ಆರೋಗ್ಯಆಹಾರಜೀವನ ಶೈಲಿ

ಬಹುಪಯೋಗಿ ಬೆಣ್ಣೆ ಹಣ್ಣು

ಬೆಂಗಳೂರು, ಮಾ.26:

ಮೂಲತ‍ಃ ಮಧ್ಯ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾದ ಬೆಳೆಯಾಗಿರುವ ಬೆಣ್ಣೆಹಣ್ಣನ್ನು ಬಟರ್ ಪಿಯರ್, ಆವಕಾಡೊ, ಅಲಿಗೇಟರ್ ಪಿಯರ್ ಎಂದೂ ಕರೆಯುತ್ತಾರೆ. ಲಾರೆಸಿಯೆ ಕುಟುಂಬಕ್ಕೆ ಸೇರಿದ ಇದು ತಿನ್ನಲು ರುಚಿಯಾಗಿರುವುದು ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯದು. ಗೋಲಾಕಾರದಲ್ಲಿರುವ ಬೆಣ್ಣೆಹಣ್ಣಿನಲ್ಲಿ ಅಗಾಧ ಪ್ರಮಾಣದ ಪೋಷಕಾಂಶಗಳಿವೆ. ವಿಟಮಿನ್ ಎ, ಬಿ ಮತ್ತು ಇ ಹೇರಳವಾಗಿರುವ ಇದರಲ್ಲಿ ಪ್ರೋಟೀನ್ ಮತ್ತು ನಾರಿನಾಂಶ ಸಮೃದ್ಧವಾಗಿದೆ. ಇನ್ನು ಬೆಣ್ಣೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನ ಅಂಶವಿದ್ದರೂ ಅದು ಪ್ರಕೃತ್ತಿದತ್ತವಾಗಿರುವ ಕಾರಣ ಬೆಣ್ಣೆ ಹಣ್ಣು ಸೇವಿಸಲು ಹಿಂದು ಮುಂದು ನೋಡಬೇಕಿಲ್ಲ. ರೋಗ ನಿವಾರಣ ಶಕ್ತಿಯನ್ನು ಹೊಂದಿದ ಬೆಣ್ಣೆಹಣ್ಣು ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ನಾವಿಂದು ತಿಳಿಯೋಣ.

ಬೆಣ್ಣೆಹಣ್ಣಿನಲ್ಲಿ ಕೊಬ್ಬಿನಾಂಶ ಗರಿಷ್ಟ ಪ್ರಮಾಣದಲ್ಲಿ ಇರುವುದರಿಂದ ರಕ್ತದಲ್ಲಿನ ಸಕ್ಕರೆ  ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿ. ಮತ್ತು ಪ್ರಕೃತಿದತ್ತವಾದ ಈ ಕೊಬ್ಬು ದೇಹದಲ್ಲಿನ ಇನ್ಸುಲಿನ್ ಉತ್ಪಾದನಾ ಮಟ್ಟವನ್ನು ನಿಯಂತ್ರಿಣಿಸುತ್ತದೆ. ಆದುದರಿಂದ ಮಧುಮೇಹಿಗಳು ನಿರಾಂತಕವಾಗಿ ಬೆಣ್ಣೆಹಣ್ಣುನ್ನು ಸೇವಿಸಬಹುದು. ಇನ್ನು ಮುಖ್ಯವಾದ ವಿಚಾರ ಎಂದರೆ ಕೆಲವರು ಕಡಿಮೆ ಸಕ್ಕರೆ ಅಂಶದ ಸಮಸ್ಯೆಯಿರುವವರು ಇದನ್ನು ಧಾರಾಳವಾಗಿ ಸೇವಿಸಬಹುದು.

ಉರಿಯೂತ ನಿರೋಧಕವಾಗಿರುವ ಬೆಣ್ಣೆಹಣ್ಣು ಸಂಧಿವಾತಕ್ಕೆ ರಾಮಬಾಣ. ಸಂಧಿವಾತದಿಂದ ಕಂಡುಬರುವ ಕೀಲು ನೋವಿಗೆ ಇದು ಉತ್ತಮ ಮದ್ದು. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಅವಶ್ಯಕವಾದ ಬಿ6 ಮತ್ತು ಫೋಲಿಕ್ ಆ್ಯಸಿಡ್ ಇದರಲ್ಲಿ ಹೇರಳವಾಗಿರುವುದರಿಂದ ಬೆಣ್ಣೆಹಣ್ಣು ಹೃದಯಕ್ಕೆ ತುಂಬಾ ಒಳ್ಳೆಯದು. ಮಾತ್ರವಲ್ಲ ಹೃದಯಾಘಾತವನ್ನು ತಡೆಯುವ ಶಕ್ತಿ ಇದಕ್ಕಿದೆ.

