ಜೀವನ ಶೈಲಿಫ್ಯಾಷನ್

ಕೈಯಂದಕ್ಕೆ ಕೈ ಗಡಿಯಾರ!!

ಇತ್ತೀಚೆಗೆಯಷ್ಟೇ ನಾನು ಹೊಸ ವಾಚ್ ಖರೀದಿ ಮಾಡಿದ್ದೆ. ವಾಚ್ ಅಂದರೆ ನನಗೆ ಬಲು ಇಷ್ಟ. ಹಾಗಾಗಿ ಹಳೆ ವಾಚ್ ಧರಿಸಿ ಬೋರ್ ಆಗಿತ್ತೆಂದು ಹೊಸ ವಾಚ್ ಕೈಗೆ ಧರಿಸಿ ಕಾಲೇಜ್ಗೆ ಹೋಗಿದ್ದೆ. ಅಂತೂ ಆ ದಿನ ನಾನು ಕಾಲೇಜಿನಲ್ಲಿ ಮಿಂಚಿದ್ದೇ ಮಿಂಚಿದ್ದು. ಎಲ್ಲರಿಗೂ ನನ್ನ ವಾಚ್ ಮೇಲೆ ಒಂದು ಕಣ‍್ಣು. ವಾಹ್ ! ಎಷ್ಟು ಚನ್ನಾಗಿದೆ, ಎಷ್ಟು ಕೊಟ್ಟಿ? ಎಲ್ಲಿಂದ ತಗೊಂಡೆ ಹೀಗೆ ಹಲವಾರು ಪ್ರಶ್ನೆಗಳು. ಹೌದು ಈಗ ವಾಚ್ ಕೇವಲ ಅವಶ್ಯಕತೆ ಮಾತ್ರವಲ್ಲ ಫ್ಯಾಶನ್ ಹಾಗೂ ಪ್ರತಿಷ್ಟೆಯೂ ಹೌದು. ಅದರಲ್ಲೂ ಮಹಿಳೆಯರಿಗೆ ವಾಚ್ ಕಲೆಕ್ಷನ್ ಬಗ್ಗೆ ಆಸಕ್ತಿ ಹೆಚ್ಚು.

ಮೊದೆಲೆಲ್ಲಾ ವಾಚ್ ಹೆಚ್ಚಿನವರ ಕೈಯಲ್ಲಿ ಇರುತ್ತಿರಲಿಲ್ಲ. ಮನೆಯಲ್ಲಿ ಯಾರಾದರೂ ಹಿರಿಯರ ಕೈಯಲ್ಲಿದ್ದರೆ ಮುಗಿಯಿತು ಇಲ್ಲವೇ ಗೋಡೆಯಲ್ಲೊಂದು ತೂಕಾಡಿಸುವ ಗಡಿಯಾರ ಕಾಣ ಸಿಗುತಿತ್ತು. ಕಾಲ ಕ್ರಮೇಣ ಹೆಚ್ಚಿನವರ ಕೈಯಲ್ಲಿ ವಾಚ್ ಕಾಣತೊಡಗಿತು. ಆಗ ಬೆಲ್ಟ್ ವಾಚ್ ಎಲ್ಲರ ಕೈಯಲ್ಲಿ ರಾರಾಜಿಸುತಿತ್ತು. ಸ್ಟೀಲ್ ಹಾಗೂ ಗೋಲ್ಡ್ ವಾಚ್ ತುಂಬಾ ಶ್ರೀಮಂತರು ಧರಿಸುತ್ತಿದ್ದರು. ಆಗೆಲ್ಲಾ ಎಚ್ ಯಮ್ ಟಿ ಕೈ ಗಡಿಯಾರ ತುಂಬಾ ಫೇಮಸ್. ಕಾಲ ಬದಲಾದ ಹಾಗೆ ಫ್ಯಾಶನ್ ಜಗತ್ತೂ ಬದಲಾಗುತ್ತದೆ. ಹಳೆಯ ಫ್ಯಾಶನ್ ಮೂಲೆ ಸೇರಿ ಹೊಸ ಫ್ಯಾಶನತ್ತ ನಮ್ಮ ಗಮನ ಸೆಳೆಯುತ್ತದೆ.

