ಆರೋಗ್ಯಆಹಾರಜೀವನ ಶೈಲಿ

ಔಷಧಿಯ ಕಣಜ ‘ಗರುಡ ಪಾತಾಳ’

ಔಷಧೀಯ ಸಸ್ಯ ಎಂದೇ ಜನಜನಿತವಾಗಿರುವ ಸರ್ಪಗಂಧ ಅಪೊಸಿನಾಸಿಯೇ ಕುಟುಂಬಕ್ಕೆ ಸೇರಿದೆ. ಇದರ ಸಸ್ಯಶಾಸ್ತ್ರೀಯ ಹೆಸರು ರಾವೋಲ್ಫಿಯ ಸರ್ ಪೆಂಟಿನ. ಕನ್ನಡದಲ್ಲಿ ಪಾತಾಳಗಂಧಿ, ಸರ್ಪಾಕ್ಷಿ, ಸಂಸ್ಕೃತದಲ್ಲಿ ಸರ್ಪಗಂಧಾ ಚಂದ್ರಿಕಾ, ಗಂಧನಾಕುಲಿ, ಆಡು ಭಾಷೆಯಲ್ಲಿ ಗರುಡ ಪಾತಾಳ ಎಂದು ಚಿರಪರಿಚಿತವಾಗಿರುವ ಸರ್ಪಗಂಧವನ್ನು ಇಂಗ್ಲೀಷ್ ಭಾಷೆಯಲ್ಲಿ ಸರ್ಪೆಂಟ್ ವುಡ್ ಎಂದು ಕರೆಯುತ್ತಾರೆ.  ಸರ್ಪಗಂಧದ ಬೇರು ಸರ್ಪದ ಆಕಾರದಲ್ಲಿದ್ದು, ಇದು ಸರ್ಪದ ವಿಷ ಇಳಿಸುವ ಕಾರಣ ಇದಕ್ಕೆ ಇದನ್ನು ಸರ್ಪಗಂಧ ಎಂದು ಕರೆಯುತ್ತಾರೆ ಎಂಬುದಾಗಿ ಚರಕ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ.

ಹಿಮಾಲಯ ಶ್ರೇಣಿ, ನೇಪಾಳ, ಶ್ರೀಲಂಕಾಗಳಲ್ಲಿ ಕಂಡುಬರುವ ಸರ್ಪಗಂಧ ದಕ್ಷಿಣಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು ಪರಿಸರಗಳಲ್ಲಿ ಮತ್ತು ಪಶ್ವಿಮ ಘಟ್ಟಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಅಷ್ಟೇ ಅಲ್ಲದೆ ಮಳೆ ಬೀಳುವ ಹರಿದ್ವರ್ಣ ಕಾಡುಗಳಲ್ಲಿ ಇವು ಅಧಿಕವಾಗಿ ಕಾಣಸಿಗುತ್ತವೆ.

ಹೊಳಪಿನ ಎಲೆಗಳನ್ನು ಹೊಂದಿರುವ ಈ ಸಸ್ಯದಲ್ಲಿ ಕೆಂಪು ಅಥವಾ ಬಿಳಿಯ ಹೂವುಗಳಿರುತ್ತವೆ. ಸರ್ಪಗಂಧದ ಬೇರು ಅಗಾಧ ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದರಲ್ಲಿ ರಿಸರ್ಪಿನ್ ಕ್ಷಾರವಿದ್ದು ಅದನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಾವಿನ ಕಡಿತಕ್ಕೆ ಇದು ಉತ್ತಮ ಮದ್ದು. ಮಾತ್ರವಲ್ಲ, ವಿಷಜಂತುಗಳ ಕಡಿತಕ್ಕೂ ಇದು ರಾಮಬಾಣ.

ಕಜ್ಜಿ, ತುರಿಕೆ, ನಂಜಿನ ಜೊತೆಗೆ ಎಲ್ಲಾ ತರದ ಚರ್ಮರೋಗಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲದೇ ಸರ್ಪಸುತ್ತುವಿಗೆ ಇದು ಹೇಳಿ ಮಾಡಿಸಿದ ಮನೆಮದ್ದು. ರೋಗ ನಿವಾರಕ ಶಕ್ತಿ ಹೊಂದಿರುವ ಸರ್ಪಗಂಧ ಆ್ಯಂಟಿಬಯಾಟಿಕ್ ನಂತೆ ಕೆಲಸ ಮಾಡುತ್ತದೆ. ರಕ್ತದೊತ್ತಡ, ಹೊಟ್ಟೆನೋವು, ಮೂತ್ರದ ತೊಂದರೆ, ಜ್ವರವನ್ನು ಶಮನ ಮಾಡುವ ಶಕ್ತಿ ಇದಕ್ಕಿದೆ. ಮುಖ್ಯವಾದ ಸಂಗತಿ ಎಂದರೆ ಸರ್ಪಗಂಧ ನಂಜುನಾಶಕ ಮತ್ತು ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ.

ಈಗೀಗ ಮನೆಯಂಗಳದಲ್ಲಿ ಹೇರಳವಾಗಿ ಬೆಳೆಯುವ ಔಷಧಿ ಸಸ್ಯದ ಪರಿಚಯವೇ ಇಲ್ಲದಂತಾಗಿರುವುದು ಬೇಸರದ ಸಂಗತಿ. ಮನೆ ಮದ್ದುಗಳ ಅರಿವಿದ್ದರೆ ಆಪತ್ಕಾಲಕ್ಕೆ ಸಹಾಯಕ್ಕೆ ಬರಬಹುದು. ಆದುದರಿಂದ ಹಿತ್ತಲಲ್ಲಿ ಬೆಳೆಯುವ ಸಸ್ಯಗಳ ಬಗೆಗೆ ಅರಿವು ಹೊಂದಿಕೊಳ್ಳುವುದು ಒಳ್ಳೆಯದು.

– ಅನಿತಾ ಬನಾರಿ

‘ಗ್ರೀನ್ ಟೀ’ ಯಿಂದ ತ್ವಚೆಗಾಗುವ ಲಾಭವೆಷ್ಟು ಗೊತ್ತಾ?

#garudapatala #balkaninews #garudapatalusefull #garudapatalaadvantages #garudapatalatree

 

 

Tags