಿಗಳಿಗೆ ಮತ್ತು ಜೋತಿಷ್ಯ ಸಂಬಂಧಿಸಿದ ಪದ ಅಂದುಕೊಳ್ಳುತ್ತಾರೆ.  ಆದರೆ ಇದು ಬಹುಶಃ ಎಲ್ಲರೂ ಸಾಮಾನ್ಯವಾಗಿ ತಿಳಿದುಕೊಳ್ಳಬೇಕಾದ ಜ್ಞಾನ.  ಮನುಷ್ಯನ ದೇಹದಲ್ಲಿ ಅಡಗಿರುವ  ಆದಿಶಕ್ತಿ ಇದು. ಈ ಮೂಲ ಶಕ್ತಿಯನ್ನು ಜಾಗೃತಗೊಳಿಸಿಕೊಂಡು ಆನಂದ ಮತ್ತು ಸಂತೋಷವನ್ನು ಅನುಭವಿಸುವುದರ ಜೊತೆಗೆ ಹಿಡಿದ ಕೆಲಸವನ್ನು ಯಶಸ್ವಿಯಾಗಿ ಸಾಧಿಸುವುದಾಗಿದೆ.

ದೇಹದಲ್ಲಿರುವ ಏಳು ಚಕ್ರಗಳ ಮೂಲಕ ಆ ಶಕ್ತಿಯ ಹಿರಿದು ಮಾಡಿಕೊಂಡು, ಅರಿಷಡ್ವರ್ಗಗಳನ್ನು ಗೆದ್ದು ಅಸಾಧ್ಯವನ್ನು ಸಾಧ್ಯವಾಗಿಸಿ ಮುಗಿಲೆತ್ತರಕ್ಕೆ ವ್ಯಕ್ತಿತ್ವವನ್ನು ಕೊಂಡು ಹೋಗುವಲ್ಲಿ ಈ ದಿವ್ಯ ಶಕ್ತಿಯನ್ನು  ಪಡೆಯಲು ಧ್ಯಾನ ಮತ್ತು ಮೌನವನ್ನು ಆಚರಿಸಬೇಕಾಗುತ್ತದೆ.

ಸ್ವಾಮಿ ವಿವೇಕಾನಂದರು  ಪ್ರತಿಯೊಬ್ಬ ಮನುಷ್ಯನಲ್ಲಿ ಅಸಾಧಾರಣ ಶಕ್ತಿಯಿದೆ. ಅದನ್ನು ಬಳಸಿಕೊಂಡು ಅದ್ಭುತವನ್ನು ಸಾಧಿಸಿ ತೋರಿಸಬಹುದು,  ಎಂದು  ಅವರು ಹೇಳಲು ಕಾರಣ ಅವರು ಈ ಶಕ್ತಿಯ ಇರುವಿಕೆ ಬಗ್ಗೆ ಕಂಡುಕೊಂಡ ಸತ್ಯದಿಂದಲೇ. ಇನ್ನು, ಗೌತಮ ಬುದ್ದರು ಸಹ ಧ್ಯಾನ ಮತ್ತು ತಪಸ್ಸಿನಿಂದ ಕುಂಡಲಿನಿಯನ್ನು  ಜಾಗೃತಗೊಳಿಸಿಕೊಂಡು  ಇಡೀ  ಜಗತ್ತಿಗೆ ಮಹಾ ಬೆಳಕಾದರು.

ಭಾರತೀಯ ಯೋಗಾಭ್ಯಾಸ ಪದ್ದತಿಯಲ್ಲಿ ಗುರುಗಳು ಅರ್ಹ ಅಭ್ಯಾಸವುಳ್ಳ ಶಿಷ್ಯರಿಗೆ ಈ ಜ್ಞಾನ ನೀಡಿ ಅವರನ್ನು ಲೋಕ ಕೊಂಡಾಡುವ ರೀತಿಯಲ್ಲಿ ಬೆಳೆಸುತ್ತಿದ್ದರು. ಸಾಮಾನ್ಯ ಮನಃಸ್ಥಿತಿಯಿಂದ  ಅಸಾಮಾನ್ಯ  ಸ್ಥಿತಿಗೆ  ಕುಂಡಲಿನಿ  ಶಕ್ತಿಯು  ಅಭ್ಯಾಸಿಗನನ್ನು ಕೊಂಡೊಯ್ಯುತ್ತದೆ.

