ಆರೋಗ್ಯಆಹಾರಜೀವನ ಶೈಲಿ

ಅಡುಗೆಗೂ ಸೈ, ಆರೋಗ್ಯಕ್ಕೂ ಸೈ ಈ ಇಂಗು

ಬೆಂಗಳೂರು, ಏ.14:

ಅಡುಗೆಯ ರುಚಿಯನ್ನು ಇಮ್ಮಡಿಗೊಳಿಸುವ ಈ ಸಾಂಬಾರ ಪದಾರ್ಥದ ಹೆಸರು ಇಂಗು. ಮಧ್ಯ ಏಷ್ಯಾ ಖಂಡಗಳಲ್ಲಿ ಹೆಚ್ಚಾಗಿ ಕಂಡುಬರುವ ಬಹುವಾರ್ಷಿಕ ಬೆಳೆಯಾದ ಇಂಗುವಿನ ವೈಜ್ಞಾನಿಕ ಹೆಸರು ಫೆರುಲ್ಲಾ ಅಸಫೋಟಿಡಾ. ಆಯುರ್ವೇದದಲ್ಲಿ ಮುಖ್ಯ ಸ್ಥಾನ ಪಡೆದಿರುವ ಇಂಗು ಆಹಾರದ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಔಷಧಿಯಾಗಿಯೂ ಉಪಯೋಗ.

ಕಾರ್ಬೋಹೈಡ್ರೇಟ್ ಗಳು, ಕ್ಯಾಲ್ಸಿಯಂ, ಗಂಧಕ, ನಿಯಾಸಿನ್, ಕೆರೋಟಿನ್ ಮತ್ತು ರೈಬೋಪ್ಲೋವಿನ್ ಎಂಬ ಪೋಷಕಾಂಶಗಳು ಇದರಲ್ಲಿ ಒಳಗೊಂಡಿದೆ. ಅತ್ಯುತ್ತಮ ಆ್ಯಂಟಿ ಆಕ್ಸಿಡೆಂಟಾಗಿರುವ ಇಂಗು ವೈರಸ್ ವಿರೋಧಿಯೂ ಹೌದು. ಮಾತ್ರವಲ್ಲ ಬ್ಯಾಕ್ಟೀರಿಯಾ ನಿವಾರಕವಾಗಿರುವ ಇಂಗುವಿಗೆ ಉರಿಯೂತ ಶಮನ ಮಾಡುವ ಶಕ್ತಿಯಿದೆ. ಇಂಗಿನ ಹೆಚ್ಚಿನ ಔಷಧೀಯ ಗುಣಗಳನ್ನು ನಾವಿಂದು ತಿಳಿಯೋಣ.

ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಇಂಗು ಬಹುಬೇಗನೇ ನಿವಾರಣೆ ಮಾಡುತ್ತದೆ. ಗ್ಯಾಸಿನಿಂದ ಬರುವ ಹೊಟ್ಟೆನೋವಿಗೆ ಇಂಗು ಬೆರೆಸಿದ ಮಜ್ಜಿಗೆ ರಾಮಬಾಣ. ಅದನ್ನು ಕುಡಿದರೆ ಸಾಕು, ಕ್ಷಣರ್ಧಾದಲ್ಲಿ ಹೊಟ್ಟೆನೋವು ಕಡಿಮೆಯಾಗುತ್ತದೆ. ಜೊತೆಗೆ ಅಜೀರ್ಣ, ಹೊಟ್ಟೆಯುರಿ, ಹುಳಿ ತೇಗನ್ನು ನಿಯತ್ರಿಸುವ ಇದು ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ. ಖುತುಸ್ರಾವದ ಸಮಯದಲ್ಲಿ ಕಂಡುಬರುವ ನೋವು, ಸೆಳೆತಕ್ಕೆ ಇದು ರಾಮ ಬಾಣ. ಬಿಳಿ ಸೆರಗಿನ ತೊಂದರೆಗೂ ಇದು ಪ್ರಯೋಜನವಾಗುತ್ತದೆ. ಶ್ವಾಸನಾಳದ ಸೋಂಕು ನಿವಾರಿಸುವ ಇಂಗು ಒಣ ಕೆಮ್ಮು, ನಾಯಿ ಕೆಮ್ಮು ಮತ್ತು ಅಸ್ತಮಾವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ಎದೆ ಮತ್ತು ಗಂಟಲಲ್ಲಿ ಕಟ್ಟಿಕೊಂಡಿರುವ ಕಫವನ್ನು ಕರಗಿಸುತ್ತದೆ. ಜೇನು,ಶುಂಠಿ ರಸ ಮತ್ತು ಇಂಗು ಇದಕ್ಕೆ ಉತ್ತಮ ಮದ್ದು. ಇದು ಮೂರನ್ನು ಬೆರೆಸಿ ಸೇವಿಸಬೇಕು.

