ಜೀವನ ಶೈಲಿಫ್ಯಾಷನ್ಬಾಲ್ಕನಿಯಿಂದಸುದ್ದಿಗಳು

ಮರಳುತ್ತಿದೆ.. ಚಾಮರಾಜನಗರ  ಎಕ್ಸ್ ಪ್ರೆಸ್… ರಾಜಧಾನಿಯಿಂದ… ಹಳ್ಳಿಗಾಡಿಗೆ…!!

ಮನೆಮಂದಿಯನ್ನೆಲ್ಲಾ ಸೆಳೆಯುವ ಅಪ್ಪಟ ಮನರಂಜನಾ ಸಿನೆಮಾ ಆಗಲಿದೆಯಂತೆ ‘ಎಮ್.ಎಲ್.ಎ.’ ! 

ಇದೆಲ್ಲಾ ಓಕೆ, ಲವಲವಿಕೆ ಹುಡುಗ ಬೆಳ್ಳಿಪರದೆ ತ್ಯಜಿಸಿ ಹಳ್ಳಿಯ ಗೋಮಾಳಕ್ಹೋಗೋದ್ಯಾಕೆ..?!?

 

ಬೆಂಗಳೂರು, ನ-3: ನಿಜವಾಗಿಯೂ ಒಳ್ಳೇ ಹುಡುಗ ಪ್ರಥಮ್ ನಮ್ಮ ಚಂದನವನದ ಇತರ ಸೆಲೆಬ್ರೆಟಿಗಳಿಗಿಂತ ವ್ಯತಿರಿಕ್ತವೇ! ಎದುರಿಗೆ ನಿಂತು ಮಾತಾಡುತ್ತಿದ್ದರೆ ನಿಷ್ಕಪಟ ನುಡಿಗಳವು ಎಂದು ಎಂಥವರಿಗೂ ಮನವರಿಕೆಯಾಗುತ್ತದೆ. ಇನ್ನೇನು ನವೆಂಬರ್ 9ರಂದು ಬಿಡುಗಡೆಯಾಗುತ್ತಿರುವ ’ಎಮ್.ಎಲ್.ಎ’, ಅವರ ಹೊಸ ಸಿನೆಮಾದ ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ಶುಕ್ರವಾರ ಮಲ್ಲೇಶ್ವರದ ‘ರೇಣುಕಾಂಬ’ದಲ್ಲಿ ಜರುಗಿತ್ತು. ಅದೇ ವೇದಿಕೆಯಿಂದಲೇ, ಪ್ರಥಮ್ ತಮ್ಮ ಸಿನಿಮಾ ಜೀವನ, ಬೆಂಗಳೂರಿನ ಐಷಾರಾಮೀ ಬದುಕು ಇವೆಲ್ಲವನ್ನೂ ತೊರೆಯುವ ಮಾತಾಡಿದ್ದರು. ದೂರದ ಚಾಮರಾಜನಗರದ ಬಳಿಯ ತಮ್ಮ ಹುಟ್ಟೂರಿನಲ್ಲೇ ಮುಂದಿನ ಬದುಕನ್ನು ಕೃಷಿ-ಕುರಿಸಾಗಾಣಿಕೆಗಳಿಗೇ ಮುಡಿಪಾಗಿಟ್ಟು ಜೀವಿಸುವ ನಿರ್ಧಾರವನ್ನು ನಿಶ್ಚಯವಾಗಿ ನುಡಿದರು…!! ಸದಾ ಹರಿಯುವ ನೀರಿನ ಅಲೆಗಳ ವಿರುದ್ಧ ಈಜಿ ಈಜಿ ಅಭ್ಯಾಸವಾದ ಪ್ರಥಮ್ ತರಹದ ಮನುಷ್ಯರ ಧಾಟಿ-ವರಸೆಗಳೇ ಹೀಗೆ! ಎಲ್ಲರಂತಲ್ಲ ಇವರು!! ಹಾಗೂ ಎಲ್ಲಿ ಬೂಟಾಟಿಕೆ, ಒಳಗೊಂದು ಹೊರಗೊಂದು –ಕಣ್ಣಾಮುಚ್ಚಾಲೆಯಾಟ ನೆಲೆಯೂರಿರುವುದೋ ಅಲ್ಲಿ ನಿಲ್ಲುವವರೂ ಅಲ್ಲ ಈ ಬಗೆಯ ಆಸಾಮಿಗಳು…!!