ಅಂದೆಲ್ಲಾ ಕೈ ಗಡಿಯಾರಕ್ಕೆ ತುಂಬಾ ಬೆಲೆಗಳಿದ್ದವು. ಆದರೆ ಈಗದ ಫ್ಯಾಶನ್ ಯುಗದಲ್ಲಿ ತುಂಬಾ ಬೆಲೆ ಬಾಳುವ ವಾಚ್ ನಿಂದ ಹಿಡಿದು ಕಡಿಮೆ ಬೆಲೆ ಬಾಳುವಂತ ವಾಚ್ ಗಳು ಕೂಡ ಮಾರುಕಟ್ಟಯಲ್ಲಿ ಲಭ್ಯವಿದೆ. ಈಗಂತೂ ಕೇಳುವುದೇ ಬೇಡ ! ಮಹಿಳೆಯರ ಕಣ್ಮನ ಸೆಳೆಯುವಂತಹ ನಾನಾ ರೀತಿಯ ವಾಚ್ ದೊರೆಯುತ್ತವೆ. ಫ್ಯಾನ್ಸಿ ವಾಚ್, ಸ್ಟೀಲ್ ವಾಚ್, ಬೆಲ್ಟ್ ವಾಚ್, ಬ್ರ್ಯಾಂಡ್ ವಾಚ್ ಇತ್ಯಾದಿ.  ಫ್ಯಾನ್ಸಿ ವಾಚ್ ಕಮ್ಮಿ ಬೆಲೆಯಲ್ಲಿ ಹಾಗೂ ಆಕರ್ಷಕ ಡಿಸೈನ್ ನಲ್ಲಿ ಸಿಗುವುದರಿಂದ ಕಾಲೇಜ್ ಕನ್ಯೆಯರು ಅದಕ್ಕೆ ಮೊರೆ ಹೋಗುತ್ತಾರೆ, ಪಾರ್ಟಿ ಸಮಾರಂಭಗಳಿಗೆ ಹೋಗುವಾಗ ಉಡುಪುಗಳಿಗೆ ಮ್ಯಾಚಿಂಗ್ ಇರುವಂತಹ ವಾಚ್ ಕೈಗೆ ಕಟ್ಟಿ ಹೋಗಬಹುದು.

ಇನ್ನು ಕಂಪೆನಿ ಬ್ರ್ಯಾಂಡ್ ವಾಚ್ ಕೊಂಚ ದುಬಾರಿಯಾದ್ದರಿಂದ ಹೆಚ್ಚಿನ ಸಿನಿತಾರೆಯರು ದುಬಾರಿ ವಾಚ್ ಧರಿಸಿ ಸುದ್ದಿಯಾದವರೂ ಇದ್ದಾರೆ. ಬ್ರ್ಯಾಂಡೆಡ್ ವಾಚ್ ಧರಿಸಿದರೆ ಅದರಲ್ಲೇನೋ ಖುಷಿ, ಅದರಲ್ಲೂ ದೊಡ್ಡ ಡಯಲ್ ವಾಚ್ ಧರಿಸಲು ಹೆಚ್ಚಿನವರು ಇಷ್ಟ ಪಡುತ್ತಾರೆ. ಅದು ಕೈಯಿಂದ ಜಾರುವಂತಿರಬೇಕು ಅದು ಈಗದ ಫ್ಯಾಶನ್. ಟೈಟಾನ್ , ಫಾಸ್ಟ್ ಟ್ರ್ಯಾಕ್ , ಸೊನಾಟ, ಫೊಸಿಲ್ ಹೀಗೆ ಹಲವಾರು ಬ್ರ್ಯಾಂಡೆಡ್ ವಾಚ್ ಗಳಿವೆ

