ಆರೋಗ್ಯಆಹಾರಜೀವನ ಶೈಲಿ

ಬಿಸಿಲ ಬೇಗೆಗೆ ತಂಪನ್ನೀಯುವ ಮಜ್ಜಿಗೆ…

ಬೆಂಗಳೂರು, ಮಾ.08:

ಬೇಸಿಗೆ ಕಾಲ ಆರಂಭವಾಗಿ ಬಿಟ್ಟಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಲೇ ಇದೆ. ಬಿಸಿಲಿನ ಝಳಕ್ಕೆ ಗಂಟಲಿನ ಪಸೆ ಆರಿ ಹೋಗುತ್ತದೆ. ಬಿಸಿಲಿನ ಬೇಗೆಗೆ ಬಳಲಿ ಆಗಾಗ ಬಾಯಾರಿಕೆ ಬೇರೆ! ಬಾಯಾರಿಕೆ ನೀಗಲು ಪದೇ ಪದೇ ನೀರು ಕುಡಿಯುವುದೆಂದರೆ ನಿಜಕ್ಕೂ ಕಷ್ಟ. ಅದರಿಂದ ತಂಪಾದ ಮಜ್ಜಿಗೆಯನ್ನು ಕುಡಿಯಬಹುದು. ಮಜ್ಜಿಗೆಯು ಬಿಸಿಲ ಬೇಗೆಯನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಬದಲಿಗೆ ಆರೋಗ್ಯಕರವೂ ಹೌದು.

ರುಚಿಕರವಾದ ಮಜ್ಜಿಗೆ ಕುಡಿದರೆ ದಾಹ ತೀರುತ್ತದೆ ಮತ್ತು ದೇಹವನ್ನು ಉಲ್ಲಾಸಿತವಾಗಿಡುತ್ತದೆ. ಉರಿ ಬಿಸಿಲಿನಲ್ಲಿ ದೇಹವನ್ನು ತಂಪಾಗಿಡುವ ಮಜ್ಜಿಗೆ ಹಲವು ರೋಗಗಳಿಗೆ ರಾಮಬಾಣವು ಹೌದು ಎಂದರೆ ನಂಬುತ್ತೀರಾ?

ಊಟದ ಜೊತೆಗೆ ಮಜ್ಜಿಗೆ ಇರುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಮಜ್ಜಿಗೆ ಇಲ್ಲದ ಊಟ ಅಪೂರ್ಣ. ಇದರಲ್ಲಿರುವ ಲ್ಯಾಕ್ಟಿಕ್ ಆ್ಯಸಿಡ್ ಅಂಶ ದೇಹಕ್ಕೆ ಒಳ್ಳೆಯದು. ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿಡುವ ಮಜ್ಜಿಗೆಯಲ್ಲಿ ದೇಹಕ್ಕೆ ಬೇಕಾದ ಖನಿಜಾಂಶವಿದೆ. ಅಜೀರ್ಣ, ಹೊಟ್ಟೆನೋವು ಆದಾಗ ಅರ್ಧ ಲೋಟ ಮಜ್ಜಿಗೆಗೆ ಇಂಗು ಮತ್ತು ಉಪ್ಪು ಬೆರೆಸಿ ಕುಡಿದರೆ ಸಾಕು, ಕೆಲವೇ ಹೊತ್ತಿನಲ್ಲಿ ಹೊಟ್ಟೆ ನೋವು ಕಡಿಮೆಯಾಗುತ್ತದೆ. ಮಜ್ಜಿಗೆಯಲ್ಲಿ ಫಾಸ್ಪರಸ್ ಮತ್ತು ಕ್ಯಾಲ್ಸಿಯಂ ಅಂಶ ಅಧಿಕವಾಗಿದ್ದು ಇದು ಮೂಳೆಗಳಿಗೆ ಶಕ್ತಿಯನ್ನು ನೀಡುತ್ತದೆ.