ಅಂತೂ  ಸಾರ್ವಜನಿಕ ಕ್ಷೇತ್ರದಲ್ಲಿ ಒಂದೆರಡು ವರುಷ ಧೂಳೆಬ್ಬಿಸಿ  ಮರಳುತ್ತಿದೆ… ಈ ಚಾಮರಾಜನಗರ  ಎಕ್ಸ್ ಪ್ರೆಸ್.. ರಾಜಧಾನಿಯಿಂದ… ಹಳ್ಳಿಗಾಡಿಗೆ…!!??


 

ಸದ್ಯದ ಪ್ರಶ್ನೆ ಏನೆಂದರೆ, ಕೇವಲ ನಾಲ್ಕೈದು ಚಿತ್ರಗಳೇ ಸಾಕಾಯ್ತೆ ಪ್ರಥಮ್ ನಂಥವರಿಗೆ ಈ ಬೂಟಾಟಿಕೆಯುಕ್ತ ಬಣ್ಣದಬದುಕಿಂದ ದೂರ ಸರಿಯಲು..?!!!

ಸ್ವಭಾವತಃ ಪಾರದರ್ಶಕ ಮನಸ್ಸು-ಬುದ್ದಿ-ಬದುಕನ್ನು ರೂಪಿಸಿಕೊಂಡಿರುವ ಪ್ರಥಮ್ ತಮ್ಮ ಮುಕ್ತಮನಸ್ಸಿನ ಸಹಾಯದಿಂದಲೇ ಕಳೆದ ಬಿಗ್ ಬಾಸ್ –ಸೀಸನ್ 4ರಲ್ಲಿ 50 ಲಕ್ಷ ನಗದು ಬಹುಮಾನ ಗೆದ್ದದ್ದು…, ತನ್ಮೂಲಕ ಕರ್ನಾಟಕ ಜನತೆಯ ಮನಸ್ಸನ್ನೂ ಗೆದ್ದರವರು. ಚಿತ್ರನಟನಾಗಿ ಅವರು ಪಡೆದ ಯಶಸ್ಸಿಗಿಂತ, ತಮ್ಮ ಒಳ್ಳೆಯತನದಿಂದಲೇ ಹೆಸರುವಾಸಿಯಾಗುತ್ತಿರುವಾಗಲೇ ಸದ್ಯ ತೆರೆಯಮರೆಗೆ ಸರಿಯಲಿಚ್ಛಿಸಿರುವುದು ವಿಪರ್ಯಾಸ. ಒಳ್ಳೆಯವರಿಗೆ ಈಗೆಲ್ಲಿಯ ಕಾಲ ಹೇಳಿ..?!?


ಇನ್ನು ಹೈದರಾಬಾದಿನ ವೆಂಕಟೇಶ್ ರೆಡ್ಡಿ ನಿರ್ಮಿಸಿ, ಮೌರ್ಯ ರಚಿಸಿ-ನಿರ್ದೇಶಿಸುತ್ತಿರುವ ‘ಎಮ್.ಎಲ್.ಎ.’ ಹಾಡುಗಳನ್ನು ಈಗಾಗಲೇ ಮೆಚ್ಚಿಕೊಂಡಿರುವ ಸಿನಿಮಾ ಪ್ರೇಕ್ಷಕರು ಚಿತ್ರವನ್ನು ಇಷ್ಟ ಪಡುತ್ತಾರೆ ಎನ್ನುವುದು ಚಿತ್ರತಂಡದ ಅಭಿಪ್ರಾಯ. ಪ್ರಥಮ್ ನಾಯಕನಾಗಿರುವ ಚಿತ್ರದಲ್ಲಿ ಸೋನಾಲ್ ಮಾಂಟೇರಿಯೋ ನಾಯಕಿಯಾಗಿ ನಟಿಸಿದ್ದರೆ, ಮಾಳವಿಕಾ ಅವಿನಾಶ್, ಚಂದ್ರಕಲಾ ಮತ್ತಿತ್ತರರೂ ಪೂಷಕ ಪಾತ್ರಗಳಲ್ಲಿದ್ದಾರೆ. ಪ್ರಥಮದಲ್ಲಿ, ಕಳೆದ ಜೂನ್ ಎರಡನೇ ವಾರದಲ್ಲಿ ‘ಎಮ್.ಎಲ್.ಎ.’ ಯನ್ನು ತೆರೆಗೆ ತರುವ ಪ್ರಯತ್ನ ಸಾಗಿದ್ದರೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಕಳೆದುಹೋಗಿದ್ದರು ಈ ಚಿತ್ರತಂಡ.