ಗೆಸ್: ಮಹಿಳೆಯರಿಗೆಂದು ಹೊಸ ಶೂ, ಹ್ಯಾಂಡ್ ಬ್ಯಾಗ್ ಮತ್ತು ವಾಚ್ ಗಳನ್ನು ಬಿಡುಗಡೆಮಾಡುವ ಗೆಸ್ ನ ಬ್ರ್ಯಾಂಡ್ ವಾಚ್ ಗಳು ಮಹಿಳೆಯರಿಗೆ ಚೆಂದ. ಯುವತಿಯರಿಗೆ ಸಾಫ್ಟ್ ಲುಕ್ ಕೊಡುವ ಈ ವಾಚ್ ಸ್ಟೇನ್ ಲೆಸ್ ಸ್ಟೀಲ್ ಜೊತೆ ಡೈಮಂಡ್ ಹರಳುಗಳನ್ನು ಸೇರಿಸಿ ಮಾಡಲಾಗಿರುತ್ತೆ. 30-33 ಎಂಎಂ ಅಳತೆ ಹೊಂದಿರುವ ಈ ವಾಚ್  ಕೈಯ ಅಂದವನ್ನು ಹೆಚ್ಚಿಸುವುದರಲ್ಲಿ ಸಂಶಯವಿಲ್ಲ.

ರೋಲೆಕ್ಸ್: ವಾಚ್ ತಯಾರಿಕೆಯಲ್ಲಿ ಪ್ರಪಂಚದಲ್ಲಿ ಮುಂದಿರುವ ಕಂಪನಿ ರೋಲೆಕ್ಸ್. ಲಕ್ಸುರಿ ವಾಚ್ ಗಳನ್ನು ಬಯಸುವವರು, ಅಥವಾ ವಾಚನ್ನು ಗಿಫ್ಟ್ ಕೊಡಲು ಬಯಸುವವರಿಗೆ ಇದು ಸೂಕ್ತ ಆಯ್ಕೆ. ಮಹಿಳೆಯರ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಈ ವಾಚ್ ಎಲ್ಲರ ಗಮನವನ್ನೂ ತಕ್ಷಣವೇ ತನ್ನೆಡೆಗೆ ಸೆಳೆಯುತ್ತೆ.

ಮಾಂಟ್ ಬ್ಲಾಂಕ್: ಜರ್ಮನ್ ನ ಈ ಕಂಪನಿಯಲ್ಲಿ ಸ್ಪೋರ್ಟ್, ಸಾಮಾನ್ಯ, ಫಾರ್ಮಲ್ ವಿನ್ಯಾಸದಲ್ಲಿರುವ ಅನೇಕ ಬ್ರ್ಯಾಂಡ್ ವಾಚ್ ಲಭ್ಯವಿದೆ. ನೀವು ಉತ್ತಮ ವಾಚ್ ಬಯಸುವುದಾದರೆ ಮಾಂಟ್ ಬ್ಲಾಕ್ ಒಳ್ಳೆಯ ಆಯ್ಕೆ.

ಸಿಟಿಝನ್: ಕಡಿಮೆ ಬೆಲೆಯ ಈ ವಾಚ್ ಮಹಿಳೆಯರಿಗೆ ತಕ್ಕುದಾಗಿದೆ. ಕಡಿಮೆ ಬೆಲೆಗೆ ಉನ್ನತ ಗುಣಮಟ್ಟದ ವಾಚ್ ನೀಡುವಲ್ಲಿ ಸಿಟಿಝನ್ ಕಂಪನಿ ಮುಂದಿದೆ. ಇದರ ಬಾಳಿಕೆ ಬಗ್ಗೆ ಮಾತನಾಡುವಂತೆಯೇ ಇಲ್ಲ. ದಿನಬಳಕೆಗೆ ಉತ್ತಮವಾದ ವಾಚ್ ಬಯಸುವವರಿಗೆ ಇದು ಚೆಂದ.

ಚೋಪಾರ್ಡ್: ಡೈಮಂಡ್ ಹರಳನ್ನು ಸೇರಿಸಿ ತಯಾರಿಸಲಾಗುವ ಈ ವಾಚ್ ಮಹಿಳೆಯರ, ಹುಡುಗಿಯರ ಕಣ್ಸೆಳೆಯುವುದರಲ್ಲಿ ಸಂಶಯವೇ ಇಲ್ಲ. ಸಾಮಾನ್ಯವಾಗಿ ಮಹಿಳೆಯರಿಗೆ ಇಷ್ಟವೆನಿಸುವ ಅನೇಕ ಬಣ್ಣಗಳಲ್ಲಿ ವಾಚ್ ಇರುತ್ತವೆ.

  • ಸುಹಾನಿ ಬಡೆಕ್ಕಿಲ.

 

Tags