ಈ ಶಕ್ತಿಯು ಬೆನ್ನಹುರಿಯ ಕೆಳಗೆ ಸುಪ್ತಾವಸ್ಥೆಯಲ್ಲಿ ಸುರುಳಿಯಂತೆ  ಮೂಲಾಧಾರ  ಚಕ್ರದಲ್ಲಿದೆ,  ಎಂದು ಜ್ಞಾನಿಗಳು ಹೇಳುತ್ತಾರೆ.  ಸುಪ್ತಾವಸ್ಥೆಯ  ಆ  ಶಕ್ತಿಯು  ಕಲ್ಲನ್ನು ಸೀಳುವ ನೀರಂತೆ  ಎಲ್ಲ  ವಿಘ್ನಗಳನ್ನು  ಸೀಳಿ  ವ್ಯಕ್ತಿಯನ್ನು  ವಿಜಯ ಪಥದತ್ತ  ಒಯ್ಯುತ್ತದೆ. ಅದು ಈಶ್ವರಿ ಶಕ್ತಿಯಂತೆ  ಅಸೀಮ  ಶಕ್ತಿಯುಳ್ಳ  ಸರ್ವಶಕ್ತಿ,  ಆದಿ ಶಕ್ತಿ..! ಅದನ್ನು ತಿಳಿದುಕೊಳ್ಳ ಬಯಸುವ  ಜ್ಞಾನಾರ್ಥಿಗಳು  ವಿಷಯದ  ಮುಂದೆ  ಜ್ಞಾನಸ್ಥರಾಗಿ  ಕುಳಿತುಕೊಳ್ಳಬೇಕು. ಮಹಾತ್ವಕಾಂಕ್ಷೆವುಳ್ಳ  ವ್ಯಕ್ತಿಗೆ  ಇದರ  ಪರಿಜ್ಞಾನ ಇರುವುದು ತೀರ ಅವಶ್ಯ ಎಂದು ಹೇಳುತ್ತಾರೆ.

ಕಟ್ಟಿಗೆಯಲ್ಲಿರುವ ಬೆಂಕಿಯಂತೆ  ಎಲ್ಲರಲ್ಲೂ ಕುಂಡಲಿನಿ  ಸುಪ್ತ  ಶಕ್ತಿ ಇರುತ್ತದೆ. ಜೀವನದಲ್ಲಿ ತುಂಬಾ ನೊಂದಿರುವ ವ್ಯಕ್ತಿ ಮತ್ತು ಜೀವನದಲ್ಲಿ ಎಲ್ಲ ಇದ್ದು ನೆಮ್ಮದಿ ಇಲ್ಲದ ವ್ಯಕ್ತಿಗಳು ಈ ಶಕ್ತಿಯ ಬಗ್ಗೆ  ತಿಳಿದುಕೊಂಡು  “ಆನಂದ  ಬ್ರಹ್ಮ’’ವನ್ನು ಅನುಭವಿಸಹುದು. ಅಲ್ಲದೇ ಅವನ ಪ್ರಜ್ಞೆಯ ಮಟ್ಟ ವೈಯಕ್ತಿಕ  ಆಗಿರದೇ ವಿಶ್ವ ಮಟ್ಟಕ್ಕೆ ಹೋಗಲು ಸಹ ಹೆದ್ದಾರಿಯಾಗಿರುತ್ತದೆ.

ನಿಮ್ಮನ್ನು ಬಿಟ್ಟು ಬಿಡದೆ ಕಾಡುವ ಕೆಟ್ಟ ಆಲೋಚನೆ, ವಿಕೃತ ಚಿಂತನೆ, ಲೋಭ, ಕಾಮ, ಮದ , ಮತ್ಸರ ಸೇರಿದಂತೆ ಅನಾವಶ್ಯಕ ಸಂಗತಿಗಳಿಂದ ದೂರ ಇರಲು ಅತ್ಯುತ್ತಮ ಮಾರ್ಗ.

ಹಣ ಇರಲಿ ಇಲ್ಲದಿರಲಿ

ಕೀರ್ತಿ ಬರಲಿ ಬರದಿರಲಿ

ಏನ್ನೆಲ್ಲಾ ಇರಲಿ

ಏನೂ ಇಲ್ಲದಿರಲಿ…  

..ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಖದಲ್ಲಿ ಕಾಂತಿ ಮತ್ತು ಜಗತ್ತನ್ನೆ ಗೆಲ್ಲುತ್ತೇನೆ ಅನ್ನುವ ಆತ್ಮ ವಿಶ್ವಾಸವನ್ನು ತುಂಬುವ ಕುಂಡಲಿನಿ ಶಕ್ತಿಯ ಬಗ್ಗೆ ತಿಳಿದುಕೊಂಡು ಅಭ್ಯಾಸ ಮಾಡಿ ಪ್ರತಿಯೊಬ್ಬರೂ ತಮ್ಮತಮ್ಮೊಳಗಿನ ದೈವೀಶಕ್ತಿಯನ್ನುವಶ ಪಡಿಸಿಕೊಂಡು ಅದ್ಭುತವಾದದನ್ನು ಸಾಧಿಸಲೇಬಹುದು….. ವಿಜಯೀಭವ..!

 

ನಿರೂಪಣೆ: ಸೂನಗಹಳ್ಳಿ ರಾಜು