ಮಾಧ್ಯಮವನ್ನುದ್ದೇಶೀಸಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ನಿರ್ದೇಶಕ ಮೌರ್ಯ, ಚಿತ್ರೀಕರಣ ಶುರುವಾಗಿ ‘ಕುಂಬಳಕಾಯಿ’ ಒಡೆಯುವ ತನಕ ‘ಎಮ್.ಎಲ್.ಎ.’ ಗೆ ಶುಭಸೂಚನೆಗಳೇ ಸುರಿಮಳೆಗಳಾಗಿವೆಯೆಂದರು. ದರ್ಶನ್ , ಪುನೀತ್ ರಾಜ್, ಧ್ರುವ ಸರ್ಜಾ, ಇಂಡಸ್ಟ್ರಿಯ ಸಕಲರೂ ‘ಎಮ್.ಎಲ್.ಎ.’ ವೀಕ್ಷಿಸಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ತಮ್ಮ ಚಿತ್ರ ಶತಪ್ರತಿಶತ ಮನರಂಜನಾ ಸಿನೆಮಾ ಆಗಿದ್ದು ಮನೆಮಂದಿಯೆಲ್ಲಾ, ಅಬಾಲವೃದ್ಧರಾದಿಯಾಗಿ ಈ ಚಿತ್ರವನ್ನು ಥಿಯೇಟರ್ ನಲ್ಲೇ ನೋಡಬಹುದಾಗಿದೆ ಎಂದರು. ಮನರಂಜನೆಯ ಜೊತಜೊತೆಗೆ ಒಳ್ಳೆಯ ಸಂದೇಶ ನೀಡುವ ಯತ್ನವೂ ಇಲ್ಲಿದೆಯಂತೆ. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಸಂದರ್ಭದಲ್ಲಿ ‘ಎಮ್.ಎಲ್.ಎ.’ ಬಿಡುಗಡೆಯಾಗುತ್ತಿರುವುದು ಸಂತೋಷವಾಗಿದೆ ಎಂದರು.

ಪ್ರಥಮ್, ಆತನ ಪಾತ್ರದ ಒಳ್ಳೆಯತನ, ನಗು ತರಿಸುವ ಕೀಟಲೆ ಇವುಗಳಿಂದ ಬಿಗ್ ಬಾಸ್ ಗಿಂತಲೂ ದುಪ್ಪಟ್ಟು ಮನರಂಜನೆ ಪ್ರೇಕ್ಷಕರಿಗೆ ಗ್ಯಾರಂಟಿ ಎಂದರು. ಮುಂದುವರೆದು ಮೌರ್ಯ, ‘ಎಮ್.ಎಲ್.ಎ.’ ನಲ್ಲಿ ತುಳುನಾಡಿನ ತಾರೆ ರೇಖಾ ಬಹಳ ಸೂಕ್ಷ್ಮ ಪಾತ್ರವೊಂದನ್ನು ನಿಭಾಯಿಸಿದ್ದು ಜನಮನ್ನಣೆ ಪಡೆಯಲಿದ್ದಾರೆ. ಅದೇ ವೇಳೆ ಹಾಸ್ಯ ಕಲಾವಿದ ಕುರಿ ಪ್ರಕಾಶ್ ಮಹತ್ತರ ಪಾತ್ರನಿರ್ವಹಣೆ ಮಾಡಿದ್ದು ಪ್ರಥಮ್ ರವರ ಪಾತ್ರದ ಸಮಸಮಕ್ಕೆ ಇವರ ಪಾತ್ರವೂ ನಿಲ್ಲುತ್ತೆ ಎಂಬ ಹೊಸ ಭರವಸೆ ನೀಡಿದರು.

ಇದೆಲ್ಲಾ ಓಕೆ, ಲವಲವಿಕೆ ಹುಡುಗ ಬೆಳ್ಳಿಪರದೆ ತ್ಯಜಿಸಿ ಹಳ್ಳಿಯ ಗೋಮಾಳಕ್ಹೋಗೋದ್ಯಾಕೆ..?!?

-ಡಾ. ಸುದರ್ಶನ್ ಭಾರತೀಯ, 7022274686, editor@balkaninews.com

Tags