ಆರೋಗ್ಯಆಹಾರಜೀವನ ಶೈಲಿ

ಆರೋಗ್ಯ ವೃದ್ಧಿಸುವ ಕರಿಬೇವು

ಬೆಂಗಳೂರು, ಮಾ.21:

ಅಡುಗೆಯಲ್ಲಿ ಒಗ್ಗರಣೆಗೆ ಪ್ರಮುಖ ಸ್ಥಾನ. ಸಾರು, ಸಾಂಬಾರು, ಪಲ್ಯ, ಮಜ್ಜಿಗೆ ಹುಳಿ ಹೀಗೆ ಯಾವುದೇ ಅಡುಗೆ ತಯಾರಿಸಿದರೂ ಒಗ್ಗರಣೆ ಹಾಕಿದ ಮತ್ತೆಯೇ ಅದರ ರುಚಿ ಹೆಚ್ಚಾಗುವುದು. ಒಗ್ಗರಣೆಗೆ ಬಳಸುವ ಕರಿಬೇವು ಅಡುಗೆಯ ಘಮ ಹೆಚ್ಚಿಸುವುದಲ್ಲದೇ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ಊಟ ಮಾಡುವಾಗ ಸಾರಿನಲ್ಲಿ ಅಥವಾ ಪಲ್ಯದಲ್ಲಿ ಸಿಗುವ ಕರಿಬೇವನ್ನು ಬದಿಗೆ ಇಡುವವರೇ ಹೆಚ್ಚು. ಬದಲಿಗೆ ಅದನ್ನು ತಿನ್ನುವವರು ಕಡಿಮೆ. ಕರಿಬೇವಿನಲ್ಲಿರುವ ಅಗಾಧ ಔಷಧಿಯ ಗುಣ ಹೆಚ್ಚಿನವರಿಗೆ ತಿಳಿದಿಲ್ಲ. ಸಂಸ್ಕೃತದಲ್ಲಿ ಕಾಲಾಶಕ ಎಂದು ಕರೆಯಲ್ಪಡುವ ಕರಿಬೇವಿಗೆ ಅದರದೇ ಆದ ಸುವಾಸನೆಯಿದೆ. ಹಲವು ಕಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಇದಕ್ಕಿದೆ. ಜೀರ್ಣಕ್ರಿಯೆ ಯನ್ನು ಸುಧಾರಿಸುವ ಕರಿಬೇವು ದೇಹದಲ್ಲಿ ಇರುವ ಟಾಕ್ಸಿಕ್ ಅಂಶಗಳನ್ನು ಹೊರಗೆ ಹಾಕುತ್ತದೆ. ಕಫ, ಪಿತ್ತ, ಹೊಟ್ಟೆಗೆ ಸಂಬಂಧ ಪಟ್ಟ ಖಾಯಿಲೆಗಳು, ಮಧುಮೇಹ, ರಕ್ತದೊತ್ತಡ, ಮಲಬದ್ಧತೆ, ಬೇಧಿ ಹೀಗೆ ಹಲವು ಖಾಯಿಲೆಗಳಿಗೆ ರಾಮಬಾಣ ಈ ಕರಿಬೇವು.

ಮಧುಮೇಹಿಗಳು ಪ್ರತಿದಿನ ಕರಿಬೇವು ಸೇವಿಸಿದರೆ ಸಾಕು, ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು. ಬೆಳಗ್ಗೆ ಎದ್ದ ತಕ್ಷಣ ಕಾಡುವ ವಾಕರಿಕೆ ಸಮಸ್ಯೆ, ಹೊಟ್ಟೆ ತೊಳೆಸುವುದಕ್ಕೆ ಇದು ಒಳ್ಳೆಯ ಮದ್ದು. ರಕ್ತಹೀನತೆಯನ್ನು ನಿವಾರಿಸುವ ಇದು ಎಸಿಡಿಟಿಗೆ ಉತ್ತಮ ಔಷಧಿ. ಎಸಿಡಿಟಿ ಯಿಂದ ಹೊಟ್ಟೆ ಮತ್ತು ಎದೆಯ ಭಾಗಗಳಲ್ಲಿ ಕಾಣಿಸಿಕೊಳ್ಳುವ ಉರಿಗೆ ಕರಿಬೇವಿನಿಂದ ತಯಾರಿಸಿದ ಜ್ಯೂಸ್ ಕುಡಿಯಬೇಕು. ಆರ್ಯುವೇದ ಔಷಧಿಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕರಿಬೇವಿಗೆ ವಿಷವನ್ನು ಹೊರಹಾಕುವ ಸಾಮರ್ಥ್ಯವಿದೆ. ವಿಷ ಜಂತುಗಳು ಕಚ್ಚಿದರೆ ಕರಿಬೇವಿನಿಂದ ತಯಾರಿಸಿದ ಪೇಸ್ಟ್ ಹಚ್ಚುತ್ತಾರೆ. ಇನ್ನು ಪ್ರತಿದಿನ ಕರಿಬೇವಿನ ಎಲ್ಲೆಯನ್ನು ಸೇವಿಸುವುದರಿಂದ ಬೊಜ್ಜನ್ನು ಕರಗಿಸಬಹುದು ಮಾತ್ರವಲ್ಲದೇ ಇದರಿಂದ ದೇಹದ ತೂಕ ಕಡಿಮೆಯಾಗುವುದು.

ಮುಖ್ಯವಾದ ಸಂಗತಿ ಎಂದರೆ ಕರಿಬೇವಿನ ಎಲೆಯಲ್ಲಿ ಕೂದಲಿಗೆ ಶಕ್ತಿಯನ್ನು ನೀಡುವ ಗುಣವಿದೆ. ಇದರಲ್ಲಿರುವ ಪೋಷಕಾಂಶಗಳು ಕೂದಲಿಗೆ ಶಕ್ತಿಯನ್ನು ನೀಡುತ್ತದೆ. ತೆಂಗಿನ ಎಣ್ಣೆಗೆ ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಆ ಎಣ್ಣೆಯನ್ನು ವಾರಕ್ಕೊಮ್ಮೆ ತಲೆಗೆ ಹಾಕಿ ಮಸಾಜ್ ಮಾಡಿದರೆ ಒಳ್ಳೆಯದು. ಇದರಿಂದ ತಲೆಕೂದಲು ಉದುರುವುದು ನಿಲ್ಲುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ. ಅಷ್ಟುಮಾತ್ರವಲ್ಲದೇ ತಲೆಹೊಟ್ಟನ್ನು ನಿವಾರಿಸುವ ಕರಿಬೇವು ಕೂದಲ ಬುಡವನ್ನು ಗಟ್ಟಿಗೊಳಿಸುತ್ತದೆ.

ಒಟ್ಟಿನಲ್ಲಿ ಕರಿಬೇವು ದೇಹದ ಹಲವು ಖಾಯಿಲೆಗಳನ್ನು ಹೋಗಲಾಡಿಸಿ ಉತ್ತಮ ಆರೋಗ್ಯ ಕಾಪಾಡುವಲ್ಲಿ ಸಹಕರಿಸುತ್ತದೆ.

–  ಅನಿತಾ ಬನಾರಿ

ಬೇಸಿಗೆಯಲ್ಲಿ ಸೌಂದರ್ಯವನ್ನು ಕಾಪಾಡಿಕೊಳ‍್ಳಿ!!

#balkaninews #lifestyle #advantagesofcurryleaves #curryleavestreeadvantages #curryleavestreeusefull

Tags