ಆರೋಗ್ಯ

ಲೈಂಗಿಕ ಆರೋಗ್ಯದ ಕುರಿತು ಸಲಹೆ ಸೂಚನೆಗಳು

ಲೈಂಗಿಕ ಕ್ರಿಯೆಯಲ್ಲಿ ನಿರಾಸಕ್ತಿ ಅಪರೂಪದ ಸಮಸ್ಯೆಯೇನಲ್ಲ. ಆದರೆ ಇತ್ತೀಚೆಗೆ ಮಹಿಳೆಯರಲ್ಲಿ ಈ ಸಮಸ್ಯೆಯ ಪ್ರಮಾಣ ಹೆಚ್ಚಿರುವುದು ಆಲೋಚನೆಗೆ ಈಡು ಮಾಡಿದೆ.

ಮಹಿಳೆಯರಲ್ಲಿನ ಲೈಂಗಿಕ ನಿರಾಸಕ್ತಿಯ ಸಮಸ್ಯೆಗೆ ಹೈಪೊ ಆ್ಯಕ್ಟಿವ್ ಡಿಸೈರ್ ಡಿಸಾರ್ಡರ್ಎಂದು ಕರೆಯುತ್ತಾರೆ. ಲೈಂಗಿಕ ಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಲು ಸಾಧ್ಯವಾಗದಿರಲು ನಿರಾಸಕ್ತಿ ಪ್ರಮುಖ ಕಾರಣವಾಗಿರುತ್ತದೆ. ಇದು ಲೈಂಗಿಕ ಸುಖವನ್ನು ಕಸಿಯುವುದು ಮಾತ್ರವಲ್ಲ, ಉತ್ತಮ ಲೈಂಗಿಕ ಚಟುವಟಿಕೆ ಕೊಡಬಹುದಾದ ದೈಹಿಕ ಶಕ್ತಿ, ಆತ್ಮವಿಶ್ವಾಸ, ಒತ್ತಡ ನಿವಾರಣೆ, ಒಟ್ಟಾರೆ ಆರೋಗ್ಯದ ಲಾಭವನ್ನೂ ಇಲ್ಲವಾಗಿಸುತ್ತದೆ.

ಅಲ್ಪ ಲೈಂಗಿಕ ಬಯಕೆಅಥವಾ ಬಯಕೆಯ ಕೊರತೆ

 ‘ಹೈಪೊ ಆ್ಯಕ್ಟಿವ್ ಡಿಸೈರ್ ಡಿಸಾರ್ಡರ್ಗೆ ಹಲವು ಕಾರಣಗಳಿವೆ. ಅಂದಾಜು ಶೇ 30 ರಿಂದ 39ರಷ್ಟು ಮಹಿಳೆಯರಲ್ಲಿ ಹೀಗಾಗುತ್ತದೆ. ಅವರಲ್ಲಿ, ತಮ್ಮ ಜೀವನದ ಯಾವುದೇ ಘಟ್ಟದಲ್ಲಿ, ಲೈಂಗಿಕತೆ ಕುರಿತು ಅತಿ ಕಡಿಮೆ ಆಸಕ್ತಿ ಅಥವಾ ಆಸಕ್ತಿಯೇ ಇಲ್ಲದಿರುವುದು ಕಂಡುಬಂದಿದೆ.

ಕೆಲವರು ಲೈಂಗಿಕ ಜೀವನ ಬಯಸುವುದಿಲ್ಲ. ಅವರಿಗೆ ಅದು ಅಷ್ಟು ಮುಖ್ಯ ಎಂದು ಅನ್ನಿಸಿಯೂ ಇರುವುದಿಲ್ಲ. ಅವರ ದಿನನಿತ್ಯದ ಬದುಕಿಗೆ ಇದರಿಂದ ಯಾವುದೇ ಅಡ್ಡಿ ಉಂಟಾಗಿಲ್ಲ ಎಂದರೆ, ಸಮಸ್ಯೆ ಎಂದು ಪರಿಗಣಿಸಬೇಕಿಲ್ಲ. ಮಹಿಳೆಯರಲ್ಲಿ, ಈ ಸಮಸ್ಯೆಯ ಗ್ರಹಿಕೆಯಲ್ಲೂ ತೊಡಕಿರುತ್ತದೆ. ಉದಾಹರಣೆಗೆ, ಆಕೆ ತನ್ನ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾಳೆ. ಆದರೆ ತನ್ನ ಸಂಗಾತಿಯ ಲೈಂಗಿಕ ಬಯಕೆಗೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಹೀಗಿದ್ದಾಗ ಅದು ಸಮಸ್ಯೆಯ ರೂಪ ತಾಳದಿರಲು ಸಾಧ್ಯವೇ? ಇದೊಂದು ಸಮಸ್ಯೆ ಎಂಬುದೂ ಎಷ್ಟೋ ಮಹಿಳೆಯರಿಗೆ ಅರಿವಿಗೆ ಬರುವುದಿಲ್ಲ. ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅಗತ್ಯವಾದ ಪ್ರಚೋದನೆಯು ಸಾಧ್ಯವಾಗದೇ ಇದ್ದರೆ, ಅದು ತೊಂದರೆಯೇ ಹೌದು.

