ಆರೋಗ್ಯಆಹಾರಜೀವನ ಶೈಲಿಸೌಂದರ್ಯ

ಒಂದು ಕಪ್ ಗ್ರೀನ್ ಟೀಯಲ್ಲಿದೆ ಸದೃಡ ಆರೋಗ್ಯ!!

ಬೆಂಗಳೂರು, ಮಾ.12:

ಮುಂಜಾನೆ ಎದ್ದು ಫ್ರೆಶ್ ಅಪ್ ಆಗಿ ಒಂದು ಕಪ್ ಬಿಸಿಬಿಸಿ ಚಹಾ ಕುಡಿಯುತ್ತಿದ್ದರೆ ಮನಸ್ಸಿಗೆ ಹಿತ ಎನಿಸುತ್ತದೆ. ಜೊತೆಗೆ ಒಂದು ಕಪ್ ಟೀ ಕುಡಿಯುವುದರಿಂದ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಹುರುಪು ದೊರೆಯುತ್ತದೆ. ಮನಸ್ಸು ಉಲ್ಲಾಸದಿಂದ ಇರುತ್ತದೆ. ಟೀ, ಕಾಫಿ ಕುಡಿಯುವುದು ಮಾಮೂಲಿನ ಸಂಗತಿ. ಮನಸ್ಸಿಗೆ ಹಾಯ್ ಎನಿಸುವ  ಬೆಳಗ್ಗಿನ ಒಂದು ಕಪ್ ಟೀಯ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಾರಣಕ್ಕೆ ಹೆಚ್ಚಿನವರು ಈಗ ಗ್ರೀನ್ ಟೀ ಮೊರೆ ಹೋಗುತ್ತಿದ್ದಾರೆ. ಅದಕ್ಕೆ ಕಾರಣ ಅದರಲ್ಲಿ ಅಡಗಿರುವ ಔಷಧಿಯ ಗುಣ.

ಕ್ಯಾಮೆರಲಿಯಾ ಸೈನೆನ್ಸಿಸ್ ಎಂಬ ಟೀ ಗಿಡದ ಜಾತಿಗೆ ಸೇರಿದ ಈ ಗ್ರೀನ್ ಟೀಯ ಇತಿಹಾಸ ತುಂಬಾ ಹಳೆಯದು. ಕ್ರಿ.ಪೂ 600ರಲ್ಲಿ ಚೀನಾದಲ್ಲಿ ಗ್ರೀನ್ ಟೀ ತಯಾರಿಸಲಾಗುತ್ತಿತ್ತು. ಚೀನಾದ ಲುಯು ಎಂಬಾತ ಬರೆದ ಚಾ ಜಿಂಗ್ ಪುಸ್ತಕದಲ್ಲಿ ಗ್ರೀನ್ ಟೀ ಉಪಯೋಗ, ಅದನ್ನು ಮಾಡುವ ವಿಧಾನ ಎಲ್ಲವನ್ನೂ ತಿಳಿಸಲಾಗಿತ್ತು.

ತಲೆನೋವು, ಮೈಕೈ ನೋವು ನಿವಾರಣೆಗಳಿಗೆ ಇದನ್ನು ಔಷಧಿಯಂತೆ ಬಳಸುತ್ತಿದ್ದರು. ಆದರೆ ಈಗ ಅದನ್ನು ಟೀಯ ರೂಪದಲ್ಲಿ ಬಳಸಲಾಗುತ್ತದೆ. ಆರೋಗ್ಯದ ಜೊತೆಗೆ ಡಯಟ್, ತ್ವಚೆಯ ಆರೈಕೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಗ್ರೀನ್ ಟೀ ಸಹಾಯ ಮಾಡುತ್ತದೆ. ಗ್ರೀನ್ ಟೀಯಲ್ಲಿ ಆ್ಯಂಟಿಯಾಕ್ಸಿಡೆಂಟ್, ಅಮಿನೊ ಆಸಿಡ್, ಕಾರ್ಬೊಹೈಡ್ರೇಟ್ ಮತ್ತು ಲಿಪಿಡ್ ಅಂಶಗಳು ಹೆಚ್ಚಿರುವ ಕಾರಣ ಇದನ್ನು ಗಾಯ ಗುಣಪಡಿಸಲು, ಜೀರ್ಣಕ್ರಿಯೆಗೆ, ಹೃದಯ ಸ್ವಾಸ್ಥ್ಯಕ್ಕೆ, ರಕ್ತ ಹೆಪ್ಪುಗಟ್ಟುವಿಕೆಗೆ ಔಷಧದ ರೂಪದಲ್ಲಿ ಬಳಸಲಾಗುತ್ತಿತ್ತು.  ಕಾಲ ಸರಿದಂತೆ ಔಷಧ ರೂಪ ಬದಲಾಗಿ ಟೀಯ ರೂಪ ಬಂದಿತು.

ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ  ಹೆಚ್ಚುತ್ತದೆ. ಅಕಾಲಿಕ ನೆರಿಗೆಗಳು ಬೀಳುವುದು ತಪ್ಪುತ್ತದೆ. ಸೌಂದರ್ಯ ಹೆಚ್ಚಿಸುವಲ್ಲೂ ಗ್ರೀನ್ ಟೀ ಪ್ರಮುಖ ಪಾತ್ರ ವಹಿಸುತ್ತದೆ. ದೇಹದ ತೂಕ ಕಡಿಮೆ ಮಾಡುವಲ್ಲಿ ಕೂಡಾ ಗ್ರೀನ್ ಟೀ ಸಹಕಾರಿ. ಹಾಗೆಂದ ಮಾತ್ರಕ್ಕೆ ಗ್ರೀನ್ ಟೀ ಯನ್ನು ಅತಿ ಹೆಚ್ಚು ಕುಡಿಯುವಂತೆಯೂ ಇಲ್ಲ.

ಗ್ರೀನ್ ಟೀಯನ್ನು ತುಂಬಾ ಕುದಿಸಬಾರದು. ಒಂದು ಕಪ್ ಕುದಿಯುವ ನೀರನ್ನು ಒಲೆಯಿಂದ ಕೆಳಗಿಳಿಸಿದ ನಂತರ ಅದಕ್ಕೆ ಗ್ರೀನ್ ಟೀ ಎಲೆಗಳನ್ನು ಹಾಕಿ ಮುಚ್ಚಿಡಬೇಕು. ಕೇವಲ ಎರಡು ಮೂರು ನಿಮಿಷಗಳ ಅವಧಿಗೆ ಮಾತ್ರ ನೀರಿನಲ್ಲಿ ನೆನೆಸಬೇಕು. ಮತ್ತೆ ಅದರಿಂದ ಎಲೆಗಳನ್ನು ಹೊರತೆಗೆದು ಕುಡಿಯಬೇಕು. ಆದಷ್ಟು ಅದನ್ನು  ಕುಡಿದರೆ ತಣಿಸದೇ ಬಿಸಿಬಿಸಿಯಾಗಿ ಕುಡಿದರೆ ಒಳ್ಳೆಯದು. ಸಕ್ಕರೆ ಬದಲಿಗೆ ಜೇನನ್ನು ಸೇರಿಸಿ ಕುಡಿಯುವವರು ಇದ್ದಾರೆ.

ಸಾಮಾನ್ಯವಾಗಿ ಗ್ರೀನ್ ಟೀ ತಾಜಾ ಎಲೆ ದೊರೆಯುವುದು ಕಡಿಮೆ. ಬದಲಿಗೆ ಪರಿಷ್ಕರಿಸಿದ ಒಣಗಿದ ಎಲೆಗಳು ಮಳಿಗೆಗಳಲ್ಲಿ ದೊರೆಯುತ್ತದೆ. ಅಷ್ಟೇ ಅಲ್ಲದೇ ಚಿಕ್ಕ ಚಿಕ್ಕ ಟೀ ಬ್ಯಾಗುಗಳು ದೊರೆಯುತ್ತದೆ. 50 ಗ್ರಾಂ ನಿಂದ ಹಿಡಿದು ಕೆ.ಜಿ ಲೆಕ್ಕದಲ್ಲೂ ದೊರೆಯುತ್ತದೆ.

–  ಅನಿತಾ ಬನಾರಿ

ಸ್ವಚ್ಛ ಮನಸ್ಸಿನ, ಉಚ್ಚ ಸಂಸ್ಕಾರದ, ಅಚ್ಚ ತುಳುನಾಡಿನ ಬೆಡಗಿ, ಈ ಮೂನ್ಲೈಟ್..!!

#balkaninews #greentea #advantagesofgreentea #lifestyle

Tags

Related Articles