ಮಧುಮೇಹ ನಿವಾರಕವಾಗಿರುವ ಇಂಗು ಕೊಲೆಸ್ಟ್ರಾಲ್ ಬರದಂತೆ ತಡೆಯುತ್ತದೆ. ರಕ್ತವನ್ನು ತೆಳುವಾಗಿಸುವ ಶಕ್ತಿ ಹೊಂದಿರುವ ಇದು ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ಸಾಮಾನ್ಯವಾಗಿ ಆಗಾಗ ಬರುವ ಆರೋಗ್ಯ ಸಮಸ್ಯೆಗಳಲ್ಲಿ ತಲೆನೋವು ಒಂದು. ಮೈಗ್ರೇನ್ ನಿಂದಾಗಿ ಬರುವ ತಲೆನೋವಿಗೆ ಇಂಗು ಬೆರೆಸಿದ ನೀರು ಕುಡಿದರೆ ಸಾಕು, ತಲೆನೋವು ಉಪಶಮನವಾಗುತ್ತದೆ.

ಹಲ್ಲುನೋವು, ಬಾಯಿಯಲ್ಲಿನ ಸೋಂಕು, ಒಸಡಿನಲ್ಲಿ ಕಂಡು ಬರುವ ರಕ್ತವನ್ನು ಇಂಗು ಕಡಿಮೆ ಮಾಡುತ್ತದೆ. ಹಲ್ಲು ಹುಳುಕಾಗಿ ನೋವು ಕಾಣಿಸಿಕೊಂಡಿದ್ದರೆ ಬಿಸಿ ನೀರಿಗೆ ಇಂಗು ಬೆರೆಸಿ ಬಾಯಿ ಮುಕ್ಕಳಿಸಬೇಕು. ಇದರಿಂದ ತಾತ್ಕಾಲಿಕವಾಗಿ ನೋವು ನಿವಾರಣೆಯಾಗುತ್ತದೆ. ಅದರ ಹೊರತಾಗಿ ಇಂಗಿನ ನೀರಿನಲ್ಲಿ ಅದ್ದಿದ ಹತ್ತಿಯನ್ನು ಹುಳುಕು ಹಲ್ಲಿನ ಮೇಲಿಟ್ಟರೂ ಆಗುತ್ತದೆ.

ಹದಿಹರೆಯದ ಸಮಸ್ಯೆಯಾಗಿ ಕಾಡುವ ಮೊಡವೆಗೂ ಇದು ಪ್ರಯೋಜನಕಾರಿ. ನೀರಿನಲ್ಲಿ ಇಂಗು ಬೆರೆಸಿ, ನಂತರ ಆ ನೀರನ್ನು ಮೊಡವೆಯ ಮೇಲೆ ಹಚ್ಚಬೇಕು. ಹೀಗೆ ಮಾಡುತ್ತಿದ್ದರೆ ಮೊಡವೆ ಬೇಗ ಕಡಿಮೆಯಾಗುತ್ತದೆ.

ಹೀಗೆ ಪ್ರತಿದಿನ ಅಡುಗೆಗೆ ಬಳಸುವ ಇಂಗು ಉತ್ತಮ ಆರೋಗ್ಯಕ್ಕೂ ಉಪಕಾರಿ.

ಅನಿತಾ ಬನಾರಿ

ನಟನೆಗೂ ಸೈ, ಕಂಠದಾನಕ್ಕೂ ಜೈ ಎನ್ನುವ ಚೆಲುವೆ

#balkaninews #Hingu #hingufood #ingufood #healthytips #lifestyle

Tags