ಬೆಣ್ಣೆಹಣ್ಣಿನ ಎಣ್ಣೆ ಚರ್ಮಕ್ಕೆ ಒಳ್ಳೆಯದು. ಚರ್ಮದ ರಚನೆ ಮತ್ತು ಗುಣಮಟ್ಟವನ್ನು ಸುಧಾರಿಸುವ ಈ ಎಣ್ಣೆಯನ್ನು ಒಣ ಚರ್ಮ ಮೇಲೆ ಹಚ್ಚುವುದರಿಂದ ಚರ್ಮಕ್ಕೆ ಹೊಳಪು ನೀಡುತ್ತದೆ. ಇದರಲ್ಲಿ ಅಗಾಧವಾಗಿರುವ ಆಮ್ಲಗಳು ಚರ್ಮದ ಕಾಂತಿಯನ್ನು ಇಮ್ಮಡಿಗೊಳಿಸುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲಿಚ್ಚಿಸುವವರು ಈ ಹಣ್ಣಿನ ತಿರುಳನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಇದು ತಣ್ಣನೆಯ ಅನುಭವವನ್ನು ನೀಡುತ್ತದೆ.ಬೆಣ್ಣೆಹಣ್ಣನ್ನು ಹಾಗೆಯೇ ತಿನ್ನಬಹುದಾದರೂ ಅದನ್ನು ಅಡುಗೆಗೂ ಬಳಸುತ್ತಾರೆ. ಬೆಣ್ಣೆಹಣ್ಣುಗಳಿಂದ ತಯಾರಿಸುವ ಪೈಕಿ ಮೆಕ್ಸಿಕೋದ ಗ್ವಾಕಮೋಲ್ ಜನಪ್ರಿಯವಾಗಿದೆ. ಕ್ಯಾಲಿಪೋರ್ನಿಯಾದ ರೋಲ್ ನಲ್ಲೂ ಇದನ್ನು ಬಳಸುತ್ತಾರೆ. ಬ್ರೆಜಿಲ್, ಇಂಡೋನೇಷಿಯಾ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ ನಲ್ಲಿ ಸಕ್ಕರೆ, ಹಾಲು ಮತ್ತು ಆವಕಾಡೊ ರಸ ಸೇರಿಸಿ ಸಿಹಿಯಾಗಿರುವ ಪಾನೀಯ ತಯಾರಿಸುತ್ತಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಲ್ಲಿ ಸ್ಯಾಂಡ್ ವಿಚ್ ನೊಡನೆ ಇದನ್ನು ಬಳಸಿದರೆ, ಶ್ರೀಲಂಕಾದಲ್ಲಿ ಬೆಣ್ಣೆಹಣ್ಣಿನ ತಿರುಳಿಗೆ ಸಕ್ಕರೆ ಮತ್ತು ಹಾಲು ಸೇರಿಸಿ ಸಿಕಿ ಅಡುಗೆ ಮಾಡುತ್ತಾರೆ. ಕೀನ್ಯಾದಲ್ಲಿ ಹಣ್ಣನ್ನಾಗಿ ಸೇವಿಸುವುದು ಮಾತ್ರವ್ಲದೇ ಹಣ್ಣಿನ ಸಲಾಡ್ ನಲ್ಲೂ ಉಪಯೋಗಿಸುತ್ತಾರೆ. ಇರಾನ್ ನಲ್ಲಿ ಕಾಂತಿ ವರ್ಧಕ ಮುಖದ ಕ್ರೀಮ್ ನ ತಯಾರಿಕೆಗೆ ಬಳಸುತ್ತಾರೆ. ಆವಕಾಡೊಗಳಿಂದ ಮಿಲ್ಕ್ ಶೇಕ್ ತಯಾರು ಮಾಡುತ್ತಾರೆ. ಅಷ್ಟೇ ಅಲ್ಲದೇ ಸ್ಯಾಂಡ್ ವಿಚ್ ಮತ್ತು ಸಲಾಡ್ ಗಳಲ್ಲಿ ಮಾಂಸದ ಬದಲು ಬೆಣ್ಣೆಹಣ್ಣನ್ನು ಉಪಯೋಗಿಸುವುದುಂಟು.

ಇಂತಿಪ್ಪ ಬಹುಪಯೋಗಿ ಬೆಣ್ಣೆಹಣ್ಣು ಪ್ರಾಣಿಗಳ ಪಾಲಿಗೆ ವಿಷಕಾರಿ ಎಂದರೆ ನಂಬಲು ಸಾಧ್ಯವೇ? ವಿಚಿತ್ರವೆಂದೆನಿಸಿದರೂ ಸತ್ಯ.

ಬೆಕ್ಕು, ನಾಯಿ, ಕರು, ಆಡು, ಇಲಿ, ಮೊಲ, ಕುದುರೆ ಮುಂತಾದ ಪ್ರಾಣಿಗಳು ಇದರ ಎಲೆ, ತೊಗಟೆ ಅಥವಾ ಬೀಜಗಳನ್ನು ತಿಂದರೆ ಸಾಕು, ತೀವ್ರ ತರಹದ ಅನಾರೋಗ್ಯಕ್ಕೆ ತುತ್ತಾಗುತ್ತವೆ. ಇದರ ಎಲೆಗಳಲ್ಲಿ ಪರ್ಸಿನ್ ಎಂಬ ವಿಷಕಾರಿ ಕೊಬ್ಬಿನಾಮ್ಲ ಇದ್ದು ವಾಂತಿ, ಅತಿಸಾರ, ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಇದರ ಸೇವನೆಯಿಂದ ಪ್ರಾಣಿಗಳಿಗೆ ಸಾವೂ ಬರಲೂ ಬಹುದು.

ಬೆಣ್ಣೆಹಣ್ಣಿನ ಸೇವನೆಯಿಂದಾಗುವ ಲಾಭಗಳು ಹಲವು. ಆರೋಗ್ಯಕರವಾಗಿರುವ ಬೆಣ್ಣೆಹಣ್ಣು ತಿನ್ನಲು ಇನ್ನೇಕೆ ತಡ…?

ಅನಿತಾ ಬನಾರಿ

ಬೇಸಿಗೆಯಲ್ಲಿ ಹೀಗಿರಲಿ ತ್ಚಚೆಯ ಆರೈಕೆ

#balkaninews #beautytips #healthytips #tips #avacoda #advantagesofavacoda

Tags