ಲೈಂಗಿಕ ಬಯಕೆ ಹಾಗೂ ಲೈಂಗಿಕ ಪ್ರಚೋದನೆ ಇವೆರಡರ ಸಮಸ್ಯೆಯೂ ಶೇ 25–50ರಷ್ಟು ಮಹಿಳೆಯರಲ್ಲಿ ಕಂಡುಬಂದಿದೆ. ಲೈಂಗಿಕ ಬಯಕೆಯಲ್ಲಿ ಮೂರು ರೀತಿಯ ಕೊರತೆಯನ್ನು ಅಂದಾಜಿಸಿದ್ದಾರೆ. ಲೈಂಗಿಕ ಕ್ರಿಯೆಯೆಡೆಗಿನ ನಿರಾಸಕ್ತಿ, ಲೈಂಗಿಕತೆ ಬಗ್ಗೆ ಯೋಚಿಸದೇ ಇರುವುದು, ಲೈಂಗಿಕ ಕ್ರಿಯೆಗೆ ಸ್ಪಂದಿಸದೇ ಇರುವುದು. ಪ್ರಚೋದನೆಯಲ್ಲಿಯೂ ಮೂರು ರೀತಿಯಿದೆ: ಸ್ಪಂದನೆಯ ಕೊರತೆ, ಅತೃಪ್ತಿ, ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೊಂದಲು ಸಾಧ್ಯವಾಗದೇ ಇರುವುದು.

ಏಕೆ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು?
ಲೈಂಗಿಕತೆಯೆಡೆಗಿನ ಮಹಿಳೆಯರ ದೃಷ್ಟಿಕೋನಕ್ಕೂ, ಅವರಲ್ಲಿ ಈ ಸಮಸ್ಯೆಯ ಪ್ರಕರಣಗಳು ಹೆಚ್ಚುವುದಕ್ಕೂ ಒಂದಕ್ಕೊಂದು ಸಂಬಂಧವಿರುವುದಾಗಿ ಸಂಶೋಧಕರು ಊಹಿಸಿದ್ದಾರೆ. ಇದು ಮಾನಸಿಕ ಹಾಗೂ ದೈಹಿಕ ಎರಡಕ್ಕೂ ಸಂಬಂಧಿಸಿದೆ. ಲೈಂಗಿಕತೆಯೆಡೆಗೆ ಮಹಿಳೆಯ ಆಸಕ್ತಿಯು ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಸಂಬಂಧದಲ್ಲಿ ತೃಪ್ತಿ ಹಾಗೂ ಆರೋಗ್ಯ, ವೈಯಕ್ತಿಕ ಹಾಗೂ ಸಂಗಾತಿಯ ಸ್ವಾಸ್ಥ್ಯ, ಲೈಂಗಿಕತೆಯಲ್ಲಿ ದೈಹಿಕ ಹಾಗೂ ಭಾವನಾತ್ಮಕ ಸ್ಪಂದನೆ ಇವೆಲ್ಲವೂ ಮುಖ್ಯವಾಗುತ್ತದೆ.

ಮಹಿಳೆಯರಲ್ಲಿ ಲೈಂಗಿಕತೆ ಕುರಿತ ಅಲ್ಪ ಆಸಕ್ತಿಗೆ ಕೆಲವು ಪರಿಸ್ಥಿತಿಗಳನ್ನೂ ಊಹಿಸಿದ್ದಾರೆ ಸಂಶೋಧಕರು. ಕೆಲ ಸಂಪ್ರದಾಯಗಳು ಇದಕ್ಕೆ ಪರೋಕ್ಷ ಕಾರಣ ಎನ್ನುವುದು ಆ ಊಹೆ. ಇದಕ್ಕೆ ಜೊತೆಯಾಗಿ, ಲೈಂಗಿಕ ನಿರಾಸಕ್ತಿ ಕೆಲವು ಮಹಿಳೆಯರಲ್ಲಿ ಸಮಸ್ಯೆ ಎಂದು ಅನ್ನಿಸದೇ ಇರುವುದು.

