ಆರೋಗ್ಯಆಹಾರಜೀವನ ಶೈಲಿ

ಅಡುಗೆ ಮನೆಯ ವೈದ್ಯ ಅಳಲೆಕಾಯಿ

ಬೆಂಗಳೂರು, ಏ.18:

ಅಡುಗೆ ಮನೆಯ ವೈದ್ಯ ಎಂದೇ ಜನಪ್ರಿಯಬಶಗಿರುವ ಅಳಲೆ ಕಾಯಿಯ ಮೂಲ ದಕ್ಷಿಣ ಏಷ್ಯಾ. ಕಾಂಬ್ರೆಟೇಸಿ ಕುಟುಂಬಕ್ಕೆ ಸೇರಿರುವ ಅಳಲೆಕಾಯಿಯ ವೈಜ್ಞಾನಿಕ ಹೆಸರು Terminalia chebula. ಸಂಸ್ಕೃತದಲ್ಲಿ ಹರಿತಕೀ ಎಂದು ಕರೆಯಲ್ಪಡುವ ಇದು ಸಕಲ ರೋಗಗಳಿಗೆ ರಾಮಬಾಣ. ಔಷಧಿಗಳ ರಾಜ ಎಂದು ಆಯುರ್ವೇದದಲ್ಲಿ ಜನಜನಿತವಾಗಿರುವ ಅಳಲೆಕಾಯಿ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಕೊಡಬಹುದಾದ ಮದ್ದು ಹೌದು. ಭಾರತದಾದ್ಯಂತ ಕಂಡುಬರುವ ಅಳಲೆಕಾಯಿ ಅನೇಕ ವ್ಯಾಧಿಗಳನ್ನು ನಿವಾರಿಸುವ ಗುಣ ಹೊಂದಿದೆ.

ವಾತ, ಫಿತ್ತ, ಕಫಗಳ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅಳಲೆಕಾಯಿ ಉತ್ತಮ ಮದ್ದು. ಅಷ್ಟೇ ಅಲ್ಲದೇ ಮಾಮೂಲಿಯಾಗಿ ಕಂಡು ಬರುವ ನೆಗಡಿ, ಕೆಮ್ಮು, ಜ್ವರವನ್ನು ಹೋಗಲಾಡಿಸುವ ಶಕ್ತಿ ಇದಕ್ಕಿದೆ. ಚರ್ಮಕ್ಕೆ ಸಂಬಂಧಿಸಿದ ಬ್ಯಾಕ್ಟೀರಿಯಾ ಮತ್ತು ಫಂಗಸ್ ನಿಯಂತ್ರಣಕ್ಕೆ ಅಳಲೆಕಾಯಿ ಬಳಸುತ್ತಾರೆ. ಇನ್ನು ದೇಹದ ಯಾವುದೇ ಭಾಗಗಳಿಗೆ ಗಾಯಗಳಾಗಿದ್ದರೂ ಅಳಲೆಕಾಯಿಯ ರಸ ಲೇಪಿಸುವುದರಿಂದ ಬಹು ಬೇಗನೇ ಗಾಯ ಕಡಿಮೆಯಾಗುತ್ತದೆ.

