ಆರೋಗ್ಯಆಹಾರಜೀವನ ಶೈಲಿ

ಅಪಾರ ಮಹಿಮೆಯ ಜೇನುತುಪ್ಪ

ಬೆಂಗಳೂರು, ಮಾ.23:

ಅಮೃತಕ್ಕೆ ಸಮಾನದ ಜೇನುತುಪ್ಪದ ರುಚಿಯನ್ನು ಸವಿಯದವರಾರು ಹೇಳಿ..? ಆಯುರ್ವೇದ ಚಿಕಿತ್ಸೆಯಲ್ಲಿ ಮುಖ್ಯ ಸ್ಥಾನ ಪಡೆದಿರುವ ಜೇನುತುಪ್ಪದ ಹೊರತಾಗಿ ಆಯುರ್ವೇದ ಚಿಕಿತ್ಸೆಯನ್ನು ಊಹಿಸುವುದು ಕೂಡ ಕಷ್ಟ.

ದೇಹದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವ ಜೇನು ಔಷಧ ವಸ್ತುವಾಗಿ ಪ್ರಸಿದ್ಧಿ ಪಡೆದಿದೆ. ಚರ್ಮದ ಸಮಸ್ಯೆ, ರಕ್ತ ಶುದ್ದಿ, ಜೀರ್ಣಶಕ್ತಿ ಮುಂತಾದವುಗಳಿಗೆ ರಾಮಬಾಣವಾಗಿರುವ ಜೇನು ತುಪ್ಪ ಹಳೆಯದಾದಷ್ಟು ಒಳ್ಳೆಯದು.

ರಕ್ತಸಂಚಾರವನ್ನು ಸರಾಗವನ್ನಾಗಿಸುವ ಜೇನು ತುಪ್ಪ ನೈಸರ್ಗಿಕವಾಗಿ ಸಿಹಿಯಾಗಿರುವುದರಿಂದ ಸಕ್ಕರೆಗಿಂತ ಒಳ್ಳೆಯದು. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ನಿಯಂತ್ರಿಸುವ ಇದು ಕಣ್ಣಿನ ಆರೋಗ್ಯಕ್ಕೂ ಉತ್ತಮ. ನಿದ್ರಾಹೀನತೆಯಿಂದ ಬಳಲುತ್ತಿರುವವರು ಪ್ರತಿದಿನ ಜೇನುತುಪ್ಪ ಸೇವಿಸುವುದರಿಂದ ಸಮಸ್ಯೆ ದೂರಾಗುವುದು. ಗಾಯದ ಮೇಲೆ ಜೇನುತುಪ್ಪವನ್ನು ಹಚ್ಚುವುದರಿಂದ ಗಾಯ ಬಹುಬೇಗನೇ ವಾಸಿಯಾಗುತ್ತದೆ. ಪ್ರತಿದಿನ ಬಿಸಿನೀರಿಗೆ ಜೇನುತುಪ್ಪವನ್ನು ಹಾಕಿ ಕುಡಿಯುವುದರಿಂದ ದೇಹದ ಕೊಬ್ಬು ಕಡಿಮೆಯಾಗುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ನೀರಿಗೆ ಜೇನು ಹಾಕಿ ಕಲಸಿ ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಇದು ಸಹಕಾರಿ.

ಮಳೆಗಾಲದಲ್ಲಿ ಮಕ್ಕಳಿಗೆ ಶೀತ ಪ್ರಕೃತಿಯವರಿಗೆ ಜೇನುತುಪ್ಪ ಉತ್ತಮ ಮದ್ದು. ಜೀರ್ಣಕ್ರಿಯೆಯನ್ನು ಸರಾಗವನ್ನಾಗಿಸುವ ಇದು ದೇಹಕ್ಕೆ ಚೈತನ್ಯ ನೀಡುತ್ತದೆ. ಆಗಾಗ ಕಂಡುಬರುತ್ತಿರುವ ಬಾಯಿಹುಣ್ಣಿಗೆ ಜೇನು ಲೇಪಿಸುವುದು ಸುಲಭದ ಪರಿಹಾರವೂ ಹೌದು.

ಮುಂಜಾನೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸ ಇರುವವರು ಚಹಾಕ್ಕೆ ಸಕ್ಕರೆ ಬದಲು ಜೇನುತುಪ್ಪ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಇದಕ್ಕಿದೆ. ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಅಧಿಕವಾಗಿರುವ ಜೇನುತುಪ್ಪವು ಅಲರ್ಜಿ ಉತ್ತಮ ಮನೆ ಮದ್ದು. ಅಲರ್ಜಿಯಿಂದ ಬಳಲುತ್ತಿರುವವರು ನಿಯಮಿತವಾಗಿ ಜೇನು ಸೇವಿಸುವುದರಿಂದ ಅಲರ್ಜಿಯನ್ನು ಹೋಗಲಾಡಿಸಬಹುದು.

ಆಧುನಿಕ ಔಷಧಗಳ ನಡುವೆ ತನ್ನ ಬೇಡಿಕೆ ಕಳೆದುಕೊಳ್ಳದಿರುವ ಜೇನು ಕಲಬೆರಕೆಯಾಗುತ್ತಿದ್ದು ಔಷಧೀಯ ಗುಣ ಮರೆಯಾಗುತ್ತಿದೆ. ಆದುದರಿಂದ ಜೇನು ಕೊಂಡುಕೊಳ್ಳುವಾಗ ಜಾಗ್ರತೆಯಾಗಿರಬೇಕಾದುದು ಮುಖ್ಯ. ಕಲಬೆರಕೆಯಾಗಿದೆಯಾ ಇಲ್ಲವೇ ಎಂದು ನೋಡಲು ಮರೆಯದಿರಿ. ಆಹಾರದ ಜೊತೆಗೆ ಔಷಧಿಯಾಗಿ ಬಳಕೆಯಾಗುವ ಜೇನಿನ ಮಹಿಮೆ ಅಪಾರ.

–  ಅನಿತಾ ಬನಾರಿ

ಬೇಸಿಗೆಯಲ್ಲಿ ಸೌಂದರ್ಯವನ್ನು ಕಾಪಾಡಿಕೊಳ‍್ಳಿ!!

#healthytips #beautytips #tips #balkaninews #honeytips

Tags