ಹುಳಿತೇಗು, ಹೊಟ್ಟೆಯುರಿ, ಎದೆಯುರಿ ನಿವಾರಿಸುವ ಇದು ಲಿವರ್ ನಲ್ಲಿನ ವಿಷಗುಣಗಳನ್ನು ತೆಗೆದು ಹಾಕುತ್ತದೆ. ಮಜ್ಜಿಗೆಯಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಡಯಟ್ ಮಾಡುತ್ತಿರುವವರೂ ಕೂಡ ಇದನ್ನು ನಿಶ್ಚಿಂತೆಯಿಂದ ಕುಡಿಯಬಹುದು. ಇನ್ನು ಗಾಯ, ಬಾಯಿಹುಣ್ಣು ಕೂಡಾ ಮಜ್ಜಿಗೆ ಸೇವನೆಯಿಂದ ಬಹುಬೇಗನೇ ಗುಣವಾಗುತ್ತದೆ. ಆರ್ಯುವೇದ ಚಿಕಿತ್ಸೆಯಲ್ಲಿಯೂ ಮಜ್ಜಿಗೆಯನ್ನು ಬಳಸುತ್ತಾರೆ. ರಕ್ತದೊತ್ತಡವನ್ನು ನಿವಾರಿಸುವ ಮಜ್ಜಿಗೆ ದೇಹಕ್ಕೆ ಅಗತ್ಯವಿರುವಂತಹ ನೀರಿನಾಂಶವನ್ನು ನೀಡುತ್ತದೆ.

ತಲೆಹೊಟ್ಟಿನ ಸಮಸ್ಯೆ ಇರುವವರು ಹುಳಿ ಮಜ್ಜಿಗೆಯನ್ನು ಕೂದಲಿನ ಬುಡಕ್ಕೆ ಸವರಿ ಎರಡು ಗಂಟೆ ಕಳೆದು ಸ್ನಾನ ಮಾಡಬೇಕು. ಹೀಗೆ ಪುನರಾವರ್ತನೆ ಮಾಡುತ್ತಿದ್ದರೆ ತಲೆಹೊಟ್ಟು ಕಡಿಮೆಯಾಗುತ್ತದೆ.

ಮಲಗುವ ಮುನ್ನ ಹಾಲು ಕುಡಿಯಬೇಕು, ಬೆಳಗ್ಗೆ ಮುಖ ತೊಳೆದು ನೀರು ಕುಡಿಯಬೇಕು, ಊಟದ ಕೊನೆಯಲ್ಲಿ ಮಜ್ಜಿಗೆ ಕುಡಿಯಬೇಕು. ಹೀಗೆ ಮಾಡಿದರೆ ವೈದ್ಯರಿಗೇನು ಕೆಲಸ ಎಂದು ಧರ್ಮಗ್ರಂಥವೊಂದಲ್ಲಿ ಉಲ್ಲೇಖವಿದೆ ಎಂದು ಅಜ್ಜ ಅಂದು ಹೇಳಿದ್ದು ನನಗಿಂದು ನೆನಪಾಯಿತು. ನನ್ನಜ್ಜನೂ ಅಷ್ಟೇ… ಬಾಯಾರಿಕೆಯಾದಾಗಲೆಲ್ಲಾ ಮಜ್ಜಿಗೆ ನೀರನ್ನೇ ಸೇವಿಸುತ್ತಿದ್ದರು. ಮನೆಯಲ್ಲಿ ತಯಾರಿಸಿದ ಮಜ್ಜಿಗೆ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು ಎನ್ನುವ ಅಜ್ಜ, ಅಜ್ಜಿ ತಯಾರಿಸುತ್ತಿದ್ದ ರುಚಿ ರುಚಿ ಮಜ್ಜಿಗೆ ನೀರನ್ನು ಬಾಯಿ ಚಪ್ಪರಿಸಿ ಕುಡಿಯುತ್ತಿದ್ದರೆ ಹೊರತು ಒಂದು ದಿನವೂ ಬೇಡ ಎಂದವರಲ್ಲ.

ಹಾಗೆಂದು ಮನೆಯಿಂದ ಹೊರಗೆ ಮಜ್ಜಿಗೆಯನ್ನು ಸೇವಿಸುವಾಗ ಜಾಗ್ರತೆಯಿರಬೇಕು. ಪ್ಯಾಕೆಟ್ ಮಜ್ಜಿಗೆಯಾಗಿದ್ದಲ್ಲಿ ಪ್ಯಾಕ್ ಮಾಡಿದ ದಿನಾಂಕ ನೋಡಲೇ ಬೇಕು. ಇಲ್ಲದಿದ್ದರೆ ಆರೋಗ್ಯದಲ್ಲಿ ಏರುಪೇರಾಗಬಹುದು.

  ಅನಿತಾ ಬನಾರಿ

ಹಾಲಿನ ಸ್ನಾನದಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತೇ?

#majjige #sunburn #balkaninews #lifestyle #beautytips #summer #summerseason #advantagesofmajjige

Tags

Related Articles