ಆದರೆ ಮಹಿಳೆಯರು ಹಾಗೂ ವೈದ್ಯರು ಈ ಕುರಿತು ಮಾತನಾಡುವುದಿಲ್ಲವೇಕೆ? ಮಹಿಳೆಯರಲ್ಲಿನ ಲೈಂಗಿಕ ಸಮಸ್ಯೆಗಳ ಕುರಿತು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ, ಈ ಕುರಿತು ಯಾರೂ ವೈದ್ಯರಲ್ಲಿ ಮನಸ್ಸು ಬಿಚ್ಚಿ ಮಾತನಾಡುವುದಿಲ್ಲ. ವೈದ್ಯರೂ ಈ ವಿಷಯದಲ್ಲಿ ಮುಕ್ತವಾಗಿ ಮಾತನಾಡಲು ಹಿಂದೇಟಾಕುತ್ತಾರೆ.

ಇತ್ತೀಚೆಗೆ, ಹೇಗೆ ರೋಗಿ ಹಾಗೂ ವೈದ್ಯರು ಈ ಒಂದು ಸಮಸ್ಯೆಗೆ ಪರಿಹಾರವಾಗಿ ಪರಿಣಾಮಕಾರಿಯಾಗಿ ಚರ್ಚಿಸಲು ಅಥವಾ ಸಂವಹನ ನಡೆಸಲು ಸಾಧ್ಯ ಎಂಬುದರ ಕುರಿತು ಅಧ್ಯಯನವೊಂದು ಪ್ರಕಟಗೊಂಡಿದೆ. ಅಮೆರಿಕ, ಫ್ರಾನ್ಸ್, ಜರ್ಮನಿಯಲ್ಲಿ, ಈ ಸಮಸ್ಯೆಯಿರುವ 95 ಮಹಿಳೆಯರು ಹಾಗೂ 127 ವೈದ್ಯರ ಸಂವಹನದ ರೀತಿಯನ್ನು ಕಲೆಹಾಕಲಾಗಿದೆ. ಈ ಸಮಸ್ಯೆಯ ವಿವರಣೆಯಲ್ಲೇ ತೊಡಕಿರುವುದೂ ಕಂಡುಬಂದಿದೆ.

ಮೊದಲನೆಯದಾಗಿ, ಹೆಸರಿನ ಅಪರಿಚಿತತೆ. ಹೈಪೊ ಆ್ಯಕ್ಟಿವ್ ಡಿಸೈರ್ ಡಿಸಾರ್ಡರ್ಎಂದರೆ ಯಾರಿಗೂ ಅರ್ಥವಾಗದು. ಇದಕ್ಕೆ ಸಂಬಂಧಪಟ್ಟಂತೆ ಚಿಕಿತ್ಸೆಗೆ ಒಳಗಾಗಿದ್ದರೂ, ಇದೇ ಸಮಸ್ಯೆ ಎಂಬುದನ್ನು ಗುರುತಿಸುವುದೂ ಕಷ್ಟವಾಗಿದೆ. ಒತ್ತಡ, ಗೊಂದಲ, ಅತೃಪ್ತಿ, ಕೋಪ, ಖಿನ್ನತೆ, ಆತ್ಮವಿಶ್ವಾಸದ ಕೊರತೆ ಸಮಸ್ಯೆಯ ಪರಿಣಾಮಗಳು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

ಎರಡನೆಯದಾಗಿ, ಇದಕ್ಕೆ ಪರಿಣಾಮಕಾರಿ ಚಿಕಿತ್ಸೆಯ ಆಯ್ಕೆಗಳ ಕೊರತೆಯಿರುವುದು ವೈದ್ಯರಿಗೆ ಸವಾಲಾಗಿದೆ. ರೋಗಿಗಳೊಂದಿಗೆ ಸಮಸ್ಯೆಯ ಚರ್ಚೆಗೆ ಇದು ಅಡ್ಡಿಯಾಗಿಯೂ ಪರಿಣಮಿಸಿದೆ.

ಇದುವರೆಗೂ ಟೆಸ್ಟೊಸ್ಟೆರೋನ್ ಪ್ಯಾಚ್‌ ಅಥವಾ ಜೆಲ್, ಸೆರೊಟೊನರ್ಜಿಕ್ ಏಜೆಂಟ್, ಫ್ಲೈಬೆನಾಸೆರಿನ್‌ನಂಥ ಚಿಕಿತ್ಸೆಗಳ ದಾರಿಯನ್ನು ಕಂಡುಕೊಳ್ಳಲಾಗಿದ್ದರೂ, ಇದನ್ನು ಎಫ್‌ಡಿಎ ಅಡ್ವೈಸರಿ ಕಮಿಟಿ 2010ರಲ್ಲಿ ತಿರಸ್ಕರಿಸಿದೆ. ಸಮಸ್ಯೆಯ ನಿವಾರಣೆಗೆ ದಾರಿಯ ಹುಡುಕಾಟವೂ ಸಾಗಿದೆ ಎಂದು ತಿಳಿಸಲಾಗಿದೆ. 

Tags

Related Articles

Leave a Reply

Your email address will not be published. Required fields are marked *