ಆರೋಗ್ಯಆಹಾರ

ಅಲಂಕಾರಕ್ಕೂ ಸೈ, ಆರೋಗ್ಯಕ್ಕೂ ಸೈ ಈ ಕಾಡು ಕಣಿಗಿಲೆ ಹೂವು

ಬೆಂಗಳೂರು, ಏ.16:

ಹಳದಿ ಬಣ್ಣದ ಹೂಗಳಿಂದ ಕಂಗೊಳಿಸುವ ಕರವೀರ ಬರೀ ಅಲಂಕಾರಿಕ ಸಸ್ಯ ಮಾತ್ರವಲ್ಲ ಬದಲಿಗೆ ಅದು ಔಷಧಿಯ ಗುಣಗಳನ್ನು ಹೊಂದಿದ ಸಸ್ಯವೂ ಹೌದು. 10 ರಿಂದ 20 ಅಡಿ ಎತ್ತರ ಬೆಳೆಯುವ ಕರವೀರದ ಮೂಲ ದಕ್ಷಿಣ ಅಮೇರಿಕಾ. ಅಪೋಸೈನೇಸಿ ಕುಟುಂಬಕ್ಕೆ ಸೇರಿರುವ ಕರವೀರದ ವೈಜ್ಞಾನಿಕ ಹೆಸರು ತೆವೀಷಿಯ ನೀರಿಫೋಲಿಯ. ಕನ್ನಡದಲ್ಲಿ ಕಾಡು ಕಣಿಗಿಲೆ, ಕರವೀರ ಎಂದು ಕರೆಯಲ್ಪಡುವ ಇದರ ಇಂಗ್ಲೀಷ್ ಹೆಸರು ಇಂಡಿಯನ್ ಓರಿಯಂಡರ್. ಮಲಯಾಳಂ ನಲ್ಲಿ ಕರವೀರಮ್, ತಮಿಳಿನಲ್ಲಿ ಮಂಜಲ್ ಅರಳಿ, ಸಂಸ್ಕೃತದಲ್ಲಿ ಅಶ್ವಘ್ನ, ಅಶ್ವಮರಕ, ಹರಿಪ್ರಿಯ ಹೀಗೆ ಹಲವು ಹೆಸರುಗಳು ಇದಕ್ಕಿದೆ.

Related image

ಗಂಟೆಯ ಹಾಗೆ ಕಾಣುವ ಆಕಾರವುಳ್ಳ ಈ ಹೂವಿಗೆ ಅದರದೇ ಆದ ಸುಗಂಧವಿದೆ. ಕಪ್ಪು ಬಣ್ಣದ ಕಾಯಿಗಳನ್ನು ಹೊಂದಿದ ಈ ಗಿಡದ ಕಾಂಡದಲ್ಲಿ ವಿಷಕಾರಿಯಾದ ಬಿಳಿ ದ್ರವ ಒಸರುತ್ತದೆ. ತುಂಬಾ ಕಹಿಯಾಗಿರುವ ಈ ಸಸ್ಯದ ಎಲೆಗಳು ನೀಳವಾಗಿವೆ ಮತ್ತು ಐದು ಎಸಳುಗಳುಳ್ಳ ಈ ಹೂವು ತನ್ನ ಬಣ್ಣದಿಂದಲೇ ಎಲ್ಲರ ಮನ ಸೆಳೆಯುತ್ತದೆ.

ಸಾಮಾನ್ಯವಾಗಿ ಹೆಚ್ಚಿನ ಕಡೆ ರಸ್ತೆ ಬದಿಗಳಲ್ಲಿ ಅಲಂಕಾರಕ್ಕಾಗಿ ನೆಡುವ ಕರವೀರವನ್ನು ಆಯುರ್ವೇದ ಔಷಧಿಯ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ವಿಶೇಷವಾದ ಸಂಗತಿಯೆಂದರೆ ಕರವೀರದ ಎಲ್ಲ ಭಾಗಗಳು ಔಷಧಿಯ ಗುಣಗಳನ್ನು ಹೊಂದಿದೆ. ಒಂದೇ ಸಮನೆ ಬಿಟ್ಟು ಬಿಟ್ಟು ಕಾಡುವ ಜ್ವರಕ್ಕೆ ಈ ಮರದ ತೊಗಟೆಯನ್ನು ಔಷಧವನ್ನಾಗಿ ಉಪಯೋಗಿಸುತ್ತಾರೆ. ಇನ್ನು ಹೃದಯ ಸಂಬಂಧಿ ಕಾಯಿಲೆ, ತೊನ್ನು, ಚರ್ಮ ರೋಗ, ವಾತ, ಫಿತ್ತ, ಕಫ ಹೀಗೆ ಅನೇಕ ರೋಗಗಳ ಔಷಧ ತಯಾರಿಕೆಯಲ್ಲಿ ಈ ಗಿಡವನ್ನು ಬಳಸುತ್ತಾರೆ. ಅಲ್ಲದೇ ಕರವೀರದಿಂದ ಜೈವಿಕ ಕೀಟನಾಶಕಗಳನ್ನು ತಯಾರಿಸುತ್ತಾರೆ.

ಹೀಗೆ ತನ್ನೊಳಗೆ ಎಲ್ಲಾ ಉತ್ತಮ ಅಂಶಗಳನ್ನು ಒಳಗೊಂಡ ಬಲು ಅಪರೂಪದ ಸಸ್ಯ ಈ ಕರವೀರ ಎಂದರೆ ತಪ್ಪಾಗಲಾರದು.

ಅನಿತಾ ಬನಾರಿ

Image result for ಕಾಡು ಕಣಿಗಿಲೆ

ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಲು ಸರಳ ಫೇಸ್ ಪ್ಯಾಕ್!!

#balkaninews #yellowflower #lifestyle #healthytips #indianoleander

Tags