ಕೆಲವರಿಗೆ ಬಾಯಿ ಹುಣ್ಣಿನ ಸಮಸ್ಯೆ ಆಗಾಗ ಕಂಡು ಬರುತ್ತದೆ. ಬಾಯಿ ಹುಣ್ಣಾದಾಗ ಅಳಲೆಕಾಯಿ ಪುಡಿಯನ್ನು ನೀರಿನಲ್ಲಿ ಸೇರಿಸಿ ಬಾಯಿ ಮುಕ್ಕುಳಿಸಿ ಉಗುಳಬೇಕು. ಬಾಯಿಹುಣ್ಣು ಕಡಿಮೆಯಾಗುತ್ತದೆ. ಮಲಬದ್ಧತೆಯನ್ನು ನಿವಾರಿಸುವ ಇದು ಜೀರ್ಣ ಶಕ್ತಿ ವೃದ್ಧಿಸುತ್ತದೆ. ಮಾತ್ರವಲ್ಲ ದೇಹದಲ್ಲಿನ ಅನಗತ್ಯ ಕೊಬ್ಬು ಕರಗಿಸುವ ಶಕ್ತಿ ಇದಕ್ಕಿದೆ. ಮುಖ್ಯವಾದ ಸಂಗತಿ ಎಂದರೆ ಅಳಲೆಕಾಯಿ ಸೇವನೆಯಿಂದ ಗರ್ಭಪಾತದ ಸಾಧ್ಯತೆ ಹೆಚ್ಚಿರುವುದರಿಂದ ಗರ್ಭಿಣಿಯರು ಇದರಿಂದ ದೂರ ಇರುವುದೇ ಒಳ್ಳೆಯದು. ಜೊತೆಗೆ ಪ್ರತಿದಿನ ಅಳಲೆಕಾಯಿ ಕಷಾಯ ಕುಡಿಯುವುದರಿಂದ ದೇಹದ ಉಷ್ಣತೆ ಸಮತೋಲನದಲ್ಲಿ ಇರುತ್ತದೆ.

ಭಾರತದಲ್ಲಿ ಹಲವಾರು ಆಯುರ್ವೇದ ಕಂಪೆನಿಗಳು ಅಳಲೆಕಾಯಿ ಉಪಯೋಗಿಸಿ ಔಷಧಿಗಳನ್ನು ತಯಾರಿಸುತ್ತಿದ್ದಾರೆ. ಹರಿತಕೀ, ಅಭಯ ಮೋದಕ್, ಪಥ್ಯಾದಿ ಚೂರ್ಣ ಗಳಲ್ಲಿ ಇದನ್ನು ಬಳಸಲಾಗಿದೆ. ಮತ್ತು ತ್ರಿಫಲ ಚೂರ್ಣ ದಲ್ಲಿ ಅಳಲೆಕಾಯಿಯ ಜೊತೆಗೆ ತಾರೇಕಾಯಿ ಮತ್ತು ನೆಲ್ಲಿಕಾಯಿ ಬಳಸುತ್ತಾರೆ.

ಇಂತಿಪ್ಪ ಬಹುಪಯೋಗಿ ಅಳಲೆಕಾಯಿ ಅರ್ಥಾತ್ ಹರೀತಕೀ ಯನ್ನು “ದೇವಲೋಕದಲ್ಲಿ ಹುಟ್ಟಿದ, ಹಸಿರು ಬಣ್ಣವುಳ್ಳ, ಅಳಲೆಕಾಯಿಯು ಎಲ್ಲಾ ರೋಗಗಳನ್ನು ಹರಣ ಮಾಡುವ ಹರೀತಕೀ” ಎಂದು ಧನ್ವಂತರಿಯಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ಕಾಲದಲ್ಲಿ ಹಳೆಯ ಕಾಲದ ವೈದ್ಯರನ್ನು ಅಳಲೆಕಾಯಿ ಪಂಡಿತರು ಎಂದು ಕರೆಯುವುದು ರೂಢಿಯಲ್ಲಿತ್ತು. ಅದಕ್ಕಿರುವ ಕಾರಣ ಇಷ್ಟೇ. ಅಗಾಧ ಔಷಧಿಯ ಗುಣವುಳ್ಳ ಅಳಕೆಕಾಯಿಯಿಂದ ಚೂರ್ಣ ತಯಾರಿಸಿ ಮದ್ದಿನ ರೂಪದಲ್ಲಿ ನೀಡುತ್ತಿದ್ದರು. ಇದರಿಂದ ಕಾಯಿಲೆ ಕಡಿಮೆಯಾಗುತ್ತಿತ್ತು.

ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲದ ಅಳಕೆಕಾಯಿ ಶತಮಾನದಿಂದಲೂ ಔಷಧಿಯಾಗಿ ಬಳಕೆಯಲ್ಲಿದೆ.

ಅನಿತಾ ಬನಾರಿ

ಒಡವೆಯ ಗೊಡವೇ, ಮರುಗೋದು ತರವೇ

#advantagesofalalekaayi #aalalekaayi #beautytips #lifestyle #healthytips

Tags