ಆರೋಗ್ಯಆಹಾರಜೀವನ ಶೈಲಿ

ಒಗ್ಗರಣೆಗೂ ಸೈ, ಆರೋಗ್ಯಕ್ಕೂ ಜೈ ಎನ್ನುವ ಅಡುಗೆ ಮನೆಯ ಜೀರಿಗೆ

ಬೆಂಗಳೂರು, ಏ.16:

ಅಡುಗೆ ಮನೆಯ ಮಸಾಲೆ ಪದಾರ್ಥಗಳ ಪೈಕಿ ಪ್ರಮುಖ ಸ್ಥಾನ ಪಡೆದಿರುವ ಜೀರಿಗೆ ಅಡುಗೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಕೂಡಾ ಮುಖ್ಯ ಎಂಬುದು ಹೆಚ್ಚಿನವರಿಗೆ ತಿಳಿದ ಸಂಗತಿ. ಅನಾದಿ ಕಾಲದಿಂದಲೂ ಮನೆ ಮದ್ದಾಗಿ ಜೀರಿಗೆಯನ್ನು ಬಳಸುತ್ತಿದ್ದರು ಮತ್ತು ಈಗಲೂ ಬಳಸುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಒಳಗೊಂಡ ಮಸಾಲೆ ಪದಾರ್ಥವಾಗಿರುವ ಜೀರಿಗೆ ಹಲವು ರೋಗಗಳಿಗೆ ರಾಮಬಾಣ.

Image result for ಜೀರಿಗೆ

ಏಪಿಯೇಸಿ ಕುಟುಂಬಕ್ಕೆ ಸೇರಿದ ಜೀರಿಗೆಯ ವೈಜ್ಞಾನಿಕ ಹೆಸರು ಕಮಿನಮ್ ಚಿಮಿನಮ್. ಇಂಗ್ಲೀಷ್ ನಲ್ಲಿ ಕಮೀನ್ ಸೀಡ್, ಸಂಸ್ಕೃತದಲ್ಲಿ ಜೀಕರ, ಹಿಂದಿಯಲ್ಲಿ ಜೀರ ಎಂದು ಕರೆಯಲ್ಪಡುವ ಜೀರಿಗೆ ಕೇವಲ ಒಗ್ಗರಣೆಗೆ ಮಾತ್ರ ಸೀಮಿತವಲ್ಲ. ಮ‍ಧುಮೇಹ, ರಕ್ತದೊತ್ತಡ, ಚರ್ಮವ್ಯಾಧಿ, ಜಂತು ಹುಳ ಬಾಧೆ, ವಾತ, ಉರಿ ಮೂತ್ರ, ನೆಗಡಿ, ಕೆಮ್ಮು ಮುಂತಾದವುಗಳಿಗೆ ಜೀರಿಗೆ ಉತ್ತಮ ಮನೆ ಮದ್ದು.

ಉದರ ಸಂಬಂಧಿ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಶಮನ ಮಾಡುವ ಶಕ್ತಿ ಹೊಂದಿರುವ ಜೀರಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅಸಿಡಿಟಿಯನ್ನು ದೂರ ಮಾಡುತ್ತದೆ. ಮಜ್ಜಿಗೆಗೆ ಜೀರಿಗೆ ಪುಡಿ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ ಕುಡಿಯುವುದರಿಂದ ಪಿತ್ತ ಕಡಿಮೆಯಾಗುತ್ತದೆ. ಮಾತ್ರವಲ್ಲ ಇದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಇನ್ನು ಜೀರಿಗೆಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹಲ್ಲು ನೋವು ಮಾಯವಾಗುತ್ತದೆ. ಹೊಟ್ಟೆಯುಬ್ಬರ ಕಾಣಿಸಿಕೊಂಡಾಗ ಒಂದು ಲೋಟ ನೀರಿಗೆ ಎರಡು ಚಮಚದಷ್ಟು ಹುರಿದ ಜೀರಿಗೆ ಹಾಕಿ ಅದನ್ನು ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಇಳಿಸಬೇಕು. ಮತ್ತೆ ಅದಕ್ಕೆ ಸ್ವಲ್ಪ ಉಪ್ಪು ಮತ್ತು ತುಪ್ಪ ಬೆರೆಸಿ ಕುಡಿದರೆ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ ಪ್ರತಿದಿನ ಜೀರಿಗೆ ನೀರು ಅಥವಾ ಜೀರಿಗೆ ಕಷಾಯ ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಹಾಗೂ ಇದರ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ. ಬಾಣಂತಿಯರು ಜೀರಿಗೆ ನೀರು ಸೇವಿಸುವುದರಿಂದ ಎದೆ ಹಾಲು ಜಾಸ್ತಿಯಾಗುತ್ತದೆ ಮತ್ತು ಇದರಿಂದ ಮಗುವಿಗೆ ಯಾವುದೇ ತರಹದ ಉದರ ಸಮಸ್ಯೆಗಳು ಬರುವುದಿಲ್ಲ.

ಹಿಂದಿನ ಕಾಲದಲ್ಲಿ ಈಜಿಪ್ಟಿಯನ್ನರು ತಾವು ಮಾಡುವ ಮಾಂಸಹಾರಿ ಅಡುಗೆಗಳಿಗೆ ಜೀರಿಗೆಯನ್ನು ಬಳಸುತ್ತಿದ್ದರು. ಅಲ್ಲದೆ ಶವಗಳನ್ನು ಮಮ್ಮಿಕರಿಸಿ ಇಡಲು ಬಳಸುವ ದ್ರವ್ಯಗಳಲ್ಲಿ ಕೂಡಾ ಜೀರಿಗೆಯನ್ನು ಉಪಯೋಗಿಸುತ್ತಿದ್ದರು. ಅಲ್ಲದೇ ಪ್ರಾಚೀನ ಗ್ರೀಸ್ ನಲ್ಲಿ ಊಟ ಮಾಡುವ ಮೇಜಿನ ಮೇಲೆ ಜೀರಿಗೆ ಡಬ್ಬಿ ಇಡುತ್ತಿದ್ದರು. ರೋಮನ್ನರು ಕಾಳುಮೆಣಸಿನ ಪರ್ಯಾಯವಾಗಿ ಜೀರಿಗೆಯನ್ನು ಬಳಸುತ್ತಿದ್ದರು. ಹೀಗೆ ಎಲ್ಲಾ ರೋಗಕ್ಕೂ ರಾಮಬಾಣವಾಗಿರುವ ಜೀರಿಗೆ ಬಗ್ಗೆ ಪ್ರಾಚೀನ ಕಾಲದಿಂದಲೂ ಜನರಿಗೆ ತಿಳಿದಿತ್ತು ಎಂಬುದು ಇತಿಹಾಸದ ಪುಟಗಳನ್ನು ತಿರುವಿದಾಗ  ನಮಗೆ ಕಂಡುಬರುತ್ತದೆ.

Related image

ಬಣ್ಣಬಣ್ಣದ ಕೊಡೆಗಳ ಮೇಲೆ ಮಳೆಹನಿಗಳ ಚಿತ್ತಾರ

#jeera #jeerige #advantagesofjeera #foodjeera

Tags