ಆರೋಗ್ಯಜೀವನ ಶೈಲಿಸೌಂದರ್ಯ

ಮನೆಯಂಗಳದ ದಾಸವಾಳದ ಸೌಂದರ್ಯ ಲೀಲೆ

ಬೆಂಗಳೂರು, ಮಾ.14:

ವರ್ಷವಿಡೀ ಹೂವುಗಳಿಂದ ನಳನಳಿಸುವ ದಾಸವಾಳ ಬರೀ ಅಲಂಕಾರಿಕ ಮತ್ತು ಔಷಧಿಯ ಗುಣ ಹೊಂದಿದ ಸಸ್ಯ ಮಾತ್ರವಲ್ಲ. ಬದಲಿಗೆ ದಾಸವಾಳವನ್ನು ಸೌಂದರ್ಯವರ್ಧಕವನ್ನಾಗಿ ಉಪಯೋಗಿಸುತ್ತಾರೆ.

ಸೌಂದರ್ಯ ಎಂದರೆ ಇಷ್ಟ ಇಲ್ಲದವರಾರು ಹೇಳಿ? ಸದಾ ಕಾಲ ತ್ವಚೆಯ ಅಂದ ಮತ್ತು ಅದರ ಆರೈಕೆಯಲ್ಲಿ ಸಮಯ ಕಳೆಯುವ ಸೌಂದರ್ಯ ಪ್ರಿಯರಿಗೇನು ಕಡಿಮೆಯಿಲ್ಲ. ತ್ವಚೆಯ ಆರೈಕೆಗೆ ಅಗತ್ಯವಿರುವಂತಹ ಹತ್ತು ಹಲವು ಕ್ರಿಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಬೇಕಾಬಿಟ್ಟಿಯಾಗಿ ಅದನ್ನು ಉಪಯೋಗಿಸುವುದು ಕಷ್ಟ. ಯಾಕೆಂದರೆ ಕೆಲವರಿಗೆ ಇದರಿಂದ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಬದಲಿಗೆ ನೈಸರ್ಗಿಕ ಸೌಂದರ್ಯ ವರ್ಧಕಗಳನ್ನು ಬಳಸುವುದು ಒಳ್ಳೆಯದು.

ನಮ್ಮ ಸುತ್ತಮುತ್ತಲೂ ಹೇರಳವಾಗಿ ಸಿಗುವ ದಾಸವಾಳ ಸೌಂದರ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂಬ ವಿಷಯ ಹಲವರಿಗೆ ತಿಳಿದಿಲ್ಲ. ಮನಮೋಹಕವಾದ ದಾಸವಾಳದ ಸೌಂದರ್ಯ ಲೀಲೆಯನ್ನು ನಾವಿಂದು ತಿಳಿಯೋಣ.ಎಲ್ಲಾ ಹೆಣ್ಮಕ್ಕಳಿಗೆ ಹೆಚ್ಚಾಗಿ ಕಂಡುಬರುವ ಸಮಸ್ಯೆ ಎಂದರೆ ಕೂದಲು ಉದುರುವುದು. ಅದಕ್ಕೆ ದಾಸವಾಳ ಉತ್ತಮ ಮನೆ ಮದ್ದು. ದಾಸವಾಳ ಹೂವನ್ನು ಎಣ್ಣೆಯಲ್ಲಿ ಹಾಕಿ ಕುದಿಸಬೇಕು. ನಂತರ ಆ ಎಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲಿನ ಬೆಳವಣಿಗೆಗೆ ಸಹಕರಿಸುವ ಇದು ಅಕಾಲಿಕವಾಗಿ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ. ಅಲ್ಲದೇ ದಾಸವಾಳ ಹೂವು ಉತ್ತಮ ಕಂಡೀಶನರ್ ಹೌದು. ನೈಸರ್ಗಿಕವಾದ ಕಂಡೀಶನರ್ ನಿಂದ ಕೂದಲು ಮೃದುವಾಗುತ್ತದೆ ಮತ್ತು ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಆದ್ದರಿಂದ ವಾರಕ್ಕೊಂದು ಬಾರಿಯಾದರೂ ದಾಸವಾಳ ಹೂವನ್ನು ಹಾಕಿ ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯದು.

ದಾಸವಾಳ ಹೂವಿನ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ತಲೆ ಹೊಟ್ಟು ನಿವಾರಣೆಯಾಗುತ್ತದೆ. ಮತ್ತು ಕೂದಲಿಗೆ ಕಪ್ಪು ಬಣ್ಣ ದೊರೆಯುತ್ತದೆ. ಅಲ್ಲದೇ ದಾಸವಾಳದ ಎಣ್ಣೆಯ ಉಪಯೋಗದಿಂದ ಚರ್ಮಕ್ಕೆ ಹೊಳಪು ದೊರೆಯುತ್ತದೆ.

ಮೊಡವೆ!!! ಹದಿಹರೆಯದ ಹೆಣ್ಮಕ್ಕಳನ್ನು ಬೆಂಬಿಡದೆ ಕಾಡುವ ಒಡವೆ ಎಂದರೆ ತಪ್ಪಾಗಲಾರದು. ಮೊಡವೆ ಬಾರದಂತೆ ತಡೆಯಲು ಹರ ಸಾಹಸ ಮಾಡದವರಿಲ್ಲ. ದಾಸವಾಳ ಜ್ಯೂಸಿನಿಂದ ಮೊಡವೆ ಬಾರದಂತೆ ತಡೆಯಬಹುದು ಮಾತ್ರವಲ್ಲ ಮುಖದ ಕಾಂತಿ ಹೆಚ್ಚಿಸಲು ಕೂಡಾ ಇದು ಸಹಕಾರಿ.

ನೋಡಲು ಸುಂದರವಾದ ದಾಸವಾಳ ತನ್ನ ಅಂದದಿಂದ ಕಣ್ಸೆಳೆಯುವುದು ಮಾತ್ರವಲ್ಲ ಸೌಂದರ್ಯವನ್ನು ಕಾಪಾಡುತ್ತದೆ.

– ಅನಿತಾ ಬನಾರಿ

ಮೇಕಪ್ ಕುರಿತು ಸರಿಯಾದ ಕಾಳಜಿವಹಿಸದಿದ್ದರೆ ಈ ಸಂಗಾತಿಯೇ ಶತ್ರು ಆಗುವುದರಲ್ಲಿ ಸಂಶಯವಿಲ್ಲ! .

#hibiscus #hibiscusadvantages #balkaninews #lifestyle #beautytips

Tags